ರಾಜಸ್ಥಾನದ ಭರತಪುರದಲ್ಲಿ ವಿಪುಲ ಸ್ವ-ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿರುವ ಸರ್ಕಾರೇತರ ಸಂಸ್ಥೆ

ದಶಕಗಳ ಹಿಂದೆ ಭರತಪುರದಲ್ಲಿ ಸ್ಥಾಪಿತವಾದ ಲುಪಿನ್ ಮಾನವಕಲ್ಯಾಣ ಮತ್ತು ಸಂಶೋಧನಾ ಫೌಂಡೇಶನ್ ಸುಸ್ಥಿರ ಮತ್ತು ಪುನಾರಾವರ್ತಿಗೊಳಿಸಬಹುದಾದ ಸಾಮಾಜಿಕ, ಆರ್ಥಿಕ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಜೀವನಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.

14th Aug 2019
  • +0
Share on
close
  • +0
Share on
close
Share on
close

ರಾಜಸ್ಥಾನದ ಭರತಪುರವು ಪ್ರಸಿದ್ಧ ಪಕ್ಷಿಧಾಮದ ಹೆಸರಿನೊಂದಿಗೆ ತಳುಕುಹಾಕಿಕೊಂಡಿರುವುದು ನಮಗೆಲ್ಲಾ ತಿಳಿದಿರುವ ವಿಷಯ. ಆದರೆ ಅಲ್ಲಿ ಅದಕ್ಕಿಂತ ಮಿಗಿಲಾದ ಬೆಳವಣಿಗಳು ಸಂಭವಿಸುತ್ತಿವೆ ಎಂಬುದು ನಮ್ಮ ಅರಿವಿಗೆ ಬಂದಿರಲಾರದು. ಲುಪಿನ್ ಮಾನವಕಲ್ಯಾಣ ಮತ್ತು ಸಂಶೋಧನಾ ಫೌಂಡೇಶನ್ ಎಂಬ ಸರ್ಕಾರೇತರ ಸಂಸ್ಥೆ ಈ ಬೆಳವಣಿಗೆಗಳಿಗೆ ಕಾರಣವಾಗಿದೆ.


ಲುಪಿನ್ ಲಿಮಿಟೆಡ್ ಎಂಬ ಹೆಸರಾಂತ ಔಷಧ ತಯಾರಿಕಾ ಕಂಪೆನಿಯ ಬೆಂಬಲದೊಂದಿಗೆ ಪ್ರಾರಂಭವಾದ ಸರ್ಕಾರೇತರ ಸಂಸ್ಥೆ, ಸರ್ಕಾರದಿಂದ ದೊರೆತ ಹಣವನ್ನು ಸಮಾಜದ ವಿವಿಧ ಸ್ತರಗಳಲ್ಲಿ ಪರಿಣಾಮಕಾರಿಯಾಗಿ ವಿನಿಯೋಗಿಸುವ ಗುರಿಯನ್ನು ಹೊಂದಿದೆ.


ಲುಪಿನ್ ಔಷಧ ಕಂಪೆನಿಯ ಸಂಸ್ಥಾಪಕರಾದ ಡಾ. ದೇಶಬಂಧು ಗುಪ್ತರವರು ಸುಸ್ಥಿರ ಮತ್ತು ಪುನರಾವರ್ತನೆಗೊಳಿಸಬಹುದಾದ ಸಾಮಾಜಿಕ, ಆರ್ಥಿಕ, ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಜೀವನವನ್ನು ಸುಧಾರಿಸುವ ಸಲುವಾಗಿ 1988 ರ ಅಕ್ಟೋಬರ್ ತಿಂಗಳಿ ನಲ್ಲಿ ಲುಪಿನ್ ಮಾನವಕಲ್ಯಾಣ ಮತ್ತು ಸಂಶೋಧನಾ ಫೌಂಡೇಶನನ್ನು ಪ್ರಾರಂಭಿಸಿದರು. ಜನರನ್ನು ಸ್ವ-ಉದ್ಯೋಗದಲ್ಲಿ ತೊಡಗಿಸಿ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದರ ಮೂಲಕ ಈ ಉದ್ದೇಶವನ್ನು ಈಡೇರಿಸುವ ಗುರಿಯನ್ನು ಈ ಸಂಸ್ಥೆ ಹೊಂದಿದೆ.


ಕ

ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ರೈತರನ್ನು ಲುಪಿನ್ ಸಂಸ್ಥೆಯು ಪ್ರೇರೇಪಿಸುತ್ತದೆ.


ಲುಪಿನ್ ಔಷಧ ಕಂಪೆನಿಯ ಬೆಂಬಲದಿಂದ ಪ್ರಾರಂಭವಾದ ಸಂಸ್ಥೆ ಸ್ವತಂತ್ರ ಸ್ವರೂಪದ್ದಾಗಿದ್ದು ತನ್ನ ಧ್ಯೇಯಗಳ ಈಡೇರಿಕೆಗಾಗಿ ಕೇಂದ್ರ, ರಾಜ್ಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಂದಿಗೆ ಕೆಲಸ ಮಾಡುತ್ತದೆ.

ಭರತಪುರದಲ್ಲಿ ಸಂಸ್ಥೆಯ ಮೊದಲ ಕೇಂದ್ರ ಪ್ರಾರಂಭವಾಗಿದ್ದರಿಂದ ಅದು ಸಂಸ್ಥೆಯ ಸ್ವಗೃಹವೆಂದು ಪರಿಗಣಿಸಲ್ಪಟ್ಟಿದೆ. ಈಗ ಒಂಬತ್ತು ರಾಜ್ಯಗಳ 22 ಜಿಲ್ಲೆಗಳಲ್ಲಿ ಸಂಸ್ಥೆಯ ಕಛೇರಿಗಳನ್ನು ತೆರೆಯಲಾಗಿದೆ.


ಗ್ರಾಮ ಮತ್ತು ನಗರಗಳ ನಡುವಿನ ಕೊಂಡಿ


ಸುಸ್ಥಿರ ಅಭಿವೃದ್ಧಿಯ ಮೂಲಕ ಗ್ರಾಮೀಣ ಪ್ರದೇಶಗಳ ಪುನರುಜ್ಜೀವನದ ಕನಸನ್ನು ಹೊಂದಿರುವ ಸಂಸ್ಥೆ, ಅದಕ್ಕಾಗಿ ಗ್ರಾಮ ಮತ್ತು ನಗರಗಳ ನಡುವೆ ಜನವಾಸ್ತವ್ಯ ಪ್ರದೇಶಗಳನ್ನು ನಿರ್ಮಿಸಿ ಅಲ್ಲಿ ಕೃಷಿಯೇತರ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.


ಸಂಸ್ಥೆಯು ಹಮ್ಮಿಕೊಂಡಿರುವ ಸ್ವ-ಉದ್ಯೋಗಾವಕಾಶಗಳ ಪೈಕಿ ಜೇನುಸಾಕಣೆ, ತುಲಸಿ ಮಾಲೆ ರಚನೆ, ಬಳೆಗಳ ತಯಾರಿಕೆ ಮತ್ತು ಟೈಲರಿಂಗ್ ಮುಖ್ಯವಾದುವಾಗಿವೆ.


ವ

ಲುಪಿನ್ ಮಾನವಕಲ್ಯಾಣ ಮತ್ತು ಸಂಶೋಧನಾ ಫೌಂಡೇಶನ್ನಿನ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಸೀತಾರಾಮ ಗುಪ್ತ


ಲುಪಿನ್ ಮಾನವಕಲ್ಯಾಣ ಮತ್ತು ಸಂಶೋಧನಾ ಫೌಂಡೇಶನ್ನಿನ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಸೀತಾರಾಮ ಗುಪ್ತರವರು ಸಮಾಜದ ಬಡವರು, ಮಹಿಳೆಯರು ಮತ್ತು ನಿರುದ್ಯೋಗಿ ಯುವಕರಿಗಾಗಿ ಹಮ್ಮಿಕೊಳ್ಳಲಾಗಿರುವ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಸರ್ಕಾರ ಮತ್ತು ಜನರ ನಡುವೆ ಸಾಮರಸ್ಯ ಸಾದ್ಯವಾಗಿದೆಯೆಂದು ದೃಢಪಡಿಸುತ್ತಾರೆ.


“ಪುನರಾವರ್ತಿಸಬಹುದಾದ ಮತ್ತು ಎಂದೆಂದಿಗೂ ಸ್ಥಿರವಾದ ಆರ್ಥಿಕಾಭಿವೃದ್ಧಿ ಕಾರ್ಯಕ್ರಮಗಳ ಮಾದರಿಯನ್ನು ಇತರ ಕಾರ್ಪೋರೇಟ್ ಸಂಸ್ಥೆಗಳು ಮತ್ತು ಸರ್ಕಾರ ಕೂಡ ಅಳವಡಿಸಿಕೊಳ್ಳಬಹುದಾಗಿದೆ. ಜಿಲ್ಲಾಡಳಿತಕ್ಕೆ ಉತ್ತಮ ಸಂದೇಶ ನೀಡುವ ಉದ್ದೇಶವನ್ನು ಈ ಕಾರ್ಯಕ್ರಮಗಳು ಹೊಂದಿವೆ” ಎಂದು ಸೀತಾರಾಮ್ ಹೇಳುತ್ತಾರೆ.


ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಖಂಡ, ಆಂಧ್ರಪ್ರದೇಶ, ಗೋವಾ, ಜಮ್ಮು-ಕಾಶ್ಮೀರ ಮತ್ತು ಗುಜರಾತ್ ರಾಜ್ಯಗಳನ್ನು ಒಳಗೊಂಡಂತೆ ಒಟ್ಟು ಎಂಟು ರಾಜ್ಯಗಳಲ್ಲಿ ಸಂಯೋಜಿತ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ಸೀತಾರಾಮ್ ಸ್ಪಷ್ಟಪಡಿಸುತ್ತಾರೆ.


ಕೆಲವಾರು ವರ್ಷಗಳ ಸತತ ಪ್ರಯತ್ನದಿಂದಾಗಿ ಲುಪಿನ್ ಸಂಸ್ಥೆಯು ಜೀವನಾಭಿವೃದ್ಧಿಯ ವಿಶೇಷ ಮಾದರಿಗಳನ್ನು ಸೃಷ್ಟಿಸಿದೆ. ಇವುಗಳನ್ನು ಇತರ ಹಿಂದುಳಿದ ಪ್ರದೇಶಗಳಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ. ಮೊದಲ ವರ್ಷದ ಪ್ರಯತ್ನದಲ್ಲಿ 33 ಗ್ರಾಮಗಳಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಆದರೆ ಈಗ ಭರತಪುರದ 33 ಬ್ಲಾಕುಗಳ ಐದು ಜಿಲ್ಲೆಗಳ 1836 ಗ್ರಾಮಗಳಿಗೆ ಈ ಕಾರ್ಯಕ್ರಮಗಳು ವಿಸ್ತರಿಸಲ್ಪಟ್ಟಿವೆ.


ಲುಪಿನ್ ಸಂಸ್ಥೆಯು ಮೊದಲಿಗೆ 25 ಗ್ರಾಮಗಳನ್ನು ದತ್ತು ತೆಗೆದುಕೊಂಡು ಪ್ರತಿಯೊಂದೂ ಗ್ರಾಮದ ಸಮಸ್ಯೆಗಳನ್ನು ಅಧ್ಯಯನ ಮಾಡಿ, ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಡಳಿತದ ಸಹಯೋಗದಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿತು. ಬಹಳಷ್ಟು ಗ್ರಾಮಗಳು ಶಾಲೆ, ಆಸ್ಪತ್ರೆಗಳಂತಹ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದವು.


“ಬಹಳಷ್ಟು ಗ್ರಾಮೀಣ ಜನರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತಿದ್ದರು. ಜಿಲ್ಲಾಡಳಿತ, ಲುಪಿನ್ ಮತ್ತು ಗ್ರಾಮಸ್ಥರು ಒದಗಿಸಿದ 33 ಲಕ್ಷ ಹಣದ ಬಜೆಟ್ಟಿನಲ್ಲಿ ಕುಡಿಯುವ ನೀರಿನ ಯೊಜನೆ ಸಿದ್ಧಗೊಳಿಸಲಾಯಿತು.” ಎಂದು ಸೀತಾರಾಮ್ ಹೇಳುತ್ತಾರೆ.


ಕುಡಿಯುವ ನೀರಿನ ಯೋಜನೆಯ ಯಶಸ್ಸು ಗ್ರಾಮೀಣ ಜನರಲ್ಲಿ ಲುಪಿನ್ ಸಂಸ್ಥೆಯ ಬಗ್ಗೆ ನಂಬಿಕೆ ಮತ್ತು ಭರವಸೆಗಳನ್ನು ಮೂಡಿಸಿತು.


ಈ ರೀತಿ ಪ್ರಾರಂಭವಾದ ಯೋಜನೆಗಳು ಆರೋಗ್ಯ, ಶಿಕ್ಷಣ ಮುಂತಾದ ಕ್ಷೇತ್ರಗಳಿಗೂ ವಿಸ್ತಾರಗೊಂಡವು” ಎನ್ನುತ್ತಾರೆ ಸೀತಾರಾಮ್.


ತರಬೇತಿ ಕಾರ್ಯಕ್ರಮಗಳು


ಗ್ರಾಮೀಣ ಪುನರುಜ್ಜೀವನದ ಕಲ್ಪನೆಯು ಜನರನ್ನು ವಿವಿಧ ರೀತಿಯ ಸ್ವ-ಉದ್ಯೋಗದಲ್ಲಿ ತೊಡಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಲುಪಿನ್ ಸಂಸ್ಥೆಯು ಭರತಪುರದ ಎಲ್ಲಾ 10 ಬ್ಲಾಕುಗಳಲ್ಲಿ ಬಹುಕೌಶಲ್ಯ ತರಬೇತಿ ನೀಡುವ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದೆ.


ಬಹುಕೌಶಲ್ಯ ತರಬೇತಿ ಕಾರ್ಯಕ್ರಮವು ಗ್ರಾಮೀಣ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮಹತ್ವದ ಯೋಜನೆಯಾಗಿದೆ. ಶಾಲೆ ಬಿಟ್ಟ ಹೆಣ್ಣುಮಕ್ಕಳಿಗೆ, ಅರೆಕೌಶಲ್ಯ ಹೊಂದಿದ ಮಹಿಳೆಯರಿಗೆ ಟೈಲರಿಂಗ್, ಗಾರ್ಮೆಂಟ್ಸ್ ಮತ್ತು ಫ್ಯಾಶನ್ ವಲಯದಲ್ಲಿ ತರಬೇತಿ ನೀಡಲಾಗುತ್ತದೆ”. ಇಲ್ಲಿಯವರೆಗೆ ಭರತಪುರದ ಸುತ್ತಮುತ್ತಲಿನ ಮಹಿಳೆಯರು ಒಂದು ಟೆಕ್ಸಟೈಲ್ ಕೈಗಾರಿಕೆಯ ಎರಡು ಲಕ್ಷ ಆರ್ಡರುಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ ಎಂದು ಸೀತಾರಾಮ್ ಸಂತಸದಿಂದ ನುಡಿಯುತ್ತಾರೆ.


ಕ

ಕೈಗಾರಿಕೆಗಳಿಂದ ಬಂದ ಆರ್ಡರುಗಳನ್ನು ಪೂರೈಸುವ ಸಲುವಾಗಿ ಮಹಿಳೆಯರು ಹೊಲಿಗೆ ಕೆಲಸದಲ್ಲಿ ತೊಡಗಿರುವುದು.

2013 ರಲ್ಲಿ 42 ವರ್ಷ ವಯಸ್ಸಿನ ಸುಮನ್ ಸಿಂಗ್ ಎಂಬ ಮಹಿಳೆ ಲುಪಿನ್ ಸಂಸ್ಥೆಯಲ್ಲಿ ತರಬೇತುದಾರಳಾಗಿ ಸೇರಿ ಈಗ ತನ್ನ ಸ್ವಂತ ಹೊಲಿಗೆ ಕೇಂದ್ರವನ್ನು ಹೊಂದಿದ್ದು ಅಲ್ಲಿ ಸುಮಾರು 25 ಅಭ್ಯರ್ಥಿಗಳಿಗೆ ತರಬೇತಿ ನೀಡುತಿದ್ದಾರೆ. ಫ್ಯಾಬ್ ಇಂಡಿಯಾ, ಬಿಬಾ ಮತ್ತು ಸೃಷ್ಠಿ ಬ್ರಾಂಡುಗಳ ಆರ್ಡರುಗಳನ್ನೇ ಅಲ್ಲದೇ ಜಪಾನ್, ದುಬೈ, ಮತ್ತು ಸ್ಪೇನ್ ದೇಶಗಳ ಉಡುಪು ತಯಾರಿಕಾ ಕಂಪನಿಗಳಿಂದ ಆರ್ಡರುಗಳನ್ನು ಪಡೆದು ವರ್ಷಕ್ಕೆ ಸುಮಾರು 5 ರಿಂದ 7 ಲಕ್ಷ ರೂಪಾಯಿಗಳವರಗೆ ಲಾಭ ಗಳಿಸುತಿದ್ದಾರೆ.


ಆಕೆಯ 17 ವರ್ಷದ ಮಗಳ ಹೆಸರಿನಲ್ಲಿ ತೆರೆದಿರುವ ಕೀರ್ತಿ ಕ್ರಾಫ್ಟ್ಸ ಎಂಬ ಉದ್ಯಮವು ಕಳೆದ ವರ್ಷ ಸುಮಾರು 16 ಲಕ್ಷ ವಹಿವಾಟು ನಡೆಸಿ 4 ಲಕ್ಷ ರೂಪಾಯಿಗಳಷ್ಟು ಲಾಭ ಗಳಿಸಿದೆ.


ಸುಮನರ ಯಶೋಗಾಥೆಯಿಂದ ಉತ್ತೇಜಿತರಾಗಿರುವ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಜನರಲ್ಲಿ ಕೌಶಲ್ಯಾಭಿವೃದ್ಧಿಯ ಮೂಲಕ ಉದ್ಯಮಶೀಲತೆಯ ಗುಣವನ್ನು ಬೆಳೆಸುವತ್ತ ಗಮನಹರಿಸಿವೆ.


ಲುಪಿನ್ನಿನ ಬಹುಕೌಶಲ್ಯಾಭಿವೃದ್ಧಿ ಕೇಂದ್ರವು ವಿದ್ಯಾರ್ಥಿಗಳು ಕಾರ್ಪೋರೇಟ್ ಕಛೇರಿಗಳಲ್ಲಿ ಭದ್ರತಾ ಸಿಬ್ಬಂದಿಗಳಾಗಿ ಕೆಲಸ ಮಾಡಲು ಸಹಾಯಕವಾಗುವ ಗಾರ್ಡ್ ತರಬೇತಿ ಕಾರ್ಯಕ್ರಮವನ್ನು ರೂಪಿಸಿದೆ. ಇದರಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕಾರ್ಪೋರೇಷನ್ ಸರ್ಟಿಫಿಕೇಟುಗಳನ್ನು ನೀಡುತ್ತದೆ.


ಲುಪಿನ್ ಸಂಸ್ಥೆಯಲ್ಲಿ ಪ್ರತಿ ಬ್ಯಾಚಿಗೆ 20 ಜನರಂತೆ ಮೂರು ತಿಂಗಳುಗಳ ಕಾಲದ ಸರ್ಟಿಫೈಡ್ ಕಂಪ್ಯೂಟರ್ ಸಾಕ್ಷರತಾ ತರಬೇತಿಯನ್ನೂ ಸಹ ನೀಡಲಾಗುತ್ತದೆ. ಇಲ್ಲಿ ವಿದ್ಯಾರ್ಥಿಗಳಿಗೆ ಡೇಟಾ ಎಂಟ್ರಿ, ಎಂಎಸ್ ಎಕ್ಸಲ್ ಕೌಶಲ್ಯಗಳನ್ನು ಹಿಂದಿ ಮತ್ತು ಇಂಗ್ಲೀಷಿನಲ್ಲಿ ಕಲಿಸಲಾಗುತ್ತದೆ.


ಜೇನು ಸಾಕಣೆ ಮತ್ತು ಕೃಷಿ ತರಬೇತಿ


ಮೇಲಿನ ತರಬೇತಿ ಕಾರ್ಯಕ್ರಮಗಳೇ ಅಲ್ಲದೆ ಲುಪಿನ್ ಸಂಸ್ಥೆಯು ರೈತರನ್ನು ಆಧುನಿಕ ತಂತ್ರಜ್ಞಾನ ಸಂಯೋಜಿತವಾದ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ ಮತ್ತು ಜೇನು ಸಾಕಣೆಯನ್ನು ಉಪಕಸುಬನ್ನಾಗಿಸಿಕೊಂಡು ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಅವರಿಗೆ ತರಬೇತಿ ನೀಡುತ್ತದೆ. ಸಂಸ್ಥೆಯು ರೈತರಿಗಾಗಿ ಹಲವಾರು ಕಾರ್ಯಾಗಾರಗಳು ಮತ್ತು ಸಭೆಗಳನ್ನು ನಡೆಸಿ ಅವರು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅರಿತುಕೊಂಡು ಸಾವಯವ ಕೃಷಿಯಲ್ಲಿ ತೊಡಗಿಕೊಳ್ಳಲು ಸಹಾಯ ಮಾಡುತ್ತದೆ. ಸಂಶೋಧನೆಗಳ ಸಹಾಯದಿಂದ ರೈತರು ಸೂಕ್ತ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಂಸ್ಥೆಯು ಮಾರ್ಗದರ್ಶನ ನೀಡುತ್ತದೆ.


ಕ

ಲುಪಿನ್ ಸಂಸ್ಥೆಯಲ್ಲಿ ಇಲ್ಲಿಯವರಗೆ ಸುಮಾರು ಹತ್ತು ಸಾವಿರ ಕೃಷಿಕರಿಗೆ ತರಬೇತಿ ನೀಡಲಾಗಿದೆ.


ರಾಜಸ್ಥಾನ ಸರ್ಕಾರವು ಲುಪಿನ್ ಸಂಸ್ಥೆಯ ಸಹಯೋಗದೊಂದಿಗೆ ಜೇನು ಸಾಕಣೆ ಕೇಂದ್ರಗಳನ್ನು ತೆರೆದಿದೆ ಮತ್ತು ರಾಜ್ಯದ ಇತರ ಪ್ರದೇಶಗಳಿಗೆ ಜೇನು ಸಾಕಣೆಯನ್ನು ವಿಸ್ತರಿಸಿದೆ. ಸಾಸಿವೆ ಬೆಳೆಯುವ ಹೊಲಗಳು ಜೇನು ಸಾಕಣೆಗೆ ಉತ್ತಮ ವಾತಾವರಣವನ್ನು ಹೊಂದಿವೆ. ಸಾಸಿವೆ ಗಿಡಗಳು ಹೂ ಬಿಡುವ 3 ರಿಂದ 4 ತಿಂಗಳ ಸಮಯದಲ್ಲಿ ಉತ್ಪಾದನೆಯಾಗುವ ಜೇನಿನ ಮೊತ್ತವು ವರ್ಷದ ಉಳಿದ ಕಾಲದ ಉತ್ಪಾದನೆಗೆ ಸಮವಾಗಿರುತ್ತದೆ.


ಲುಪಿನ್ ಪೌಂಡೇಶನ್ 1990 ರಲ್ಲಿ ಸಣ್ಣ ರೈತರು, ಭೂರಹಿತ ಕಾರ್ಮಿಕರು, ನಿರುದ್ಯೋಗಿ ಯುವಕರಿಗಾಗಿ ಜೇನು ಸಾಕಣೆ ತರಬೇತಿಯನ್ನು ಭರತಪುರದಲ್ಲಿ ಪ್ರಾರಂಭಿಸಿತು, ತರಬೇತಿಯ ಜೊತೆಗೆ ಜೇನು ಸಾಕಣೆ ಕೇಂದ್ರಗಳಿಗೆ ಭೇಟಿ, ಎಸ್ ಐ ಡಿ ಬಿ ಐ ನಂತಹ ಹಣಕಾಸು ಸಂಸ್ಥೆಗಳಿಂದ ಆರ್ಥಿಕ ನೆರವು ಮುಂತಾದ ಸೌಲಭ್ಯಗಳನ್ನು ಅವರಿಗೆ ಏರ್ಪಾಡು ಮಾಡಲಾಗುತ್ತದೆ. ಹಿಸ್ಸಾರ್ ಕೃಷಿ ವಿಶ್ವವಿದ್ಯಾನಿಲಯ ಮತ್ತು ರಾಷ್ಟ್ರದ ಇತರ ಭಾಗಗಳ ಜೇನು ಸಾಕಣೆದಾರರ ಸಹಯೋಗದಿಂದ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಪ್ರಯೋಜನ ಪಡೆಯುತಿದ್ದಾರೆ.


ಭರತಪುರದ ಜೇನು ಸಾಕಣೆದಾರರು ಸ್ವದೇಶಿ ಜೇನುಹುಳಗಳಿಂತ ಹೆಚ್ಚಿನ ಉತ್ಪಾದಕತೆ ಹೊಂದಿರುವ ಇಟಾಲಿಯನ್ ಜೇನುಹುಳುಗಳನ್ನು ಜೇನು ಸಾಕಣೆಗೆ ಬಳಸುತ್ತಾರೆ.


ಭರತಪುರದಲ್ಲಿ ಜೇನು ಸಾಕಣೆ ಪ್ರಾರಂಭವಾಗಿ 25 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಜೇನು ಸಾಕಣೆ, ಅಲ್ಲಿ ಭದ್ರವಾಗಿ ನೆಲೆಯೂರಿದೆ. ಲುಪಿನ್ ಸಂಸ್ಥೆಯ ಬೆಂಬಲದಿಂದ ಮೂರು ಸಾವಿರ ಜೇನು ಸಾಕಣೆದಾರರು ಮೂರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಭರತಪುರವನ್ನು ಜೇನು ಉತ್ಪಾದನೆಯ ಪ್ರಮುಖ ನಗರವನ್ನಾಗಿ ಮಾಡಿದ್ದಾರೆ.


ಜೇನು ಸಾಕಣೆದಾರರು ಈ ಘಟಕಗಳಿಗೆ ತಾವು ಉತ್ಪಾದಿಸಿದ ಜೇನನ್ನು ಮಾರುತ್ತಾರೆ. ಅಲ್ಲಿಂದ ಜೇನು ಸಂಸ್ಕರಣಗೊಂಡು ಪತಂಜಲಿ, ಬಿಗ್ ಬಜಾರಿನಂತಹ ಹೆಸರಾಂತ ಬ್ರಾಂಡುಗಳು ಮತ್ತು ಬ್ರಿಡ್ಜ್ ಇಂಡಿಯಾ ಎಂಬ ಜೇನು ಸಾಕಣೆದಾರರ ಸ್ವಂತ ಬ್ರಾಂಡಿನಡಿಯಲ್ಲಿ ಮಾರಾಟವಾಗುತ್ತವೆ. ಇಲ್ಲಿನ ರೈತರ ಪ್ರತಿಶತಃ 70 ಭಾಗದ ಆದಾಯ ಜೇನುಸಾಕಣೆಯಿಂದ ಬರುತ್ತಿದೆ ಮತ್ತು ಇನ್ನುಳಿದ 30 ಭಾಗ ಕೃಷಿ ಚಟುವಟಿಕೆಗಳಿಂದ ಬರುತ್ತಿದೆಯೆಂಬುದು ಹೆಮ್ಮೆಯ ವಿಷಯವಾಗಿದೆ.


ಹಲವಾರು ವರ್ಷಗಳ ಕಾಲ ಲುಪಿನ್ ಫೌಂಡೆಶನ್ ತನ್ನ ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಜನರನ್ನು ಸ್ವ-ಉದ್ಯೋಗಿಗಳನ್ನಾಗಿ ಮಾಡಿ ಅವರ ಹಣಸಂಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತಿದೆ ಮತ್ತು ಇದು ಫೌಂಡೇಶನ್ನಿನ ನಿರಂತರ ಯೋಜನೆಯೂ ಕೂಡ ಆಗಿದೆ.

  • +0
Share on
close
  • +0
Share on
close
Share on
close

Our Partner Events

Hustle across India