ಮೈಸೂರಿನ ತೃತೀಯಲಿಂಗಿಯ ಮೊಮ್ಮಕ್ಕಳು ಬಾಕ್ಸಿಂಗ್‌‌ ಚಾಂಪಿಯನ್ಸ್ ಆದ ಕಥೆ

ತೃತೀಯಲಿಂಗಿಯಾದ ಶಾಬಾನಾ ಅವರು ಗೌರುವಯುತವಾಗಿ ಜೀವಿಸುತ್ತ ತಮ್ಮ ಮೊಮ್ಮಕ್ಕಳ ಆಸೆಗೆ ಬೆನ್ನೆಲುಬಾಗಿ ನಿಂತು ಅವರನ್ನು ಬಾಕ್ಸಿಂಗ್‌‌ ನಲ್ಲಿ ಚಾಂಪಿಯನ್ ಮಾಡಿದ್ದಾರೆ.

ಮೈಸೂರಿನ ತೃತೀಯಲಿಂಗಿಯ ಮೊಮ್ಮಕ್ಕಳು ಬಾಕ್ಸಿಂಗ್‌‌ ಚಾಂಪಿಯನ್ಸ್ ಆದ ಕಥೆ

Wednesday November 13, 2019,

2 min Read

ಮಂಗಳಮುಖಿ ಎಂದೊಡನೆ ಎಲ್ಲರೊಳಗೆ ಏನೋ ಒಂದು ತಿರಸ್ಕಾರ ಭಾವ. ಇಂದು ಅದೆಷ್ಟೋ ತೃತೀಯಲಿಂಗಿಗಳು ತಮ್ಮ ಪರಿಶ್ರಮದಿಂದ ಕಷ್ಟಪಟ್ಟು ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತ ಮುನ್ನೆಲೆಗೆ ಬಂದಿದ್ದಾರೆ. ತಾವು ಸಹ ಎಲ್ಲರಂತೆ ಸಾಮಾನ್ಯರು, ತಮಗೂ ಉತ್ತಮ ಜೀವನವಿದೆ ಎಂದು ನಿರೂಪಿಸಿದ್ದಾರೆ. ಅಂತೆಯೇ ಇಲ್ಲೊಬ್ಬ ತೃತೀಯಲಿಂಗಿ ಭಿಕ್ಷೆ ಬೇಡಿದರೂ ಸಹ ಉತ್ತಮ ರೀತಿಯಲ್ಲಿ ಜೀವನ ಸಾಗಿಸುತ್ತ ತಮ್ಮ ಮೊಮ್ಮಕ್ಕಳನ್ನು ಬಾಕ್ಸಿಂಗ್‌‌ ಚಾಂಪಿಯನ್ ಗಳನ್ನಾಗಿ ಮಾಡಿದ್ದಾರೆ.


ಮೈಸೂರಿನ ರಾಜೀವ್ ನಗರದ ನಿವಾಸಿ ಶಾಬಾನಾ (ತೃತೀಯಲಿಂಗಿ) ಅವರು ಚಿಕ್ಕವಯಸ್ಸಿನಲ್ಲೇ ಕುಟುಂಬದಿಂದ ಬೇರ್ಪಟ್ಟು ಬೇರೆ ದಾರಿ ಕಾಣದೆ ಭಿಕ್ಷೆ ಬೇಡಿಯೇ ತಮ್ಮ ಜೀವನವನ್ನು ರೂಪಿಸಿಕೊಂಡರು. ಒಂದು ಹೆಣ್ಣು ಮಗುವನ್ನು ದತ್ತು ಪಡೆದು ಆಸ್ತಾ ಬಾನು ಎಂದು ಹೆಸರಿಡುತ್ತಾರೆ. ಮಗಳಿಗೆ ಒಳ್ಳೆಯ ಜೀವನ ರೂಪಿಸಿ ಮದುವೆ ಮಾಡುತ್ತಾರೆ. ಆದರೆ ಆಸ್ತಾ ಬಾನು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದರ ಕಾರಣ ಪತಿ ಅವರಿಂದ ದೂರವಾಗುತ್ತಾರೆ, ವರದಿ ಎಡೆಕ್ಸ್‌ ಲೈವ್.


ಮಗಳ ಹಾಗೂ ಮೊಮ್ಮಕ್ಕಳ ಜವಾಬ್ದಾರಿ ವಹಿಸಿಕೊಂಡು ಇಂದು ತಮ್ಮ ಎರಡೂ ಹೆಣ್ಣು ಮೊಮ್ಮಕ್ಕಳನ್ನು ಬಾಕ್ಸಿಂಗ್‌‌ ಚಾಂಪಿಯನ್ ಮಾಡಿದ್ದಾರೆ ಮಂಗಳಮುಖಿ ಅಜ್ಜಿ ಶಾಬಾನಾ. ಮೊಮ್ಮಕ್ಕಳಾದ ಫಾತೀಮಾ ಮತ್ತು ಹಜೀರಾ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಾಕ್ಸಿಂಗ್‌‌ ಚಾಂಪಿಯನ್ ಶಿಪ್ ಗಾಗಿ ಶ್ರಮಪಡುತ್ತಿದ್ದಾರೆ.


ಫಾತಿಮಾ ಮತ್ತು ಹಜೀರಾ ಅವರು 6 ಮತ್ತು 7ನೇ ತರಗತಿಯಲ್ಲಿ ಓದುತ್ತಿದ್ದು ಮೈಸೂರಿನ ಎಲೈಟ್ ಅಕಾಡೆಮಿಯಿಂದ ಬಾಕ್ಸಿಂಗ್‌‌ ತರಬೇತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಬಾಕ್ಸಿಂಗ್‌‌ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಇಬ್ಬರೂ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಸಹೋದರಿಯರ ಸಾಧನೆಗೆ ಅಜ್ಜಿ ಶಾಬಾನಾ ಹಾಗೂ ಎಲೈಟ್ ಅಕಾಡೆಮಿಯ ಸಂಸ್ಥಾಪಕ ಮತ್ತು ಮುಖ್ಯ ಬೋಧಕ ಮಹಮ್ಮದ್ ಇಯಾಜ್ ಹರ್ಷ ವ್ಯಕ್ತಪಡಿಸುತ್ತಾರೆ, ವರದಿ ಇಟಿವಿ ಭಾರತ.


ಮಹಮ್ಮದ್ ಇಯಾಜ್ ಅವರು ಈ ಮಕ್ಕಳ ಆಸೆಗೆ ಆಸರೆಯಾದ ಅಜ್ಜಿ ಶಾಬಾನಾ ಅವರ ಶ್ರಮ ನೋಡಿ ಒಂದು ಪೈಸೆಯನ್ನು ಪಡೆಯದೆ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡುತ್ತಿದ್ದಾರೆ. ತನ್ನ ಮೊಮ್ಮಕ್ಕಳು ಏನಾದರೂ ಸಾಧಿಸಬೇಕು ಎಂಬ ಆಶಯಕ್ಕೆ ಮಹಮ್ಮದ್ ಇಯಾಜ್ ಆಸರೆಯಾಗಿದ್ದಾರೆ.


ಮೊಮ್ಮಕ್ಕಳಾದ ಫಾತೀಮಾ ಮತ್ತು ಹಜೀರಾ ಜೊತೆ ಎಲೈಟ್ ಅಕಾಡೆಮಿಯ ಸಂಸ್ಥಾಪಕ ಮತ್ತು ಮುಖ್ಯ ಬೋಧಕ ಮಹಮ್ಮದ್ ಇಯಾಜ್ (ಚಿತ್ರಕೃಪೆ: ಎಡೆಕ್ಸ್‌ ಲೈವ್)


ಎಡೆಕ್ಸ್‌ ಲೈವ್ ಜೊತೆ ಮಾತನಾಡುತ್ತಾ ಶಾಬಾನಾ,


“ಈ ದಿನಗಳಲ್ಲಿ ಮಕ್ಕಳು ಜೀವನ ರೂಪಿಸಿಕೊಳ್ಳಲು ಶಿಕ್ಷಿತರು ಅಷ್ಟೇ ಅಲ್ಲ ಪ್ರತಿಭಾವಂತರೂ ಆಗಿರಬೇಕು ಆದ್ದರಿಂದ ಮಕ್ಕಳ ಬಾಕ್ಸಿಂಗ್‌‌ ತರಬೇತಿಗಾಗಿ ನಾನು ಮೈಸೂರಿನ ಎಲೈಟ್ ಅಕಾಡೆಮಿಯನ್ನು ಸಂಪರ್ಕಿಸಿದೆ. ಇಂದು ಅವರು ನನ್ನ ಮೊಮ್ಮಕ್ಕಳಿಗೆ ಉಚಿತವಾಗಿ ಕರಾಟೆ ಹಾಗೂ ಬಾಕ್ಸಿಂಗ್‌‌ ಕಲಿಸುತ್ತಿದ್ದಾರೆ. ಕುಟುಂಬಕ್ಕಾಗಿ ಒಂದು ರೊಟ್ಟಿ ಸಹ ಗಳಿಸುವ ಸ್ಥಿತಿಯಲ್ಲಿ ನಾನಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಶಾಲಾ ಶುಲ್ಕವನ್ನೂ ಪಾವತಿಸಲಾಗಲಿಲ್ಲ. ಆದರೂ ಸಹ ಅಕಾಡೆಮಿಯು ಉಚಿತವಾಗಿ ತರಬೇತಿ ನೀಡಲು ಒಪ್ಪಿಕೊಂಡಿತು. ಮೊಹಮ್ಮದ್ ಅವರ ಸಹಾಯದಿಂದಲೇ ಇಂದು ಪ್ರತಿದಿನ ಇಬ್ಬರು ಮಕ್ಕಳು ಸುಮಾರು ಎರಡು ಗಂಟೆಗಳಕಾಲ ಶಿಕ್ಷಣ ಹಾಗೂ ಬಾಕ್ಸಿಂಗ್‌‌ ತರಬೇತಿ ಪಡೆಯುತ್ತಿದ್ದಾರೆ.”


ಅಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ಚಿನ್ನದ ಪದಕ ಪಡೆದ ಈ ಮಕ್ಕಳು ದೆಹಲಿಯಲ್ಲಿ ನಡೆದ ರಾಷ್ತ್ರೀಯ ಮಟ್ಟದ ಬಾಕ್ಸಿಂಗ್‌‌ ಚಾಂಪಿಯನ್ ಶಿಪ್ ನಲ್ಲಿ ಫಾತಿಮಾ ಚಿನ್ನದ ಪದಕ ಗೆದ್ದರೆ ಹಜೀರಾ ಕಂಚಿನ ಪದಕ ಪಡೆದು ಮುಂಬರುವ ಜೂನ್ ನಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್‌‌ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳುತ್ತ ತಮ್ಮ ಮೊಮ್ಮಕ್ಕಳ ಬಗ್ಗೆ ಹೆಮ್ಮೆ ಪಡುತ್ತಾರೆ ಅಜ್ಜಿ ಶಾಬಾನಾ, ವರದಿ ಎಡೆಕ್ಸ್‌ ಲೈವ್.


ಒಂದೊಂದು ರೂಪಾಯಿಯು ಭಿಕ್ಷೆ ಬೇಡಿ ಕಷ್ಟ ಪಟ್ಟು ಈ ಮಕ್ಕಳನ್ನು ಬೆಳೆಸಿ ಇಂದು ಬಾಕ್ಸಿಂಗ್‌‌ ಚಾಂಪಿಯನ್ ಗಳನ್ನಾಗಿ ಮಾಡಿದ ತೃತೀಯಲಿಂಗಿ ಶಾಬಾನಾ ಅವರು ಮಾದರಿ ವ್ಯಕ್ತಿಯಾಗಿದ್ದಾರೆ. ಸಮಾಜ ಇಂತವರನ್ನು ಗೌರವಪೂರ್ವಕವಾಗಿ ನೋಡುವಂತೆ ಮಾಡಿದ್ದಾರೆ.