ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಾಳೆ ಎಲೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಯುವ ವಿಜ್ಞಾನಿ

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಬಲ್ಲ ಉತ್ಪನ್ನಗಳನ್ನು ರಚಿಸಲು ತಮಿಳುನಾಡಿನ ವಾರ್ತಾಪ್ ಗ್ರಾಮದ ವಿಜ್ಞಾನಿ ಟೆನಿತ್ ಆದಿತ್ಯ ಅವರು ಮೂರು ವರ್ಷಗಳವರೆಗೆ ಎಲೆಗಳನ್ನು ಸಂರಕ್ಷಿಸುವ ಬಾಳೆ ಎಲೆ ತಂತ್ರಜ್ಞಾನವನ್ನು ಬಳಸುತ್ತಾರೆ.

ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಬಾಳೆ ಎಲೆಯ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಯುವ ವಿಜ್ಞಾನಿ

Tuesday February 25, 2020,

2 min Read

ಪ್ಲಾಸ್ಟಿಕ್ ಮಾಲಿನ್ಯವು ಜಗತ್ತಿಗೆ ಗಂಭೀರ ಸಮಸ್ಯೆಯಾಗಿದೆ ಮತ್ತು ಪರ್ಯಾಯಗಳನ್ನು ಕಂಡುಕೊಳ್ಳುವುದು ಈ ಸಮಯದ ಅವಶ್ಯಕತೆಯಾಗಿದೆ. ಅನೇಕ ಪರಿಸರವಾದಿಗಳು ಪರಿಸರಕ್ಕೆ ಹಾನಿಯಾಗದ ಸುಸ್ಥಿರ ಪರ್ಯಾಯಗಳನ್ನು ಎದುರುನೋಡುತ್ತಿದ್ದಾರೆ.


ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳಿಂದ ಹಿಡಿದು ಸ್ಟೀಲ್ ಸ್ಟ್ರಾಗಳವರೆಗೆ ಈ ಜಾಗತಿಕ ಸಮಸ್ಯೆಯನ್ನು ಪರಿಹರಿಸಲು ಅನೇಕ ಆವಿಷ್ಕಾರಗಳನ್ನು ಮಾಡಲಾಗಿದೆ.


ಟೆನಿತ್ ಆದಿತ್ಯ (ಚಿತ್ರಕೃಪೆ: ಎಡೆಕ್ಸ್‌ ಲೈವ್‌)




ವಾರ್ತಾಪ್ ಗ್ರಾಮದ ವಿಜ್ಞಾನಿ ಮತ್ತು ತಮಿಳುನಾಡಿನ ಟೆನಿತ್ ಡಿಸೈನ್ ಎಂಬ ಸ್ಟಾರ್ಟ್ಅಪ್ ಸ್ಥಾಪಕ ಟೆನಿತ್ ಆದಿತ್ಯ, ಬಾಳೆ ಎಲೆಗಳ ಭೌತಿಕ ಗುಣಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುವ ಬಾಳೆ ಎಲೆ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ.


ಬಾಳೆ ಎಲೆಗಳನ್ನು ಪ್ಲಾಸ್ಟಿಕ್ ಮತ್ತು ಕಾಗದಕ್ಕೆ ಪರ್ಯಾಯವಾಗಿ ಬಳಸಬಹುದೆಂದು ತಂತ್ರಜ್ಞಾನವು ಖಾತ್ರಿಪಡಿಸುತ್ತದೆ ಮತ್ತು ಇದು ಮೂರು ವರ್ಷಗಳ ಆಯಸ್ಸನ್ನು ಹೊಂದಿದೆ.


ಎನ್‌ಡಿಟಿವಿಯೊಂದಿಗೆ ಮಾತನಾಡಿದ ಟೆನಿತ್, “ನಾವು ಪ್ಲಾಸ್ಟಿಕ್ಅನ್ನು ಫಲಕಗಳು, ಸ್ಟ್ರಾಗಳು, ಕಪ್ಗಳು, ಪಾಲಿಥೀನ್ ಮತ್ತು ಪ್ಯಾಕೇಜಿಂಗ್ಗೆ ಬಳಸುವ ಅಭ್ಯಾಸವನ್ನು ಹೊಂದಿದ್ದೇವೆ. ಕಾಗದದ ಪರ್ಯಾಯಗಳನ್ನು ಒಮ್ಮೆ ಮಾತ್ರ ಬಳಸಲಾಗುತ್ತದೆ ಮತ್ತು ಬಹಳಷ್ಟು ತ್ಯಾಜ್ಯವನ್ನು ಸೃಷ್ಟಿಸುತ್ತದೆ, ಆದ್ದರಿಂದ ಇವುಗಳನ್ನು ಬಾಳೆ ಎಲೆಗಳಿಂದ ಬದಲಾಯಿಸುವ ಯೋಚನೆಯೊಂದಿಗೆ ಬಂದಿದ್ದೇನೆ,” ಎಂದರು.


ಮುಂದುವರೆದು ಅವರು,


“ತಂತ್ರಜ್ಞಾನವು ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ಬಾಳೆ ಎಲೆಗಳನ್ನು ಮೂರು ವರ್ಷಗಳವರೆಗೆ ಸಂರಕ್ಷಿಸುತ್ತದೆ. ಇದು ಅದರ ಬಾಳಿಕೆಯನ್ನು ಹೆಚ್ಚಿಸುತ್ತದೆ. ಸಂರಕ್ಷಿತ ಎಲೆಗಳು ವಿಪರೀತ ತಾಪಮಾನವನ್ನೂ ತಡೆದುಕೊಳ್ಳುತ್ತದೆ ಮತ್ತು ಹೆಚ್ಚಿನ ತೂಕವನ್ನು ಹೊಂದಿರುತ್ತವೆ. ಈ ಫಲಕಗಳ ಮತ್ತು ಕಪ್‌ಗಳ ಉತ್ಪಾದನಾ ವೆಚ್ಚ ತೀರಾ ಕಡಿಮೆ, ಮತ್ತು ಅವುಗಳನ್ನು ಅಂತಿಮವಾಗಿ ಗೊಬ್ಬರ ಅಥವಾ ಮೇವಿನಂತೆ ಬಳಸಬಹುದು.”


ಅವರ ತಂತ್ರಜ್ಞಾನವು ಈಗಾಗಲೇ ಪಶ್ಚಿಮದಲ್ಲಿ ಜನಪ್ರಿಯತೆಯನ್ನು ಗಳಿಸಿದೆ, ಏಳು ಅಂತರರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ. ಇವುಗಳಲ್ಲಿ ಅಂತರರಾಷ್ಟ್ರೀಯ ಪರಿಸರ ಪ್ರಶಸ್ತಿ, ಅಂತರರಾಷ್ಟ್ರೀಯ ಹಸಿರು ತಂತ್ರಜ್ಞಾನ ಪ್ರಶಸ್ತಿ, ಮತ್ತು ಭವಿಷ್ಯಕ್ಕಾಗಿ ತಂತ್ರಜ್ಞಾನ ಪ್ರಶಸ್ತಿ ಕೂಡ ಸೇರಿವೆ.


ಬಾಳೆ ಎಲೆಗಳಿಂದ ತಯಾರಿಸಲಾದ ವಿವಿಧ ಉತ್ಪನ್ನಗಳು (ಚಿತ್ರ: ಎನ್‌ಡಿಟಿವಿ)




ಇದು ಜೀವಕೋಶಗಳ ವರ್ಧನೆಯಾಗಿರುವುದರಿಂದ ಈ ತಂತ್ರಜ್ಞಾನವನ್ನು ಇತರ ಎಲೆಗಳಿಗೂ ಅನ್ವಯಿಸಬಹುದು. ತೆರೆದ ವಾತಾವರಣದಲ್ಲಿ ಎಸೆದರೆ ಬಾಳೆ ಎಲೆ ಇತರ ಎಲೆಗಳಂತೆ ಕೊಳೆಯುತ್ತದೆ.


ಅದರ ಬಾಳಿಕೆ ಬಗ್ಗೆ ದಿ ಹ್ಯಾನ್ಸ್ ಇಂಡಿಯಾದೊಂದಿಗೆ ಮಾತನಾಡುತ್ತಾ, ಟೆನಿತ್,


"ಉತ್ಪನ್ನದ ಹೆಚ್ಚುವರಿ ವೆಚ್ಚವು ಉತ್ಪನ್ನ ವಿನ್ಯಾಸ ಮತ್ತು ಹೆಚ್ಚುವರಿ ಯಾಂತ್ರಿಕ ಶಕ್ತಿ ಮತ್ತು ಹೆಚ್ಚುವರಿ ಅನುಸರಣೆಯಂತಹ ವೈಶಿಷ್ಟ್ಯಗಳೊಂದಿಗೆ ಬದಲಾಗುತ್ತದೆ. ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ಬೆಲೆಯಿರುವ ಪರಿಸರ ಸ್ನೇಹಿ ಸುಸ್ಥಿರ ಉತ್ಪನ್ನಗಳನ್ನು ರಚಿಸಲು ನಾವು ಯಾವಾಗಲೂ ಸಮರ್ಪಿತರಾಗಿದ್ದೇವೆ,” ಎಂದರು.


ಅವರ ಪ್ರಕಾರ, ಬಾಳೆ ಎಲೆಯಿಂದ ತಯಾರಿಸಿದಾಗ ಸ್ಟ್ರಾಗೆ 10 ಪೈಸೆ ವೆಚ್ಚವಾಗುತ್ತದೆ; ಪ್ಲಾಸ್ಟಿಕ್ ಸ್ಟ್ರಾ ಬೆಲೆ 70 ಪೈಸೆ. ಬಾಳೆ ಎಲೆಗಳಿಂದ ಮಾಡಿದ ತಟ್ಟೆಗೆ ಕೇವಲ 1 ರೂ. ವೆಚ್ಚವಾದರೆ, ಪ್ಲಾಸ್ಟಿಕ್‌ ತಟ್ಟೆಗೆ 4ರೂ. ವೆಚ್ಚವಾಗುತ್ತದೆ


ಟೆನಿತ್ ಮುಂದುವರೆದು, "ಈ ಸಂಸ್ಕರಿಸಿದ ಎಲೆಗಳು 100 ಪ್ರತಿಶತ ಜೈವಿಕ ವಿಘಟನೀಯ, ಆರೋಗ್ಯಕರ, ಮಾನವ ಸ್ನೇಹಿ, ಸಂಪೂರ್ಣವಾಗಿ ಪರಿಸರ ಸ್ನೇಹಿ ಮತ್ತು ಬಿಸಾಡಬಹುದಾದ, ಏಕಬಳಕೆಯ ವಸ್ತುಗಳಿಗೆ ಪರ್ಯಾಯವಾಗಿವೆ," ಎಂದರು.