ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ರಕ್ಷಣೆಗೆ ಧಾವಿಸಿದ ಕೋಝಿಕೊಡ್‌ನ ಸ್ಥಳೀಯರ ಒಗ್ಗಟ್ಟಿನ ಕಥೆ

ಏರ್‌ ಇಂಡಿಯಾ ವಿಮಾನ ಕರಿಪ್ಪುರ್‌ದಲ್ಲಿ ಅಪಘಾತಕ್ಕೊಳಗಾದ ನಂತರ ಕೋವಿಡ್‌-19 ಭಯದ ನಡುವೆಯು ಕೋಝಿಕೊಡ್‌ನ ಸ್ಥಳೀಯರು ಪ್ರಯಾಣಿಕರ ರಕ್ಷಣೆಗೆ ಮುಂದಾದರು.

ಏರ್‌ ಇಂಡಿಯಾ ವಿಮಾನ ಅಪಘಾತದಲ್ಲಿ ರಕ್ಷಣೆಗೆ ಧಾವಿಸಿದ ಕೋಝಿಕೊಡ್‌ನ ಸ್ಥಳೀಯರ ಒಗ್ಗಟ್ಟಿನ ಕಥೆ

Wednesday August 12, 2020,

2 min Read

ಅಗಸ್ಟ್‌ 8 ರ ರಾತ್ರಿ ಬಿರುಸಿನ ಮಳೆಯ ನಡುವೆಯು ದೊಡ್ಡ ಶಬ್ದವೊಂದು ಕೇಳಿ ಕೋಝಿಕೊಡ್‌ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಏರ್‌ ಇಂಡಿಯಾ ಏರ್‌ಕ್ರಾಫ್ಟ್‌ ಎಐ-ಈಎಕ್ಸ್‌1344 ಕೊಝಿಕೊಡ್‌ನ ಕರಿಪ್ಪುರ್‌ ವಿಮಾನ ನಿಲ್ದಾಣದ ರನ್‌ವೇನಿಂದ 35 ಅಡಿ ದೂರ ಜಾರಿ ಅಪಘಾತಕ್ಕೀಡಾಗಿತ್ತು. ಈ ಅಪಘಾತದಲ್ಲಿ ವಿಮಾನ ಚಾಲಕ ದೀಪಕ ಸಾಥೆ ಮತ್ತು ಸಹ ಚಾಲಕ ಅಖಿಲೇಶ್‌ ಕುಮಾರ ಸೇರಿದಂತೆ 18 ಜನರು ಸಾವಿಗೀಡಗಿದ್ದಾರೆ ಮತ್ತು ನೂರಾರು ಜನರನ್ನು ಗಾಯಾಳುಗಳನ್ನಾಗಿಸಿದೆ.


ರಕ್ಷಕರಿಗೆ ಸಲಾಂ ಹೊಡೆಯುತ್ತಿರುವ ಪೊಲೀಸ್‌ ಅಧಿಕಾರಿ (ಚಿತ್ರಕೃಪೆ: ಟ್ವಿಟ್ಟರ್)‌


ಸ್ಥಳೀಯರು ಅಪಘಾತ ಜರುಗಿದ ಸ್ಥಳಕ್ಕೆ ಬೇಗನೆ ಧಾವಿಸಿದರು.


“ನಾನು ಎರಡು ಬಾರಿ ಥಡ್‌ ಎಂಬ ಶಬ್ದವನ್ನು ಕೇಳಿ ಇದು ಗುಡುಗಿರಬೇಕೆಂದುಕೊಂಡೆ. ಆದರೆ ಸಹಾಯಕ್ಕಾಗಿ ಜನರ ಅರಚಾಟದ ಶಬ್ದ ಜಾಸ್ತಿಯಾಗುತ್ತಾ ಹೋದಾಗ, ನಾವೆಲ್ಲ ಮುಖಗವಸು, ಕೈಗವಸುಗಳನ್ನು ಧರಿಸದೆ ಹಾಗೇಯೆ ಸ್ಥಳಕ್ಕೆ ಧಾವಿಸಿದೆವು,” ಎಂದು ಘಟನೆಗೆ ಸ್ಪಂದಿಸಿದ ಮೊದಲ ಸ್ಥಳೀಯರಾದ ಫಜಲ್‌ ಪುಥಿಯಾಕಥ್‌ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


“ಬಹಳಷ್ಟು ಪ್ರಯಾಣಿಕರ ಕಾಲುಗಳು ಸೀಟ್‌ಗಳ ನಡುವೆ ಸಿಲುಕಿದ್ದವು. ನುರಿತ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಅನುಭವದಿಂದ ಸ್ಥಳೀಯರಿಗೆ ಪ್ರಯಾಣಿಕರನ್ನು ಹೊರತಗೆಯಲು ನಿರ್ದೇಶಿಸಿದರು,” ಎನ್ನುತ್ತಾರೆ ಸ್ವಯಂ ರಕ್ಷಕರಲ್ಲಿ ಒಬ್ಬರಾದ ಲಲೀಬ್‌ ಪೂಕ್ಕೊತ್ತುರ್‌. ಎರಡೂವರೆ ಗಂಟೆಗಳ ಸಮಯದಲ್ಲಿ ಎಲ್ಲ ಪ್ರಯಾಣಿಕರನ್ನು ರಕ್ಷಿಸಲಾಯಿತು ಎಂದರು ಅವರು.


“ರಕ್ಷಣಾ ಕಾರ್ಯಚರಣೆಯಲ್ಲಿ ನಿರತರಾಗಿದ್ದ ಅಧಿಕಾರಿಗಳಿಗೆ ಹಲವು ಸ್ಥಳೀಯರು ಸಹಾಯ ಮಾಡಿದ್ದಾರೆ. ಪ್ರಾರಂಭದಲ್ಲಿ ನಾವು ಆಂಬ್ಯುಲೆನ್ಸ್‌ಗಾಗಿ ಕಾಯದೆ ಖಾಸಗಿ ವಾಹನ ಮತ್ತು ಟ್ಯಾಕ್ಸಿಗಳಲ್ಲಿ ಪ್ರಯಾಣಿಕರನ್ನು ಸಾಗಿಸಿದೆವು. ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ನಾವು ಪೊಲೀಸರಿಗೆ ಸಹಾಯ ಮಾಡಿದೆವು,” ಎನ್ನುತ್ತಾರೆ ಆ ಪ್ರದೇಶದ ನಿವಾಸಿಯಾದ ಪಿ ಅಫ್ಜಲ್‌, ವರದಿ ಹಿಂದೂಸ್ತಾನ್‌ ಟೈಮ್ಸ್‌.


ವಿಮಾನ ಅಪಘಾತದಲ್ಲಿ ಬದುಕುಳಿದ ಆರು ಮಕ್ಕಳನ್ನು ಕೋಝಿಕೋಡ್‌ನ ಬೇಬಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ, ಮತ್ತು ಸ್ಥಳೀಯರು ಮಕ್ಕಳ ಪೋಷಕರು ಮತ್ತು ಕುಟುಂಬ ಸದಸ್ಯರನ್ನು ಗುರುತಿಸಲು ಸಹಾಯ ಮಾಡಿದರು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.


“ಸ್ಥಳೀಯರಿಗೆ ಸಲಾಂ… ಎಲ್ಲ ಮಕ್ಕಳನ್ನು ಅವರು ತಮ್ಮ ಮಕ್ಕಳಂತೆಯೆ ನೋಡಿದರು. ಯಾವ ಮಕ್ಕಳು ತಮ್ಮ ಪೋಷಕರ ಹೆಸರು ಹೇಳಲಿಲ್ಲ… ಅವರ ಬಳಿ ಪಾಸ್‌ಪೊರ್ಟ್‌ ಸಹ ಇರಲಿಲ್ಲ,” ಎಂದು ಬೇಬಿ ಮೆಮೊರಿಯಲ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಮಕ್ಕಳ ವೈದ್ಯ ಡಾ. ಅಜಯ್ ಎನ್‌ಡಿಟಿವಿಗೆ ಹೇಳಿದರು.


ಕೋವಿಡ್‌-19 ನಡುವೆಯು ಕೋಝಿಕೋಡ್‌ನ ನಿವಾಸಿಗಳು ಬ್ಲಡ್‌ ಬ್ಯಾಂಕ್‌ ಬಳಿ ಸಾಲಿನಲ್ಲಿ ನಿಂತು ತಮ್ಮ ರಕ್ತವನ್ನು ದಾನ ಮಾಡಲು ಮುಂದಾದರು. ಇದರ ಬಗ್ಗೆ ಹಲವು ನೆಟ್ಟಿಗರು ಪ್ರಶಂಸೆಯಿಂದ ಟ್ವೀಟ್‌ ಮಾಡಿದ್ದಾರೆ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿಮಾನ ಅಗಘಾತದಲ್ಲಿ ಸಿಲುಕಿದವರ ರಕ್ಷಣೆಗೆ ಧಾವಿಸಿದ ಸ್ಥಳೀಯರ ಸಮಯ ಪ್ರಜ್ಞೆಯನ್ನು ಪ್ರಶಂಸಿಸಿ,


“ನಿನ್ನೆ ಸ್ಥಳೀಯರ ತುರ್ತು ಪ್ರತಿಕ್ರಿಯೆಯೆ ಎಲ್ಲವನ್ನು ಬದಲಿಸಿದ್ದು. ಸ್ಥಳೀಯರು ಕೋವಿಡ್-19 ಮತ್ತು ಹವಾಮಾನವನ್ನು ಲೆಕ್ಕಿಸಿದೆ ಪ್ರಯಾಣಿಕರ ರಕ್ಷಣೆಗೆ ಮುಂದಾದರು. ರಕ್ತದಾನ ಮಾಡಲು ಸರದಿಯಲ್ಲಿ ನಿಂತಿರುವುದೆ ಇದಕ್ಕೆ ಒಂದು ಉದಾಹರಣೆ,” ಎಂದು ಟ್ವೀಟ್‌ ಮಾಡಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದವರೂ ಕ್ವಾರಂಟೈನ್‌ಗೆ ಒಳಪಟ್ಟು ಸಾಂಕ್ರಾಮಿಕವೂ ಹರಡದಂತೆ ಸಹಾಯಮಾಡಬೇಕು ಎಂದಿದ್ದಾರೆ ಆರೋಗ್ಯ ಸಚಿವರಾದ ಕೆಕೆ ಶೈಲಜಾ ಹಾಗೂ ಅವರೆಲ್ಲರನ್ನೂ ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇರಿಸಲಾಗಿದೆ.

ರಕ್ಷಣೆಯಲ್ಲಿ ಸಹಾಯ ಮಾಡಿದ್ದಕ್ಕಾಗಿ ಗೌರವ ಸೂಚಿಸಲು ಪೊಲೀಸ್‌ ಅಧಿಕಾರಿಯೊಬ್ಬರು ಕ್ವಾರಂಟೈನ್‌ ಕೇಂದ್ರಕ್ಕೆ ಭೇಟಿ ನೀಡಿ ಸಲಾಂ ಮಾಡಿದ ಫೊಟೊ ಅಂತರ್ಜಾಲದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದಿದೆ.