ಮಾನಸಿಕವಾಗಿ ಪ್ರಬಲವಾಗಿರುವುದು ಹೇಗೆ...?

ಟೀಮ್​​ ವೈ.ಎಸ್​​.ಕನ್ನಡ

25th Nov 2015
  • +0
Share on
close
  • +0
Share on
close
Share on
close

ಅಮೆರಿಕದ ಉದ್ಯಮಿ ಜೇಮ್ಸ್ ಆಲ್ಚರ್ ಅವರ ಅನುಭವ ಕಥನ ಇದು. 20 ಸಂಸ್ಥೆಗಳನ್ನು ಹುಟ್ಟುಹಾಕಿ ಅದರಲ್ಲಿ 17 ಕಂಪನಿಗಳು ಸೋಲಿನ ಸುಳಿಗೆ ಸಿಲುಕಿದರೂ ಎದೆಗುಂದದೆ ಎಲ್ಲವನ್ನೂ ಧೈರ್ಯವಾಗಿ ಎದುರಿಸಿದ ಜೇಮ್ಸ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ನಾನು ಚಿಕ್ಕವನಿದ್ದಾಗ ಶಾಲೆಗೆ ಚಕ್ಕರ್ ಹೊಡೆದು ನನ್ನ ಪೋಷಕರು ಮನೆಯಿಂದ ಹೊರಡುವವರೆಗೂ ಅಡಗಿ ಕೂರ್ತಿದ್ದೆ, ನಂತರ ಜಾನ್ ನ್ಯಾಶ್ ಜೊತೆ ಚೆಸ್ ಆಡಲು ಹೋಗ್ತಿದ್ದೆ. ಆತನ ತಂದೆ, ನೋಬೆಲ್ ಪ್ರಶಸ್ತಿ ವಿಜೇತರಿಗೂ ಸ್ಕಿಜೋಫ್ರೇನಿಯಾ ಇತ್ತು. ಆದ್ರೆ ಅವರ ಮಗ ಮಾತ್ರ ಸ್ಟ್ರಾಂಗ್ ಆಟಗಾರ. ನಾವೆಲ್ಲ ಇಡೀ ದಿನ ಅವರ ಮನೆಯಲ್ಲೇ ಆಡುತ್ತಾ ಕುಳಿತುಕೊಳ್ಳುತ್ತಿದ್ವಿ. ಕೆಲಸ ಮುಗಿಸಿಕೊಂಡು ನನ್ನ ಅಪ್ಪ-ಅಮ್ಮ ಬರುವುದರೊಳಗೆ ನಾನು ಮನೆ ಸೇರ್ತಿದ್ದೆ. ಆದ್ರೆ ಜಾನ್ ನ್ಯಾಶ್‍ಗೂ ಆಗ ಸ್ಕಿಜೋಫ್ರೇನಿಯಾ ಖಾಯಿಲೆಯಿತ್ತು ಅನ್ನೋದು ತಡವಾಗಿ ಗೊತ್ತಾಯ್ತು. ಆದ್ರೆ ಇಡೀ ದಿನ ನಮ್ಮ ಗಮನ ಆಟದ ಕಡೆಗೆ ಇರ್ತಾ ಇದ್ದಿದ್ರಿಂದ ಅವನ ತಂದೆ ಯಾರು ಅನ್ನೋದು ಕೂಡ ನನಗೆ ಗೊತ್ತಿರ್ಲಿಲ್ಲ. ಅದು ಬುದ್ಧಿವಂತರದ್ದೇ ಕುಟುಂಬ. ಮಗ ಚೆಸ್ ಮಾಸ್ಟರ್. ತಂದೆ ನೋಬೆಲ್ ಪ್ರಶಸ್ತಿ ವಿಜೇತ. ಇದು ಅವರನ್ನು ಮಾನಸಿಕವಾಗಿ ಆರೋಗ್ಯವಂತರನ್ನಾಗಿ ಮಾಡಬಹುದು, ಅಥವಾ ಮಾಡದೆಯೂ ಇರಬಹುದು. ಮಗ ಅಂದರೆ ಜಾನ್ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ, ಅವನ ಜೊತೆ ಸಂಪರ್ಕವೇ ಇರಲಿಲ್ಲ. ನಾನು ಕೊನೆಯ ಬಾರಿಗೆ ಅವನನ್ನು ನೋಡಿದ್ದು ಬಹುಷಃ 1988ರಲ್ಲಿರಬೇಕು.

image


ಉದ್ಯಮ ಪಯಣದಲ್ಲಿ ನಾನು ಜಗತ್ತಿನ ಅತ್ಯಂತ ಬುದ್ಧಿವಂತ, ಚುರುಕಾದ ಹಾಗೂ ಯಶಸ್ವಿ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ. ಅವರೆಲ್ಲಾ ಮಾನಸಿಕವಾಗಿ ಸ್ಟ್ರಾಂಗ್ ಆಗಿ ಇರಬಹುದು, ಅಥವಾ ಇಲ್ಲದೆಯೂ ಇರಬಹುದು. ಮುಖವಾಡ ಧರಿಸೋದ್ರಲ್ಲಿ ನಾವೆಲ್ಲಾ ನಿಪುಣರು, ಅದರ ಒಳಗೇನಿದೆ ಅನ್ನೋದು ಯಾರಿಗೂ ಗೊತ್ತಾಗೋದೇ ಇಲ್ಲ. ಅದನ್ಯಾರಾದರೂ ಗಮನಿಸಿದರೆ ಎಂಬ ಸಾವಿನ ಭಯದಿಂದ ನಾವು ಅದನ್ನು ಅಡಗಿಸುತ್ತೇವೆ. ನಾನು ಭೇಟಿಯಾದ ಪ್ರತಿಯೊಬ್ಬರಲ್ಲೂ ಇದ್ದ ಸಾಮಾನ್ಯ ಲಕ್ಷಣಗಳೇ, ನೀವು ಅಂದುಕೊಂಡಂತಹ ಮಾನಸಿಕ ಬಲವನ್ನುಳ್ಳ ಅಂಶಗಳಾಗಿರಲೂಬಹುದು. ಮಾನಸಿಕವಾಗಿ ಸ್ಟ್ರಾಂಗ್ ಆಗಿರೋದು ಹೇಗೆ ಅನ್ನೋದನ್ನು ಎಲ್ಲರೂ ಕಲಿಯಬಹುದು. ಅದರ ಫಲಿತಾಂಶವಾಗಿ ಜಗತ್ತನ್ನೇ ಬದಲಾಯಿಸಬಹುದು. ಸಂಪತ್ತು, ಆರೋಗ್ಯ, ಯಶಸ್ಸು, ಆರೋಗ್ಯಕರ ಸಂಬಂಧಗಳು ಮತ್ತು ಸ್ವಾತಂತ್ರ್ಯ ಅದರ ಉಪಉತ್ಪನ್ನಗಳಿದ್ದಂತೆ. ಅದನ್ನೆಲ್ಲ 1-10ರಂತೆ ಪಟ್ಟಿ ಮಾಡಿ, ಪ್ರತಿದಿನ ಒಂದೊಂದನ್ನೇ ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತೇನೆ.

ಎ) ಸಂಬಂಧಗಳು...

ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ, ನಂಬಲಸಾಧ್ಯವಾದ ಬಲವಾದ ಸಂಬಂಧಗಳನ್ನುಳ್ಳವರೇ ಮಾನಸಿಕವಾಗಿ ಸ್ಟ್ರಾಂಗ್ ಇರ್ತಾರೆ. ಸ್ನೇಹಿತರು, ಪತ್ನಿಯರು, ಪಾಲುದಾರರು ಸೇರಿದಂತೆ ಬಿಲಿಯನೇರ್‍ಗಳು, ಸಿನಿಮಾ ನಿರ್ದೇಶಕರು, ಅಥ್ಲೀಟ್‍ಗಳು, ವಿಜ್ಞಾನಿಗಳು ಕಲಾವಿದರನ್ನೆಲ್ಲ ನಾನು ಸಂದರ್ಶಿಸಿದ್ದೇನೆ. ಐವರಲ್ಲಿ ಅತಿ ಸಾಮಾನ್ಯ ಎಂಬ ಮಾತಿನಲ್ಲಿ ನನಗೆ ನಂಬಿಕೆ ಇದೆ. ನೀವು ಸಂಬಂಧಗಳನ್ನು ಗಟ್ಟಗೊಳಿಸಿದ್ದೀರಾ ಎಂದಾದಲ್ಲಿ ಅವರು ನಿಮ್ಮ ಐಡಿಯಾಗಳನ್ನು ಬೆಂಬಲಿಸುತ್ತಿದ್ದಾರೆ ಎಂದರ್ಥ. ಅದನ್ನು ಕಾರ್ಯಗತಗೊಳಿಸಲು ನಿಮಗೆ ನೆರವು ನೀಡುತ್ತಾರೆ.

ಬಿ) ಪ್ರಾಮಾಣಿಕತೆ...

ಇದು ಧಾರ್ಮಿಕವಾದುದ್ದಲ್ಲ, ಪಕ್ಕಾ ಅಂಕಗಣಿತ. ದೇಹದ ಸಮೂಹದಲ್ಲಿ ಶೇ.2ರಷ್ಟನ್ನು ತೆಗೆದುಕೊಳ್ಳುವ ನಮ್ಮ ಮೆದುಳು, ಶೇ.25ರಷ್ಟು ದೇಹದ ಕ್ಯಾಲೋರಿಯನ್ನು ಪ್ರತಿದಿನ ದಹಿಸುತ್ತದೆ. ನೀವು ಸೇವಿಸುವ ನಾಲ್ಕು ಕ್ಯಾಲೋರಿಯಲ್ಲಿ ಒಂದು ಕ್ಯಾಲೋರಿ ಮೆದುಳಿಗೆ ಇಂಧನದಂತೆ ಕೆಲಸ ಮಾಡುತ್ತದೆ. ನೀವು ಒಂದು ಸುಳ್ಳು ಹೇಳಿದ್ರೆ ನಿಮ್ಮ ಮೆದುಳು ಸುಳ್ಳುಗಳ ಸರಣಿಯನ್ನೇ ಎದುರಿಸಬೇಕಾಗುತ್ತೆ. ಮೆದುಳಿನ ಇನ್ನೊಂದು ಭಾಗ ಮತ್ತಷ್ಟು ಸುಳ್ಳುಗಳ ಸರಣಿಯನ್ನು ಎದುರಿಸಬೇಕಾಗುತ್ತದೆ. ಸೂಕ್ತ ಮಾನಸಿಕ ಸಾಮಥ್ರ್ಯಕ್ಕೆ ದುಪ್ಪಟ್ಟು ಕ್ಯಾಲೋರಿಗಳ ಅಗತ್ಯವಿದೆ. ಆದ್ರೆ ಅದು ಅಸಾಧ್ಯ. ಮಾನಸಿಕವಾಗಿ ಸ್ಟ್ರಾಂಗ್ ಆಗಿರಲು ಅತ್ಯುತ್ತಮ ಮಾರ್ಗ ಅಂದ್ರೆ ಪ್ರಾಮಾಣಿಕವಾಗಿರುವುದು. ಪ್ರಾಮಾಣಿಕತೆಯಿಂದಿದ್ದಲ್ಲಿ, ದೌರ್ಬಲ್ಯಗಳ ವಿರುದ್ಧ ಹೋರಾಡುವ ಬದಲು ನಿಮ್ಮ ದೇಹದಲ್ಲಿರುವ ಇಂಧನವನ್ನು ಬಳಸಿಕೊಂಡು ಮೆದುಳು ನಿಮ್ಮನ್ನು ಮಾನಸಿಕವಾಗಿ ಬಲಪಡಿಸುತ್ತದೆ.

ಸಿ) ಇದು ನನ್ನ ಬಗ್ಗೆ ಅಲ್ಲ, ನಿಮ್ಮ ಬಗ್ಗೆ...

ಪ್ರತಿ ಬಾರಿ ಪ್ರಿಯತಮೆ ಕೈಕೊಟ್ಟಾಗ್ಲೂ ಅದು ನನ್ನ ಬಗ್ಗೆ ಅಲ್ಲ ಎನಿಸುವುದುಂಟು. ಹಾಗೆ ಯೋಚಿಸಿದಾಗೆಲ್ಲಾ ಹಾಯೆನಿಸುತ್ತೆ. ಅವರನ್ನೇ ದೂಷಿಸಿಕೊಳ್ಳುವ ಮೂಲಕ ಹಲವರು ನನಗೆ ಒಳ್ಳೆಯ ಅನುಭವ ಉಂಟುಮಾಡಿದ್ದಾರೆ. ಆದ್ರೆ ಮಾನಸಿಕವಾಗಿ ಸ್ಟ್ರಾಂಗ್ ಇರುವವರು ಬೇರೆಯವರ ಬಗ್ಗೆ ಗಮನಹರಿಸುತ್ತಾರೆ. ಅವರು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಅದರ ಜೊತೆಜೊತೆಗೆ ಅವರ ಸಮಸ್ಯೆಯೂ ಪರಿಹಾರವಾಗುತ್ತದೆ. ಹೇಗೆ ಹಣ ಮಾಡೋದು ಅನ್ನೋ ಬಗ್ಗೆ ಅವರು ಯೋಚನೆ ಮಾಡುವುದಿಲ್ಲ. ಜಗತ್ತಿನಲ್ಲಿ ನಾನು ಬಗೆಹರಿಸಬಹುದಾದ ಯಾವ ಸಮಸ್ಯೆ ಇದೆ ಅನ್ನೋದನ್ನೇ ಅವರು ಯೋಚನೆ ಮಾಡ್ತಾರೆ. ತಡೆಗಟ್ಟುವಿಕೆಯೇ ಚಿಕಿತ್ಸೆ ಎಂಬ ಮಾತಿನಂತೆ, ಅದಕ್ಕೆ ನೆರವಾಗುವಂತಹ ಉತ್ಪನ್ನವನ್ನೇ ಅವರು ಅಭಿವೃದ್ಧಿಪಡಿಸುತ್ತಾರೆ.

ಡಿ) ಓದುವಿಕೆ...

ನನ್ನ ಪಾಡ್ಕ್ಯಾಸ್ಟ್‍ಗಾಗಿ ನಾನು ಸುಮಾರು 150ಕ್ಕೂ ಹೆಚ್ಚು ಜನರನ್ನು ಸಂದರ್ಶಿಸಿದ್ದೇನೆ. ನಿಮ್ಮೆಲ್ಲರಿಗೂ ಒಂದು ಪ್ರಶ್ನೆ: ನೀವು ಓದಿದ ಕೊನೆಯ ಪುಸ್ತಕ ಯಾವುದು? ನಮಗೆಲ್ಲಾ ಬದಕಲು ಒಂದು ಜೀವನ ಇದೆ. ಆದ್ರೆ ಓದುವಿಕೆಯಿಂದ ನೀವು ಮತ್ತೊಬ್ಬ ವ್ಯಕ್ತಿಯ ಜೀವನದ ಸಾರವನ್ನು ಕೆಲವೇ ದಿನಗಳಲ್ಲಿ ಹೀರಿಕೊಳ್ಳಬಹುದು. ನೀವು ತುಂಬಾ ಓದಿದ್ರೆ ನಿಮ್ಮ ಮೆದುಳು ಅದ್ಭುತ ಜನರ ನಿರ್ಣಾಯಕ ಅಂಕಗಳನ್ನು ಹಿಡಿದಿಟ್ಟುಕೊಳ್ಳುತ್ತೆ. ಅವರ ಬದುಕಲ್ಲಿ ಈಜಿ ನೀವು ಪ್ರಬಲವಾಗಿ ಹೊರಬರುತ್ತೀರಾ. ಡ್ರಗ್ ಡೀಲರ್ ರಿಕ್ ರಾಸ್ ಅವ್ರನ್ನು ನಾನು ಕೇಳಿದ್ದೆ, ಬದುಕೇ ಬದಲಾಗಲು ಜೈಲಿನಲ್ಲಿ ನೀವು ಓದಿದ ಪುಸ್ತಕ ಯಾವುದು ಅಂತ. ಮೊದಲು ಅವರಿಗೆ ಓದುವ, ಬರೆಯುವ ಹವ್ಯಾಸವೇ ಇರಲಿಲ್ಲ. ಜೈಲಿನಲ್ಲಿದ್ದಾಗ “As A Man Thinketh”, “The Richest Man in Babylon”, and “Think and Grow Rich” ಪುಸ್ತಕಗಳನ್ನು ಓದಿದ್ರು. ನಾನು ಪ್ರಶ್ನಿಸಿದ ಎಲ್ಲರೂ ಥಟ್ಟಂತ ಉತ್ತರಿಸಿದ್ರು. ಮುಂದಿನ ವಾರ ಮತ್ತೆ ಕೇಳಿದ್ರೆ ಅವರ ಉತ್ತರ ಬೇರೆಯಾಗಿರುತ್ತೆ. ಓದಿನ ಬಗ್ಗೆ ಹೊಟ್ಟೆಬಾಕತನವಿಲ್ಲದ, ಮಾನಸಿಕವಾಗಿ ಸ್ಟ್ರಾಂಗ್ ಇರುವ ವ್ಯಕ್ತಿಯನ್ನು ನಾನು ಇದುವರೆಗೂ ಭೇಟಿಯಾಗಿಲ್ಲ.

ಇ) ಆರೋಗ್ಯ...

ನೀವು ಅನಾರೋಗ್ಯದಿಂದ ಹಾಸಿಗೆ ಹಿಡಿದ್ರೆ, ಮಾನಸಿಕವಾಗಿ ಸ್ಟ್ರಾಂಗ್ ಆಗಿರೋದು, ಸೃಜನಶೀಲರಾಗಿರೋದು, ಅಂದುಕೊಂಡಿದ್ದನ್ನು ಸಾಧಿಸೋದು, ಜಗತ್ತನ್ನೇ ಬದಲಾಯಿಸೋದು, ನಿಜಕ್ಕೂ ಕಷ್ಟ. ಇದು ಅನಾರೋಗ್ಯಪೀಡಿತರ ಬಗೆಗಿನ ತೀರ್ಪು ಎಂದುಕೊಳ್ಬೇಡಿ, ಒಮ್ಮೊಮ್ಮೆ ಎಲ್ಲರಿಗೂ ಆರೋಗ್ಯ ಕೈಕೊಡುತ್ತೆ. ಆದ್ರೆ ನಾನು ಭೇಟಿಯಾದ ಯಶಸ್ವಿ ವ್ಯಕ್ತಿಗಳೆಲ್ಲ ಆರೋಗ್ಯವಂತರು ಅನ್ನೋದು ವಿಶೇಷ. ಅದರರ್ಥ ಪ್ರತಿದಿನ ನೀವು 500 ಪೌಂಡ್ಸ್ ಭಾರ ಎತ್ತಬೇಕೆಂದೇನಲ್ಲ. ಪ್ರತಿನಿತ್ಯ 8 ತಾಸು ಮಲಗಲೇಬೇಕು, ಜೊತೆಗೆ ವಾಕಿಂಗ್ ಕಡ್ಡಾಯ ಎಂದರ್ಥ.

ಎಫ್) ಕುತೂಹಲ...

ನೀವು ಯಾರ ಜೊತೆಗಾದ್ರೂ ಮಾತನಾಡ್ತೀದ್ದೀರಾ ಎಂದುಕೊಳ್ಳಿ, ಅವ್ರು ಹೇಳ್ತಾ ಇರೋ ಕುತೂಹಲಕಾರಿ ವಿಷಯ ನಿಮಗರ್ಥ ಆಗದೇ ಇದ್ರೆ ಮಧ್ಯದಲ್ಲೇ ಅವರನ್ನು ತಡೆದು ಅದೇನೆಂದು ತಿಳಿದುಕೊಳ್ಳಿ. ಹಾಗೆ ಮಾಡದೇ ಇದ್ದಲ್ಲಿ, ಬದುಕಿನುದ್ದಕ್ಕೂ ಅದನ್ನು ತಿಳಿದುಕೊಳ್ಳೋ ಅವಕಾಶ ನಿಮಗೆ ಸಿಗದೇ ಇರಬಹುದು. ಒಮ್ಮೊಮ್ಮೆ ನಮ್ಮನ್ನು ಸ್ಟುಪಿಡ್ ಅಂದುಕೊಂಡ್ರೆ ಅನ್ನೋ ಮುಜುಗರದಲ್ಲೇ ಪ್ರಶ್ನೆ ಕೇಳಲು ಹಿಂಜರಿಯುತ್ತೇವೆ. ಹೊಸದನ್ನು ಕಲಿಯಲು ಇರುವ ಏಕೈಕ ಮಾರ್ಗ ಅಂದ್ರೆ ಪ್ರಶ್ನೆ ಮತ್ತು ಕುತೂಹಲ. ನಿಮ್ಮ ಕುತೂಹಲವನ್ನು ಪ್ರೇರೇಪಿಸುವಂಥವರಿಗಾಗಿ ಅರಸಿ, ಯಾಕಂದ್ರೆ ನೀವು ಅತಿ ಹೆಚ್ಚಿನದನ್ನು ಕಲಿಯುವುದು ಅವರಿಂದಲೇ. ಒಂದು ಪ್ರಶ್ನೆ ಕೇಳಲು ನಿಮಗೆ ಮುಜುಗರವಾದ್ರೆ 2 ಪ್ರಶ್ನೆಗಳನ್ನು ಕೇಳಿ. ಪ್ರಶ್ನೆ ಕೇಳದೇ ಇದ್ದಲ್ಲಿ ಬದುಕು ಬದಲಾಗುವುದೇ ಇಲ್ಲ.

ಜಿ) ಕಲಿಯಿರಿ...ಹೇಳಿ...ಪುರುಚ್ಛರಿಸಿ

ನಾವು ಶಾಲೆಯಲ್ಲಿ ಕಲಿಯುತ್ತೇವೆ ಎಂಬ ಭಾವನೆ ಇದೆ. ಬುದ್ಧಿವಂತ ಪ್ರೊಫೆಸರ್ ನಮಗೆ ಉಪನ್ಯಾಸ ನೀಡ್ತಾರೆ. ಆದ್ರೆ ತರಗತಿಯಿಂದ ಹೊರಬಿದ್ದು 45 ನಿಮಿಷಗಳಲ್ಲಿ ವಿದ್ಯಾರ್ಥಿಗಳು ತಾವು ಕೇಳಿದ ಪಾಠದಲ್ಲಿ ಶೇ.80ರಷ್ಟನ್ನು ಮರೆತಿರುತ್ತಾರೆ. ಮರುದಿನ ನೂರಕ್ಕೆ ನೂರರಷ್ಟನ್ನು ಮರೆತುಬಿಡ್ತಾರೆ. ನೀವು ಕೇಳಿದ್ದು ಕುತೂಹಲಕಾರಿ ಎನಿಸಿದ್ರೆ ಅದನ್ನು ಬರೆದಿಟ್ಟುಕೊಳ್ಳಿ. ಒಂದು ಗಂಟೆವರೆಗೆ ಅದನ್ನೇ ಮಾತುಕತೆಯಲ್ಲಿ ಬಳಸಿ. ಮರುದಿನವೂ ಒಮ್ಮೆ ಜ್ಞಾಪಿಸಿಕೊಳ್ಳಿ. ಅದರಿಂದ ನೀವು ಕಲಿತ ಮಾಹಿತಿಯೆಲ್ಲ ನಿಮ್ಮ ಮೆದುಳು ಸೇರಿರುತ್ತೆ. ಮಾನಸಿಕವಾಗಿ ಸ್ಟ್ರಾಂಗ್ ಇರುವವರು ಹೇಗೆ ಕಲಿಯಬೇಕು ಎಂಬುದನ್ನೂ ಕಲಿಯುತ್ತಾರೆ.

ಎಚ್) ಐಡಿಯಾ ಎಂಬ ಸ್ನಾಯು...

ಕಲ್ಪನೆಗಳು ಒಂದು ಕಾಸಿಗೆ ಒಂದು ಡಜನ್ ಸಿಗ್ತವೆ ಅನ್ನೋ ಮಾತಿದೆ, ಆದ್ರೆ ಅದು ಸುಳ್ಳು. ಸಿಗೋದು ಮೂರು ಮಾತ್ರ. ನಿಮ್ಮ ಮುಂದಿನ ವಿವಾಹ ವಾರ್ಷಿಕೋತ್ಸವಕ್ಕೆ ಸಂಗಾತಿಗೆ ಸರ್‍ಪ್ರೈಸ್ ಕೊಡಲು 10 ಐಡಿಯಾಗಳನ್ನು ಮಾಡಿ. ಅದರಲ್ಲಿ ಮೊದಲ ಮೂರು ಮಾತ್ರ ಸರಳ ಎನಿಸುತ್ತವೆ. ಐಡಿಯಾ ಅನ್ನೋದೊಂದು ಸ್ನಾಯು, ಅದಕ್ಕೆ ವ್ಯಾಯಾಮ ಬೇಕು. ವಿಷಯವೊಂದನ್ನು ಆಯ್ದುಕೊಳ್ಳಿ, ಪ್ರತಿದಿನ ಅದರ ಮೇಲೆ ಒಂದೊಂದು ಐಡಿಯಾ ಮಾಡಿ. ನಾನು ಬದುಕಿನಲ್ಲಿ ಭರವಸೆ ಕಳೆದುಕೊಂಡು, ಆತ್ಮಹತ್ಯೆಯ ಭಯದಲ್ಲಿದ್ದಾಗ ನನಗೆ ನೆರವಾಗಿದ್ದು ಇದೇ. ಅದಾಗಿ 6 ತಿಂಗಳಲ್ಲಿ ಚಮತ್ಕಾರದಂತೆ ನಾನು ಬದಲಾಗಿದ್ದೆ. ಮೊದಲ ಯಶಸ್ಸು ಸಿಗುವವರೆಗೂ, ಕೂಲಿಯೋ 17 ವರ್ಷಗಳ ಕಾಲ ಪ್ರತಿದಿನ ಒಂದೊಂದು ಸಾಹಿತ್ಯ ರಚನೆ ಮಾಡ್ತಾ ಇದ್ರಂತೆ. ಮೊದಲ ಹಾಡು ಯಶಸ್ವಿಯಾಗಿ ವರ್ಷ ಕಳೆಯುವಷ್ಟರಲ್ಲಿ, ಅವರ ಮತ್ತೊಂದು ಗೀತೆ ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರಾಟವಾದ ಹಾಡು ಎಂಬ ಖ್ಯಾತಿ ಗಳಿಸಿತ್ತು. ಒಂದು ವಿಭಾಗದಲ್ಲಿ ನೀವು ನಿಪುಣರಾಗಿದ್ರೆ, ಇನ್ನೊಂದರಲ್ಲೂ ತಜ್ಞರು ಎನಿಸಿಕೊಂಡ್ರೆ ವಿಶ್ವದಲ್ಲಿ ನೀವೇ ಶ್ರೇಷ್ಠ ವ್ಯಕ್ತಿ. ಇದನ್ನು `ಐಡಿಯಾ ಸೆಕ್ಸ್' ಅಂತಾ ಕರೆಯಲಾಗುತ್ತೆ. ಐಡಿಯಾ ಸ್ನಾಯು, ಕಲಿಕೆ ಮತ್ತು ಐಡಿಯಾ ಸೆಕ್ಸ್ ಇದ್ರೆ ಅಂದುಕೊಂಡಿದ್ದನ್ನು ನೀವು ಸಾಧಿಸುವುದರಲ್ಲಿ ಅನುಮಾನವಿಲ್ಲ. ನಿಮ್ಮ ಮನಸ್ಸಿನಲ್ಲೊಂದು ಉಪಾಯವಿದ್ರೆ, ಅದನ್ನು ಕಾರ್ಯರೂಪಕ್ಕೆ ತರಲು ನೀವು ಬಯಸಿದ್ರೆ ಮುಂದೇನು ಮಾಡಬೇಕು ಅನ್ನೋದನ್ನು ಬರೆದಿಟ್ಟುಕೊಳ್ಳಿ. ಮಾನಸಿಕವಾಗಿ ಆರೋಗ್ಯವಂತರಾಗಿರುವವರು ವರ್ಷಕ್ಕೆ ಅಂತಹ ನೂರು ಪಟ್ಟಿಗಳನ್ನು ಮಾಡಿರ್ತಾರೆ.

ಐ) ಅನುಮತಿ...

ಮಾನಸಿಕವಾಗಿ ಪ್ರಬಲವಾಗಿರುವವರು ತಮಗೆ ತಾವೇ ಅನುಮತಿ ನೀಡ್ತಾರೆ. ಗೂಗಲ್ ವ್ಯಕ್ತಿಗಳು, ಎಲಿಜಬೆತ್ ಹೋಮ್ಸ್, ಹೆನ್ರಿ ಫೋರ್ಡ್, ರೈಟ್ ಬ್ರದರ್ಸ್‍ರಂತಹ ಯಶಸ್ವಿ ವ್ಯಕ್ತಿಗಳೆಲ್ಲರೂ ತಾವು ಮೊದಲು ಮಾಡದೇ ಇದ್ದಂತಹ ಕಾರ್ಯವನ್ನು ಮಾಡಲು ತಮಗೆ ತಾವೇ ಅನುಮತಿ ನೀಡಿದ್ದರು. ಕೆಟ್ಟ ಉಪಾಯಕ್ಕೆ, ರಿಸ್ಕ್ ತೆಗೆದುಕೊಳ್ಳೋದಕ್ಕೆ ಅವರಿಗೆ ಅವರೇ ಅನುಮತಿ ನೀಡಿದ್ರು. ಏಳು, ಬೀಳು, ಮರಳಿ ಯತ್ನವ ಮಾಡು ಎಲ್ಲದಕ್ಕೂ ಅನುಮತಿ ಕೊಟ್ಟಿದ್ರು. ಯಾವುದನ್ನಾದ್ರೂ ಅತಿಯಾಗಿ ಪ್ರೀತಿಸಲು ಅನುಮತಿ ಕೊಟ್ರೆ ಅಂದುಕೊಂಡಿದ್ದನ್ನು ಮಾಡಲು, ನಿಮ್ಮ ಮೆದುಳು ಸಹಕರಿಸುತ್ತೆ. ಹೊಸ ಜಗತ್ತನ್ನು ಸೃಷ್ಟಿ ಮಾಡಲು ನಿಮಗೆ ನೀವು ಅನುಮತಿ ಕೊಡದೇ ಇದ್ರೆ ಬೇರೆಯವರು ಕೊಡುವ ಸಾಧ್ಯತೆಗಳೇ ಇಲ್ಲ.

ಜೆ) ಉಪಸ್ಥಿತಿ...

ಕಳೆದು ಹೋದ ಸಮಯದ ಬಗ್ಗೆ ನಾನು ಈಗಲೂ ಮರುಗುತ್ತೇನೆ. ಒಮ್ಮೆ ನಾನು ನನ್ನ ಬಳಿಯಿದ್ದ ಸರ್ವಸ್ವವನ್ನೂ ಕಳೆದುಕೊಂಡಿದ್ದೆ. ಆ ಹಣವನ್ನು ತಂದೆಯ ಆರೋಗ್ಯ ಕಾಪಾಡಲು ಬಳಸಿದ್ರೆ ಅವರು ಇನ್ನಷ್ಟು ಸಮಯ ಬದುಕುತ್ತಿದ್ದರು ಎನಿಸುವುದುಂಟು. ನಾನು ಉದ್ಯಮದಲ್ಲಿ ಇನ್ನಷ್ಟು ಚುರುಕಾಗಿರಬೇಕಿತ್ತು ಎಂಬ ಭಾವನೆಯೂ ಬರುತ್ತಿರುತ್ತೆ. ಆ ಸಮಯದಲ್ಲೆಲ್ಲಾ ನಾನು ಆತಂಕಿತನಾಗುತ್ತೇನೆ, ನಾನು ಚೆನ್ನಾಗಿ ಮಾತನಾಡಬಹುದಿತ್ತು, ಉದ್ಯಮದಲ್ಲಿ ಮತ್ತಷ್ಟು ಹೂಡಿಕೆ ಮಾಡಿದ್ರೆ ವರ್ಕೌಟ್ ಆಗುತ್ತಾ? ಅನ್ನೋ ಯೋಚನೆಗಳು ಕಾಡುತ್ತವೆ. ಪ್ರತಿ ಬಾರಿ ಭೂತಕಾಲದ ಬಗ್ಗೆ ವಿಷಾಧ ಉಂಟಾದಾಗಲೆಲ್ಲ ಭವಿಷ್ಯದ ಬಗ್ಗೆ ಆಸಕ್ತಿ ಹುಟ್ಟಬೇಕು. ಸಮಯದ ಪಯಣ ನಾವಂದುಕೊಂಡಷ್ಟು ರೋಮಾಂಚನಕಾರಿಯಲ್ಲ. ಬದುಕಿನ ಪಯಣ ಎಲ್ಲಿಗೆ ಸಾಗಿದ್ರೂ, ಸಾವು ಬಂದಾಗ ಒಂದು ಕ್ಷಣವೂ ನೀವು ಜೀವಿಸಲಾರಿರಿ. ಹಾಗಾಗಿ ಮಾನಸಿಕವಾಗಿ ಸ್ಟ್ರಾಂಗ್ ಇರುವವರು ಒಂದು ಹೆಜ್ಜೆ ಹಿಂದಕ್ಕೆ ಇಡ್ತಾರೆ. ಹಳೆಯದನ್ನು ನೆನೆಸಿಕೊಂಡು ಕೊರಗುತ್ತ, ಭವಿಷ್ಯದ ಬಗ್ಗೆ ಆತಂಕಪಡುತ್ತ ಕೂರುವ ಬದಲು ಜನರಿಗಾಗಿ ತಾನೇನು ಮಾಡಬಲ್ಲೆ ಎಂಬುದನ್ನು ಯೋಚಿಸ್ತಾರೆ.

ಚಿಂತೆ ಹಾಗೂ ವಿಷಾಧ ನಾಳಿನ ಸಮಸ್ಯೆಯನ್ನು ಯಾವತ್ತೂ ಬಗೆಹರಿಸುವುದಿಲ್ಲ, ಇವತ್ತಿನ ಶಕ್ತಿಯನ್ನು ಬರಿದು ಮಾಡುತ್ತದೆ. ಮಾನಸಿಕವಾಗಿ ಪ್ರಬಲರಾಗಿರುವವರು, ಸಮಸ್ಯೆಗಳನ್ನು ಬಗೆಹರಿಸ್ತಾರೆ, ಜನರನ್ನು ಪ್ರೀತಿಸುತ್ತಾರೆ, ಕುತೂಹಲಿಗಳಾಗಿರ್ತಾರೆ, ಅವರಲ್ಲಿ ಐಡಿಯಾ ಸೆಕ್ಸ್ ಇರುತ್ತೆ, ಪ್ರಾಮಾಣಿಕರಾಗಿರ್ತಾರೆ ಜೊತೆಗೆ ಜಗತ್ತನ್ನು ಉತ್ತಮ ತಾಣವನ್ನಾಗಿ ಪರಿವರ್ತಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರಲ್ಲೂ, ಪ್ರತಿ ದಿನ, ಪ್ರತಿ ಹಂತದಲ್ಲಿ ಕೊಂಚವಾದ್ರೂ ಸುಧಾರಣೆ ಆಗಲೇಬೇಕು.

ಲೇಖಕರು: ಜೇಮ್ಸ್​​​ ಅಲ್ಚರ್​​

ಅನುವಾದಕರು: ಭಾರತಿ ಭಟ್​​​​​​​

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India