ಕ್ರಿಕೆಟ್..ಕ್ರಿಕೆಟ್..ಕ್ರಿಕೆಟ್..ಭಾರತ ದೇಶದಲ್ಲಿ ಕ್ರಿಕೆಟ್ ಧರ್ಮವಾಗಿದೆ. ಸಾವಿರ ಜಾತಿಗಳು, ನೂರಾರು ಪಂಥಗಳಿದ್ರೂ ಎಲ್ಲರೂ ಒಂದಾಗಿ ಆಡುವುದು,ನೋಡುವುದಿದ್ದರೆ ಅದು ಕ್ರಿಕೆಟ್ ಒಂದೇ. ಈ ಆಟ ದೇಶದಲ್ಲಿ ಭಾವೈಕ್ಯತೆಯ ಬೀಜ ಬಿತ್ತಿದೆ. ಎಳೆಯ ಮಕ್ಕಳಲ್ಲಿ ಹುಟ್ಟುವಾಗಲೇ ಕ್ರಿಕೆಟಿಗ ಆಗಬೇಕೆಂಬ ಆಸೆ ಟಿಸಿಲೊಡೆಯುತ್ತೆ. ಕ್ರಿಕೆಟಿಗನಾಗ್ಬೇಕು, 22 ಯಾರ್ಡ್ ನಲ್ಲಿ ಮಹರಾಜನಾಗಿ ಮೆರೆಯಬೇಕು ಅಂತ ಆಸೆ ಪಡುವವರೇ ಹೆಚ್ಚು.
ನನ್ನ ಮಗ ಸಚಿನ್ ತೆಂಡುಲ್ಕರ್ ಆಗ್ಬೇಕು, ರಾಹುಲ್ ದ್ರಾವಿಡ್ ಥರಾ ಮಿಂಚಬೇಕು.ಶೇನ್ ವಾರ್ನ್ ಥರಾ ಸ್ಪಿನ್ ದಾಳಿ ನಡೆಸ್ಬೇಕು.ವಾಸೀಂ ಅಕ್ರಂ ಥರಾ ಬೌಲಿಂಗ್ ನಡೆಸ್ಬೇಕು ಅಂತೆಲ್ಲ ಕನಸು ಕಾಣುತ್ತಾರೆ. ಮಗನಿಗೆ ಇಂಟ್ರೆಸ್ಟ್ ಇದ್ಯೋ ಇಲ್ವೋ ಅನ್ನೋ ಲೆಕ್ಕಾಚಾರವಿಲ್ಲ. ಮಗು ಹುಟ್ಟುವಾಗಲೇ ಆತನಿಗೊಂದು ಪ್ಯಾಡ್, ಗ್ಲೌಸ್, ಬ್ಯಾಟ್, ಬಾಲ್ ಅಂತೆಲ್ಲ ಪರಿಕರಗಳನ್ನು ತಂದಿಡುತ್ತಾರೆ.ಅಷ್ಟರಮಟ್ಟಿಗೆ ಕ್ರಿಕೆಟ್ ಹುಚ್ಚು ಹಿಡಿಸಿದೆ.
ಕ್ರಿಕೆಟ್ ಒಂದು ಉದ್ಯಮ
ವಿಶ್ವದ ದೊಡ್ಡಣ್ಣ ಅಮೇರಿಕಾವಾದ್ರೂ ಕ್ರಿಕೆಟ್ ಅಸೋಸಿಯೇಶನ್ ಗಳಲ್ಲೇ ಭಾರತೀಯ ಕ್ರಿಕೆಟ್ ಬೋರ್ಡ್ ಅತ್ಯಂತ ಶ್ರೀಮಂತ ಸಂಸ್ಥೆಯಾಗಿದೆ. ಐಸಿಸಿಯನ್ನು ಕೂಡ ಬಿಸಿಸಿಐ ಕಂಟ್ರೋಲ್ ಮಾಡುವಷ್ಟು ಬೆಳೆದಿದೆ. ಐಸಿಸಿ ಎಷ್ಟೋ ಬಾರಿ ಬಿಸಿಸಿಐನ ಅಣತಿಯಂತೆ ಸಾಗುತ್ತಿದೆ. ಐಸಿಸಿಯ ನಿಯಮಗಳನ್ನು ತನ್ನ ಮೂಗಿನ ನೇರಕ್ಕೆ ಬಿಸಿಸಿಐ ನೋಡಿ, ಅದನ್ನು ತಳ್ಳಿ ಹಾಕುವ ಅಥವಾ ತಟಸ್ಥ ಮನೋಭಾವನೆ ತೋರುವ ನಿರ್ಧಾರಗಳನ್ನು ಮಾಡಿದ್ರೂ ಯಾರೂ ತುಟಿಪಿಟಿಕ್ ಅನ್ನುವುದಿಲ್ಲ.
ಅಷ್ಟರಮಟ್ಟಿಗೆ ಬಿಸಿಸಿಐ ಬಲಿಷ್ಠವಾಗಿದೆ. ವರ್ಷಕ್ಕೆ ಸಾವಿರಾರು ಕೋಟಿ ಜೇಬಿಗಿಳಿಸಿಕೊಳ್ಳುವ ಬಿಸಿಸಿಐ ಐಪಿಎಲ್ ನಿಂದಲೂ ಕೋಟಿ ಕೋಟಿ ಸಂಪಾದಿಸುತ್ತೆ. ಇದರ ಜೊತೆ ಟಿವಿ ರೈಟ್ಸ್ ಅದು ಇದೂ ಅಂತೆಲ್ಲ ದುಡ್ಡಿನ ಹಾಸಿಗೆಯಲ್ಲೇ ಕ್ರಿಕೆಟ್ ಆಡಳಿತಗಾರರು ಮಲಗುತ್ತಾರೆ.
ಇನ್ನು ಕ್ರಿಕೆಟಿಗರಂತೂ ರಣಜಿಯಿಂದಲೇ ಕಾಸಿನ ದುನಿಯಾಗೆ ಎಂಟ್ರಿಯಾಗುತ್ತಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಆಡಿದ್ರೆ ಮತ್ತೆ ಅವರನ್ನು ಮುಟ್ಟಕ್ಕಾಗಲ್ಲ. ಅವರ ಕ್ರೀಡೆ ಒಂದು ಕಡೆಯಾದ್ರೆ ಜಾಹೀರಾತು ಬ್ರ್ಯಾಂಡ್ ವ್ಯಾಲ್ಯೂ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತೆ.
ಮಾಜಿಗಳಾದ್ರೂ ದುಡ್ಡೆ ದುಡ್ಡು..! ಅಕಾಡೆಮಿಯಿಂದ ಕೋಟಿ ದುಡಿಮೆ
ಒಬ್ಬ ಅಂತರಾಷ್ಟ್ರೀಯ ಆಟಗಾರ ಕ್ರಿಕೆಟ್ ಆಟಕ್ಕೆ ನಿವೃತ್ತಿ ನೀಡಿದ್ರೆ ಮುಂದೆ ಆತ ಏನು ಮಾಡ್ತಾನೆ ಅನ್ನೋ ಪ್ರಶ್ನೆ ಬರುತ್ತೆ. ಆದರೆ ಅವನು ಎಲ್ಲಕ್ಕಿಂತ ಮುಖ್ಯವಾಗಿ ಕ್ರಿಕೆಟ್ ಅಕಾಡೆಮಿ ಆರಂಭಿಸಿ ಸೇವೆ ಮಾಡ್ತೇನೆ ಅನ್ನೋ ರೆಡಿಮೇಡ್ ಉತ್ತರವನ್ನೂ ನೀಡಿರುತ್ತಾನೆ.
ಸೇವೆ ನೆಪಕಷ್ಟೇ ಆಗಿರುತ್ತೆ. ಸ್ಟಾರ್ ಆಟಗಾರನ ಹೆಸರಿನಡಿಯಲ್ಲಿ ನಡೆಯುವ ಅಕಾಡೆಮಿಗಳಲ್ಲಿ ಬಹುತೇಕ ದುಡ್ಡು ಮಾಡುವ ವ್ಯವಹಾರವೇ ಆಗಿರುತ್ತೆ. ಆತನ ನೇಮು ಫೇಮು ಉದ್ಯಮಕ್ಕೆ ದೊಡ್ಡ ಮಾರ್ಕೆಟಿಂಗ್ ಟ್ರಿಕ್ಸ್ ಆಗಿರುತ್ತೆ. ಅಲ್ಲದೇ ಅದರಿಂದಾಗಿಯೇ ಹಲವು ಸ್ಟೂಡೆಂಟ್ಸ್ ಅಕಾಡೆಮಿಗೆ ಸೇರುತ್ತಾರೆ.
ಅಕಾಡೆಮಿಗೆ ಸೇರಲು ದುಬಾರಿ ಶುಲ್ಕ
ಕ್ರಿಕೆಟ್ ಆಟಗಾರನಾದ್ರೇ ಕೋಟಿ ದುಡಿಯಬಹುದು ಅನ್ನುವ ಲೆಕ್ಕಾಚಾರದಂತೆ ಕ್ರಿಕೆಟ್ ಕಲಿಸುವ ಅಕಾಡೆಮಿಗಳು ಫ್ರೈವೆಟ್ ಶಿಕ್ಷಣ ಸಂಸ್ಥೆಗಳಂತೆ ಲೆಕ್ಕಾಚಾರ ಹಾಕುತ್ತವೆ. ಕ್ರಿಕೆಟ್ ನ ಅ ಆ ಇ ಈ ಕಲಿಸುವುದರ ಜೊತೆ ಜೊತೆಗೆ ಮಕ್ಕಳ ಶುಲ್ಕನೂ ಗಗನಕ್ಕೇರಿರುತ್ತವೆ.ಪೋಷಕರು ಕೂಡ ಎಷ್ಟೇ ಕಾಸ್ಟ್ಲಿಯಾದ್ರೂ ಮಕ್ಕಳನ್ನು ಕ್ರಿಕೆಟ್ ಕಲಿಸಲು ಇಚ್ಛಿಸುತ್ತಾರೆ. ಯಾಕಂದ್ರೆ ಕ್ರಿಕೆಟ್ ನಲ್ಲಿ ದುಡ್ಡಿದೆ ಅನ್ನೋ ಲೆಕ್ಕಾಚಾರ ಅವರದ್ದಾಗಿದೆ.
ಕೆಲವು ಅಕಾಡೆಮಿಗಳು ಮಾತ್ರ ಕ್ರಿಕೆಟ್ ಪಾಠವನ್ನು ಸೇವೆಯನ್ನಾಗಿಸಿಕೊಂಡಿದೆ. ಆದರೆ ಅಂತಹ ಅಕಾಡೆಮಿಗಳು ತಮ್ಮ ಕಾರ್ಯನಿರ್ವಹಣೆಗೆ ಕನಿಷ್ಠ ಶುಲ್ಕ ಪಡೆಯುತ್ತವೆ. ಅಂತಹ ಅಕಾಡೆಮಿಗಳು ನಿಗದಿತ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತವೆ. ಮತ್ತೆ ಕೆಲವು ಲಾಭದ ಉದ್ದೇಶದಿಂದಲೇ ಅಕಾಡೆಮಿಯನ್ನು ಸ್ಥಾಪಿಸುತ್ತಾರೆ. ತರಭೇತುದಾರರಿಗೆ ದೊಡ್ಡ ಸಂಬಳವನ್ನು ನೀಡುತ್ತಾರೆ. ಅವುಗಳಲ್ಲಿ ಕ್ರಿಕೆಟ್ ಸೇವೆ ಅನ್ನುವ ನಿಯಮ ಇರುವುದಿಲ್ಲ. ಬದಲಾಗಿ ಅದೊಂದು ಕ್ರಿಕೆಟರ್ಸನ್ನು ಉತ್ಪಾದಿಸುವ ಪ್ಯಾಕ್ಟರಿ ಆಗಿಬಿಟ್ಟಿದೆ.
- ಜೋಸೆಫ್ ಹೂವರ್, ಅಕಾಡೆಮಿ ನಿರ್ವಹಿಸುತ್ತಿರುವವರು
ಹೀಗೆ ಒಂದೊಂದು ಅಕಾಡೆಮಿಯದ್ದು ಒಂದೊಂದು ಲೆಕ್ಕಾಚಾರ. ಅಕಾಡೆಮಿಗಳು ದುಡ್ಡು ಮಾಡುವುದರಲ್ಲಿ ತಪ್ಪು ಅನ್ನುವುದು ಇಲ್ಲ. ಆದರೆ ಬಡ ಮಕ್ಕಳಿಗೆ ಕೆಲವು ಆಫರ್ ಗಳನ್ನು ಇಟ್ಟುಕೊಂಡರೇ ಮತ್ತಷ್ಟು ಮಕ್ಕಳಿಗೆ ಕ್ರಿಕೆಟ್ ಪಾಠ ಸಿಗಲಿದೆ. ಮಾಜಿ ಆಟಗಾರರು ಕೂಡ ದಿನನಿತ್ಯ ಅಕಾಡೆಮಿಗಳನ್ನು ಕಟ್ಟಲು ಪ್ಲಾನ್ ಮಾಡುತ್ತಿರುತ್ತಾರೆ. ಅವರ ಯೋಜನೆಗಳಲ್ಲಿ ಬಡ ಮಕ್ಕಳಿಗೆ ಉಚಿತ ಪಾಠ ಹೇಳಿಕೊಡುವಂತೆ ಆಫರ್ ಗಳನ್ನು ಹಾಕಿದ್ರೆ ಹೆಚ್ಚು ಒಲಿತಾಗಬಹುದು.