ಕೋವಿಡ್‌-19 ಗೆದ್ದ 110 ವರ್ಷದ ಚಿತ್ರದುರ್ಗದ ಅಜ್ಜಿ

5 ಮಕ್ಕಳು, 17 ಮೊಮ್ಮಕ್ಕಳು ಮತ್ತು 22 ಮರಿಮೊಮ್ಮಕ್ಕಳನ್ನು ಹೊಂದಿರುವ 110 ವರ್ಷದ ಸಿದ್ದಮ್ಮ ಕೋವಿಡ್‌-19 ಸೋಂಕಿನಿಂದ ಬಿಡುಗಡೆ ಹೊಂದಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಕೋವಿಡ್‌-19 ಗೆದ್ದ 110 ವರ್ಷದ ಚಿತ್ರದುರ್ಗದ ಅಜ್ಜಿ

Tuesday August 04, 2020,

1 min Read

ಕೋವಿಡ್‌-19 ಕರಾಳ ಛಾಯೆಯ ನಡುವೆ ಒಳ್ಳೆಯ ಸುದ್ದಿಯೊಂದು ಹರಿದಾಡುತ್ತಿದೆ. ಚಿತ್ರದುರ್ಗ ಜಿಲ್ಲೆಯ 110 ವರ್ಷದ ವೃದ್ಧೆ ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಿ ಶನಿವಾರ ಮನೆಗೆ ಮರಳಿದ್ದಾರೆ.


ಆರೋಗ್ಯ ಅಧಿಕಾರಿಗಳ ಪ್ರಕಾರ ಪೊಲೀಸ್‌ ಕ್ವಾರ್ಟರ್ಸ್‌ನಲ್ಲಿ ವಾಸವಾಗಿರುವ ಸಿದ್ದಮ್ಮ ಅವರಿಗೆ 5 ಮಕ್ಕಳು, 17 ಮೊಮ್ಮಕ್ಕಳು ಮತ್ತು 22 ಮರಿಮೊಮ್ಮಕ್ಕಳಿದ್ದಾರೆ.


ಜುಲೈ 27 ರಂದು ಅವರ ಕುಟುಂಬದ ಇತರ ಸದಸ್ಯರ ಜತೆಗೆ ಇವರಿಗೂ ಕೋವಿಡ್‌-19 ಸೋಂಕಿರುವುದು ದೃಢವಾಗಿತ್ತು, ಕೋವಿಡ್‌-19 ಚಿಕಿತ್ಸೆಗಾಗಿ ನಿಗದಿಸಿದ್ದ ಚಿತ್ರದುರ್ಗದ ಆಸ್ಪತ್ರೆಗೆ ಅವರನ್ನು ಕರೆತರಲಾಗಿತ್ತು. ಈಗ ಅಜ್ಜಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.


ನಾಲ್ಕು ಜನರ ಸಹಾಯದಿಂದ ವೈದ್ಯರು ಮತ್ತು ಸಿಬ್ಬಂದಿಗಳ ಬಿಳ್ಕೊಟ್ಟು ಮನೆಗೆ ತೆರಳಿದ್ದಾರೆ.


ಸೋಂಕು ದೃಢಪಟ್ಟಾಗ ನಿಮಗೆ ಭಯವಾಗಿತ್ತೆ ಎಂದು ಸಿದ್ದಮ್ಮ ಅವರನ್ನು ಕೇಳಿದರೆ, “ನಾನು ಯಾರಿಗೂ ಹೆದರುವುದಿಲ್ಲ,” ಎಂದು ಉತ್ತರಿಸಿದರು.


ಆಸ್ಪತ್ರೆಯ ಚಿಕಿತ್ಸೆ ಮತ್ತು ಅಲ್ಲಿ ನೀಡಿದ ಊಟೋಪಚಾರದ ಬಗ್ಗೆ ಅಜ್ಜಿಗೆ ಖುಷಿಯಿದೆ.


ನಂತರ ವರದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಬಸವರಾಜು, ಅತಿ ಹಿರಿಯರಾದ ಅಜ್ಜಿ ಕೊರೊನಾವೈರಸ್‌ನಿಂದ ಗುಣಮುಖರಾಗಿರುವುದು ಹೆಮ್ಮೆ ಪಡಬೇಕಾದಂತಹ ವಿಚಾರ ಮತ್ತು ಇವರು ಸರ್ಕಾರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ ಎಂದರು.


“ನನಗೆ ತಿಳಿದಿರುವಂತೆ ಕೊರೊನಾವೈರಸ್‌ ನಿಂದ 110 ವರ್ಷದ ಅಜ್ಜಿ ಗುಣವಾಗಿರುವುದು ಒಂದು ದಾಖಲೆಯಾಗಿದೆ. ಇವರು ಪೊಲೀಸ್‌ ಅಧಿಕಾರಿಯೊಬ್ಬರ ತಾಯಿಯಾಗಿದ್ದಾರೆ,” ಎಂದರು ಬಸವಾರಾಜು.


ಇವರಷ್ಟೇ ಅಲ್ಲದೇ 96 ವರ್ಷದ ಅಜ್ಜಿಯೊಬ್ಬರು ಆಸ್ಪತ್ರೆಯಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ ಎಂದರು ಅವರು.


ಸಿದ್ದಮ್ಮ ಅವರ ಪ್ರಕರಣವು ಕೋವಿಡ್‌ ವಿರುದ್ಧ ಕೆಲಸ ಮಾಡಲು ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸಿದೆ ಎಂದರು.

ಕರ್ನಾಟಕ ಸರ್ಕಾರದ ಕೋವಿಡ್‌-19 ಮಾಹಿತಿ ಜಾಲದ ಪ್ರಕಾರ ಇಂದಿಗೆ ಕರ್ನಾಟಕದಲ್ಲಿ ಒಟ್ಟು ಕೋವಿಡ್‌-19 ಪ್ರಕರಣಗಳ ಸಂಖ್ಯೆ 1,39,571 ಆಗಿದ್ದು, ಅದರಲ್ಲಿ 62,500 ಜನರು ಗುಣಮುಖರಾಗಿ ಮನೆಗೆ ತೆರಳಿದರೆ, 2594 ಜನರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿರುವ ಸಕ್ರಿಯ ಪ್ರಕರಣಗಳ ಸಂಖ್ಯೆ 74,469.