ಜಪ್ತಿ ಮಾಡಿದ ವಾಹನಗಳಲ್ಲಿ ತರಕಾರಿ ಬೆಳೆದ ಕೇರಳ ಪೊಲೀಸ್‌ ಅಧಿಕಾರಿಗಳು

ಸುಸ್ಥಿರತೆಯನ್ನು ಬೆಂಬಲಿಸುವ ಉದ್ದೇಶದೊಂದಿಗೆ ತ್ರಿಸ್ಸುರ್‌ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಜಪ್ತಿ ಮಾಡಿದ ವಾಹನಗಳಲ್ಲಿ ತರಕಾರಿ ಬೆಳೆದು ಸುಂದರ ಉದ್ಯಾನವನವಾಗಿ ಮಾರ್ಪಡಿಸಿದ್ದಾರೆ.

ಜಪ್ತಿ ಮಾಡಿದ ವಾಹನಗಳಲ್ಲಿ ತರಕಾರಿ ಬೆಳೆದ ಕೇರಳ ಪೊಲೀಸ್‌ ಅಧಿಕಾರಿಗಳು

Tuesday September 15, 2020,

2 min Read

ಪೊಲೀಸ್‌ ಠಾಣೆಯಲ್ಲಿ ಬಳಕೆಯಾಗದೆ ಬಿದ್ದಿರುವ ಜಪ್ತಿ ಮಾಡಿದ ವಾಹನಗಳ ಉಪಯೋಗಕ್ಕೆ ಕೇರಳ ಪೊಲೀಸರು ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ಸುಸ್ಥಿರತೆಯನ್ನು ಬೆಂಬಲಿಸುವ ಉದ್ದೇಶದೊಂದಿಗೆ ತ್ರಿಸ್ಸುರ್‌ ಜಿಲ್ಲೆಯ ಪೊಲೀಸ್‌ ಅಧಿಕಾರಿಗಳು ಕಾರ್‌ ಮತ್ತು ದೊಡ್ಡ ವಾಹನಗಳಲ್ಲಿ ಸಾವಯವ ತರಕಾರಿ ಬೆಳೆಯುತ್ತಿದ್ದಾರೆ.


ದಿ ನ್ಯೂಸ್‌ ಮಿನಿಟ್‌ ಪ್ರಕಾರ ರೈತರು ಆಗಿರುವ ರಂಗರಾಜ್‌ ಎಂಬ ಪೊಲೀಸ್‌ ಅಧಿಕಾರಿ ಇದರ ಹಿಂದಿರುವ ರೂವಾರಿ. ಸಿಂಪ್ಸನ್‌, ಸುಧಾಕರನ್‌, ಬೇಬಿ, ರಂಜಿತ್‌, ರಘು ಮತ್ತು ಅನಿಲ ಎಂಬ ಇತರ ಅಧಿಕಾರಿಗಳು ಅವರು ಈ ಕೆಲಸದಲ್ಲಿ ಕೈಜೋಡಿಸಿದ್ದಾರೆ.

ಚಿತ್ರಕೃಪೆ: ಇಂಗ್ಲೀಷ್‌ ಮಾತೃಭೂಮಿ


“ಅಕ್ರಮ ಮರಳು, ಮಣ್ಣು ಸಾಗಣಿಕೆ ಪ್ರಕರಣಗಳಲ್ಲಿ ಜಪ್ತಿ ಮಾಡಿದ ಕೆಲವೊಂದು ಚಿಕ್ಕ ಲಾರಿಗಳು ನಮ್ಮಲ್ಲಿದ್ದವು. ಮೂರು ತಿಂಗಳ ಹಿಂದೆ ಅವುಗಳಲ್ಲಿ ತರಕಾರಿ ಬೆಳೆಯಬೇಕೆಂಬ ಯೋಚನೆ ನಮಗೆ ಬಂತು. ನಮ್ಮ ಪ್ರಯತ್ನಕ್ಕೆ ಜಯ ಸಿಕ್ಕಿತು- ಕಳೆದ ವಾರ ನಮಗೆ ಮೊದಲ ಬೆಳೆ ಲಭಿಸಿತು. ಬೆಳೆದ ತರಕಾರಿಗಳನ್ನು ಪೊಲೀಸ್‌ ಕ್ಯಾಂಟಿನ್‌ಗೆ ನೀಡಿದೆವು,” ಎನ್ನುತ್ತಾರೆ ಠಾಣೆಯ ಸಿವಿಲ್‌ ಪೊಲೀಸ್‌ ಅಧಿಕಾರಿ ಸಿಂಪ್ಸನ್‌ ಪಿ.ಟಿ.

ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಾಗ ಪೊಲೀಸ್‌ ಅಧಿಕಾರಿಗಳು ತಮ್ಮ ಕೆಲಸವನ್ನು ಮತ್ತಷ್ಟು ವೃದ್ಧಿಸಿ ಇತರ ವಾಹನಗಳಲ್ಲಿಯೂ ಬೀಜ ಬಿತ್ತತೊಡಗಿದರು. ಈವರೆಗೂ ಅಲ್ಲಿ ಬೆಂಡೆಕಾಯಿ, ಪಾಲಕ ಮತ್ತು ಉದ್ದದ ಬೀನ್ಸ್‌ ತರಕಾರಿಗಳನ್ನು ಬೆಳೆಯಲಾಗಿದೆ.


ಪೊಲೀಸ್‌ ಠಾಣೆಯ ಮುಂದೆ ಸಾಲು ಸಾಲು ವಾಹನಗಳು ಉಪಯೋಗಕ್ಕೆ ಬಾರದೆ ನಿಂತಿರುವುದು ಸಾಮಾನ್ಯವಾಗಿ ಕಂಡು ಬರುವ ದೃಷ್ಯ. ಜಪ್ತಿ ಮಾಡಿದ ವಾಹನಗಳ ಹರಾಜು ಪ್ರಕ್ರಿಯೆಯನ್ನು ಪೊಲೀಸ್‌ ಇಲಾಖೆ ನಡೆಸುತ್ತದೆ, ಆದರೆ ಅಲ್ಲಿ ಹಲವಾರು ಕಾನೂನು ತೊಡಕುಗಳಿರುತ್ತವೆ, ವರದಿ ದಿ ಲಾಜಿಕಲ್‌ ಇಂಡಿಯನ್‌.

“ಅಕ್ರಮ ಚಟುವಟಿಕೆಗಳಲ್ಲಿ ಒಂದು ವಾಹನವನ್ನು ವಶಕ್ಕೆ ಪಡೆದುಕೊಂಡರೆ, ಅದರ ಮಾಲೀಕ ಅದನ್ನು ಹಿಂಪಡೆಯಲು ಬರುವುದಿಲ್ಲ, ಅದರ ಚಾಲಕ ಮಾತ್ರ ನಮಗೆ ಸಿಗುತ್ತಾನೆ. ವಾಹನ ಅಪಘಾತದ ಪ್ರಕರಣಗಳಲ್ಲಿ ನ್ಯಾಯಾಲಯ ಆದೇಶವಿತ್ತರು ಹಲವು ವಾಹನ ಮಾಲೀಕರು ತಾವು ಕಳೆದುಕೊಂಡ ಪ್ರೀತಿ ಪಾತ್ರರ ಬಗ್ಗೆ ಮತ್ತೆ ಯೋಚಿಸಬಾರದೆಂದು ಅವುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಇತರೆ ಪ್ರಕರಣಗಳಲ್ಲಿ ತೀರ್ಪಿಗೆ ಹಲವು ವರ್ಷಗಳು ಬೇಕಾಗುತ್ತವೆ. ಅಲ್ಲಿಯವರೆಗೂ ವಾಹನಕ್ಕೆ ತುಕ್ಕು ಹಿಡಿದು ನಿಷ್ಪ್ರಯೋಜಕವಾಗಿ ಯಾರಿಗೂ ಬೇಡವಾಗಿರುತ್ತದೆ,” ಎಂದರು ಉತ್ತರ ಕೇರಳದ ಸ್ಟೇಷನ್‌ ಹೌಸ್‌ ಅಧಿಕಾರಿ.