ಭಾರತದಲ್ಲಿ `ಸ್ತ್ರೀ ಶಕ್ತಿ' ಅನಾವರಣ - 2015ರ ಟಾಪ್ 10 ಸಾಧಕಿಯರು

ಟೀಮ್​ ವೈ.ಎಸ್​. ಕನ್ನಡ

ಭಾರತದಲ್ಲಿ `ಸ್ತ್ರೀ ಶಕ್ತಿ' ಅನಾವರಣ - 2015ರ ಟಾಪ್ 10 ಸಾಧಕಿಯರು

Monday January 04, 2016,

3 min Read

ಎಲ್ಲಾ ಕ್ಷೇತ್ರಗಳಲ್ಲೂ ಈಗ ಮಹಿಳೆಯರದ್ದೇ ಪಾರುಪತ್ಯ. ಉದ್ಯಮ, ಕ್ರೀಡೆ ಎಲ್ಲದರಲ್ಲೂ ಮಹಿಳೆಯರು ಯಶಸ್ಸಿನ ಉತ್ತುಂಗ ತಲುಪುತ್ತಿದ್ದಾರೆ. 2015 ಕೂಡ ಸಾಧಕಿಯರ ಪಾಲಿಗೆ ಶುಭ ವರ್ಷವಾಗಿತ್ತು. ಭಾರತದ ಹೆಮ್ಮೆಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ್ರೆ, ಅದೆಷ್ಟೋ ಸಾಮಾನ್ಯ ಮಹಿಳೆಯರು ಕೂಡ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ಅಂತಹ ಮಹತ್ವದ ಸಾಧಕಿಯರು ಯಾರ್ಯಾರು ಅನ್ನೋದನ್ನು ನೋಡೋಣ.

1. ಭಕ್ತಿ ಶರ್ಮಾ : ಭಾರತೀಯ ಈಜುಪಟುಗಳು ಜಾಗತಿಕ ಮಟ್ಟದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ. ಭಾರತದ ಭಕ್ತಿ ಶರ್ಮಾ ಅಂಟಾರ್ಟಿಕ ಸಮುದ್ರದಲ್ಲಿ ಈಜಿದ ವಿಶ್ವದ ಅತಿ ಕಿರಿಯ ಈಜುಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಕ್ತಿ ಶರ್ಮಾ, ಜನವರಿಯ ಕೊರೆಯುವ ಚಳಿಯಲ್ಲೂ ಅಂಟಾರ್ಟಿಕ ಸಮುದ್ರಲ್ಲಿ 2.21 ಕಿಲೋ ಮೀಟರ್ ದೂರವನ್ನು ಕೇವಲ 52 ನಿಮಿಷಗಳಲ್ಲಿ ಈಜಿದ್ದಾರೆ. ವಿಶೇಷ ಅಂದ್ರೆ ಭಕ್ತಿ, ವಿಶ್ವದ ಐದೂ ಸಮುದ್ರಗಳಲ್ಲೂ ಯಶಸ್ವಿಯಾಗಿ ಈಜು ಹೊಡೆದಿದ್ದಾರೆ.

2. ಪ್ರಿಯಾಂಕಾ ಚೋಪ್ರಾ : ಬಾಲಿವುಡ್‍ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ, ಅಂತರಾಷ್ಟ್ರೀಯ ಮಟ್ಟದ ಗಾಯಕಿಯಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇಂಗ್ಲಿಷ್ ಗೀತೆಯೊಂದನ್ನು ಹಾಡುವ ಮೂಲಕ ತಮ್ಮ ಅದ್ಭುತ ಕಂಠಸಿರಿಯಿಂದ ಸಂಗೀತ ಪ್ರಿಯರ ಮನಗೆದ್ದಿದ್ದಾರೆ. ಅಷ್ಟೇ ಅಲ್ಲ ಎಬಿಸಿ ಆ್ಯಕ್ಷನ್ ಥ್ರಿಲ್ಲರ್ ``ಕ್ವಾಂಟಿಕೋ''ದಲ್ಲಿ ನಟಿಸುವ ಮೂಲಕ ಅಮೆರಿಕದ ಟಿವಿ ಇಂಡಸ್ಟ್ರಿಗೂ ಲಗ್ಗೆ ಇಟ್ಟಿದ್ದಾರೆ.

image


3. ಭಾರತೀಯ ಮಹಿಳಾ ಹಾಕಿ ತಂಡ : 2015ರಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಕಮಾಲ್ ಮಾಡಿದೆ. 2016ರ ರಿಯೋ ಗೇಮ್ಸ್​​ಗೆ ತನ್ನ ಸ್ಥಾನವನ್ನು ಭಧ್ರಪಡಿಸಿಕೊಂಡಿದೆ. ಈ ಮೂಲಕ ಎರಡನೇ ಬಾರಿ ಭಾರತದ ಮಹಿಳಾ ಹಾಕಿ ಟೀಮ್, ಓಲಿಂಪಿಕ್ಸ್ ಕ್ರೀಡಾಕೂಟಕ್ಕೆ ಪ್ರವೇಶ ಪಡೆದಿದೆ. ಇದಕ್ಕೂ ಮೊದಲು 1980ರಲ್ಲಿ ಭಾರತ ಓಲಿಂಪಿಕ್ಸ್​​ಗೆ ಪ್ರವೇಶ ಪಡೆದಿತ್ತು. ಪ್ರಶಸ್ತಿ ಗೆಲ್ಲುವಲ್ಲಿ ಸಫಲವಾಗದೇ ಇದ್ರೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

4. ಬೆನೊ ಝೆಫೈನ್ : ಅಂಧತ್ವವನ್ನೂ ಮೆಟ್ಟಿನಿಂತ ಸಾಧಕರು ಬೆನೊ ಝೆಪೈನ್. ಶೇ.100ರಷ್ಟು ದೃಷ್ಟಿದೋಷವಿದ್ರೂ ವಿದೇಶಾಂಗ ಸೇವೆಗೆ ಪ್ರವೇಶ ಪಡೆದ ಏಕೈಕ ಭಾರತೀಯ ಬೆನೊ. 25ರ ಹರೆಯದ ಬೆನೊ, ವಿದೇಶಾಂಗ ಸೇವೆ ಸೇರುವ ಮುನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ರು.

5. ಸೈನಾ ನೆಹ್ವಾಲ್ : ಭಾರತದ ಬ್ಯಾಂಡ್ಮಿಂಟನ್ ಇತಿಹಾಸದಲ್ಲೇ 2015 ಸುವರ್ಣ ಯುಗ. ಯಾಕಂದ್ರೆ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‍ನಲ್ಲಿ ಭಾರತದ ಸೈನಾ ನೆಹ್ವಾಲ್ ನಂ.1 ಸ್ಥಾನಕ್ಕೇರಿದ್ರು. ಅಗ್ರಸ್ಥಾನ ಗಿಟ್ಟಿಸಿಕೊಂಡ ಭಾರತದ ಮೊದಲ ಆಟಗಾರ್ತಿ ಸೈನಾ. ಅಷ್ಟೇ ಅಲ್ಲ ಆಲ್ ಇಂಗ್ಲೆಂಡ್ ಚಾಂಪಿಯನ್‍ಶಿಪ್ ಮತ್ತು ವರ್ಲ್ಡ್​​ ಚಾಂಪಿಯನ್‍ಶಿಪ್‍ನ ಫೈನಲ್‍ಗೆ ಲಗ್ಗೆ ಇಟ್ಟ ಮೊಟ್ಟ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೂ ಅವರು ಪಾತ್ರರಾಗಿದ್ದಾರೆ.

6. ಪೂಜಾ ಠಾಕೂರ್ : ನಿಜಕ್ಕೂ ಪೂಜಾ ಠಾಕೂರ್ ಅವರ ಬಗ್ಗೆ ಇಡೀ ದೇಶಕ್ಕೇ ಅಪಾರ ಹೆಮ್ಮೆ ಗೌರವವಿದೆ. ವಿಂಗ್ ಕಮಾಂಡರ್ ಪೂಜಾ, ರಾಷ್ಟ್ರಪತಿ ಭವನದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಗಾರ್ಡ್ ಆಪ್ ಹಾನರ್ ಸಲ್ಲಿಕೆಯ ನೇತೃತ್ವ ವಹಿಸಿದ್ರು. ವಿದ್ಯುಕ್ತ ತ್ರಿವರ್ಣದ ಗೌರವ ವಂದನೆ ಕಾರ್ಯಕ್ರಮದ ನೇತೃತ್ವ ವಹಿಸಿದ ಪ್ರಥಮ ಮಹಿಳೆ ಪೂಜಾ ಠಾಕೂರ್.

7. ಜೆ. ಮಂಜುಳಾ : 2015ರ ಸಾಧಕಿಯರ ಪಟ್ಟಿಯಲ್ಲಿ ಮಂಜುಳಾ ಅವರು ಕೂಡ ಒಬ್ಬರು. ಮಂಜುಳಾ, `ಡಿಫೆನ್ಸ್ ರಿಸರ್ಚ್ & ಡೆವಲಪ್‍ಮೆಂಟ್ ಆರ್ಗನೈಸೇಶನ್(ಡಿಆರ್‍ಡಿಓ)ನ ಮೊದಲ ಮಹಿಳಾ ಡೈಕೆಕ್ಟರ್ ಜನರಲ್ ಆಗಿ ನೇಮಕವಾಗಿದ್ದಾರೆ. 2015ರ ಸಪ್ಟೆಂಬರ್‍ನಲ್ಲಿ ಮಂಜುಳಾ, ಡಿಆರ್‍ಡಿಓದ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ವಿಭಾಗದ ಹೊಣೆ ಹೊತ್ತುಕೊಂಡಿದ್ದಾರೆ. 2011ರಲ್ಲಿ ವರ್ಷದ ವಿಜ್ಞಾನಿ ಪ್ರಶಸ್ತಿ ಗೆದ್ದುಕೊಂಡಿದ್ದ ಮಂಜುಳಾ, ಡಿಆರ್‍ಡಿಓದ ಶ್ರೇಷ್ಠ ವಿಜ್ಞಾನಿ ಎಂಬ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡಿದ್ದರು.

8. ಮನಾಬಿ ಬಂಡೋಪಾಧ್ಯಾಯ : ಲೈಂಗಿಕ ಅಲ್ಪಸಂಖ್ಯಾತೆ ಮನಾಬಿ ಬಂಡೋಪಾಧ್ಯಾಯ, ಪಶ್ಚಿಮ ಬಂಗಾಳದ ಕೃಷ್ಣನಗರ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕವಾಗಿದ್ದಾರೆ. ಪ್ರಧ್ಯಾಪಕಿಯಾಗಿದ್ದ ಮನಾಬಿ, ಪಿಎಚ್‍ಡಿ ಪದವಿ ಪಡೆದ ಭಾರತದ ಮೊಟ್ಟ ಮೊದಲ ಅಲ್ಪಸಂಖ್ಯಾತೆ ಎಂಬ ಶ್ರೇಯಸ್ಸನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಸಮಾಜದಲ್ಲಿ ಲೈಂಗಿಕ ಸಲ್ಪಸಂಖ್ಯಾತರ ಸಬಲೀಕರಣದ ಮೊದಲ ಹೆಜ್ಜೆಯಾಗಿ ಪಶ್ಚಿಮ ಬಂಗಾಳ ಸರ್ಕಾರ ಮನಾಬಿ ಅವರನ್ನು ಕಾಲೇಜಿನ ಪ್ರಾಂಶುಪಾಲ ಹುದ್ದೆಗೆ ನೇಮಿಸಿದೆ.

9. ಸಾನಿಯಾ ಮಿರ್ಜಾ : ಮೂಗುತಿ ಸುಂದರಿ, ಭಾರತದ ಟೆನಿಸ್ ಮಿಂಚು ಸಾನಿಯಾ ಮಿರ್ಜಾ ಪಾಲಿಗೆ 2015 ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ವರ್ಷ. ಸ್ವಿಟ್ಜ್​​ರ್​​ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೊತೆ ಸೇರಿ ಸಾನಿಯಾ ಅದ್ವಿತೀಯ ಸಾಧನೆ ಮಾಡಿದ್ದಾರೆ. ಈ ಜೋಡಿ 22 ಗೆಲುವುಗಳೊಂದಿಗೆ 2015ಕ್ಕೆ ಗುಡ್‍ಬೈ ಹೇಳಿದೆ. ಅಷ್ಟೇ ಅಲ್ಲ ಸಾನಿಯಾ ರ್ಯಾಂಕಿಂಗ್‍ನಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಇದುವರೆಗೆ 2 ಗ್ರಾಂಡ್‍ಸ್ಲಾಮ್ ಕಿರೀಟಗಳ ಜೊತೆಗೆ 10 ಡಬ್ಲ್ಯೂಟಿಎ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.

10. ಮುಟ್ಟಿನ ನಿಷೇಧಗಳ ವಿರುದ್ಧ ಹೋರಾಟ : ಸಾಮಾಜಿಕ ಪಿಡುಗಿನಂತಾಗಿರುವ ಮುಟ್ಟಿನ ನಿಷೇಧಗಳ ವಿರುದ್ಧ ಹೋರಾಟದ ಕಹಳೆ ಮೊಳಗಿದೆ. ಈ ಬಗ್ಗೆ ಜಾಗೃತಿ ಮೂಡಿಸುವಂತಹ ಅನೇಕ ಕ್ಯಾಂಪೇನ್‍ಗಳು ನಡೆದಿವೆ. ವಿಶೇಷ ಅಂದ್ರೆ ಕಿರಣ್ ಗಾಂಧಿ, ತಮ್ಮ ಋತುಚಕ್ರದ ಅವಧಿಯಲ್ಲೇ ಮ್ಯಾರಥಾನ್‍ನಲ್ಲಿ ಪಾಲ್ಗೊಂಡು, ವಿಭಿನ್ನ ಹೋರಾಟ ನಡೆಸಿದ್ದಾರೆ.

2015 ಮುಗಿದಿದೆ, ಕಳೆದ ವರ್ಷಕ್ಕೆ ಗುಡ್ ಬೈ ಹೇಳಿ 2016ನ್ನು ಸ್ವಾಗತಿಸಿರುವ ನಾವು, ಈ ಸಾಧಕಿಯರಿಗೊಂದು ಸಲಾಂ ಹೇಳಲೇಬೇಕು. ಈ ವರ್ಷ ಕೂಡ ಸ್ತ್ರೀ ಶಕ್ತಿ ಅನಾವರಣಗೊಳ್ಳಲಿ, ಸಾಧನೆಯ ಮಹಾಪೂರವೇ ಹರಿದು ಬರಲಿ ಅನ್ನೋದು ಎಲ್ಲರ ಆಶಯ.

ಲೇಖಕರು: ಡೋಲಾ ಸಮಂತಾ

ಅನುವಾದ : ಭಾರತಿ ಭಟ್