ನವೀಕರಿಸಬಹುದಾದ ಇಂಧನ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿದ ಕೇಂದ್ರ ಸರ್ಕಾರ

ಇಂಧನ ಸಚಿವ ಆರ್ ಕೆ ಸಿಂಗ್, 2030 ರ ವೇಳೆಗೆ ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು 40 ಪ್ರತಿಶತಕ್ಕೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಿದ ಕೇಂದ್ರ ಸರ್ಕಾರ

Thursday February 13, 2020,

2 min Read

ಉದ್ಯಮಗಳಿಗೆ ಮತ್ತು ಹೂಡಿಕೆದಾರರಿಗೆ ಈ ವಲಯದ ನೀತಿಗಳು ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸರಿಯಾದ ಮಾಹಿತಿಯನ್ನು ಒದಗಿಸಲು ನವೀಕರಿಸಬಹುದಾದ ಇಂಧನ ಸೌಲಭ್ಯ ಕೇಂದ್ರವನ್ನು ಸ್ಥಾಪಿಸುವುದಾಗಿ ಸರ್ಕಾರ ಮಂಗಳವಾರ ಹೇಳಿದೆ.


ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಲ್ಲಿ (ಎಂಎನ್‌ಆರ್‌ಇ) ಈ ಕೇಂದ್ರವನ್ನು ಸ್ಥಾಪಿಸಲಾಗಿದೆ ಮತ್ತು ಜಂಟಿ ಕಾರ್ಯದರ್ಶಿ ಅಮಿತೇಶ್ ಕುಮಾರ್ ಸಿನ್ಹಾ ಇದರ ನೇತೃತ್ವ ವಹಿಸಲಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ


"ಕೇಂದ್ರದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಮಂಗಳವಾರ ಸಚಿವಾಲಯದಲ್ಲಿ ಆರ್‌ಇ ಕೈಗಾರಿಕೆ ಮತ್ತು ಹೂಡಿಕೆದಾರರ ಸೌಲಭ್ಯ ಕೇಂದ್ರವನ್ನು ಆರಂಭಿಸಿದೆ. ಇದು ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಲು ಸಹಾಯ ಮಾಡುತ್ತದೆ. ಅಲ್ಲದೇ ಇದು ದೇಶದ ನವೀಕರಿಸಬಹುದಾದ ಇಂಧನ (ಆರ್‌ಇ) ಹೂಡಿಕೆದಾರರು ಮತ್ತು ಉದ್ಯಮದ ಸಮಸ್ಯೆಗಳನ್ನು ಸಹ ಪರಿಹರಿಸುತ್ತದೆ,” ಎಂದು ಎಂಎನ್‌ಆರ್‌ಇ ತಿಳಿಸಿದೆ.


ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರು 2030 ರ ವೇಳೆಗೆ ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನದ ಪಾಲನ್ನು 40 ಪ್ರತಿಶತಕ್ಕೆ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಅಲ್ಲದೇ ಈ ಗುರಿಯನ್ನು ಸಾಧಿಸಲು ಈ ಮಾಹಿತಿ ಕೇಂದ್ರವು ಪ್ರಮುಖ ಪಾತ್ರವನ್ನು ವಹಿಸಲಿದೆ ಏಕೆಂದರೆ ಇದು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಹೂಡಿಕೆದಾರರ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಅವರು ಹೇಳಿದರು.


ಭಾರತದಲ್ಲಿ ಪ್ರಸ್ತುತ 86 ಗೀಗಾ ವ್ಯಾಟ್ ನ ನವೀಕರಿಸಬಹುದಾದ ಇಂಧನ ಸೌಲಭ್ಯ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ, ಇನ್ನೂ 34 ಗಿ.ವ್ಯಾ. ಅನ್ನು ಕಾರ್ಯಗತಗೊಳಿಸಲಾಗುವುದು ಹಾಗೂ 30 ಗಿ.ವ್ಯಾ. ಟೆಂಡರಿಂಗ್‌ನ ವಿವಿಧ ಹಂತಗಳಲ್ಲಿದೆ ಎಂದು ಸಚಿವರು ಹೇಳಿದರು.


ಪ್ಲಗ್ ಮತ್ತು ಪ್ಲೇ ಆಧಾರದ ಮೇಲೆ ಭೂಮಿ ಮತ್ತು ಪ್ರಸರಣವನ್ನು ನೀಡಲು ಸಚಿವಾಲಯವು ಅಲ್ಟ್ರಾ ಮೆಗಾ ಆರ್‌ಇ ವಿದ್ಯುತ್ ಯೋಜನೆಗಳನ್ನು ಸ್ಥಾಪಿಸುತ್ತಿದೆ ಎಂದು ಅವರು ಹೇಳಿದರು.


ಈ ಫೆಸಿಲಿಟೇಶನ್ ಸೆಂಟರ್ "ಹೂಡಿಕೆದಾರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಈ ವಲಯದಲ್ಲಿನ ಯೋಜನೆಗಳನ್ನು ಸರಿಯಾದ ಸಮಯದಲ್ಲಿ ಪೂರ್ಣಗೊಳಿಸುವುದಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ಶೀಘ್ರದಲ್ಲೇ, ಈ ಉದ್ದೇಶಕ್ಕಾಗಿ ಮೀಸಲಾದ ಪೋರ್ಟಲ್ ಅನ್ನು ಸಹ ಅಭಿವೃದ್ಧಿಪಡಿಸಲಾಗುವುದು," ಎಂದು ಸಿಂಗ್ ಹೇಳಿದರು.


ಇದಲ್ಲದೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 - 21 ರ ಬಜೆಟ್‌ನಲ್ಲಿ ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಕ್ಷೇತ್ರಕ್ಕೆ 22 ಸಾವಿರ ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಇದು ಜನರಿಗೆ 24X7 ವಿದ್ಯುತ್ ಶಕ್ತಿಯನ್ನು ಪೂರೈಸುವ ಗುರಿಯನ್ನು ಮುಟ್ಟಲು ಸಹಾಯ ಮಾಡುತ್ತದೆ ಮತ್ತು ಗ್ರಾಹಕರಿಗೆ ಸೇವಾ ಪೂರೈಕೆದಾರ ಮತ್ತು ಸುಂಕವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಒದಗಿಸುತ್ತದೆ.