ಮನರಂಜನೆಯ ಮೂಲಕ‌ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಈ ಎನ್.ಜಿ.ಓ

'ಮಕ್ಕಳ ಜಾಗೃತಿ' ಎಂಬ ಬೆಂಗಳೂರು ಮೂಲದ ಎನ್.ಜಿ.ಓ. ಸರ್ಕಾರದಲ್ಲಿ ಸಮಗ್ರ ಅಭಿವೃದ್ಧಿ ಮಾದರಿಗಳನ್ನು ಪರಿಚಯಿಸುವ ಮೂಲಕ‌ ಸಾವಿರಾರು ಮಕ್ಕಳಿಗೆ ತಮ್ಮ ಕನಸುಗಳನ್ನು ಈಡೇರಿಸಲು ಸಹಾಯ ಮಾಡಿ ಕೊಡುತ್ತಿದೆ.

ಮನರಂಜನೆಯ ಮೂಲಕ‌ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಈ ಎನ್.ಜಿ.ಓ

Friday July 19, 2019,

5 min Read

ಫ್ರೆಂಚ್ ಕವಿ ವಿಕ್ಟರ್ ಹ್ಯೂಗೊ ಹೀಗೆ ಹೇಳುತ್ತಾರೆ: "ಶಾಲೆಯ ಬಾಗಿಲನ್ನು ತೆರೆಯುವವನು, ಸೆರೆಮನೆಯನ್ನು ಮುಚ್ಚುತ್ತಾನೆ." ಅರ್ಥಾತ್ ಶಿಕ್ಷಣವು ಯಶಸ್ಸಿನ‌ ಕೀಲಿಯಾಗಿದೆ. ಜಗವನ್ನು ಬದಲಾಯಿಸಲು ಒಬ್ಬರು ಬಳಸಬಹುದಾದ ಅತ್ಯಂತ ಶಕ್ತಿಶಾಲಿ‌‌ ಸಾಧನವೆಂದರೆ ಅದುವೇ ಶಿಕ್ಷಣ. 


2018ರಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುವಂತಹ ಮಕ್ಕಳ ಕಲಿಕೆಯ ಫಲಿತಾಂಶಗಳನ್ನು ಅರಿಯಲು ವಾರ್ಷಿಕ ಸ್ಥಿತಿ ಶಿಕ್ಷಣ ವರದಿ(ASER) ಒಂದು ಸಮೀಕ್ಷೆಯನ್ನು ನಡೆಸಿತು. ಅದರಲ್ಲಿ‌ 6 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ 2010 ರಿಂದ ಶಾಲೆಯಲ್ಲಿ ಒಟ್ಟಾರೆ ದಾಖಲಾತಿ ಪಡೆದದು 96% ಹೆಚ್ಚಾಗಿದೆ. ಆದರೆ ಮೂರನೇ ತರಗತಿಗೆ ಪ್ರವೇಶ ಪಡೆದ ಮಕ್ಕಳಲ್ಲಿ ಕೇವಲ ‌27.2% ರಷ್ಟು ಮಕ್ಕಳು ಮಾತ್ರ ಎರಡನೇ ತರಗತಿಯ ಪಠ್ಯಪುಸ್ತಕ ಓದಲು ಸಾಧ್ಯವಾಯಿತು. ನಾಲ್ಕನೇ ತರಗತಿಯ 34.7% ರಷ್ಟು ಮಕ್ಕಳು ವ್ಯವಕಲನ, ಭಾಗಾಕಾರದಂತಹ ಮೂಲ ಅಂಕಗಣಿತದ ಲೆಕ್ಕಾಚಾರಗಳನ್ನು ಮಾಡಬಹುದು. ಮತ್ತು ಪ್ರತಿ ನಾಲ್ಕು‌ ಮಕ್ಕಳಲ್ಲಿ ಒಬ್ಬರು ಓದುವ ಕೌಶಲ್ಯವನ್ನು ಪಡೆಯದೆ ಎಂಟನೇ ತರಗತಿಯನ್ನು ಪೂರ್ಣಗೊಳಿಸುತ್ತಿದ್ದರು.


ಕ

ಮಕ್ಕಳ ಜಾಗೃತಿ ಕಲಿಕಾ ಕೇಂದ್ರದಲ್ಲಿ ಕವನ ವಾಚಿಸುತ್ತಿದ್ದ ವಿದ್ಯಾರ್ಥಿ.

ಶಾಲಾ ಮಟ್ಟದಲ್ಲಿ ಈ ಕಲಿಕೆಯ ಅಂತರವನ್ನು‌ ಕಡಿಮೆ ಮಾಡುವುದಕ್ಕಾಗಿಯೇ 2003 ರಲ್ಲಿ ಬೆಂಗಳೂರು ಮೂಲದ 'ಮಕ್ಕಳ ಜಾಗೃತಿ' ಎಂಬ ಸರ್ಕಾರೇತರ ಸಂಸ್ಥೆ(ಎನ್.ಜಿ.ಓ)ಯೊಂದನ್ನು ಜಾಯ್ ಶ್ರೀನಿವಾಸನ್ ಅವರು ಸ್ಥಾಪಿಸುತ್ತಾರೆ‌.


ಈ ಎನ್.ಜಿ.ಓ‌ ಆರಂಭದಲ್ಲಿ ಬೆಂಗಳೂರಿನ ಅಡುಗೋಡಿ ಮತ್ತು ಅದರ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಬಡತನದ ಅಂಚಿನಲ್ಲಿರುವ ಮಕ್ಕಳಿಗೆ ಶಾಲಾ‌ ಶಿಕ್ಷಣವನ್ನು‌ ಪ್ರಾಯೋಜಿಸುವ ಮೂಲಕ ಪ್ರಾರಂಭಿಸಿತು. ಆದರೆ ಇಂದು, ಸರಕಾರಿ ಶಾಲೆಗಳು ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿ ಮಾದರಿಗಳನ್ನು ಪರಿಚಯಿಸುವ ಮೂಲಕ ಅವರು ಸಾವಿರಾರು ಮಕ್ಕಳಿಗೆ ಉತ್ತಮವಾಗಿ ಕಲಿಯಲು ಅಥವಾ ಶಿಕ್ಷಣ ಪಡೆಯಲು ಅನುವು ಮಾಡಿಕೊಡುತ್ತಿದ್ದಾರೆ.


"ಮಕ್ಕಳ ಜಾಗೃತಿಯು ಕಳೆದ 15 ವರ್ಷಗಳಿಂದ‌‌ ಮಕ್ಕಳ‌ ಕಲಿಕೆ ಮತ್ತು ಅಭಿವೃದ್ಧಿಗೆ ನೆರವಾಗುತ್ತಿದೆ. ಅಂದಿನಿಂದ ಪ್ರತಿವರ್ಷ 10,000 ಕ್ಕೂ ಹೆಚ್ಚಿನ‌ ಜನರ ಜೀವನವನ್ನು‌ ತಲುಪಿದೆ" ಎಂದು ಜಾಯ್ ಶ್ರೀನಿವಾಸನ್ ಅವರು 'ಯುವರ್‌ಸ್ಟೋರಿ' ಯೊಂದಿಗೆ ಹಂಚಿಕೊಂಡರು.


ಮಕ್ಕಳ ಜಾಗೃತಿಯ ಪ್ರಾರಂಭ


ಜಾಯ್ ಶ್ರೀನಿವಾಸನ್ ಅವರು ಅವರ ಕುಟುಂಬದಲ್ಲಿ ಪದವಿ ಪಡೆದಂತಹ ಮೊದಲ ಮಹಿಳೆಯಾಗಿದ್ದಾರೆ. ಸ್ವತಃ ಕೆಳ ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ಅವರು,ಮಕ್ಕಳು ಹಾಗೂ ಯುವ ವಯಸ್ಕರು ಶಿಕ್ಷಣ ಪಡೆಯಲು ಎದುರಿಸಬೇಕಾದ ರೀತಿ-ನೀತಿ, ನಿರ್ಬಂಧಗಳನ್ನು ಅರಿತಿದ್ದರು. ಜಾಯ್ ಅವರಿಗೆ ಸಹಾಯ ಮಾಡುವಂತಹ ಬಲವಾದ ಆಸೆಯೊಂದಿತ್ತು. ಅದು ಮಕ್ಕಳ‌ ಜಾಗೃತಿಯ ಸ್ಥಾಪನೆಗೆ ದಾರಿ ಮಾಡಿ ಕೊಟ್ಟಿತು.


ಎ

ಜಾಯ್ ಶ್ರೀನಿವಾಸನ್, ಸಂಸ್ಥಾಪಕಿ,‌ಮಕ್ಕಳ ಜಾಗೃತಿ

"ನಾನು ಬೆಂಗಳೂರಿನ ಅಡಗೋಡಿಯಲ್ಲಿರುವ ಕೊಳಗೇರಿಯಲ್ಲಿ ಮೊದಲ ಕಲಿಕಾ ಕೇಂದ್ರವನ್ನು ಆರಂಭಿಸಿದೆ. ನನ್ನ ಸುರಕ್ಷಿತ ಸ್ಥಳದ ಸುರಕ್ಷಿತ‌ ಮಕ್ಕಳ ಕೇಂದ್ರಿತ ಕಲಿಕೆಯ ಪರಿಕಲ್ಪನೆ ಅನೇಕರಿಗೆ ಇಷ್ಟವಾಯಿತು. ಇಂದು ಸಂಸ್ಥೆಯು‌ ಇಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಮತ್ತು ಅಸಂಖ್ಯಾತ ಜನರ ಜೀವನದ ಮೇಲೆ‌‌ ಪರಿಣಾಮ ಬೀರಿದೆ. ಅದು ನನಗೆ ನಿಜವಾಗಿಯೂ ಸಂತೋಷ ತಂದಿದೆ". ಎಂದು ಅವರು ಹೇಳುತ್ತಾರೆ.


ಕಲಿಕೆಗಾಗಿ ಸುಂದರ ವಾತಾವರಣವನ್ನು ನಿರ್ಮಿಸುವುದು


ಯಾವುದೇ ಪಠ್ಯಕ್ರಮದ‌ ಗಡಿಗಳು ಅಥವಾ ಶೈಕ್ಷಣಿಕ ಒತ್ತಡದ ನಿರ್ಬಂಧಗಳಿಂದ‌ ಹೊರತಾದ ರೋಮಾಂಚಕ ಮತ್ತು‌ ವರ್ಣಮಯವಾದಂತಹ ಸ್ಥಳವನ್ನು ಕಲ್ಪಿಸಿಕೊಳ್ಳಿ. ಅದು‌ ಮಕ್ಕಳಿಗೆ‌ ಕಲಿಯಲು, ಬೆಳೆಯಲು,‌ಪ್ರಯೋಗಿಸಲು ಮತ್ತು ತಮ್ಮನ್ನು ತಾವು ಕಂಡುಕೊಳ್ಳಲು ಪೋಷಿಸಬಹುದಾದ ಸ್ಥಳ. ರಾಜ್ಯದ ತುಮಕೂರು, ಗದಗ, ಕೊಪ್ಪಳ,‌ ಮೈಸೂರು, ಗುಡಹಳ್ಳಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ 35 ಸರಕಾರಿ ಶಾಲೆಗಳ ಸಹಭಾಗಿತ್ವದೊಂದಿಗೆ ಮಕ್ಕಳ ಜಾಗೃತಿ ಕಲಿಕಾ‌ ಕೇಂದ್ರಗಳನ್ನು ರಚಿಸುವುದರ ಹಿಂದಿನ ಆಲೋಚನೆ ಇದು.


"ಹೆಚ್ಚಿನ ಸರ್ಕಾರಿ ಶಾಲೆಗಳು ಸಮಗ್ರ ಅಭಿವೃದ್ಧಿ ಮತ್ತು ಜೀವನ ಕೌಶಲ್ಯಗಳಂತ ಅಂಶಗಳನ್ನು ಕೇಂದ್ರಿಕರಿಸುವಂತಹ ಇಚ್ಛಾಶಕ್ತಿ ಅಥವಾ ಸಂಪನ್ಮೂಲಗಳನ್ನು ಹೊಂದಿಲ್ಲ. ಅವರು ಪಠ್ಯಕ್ರಮವನ್ನು‌ ಪೂರ್ಣಗೊಳಿಸುವುದರ ಮೇಲೆ‌ ಮಾತ್ರ ಗಮನ ಹರಿಸುತ್ತಾರೆ. ಉತ್ತಮ ಅಂಕಗಳನ್ನು ಪಡೆಯುವಲ್ಲಿ ಒತ್ತು‌ ನೀಡುತ್ತಾರೆ. ಈ ಶಾಲೆಗಳ ಆವರಣದಲ್ಲಿ ಕಲಿಕಾ‌‌ ಕೇಂದ್ರಗಳನ್ನು ಸ್ಥಾಪಿಸುವ ಹಿಂದಿನ‌ ಆಲೋಚನೆಯೆಂದರೆ ಮಕ್ಕಳನ್ನು ನಾಲ್ಕು ಗೋಡೆಗಳನ್ನು ಮೀರಿ ಯೋಚಿಸಲು ಸೃಜನಶೀಲತೆ, ಸಮಯ ನಿರ್ವಹಣೆ ಮತ್ತು ನಿರ್ಧಾರ ತೆಗೆದುಕೊಳ್ಳುವಂತಹ ಅಗತ್ಯ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸುವುದು ಮತ್ತು‌ ಪ್ರಚೋದಿಸುವುದು ಆಗಿದೆ" ಎಂದು‌‌ ಮಕ್ಕಳ‌ ಜಾಗೃತಿಯ ಮುಖ್ಯ ಕಾರ್ಯಕಾರಿ ಅಧಿಕಾರಿ ಎಂ.ಮುರುಳಿ ಹೇಳುತ್ತಾರೆ.



ದ್

ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮಕ್ಕಳ ಜಾಗೃತಿ ಕಲಿಕಾ ಕೇಂದ್ರದಲ್ಲಿ ತಂಡದ ಚಟುವಟಿಕೆಯಲ್ಲಿ ತೊಡಗಿರುವುದು

ಸರ್ಕಾರಿ ಶಾಲೆಗಳಲ್ಲಿ ಸಮಗ್ರ ಅಭಿವೃದ್ಧಿ ಮಾದರಿಯನ್ನು ಪರಿಚಯಿಸುವ ಮೂಲಕ ಎನ್.ಜಿ.ಓ‌ ತನ್ನ ಪ್ರಯತ್ನವನ್ನು ಮಾಡಿತು ಮತ್ತು ಆಡಳಿತದೊಂದಿಗೆ‌ ಸಹಭಾಗಿತ್ವ‌ ಹೊಂದಿತು. ಸ್ಪೈಸ್ (SPICE) ಎಂದು‌ ಕರೆಯಲ್ಪಡುವ ಈ ಸಂಸ್ಥೆಯು ತಮ್ಮಲ್ಲಿರುವ ಕೌಶಲಗಳನ್ನು ಸಾಮಾಜಿಕ, ದೈಹಿಕ, ಬೌದ್ಧಿಕ, ಸೃಜನಶೀಲ, ಭಾವನಾತ್ಮಕ ಈ ಐದು ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳ್ಳಲು ಸಹಾಯ ಮಾಡುತ್ತದೆ. ಪ್ರಭಲತೆಯನ್ನು ನಿರ್ಮಿಸಲು ಇಂದಿನ ಕಾಲದ ಮಕ್ಕಳಿಗೆ ಅಗತ್ಯವಿರುವ‌ ಎಲ್ಲಾ‌ ಅಂಶಗಳನ್ನು ಎಚ್ಚರಿಕೆಯಿಂದ‌ ಪರಿಶೀಲಿಸಿದ ನಂತರ ಈ ಸಾಮರ್ಥ್ಯದ ಕ್ಷೇತ್ರಗಳನ್ನು ತಲುಪಲಾಯಿತು.


"ಈ ಮಾದರಿಯನ್ನು ನಾವು ಜಾರಿಗೆ ತರಲು‌ ಅನೇಕ‌ ಪಾಲುದಾರರೊಂದಿಗೆ ಕಾರ್ಯ ನಿರ್ವಹಿಸದ್ದೇವೆ. ಮೊದಲಿಗೆ ನಾವು‌ ರಾಜ್ಯ ಸಿಬ್ಬಂದಿ ವಿಭಾಗದ ಪ್ರಧಾನ ಕಾರ್ಯದರ್ಶಿಯಿಂದ ಹಾಗೂ ಕರ್ನಾಟಕ ಶಿಕ್ಷಣ‌ ಇಲಾಖೆಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿಯಿಂದ ಅಗತ್ಯ ಅನುಮೋದನೆಗಳನ್ನು ಪಡೆದುಕೊಂಡಿದ್ದೇವೆ. ನಂತರ, ನಮ್ಮ‌ ಕಲಿಕಾ ಕೇಂದ್ರಗಳಿಗಾಗಿ ತಮ್ಮ‌ ಕ್ಯಾಂಪಸ್ ನಲ್ಲಿ ಒಂದು ತರಗತಿಯನ್ನು ಮೀಸಲಿಡುವಂತೆ ವಿನಂತಿಸಿದೆವು" ಎಂದು ಮುರುಳಿ ವಿವರಿಸುತ್ತಾರೆ.


ಸಂಘಟನೆಯು‌ ಸಾರ್ವಜನಿಕರನ್ನು ಫೇಸಿಲಿಟೇರರಗಳಾಗಿ ಕಾರ್ಯ ನಿರ್ವಹಿಸಲು ಆಹ್ವಾನಿಸಿದ ತಕ್ಷಣ ಮಕ್ಕಳೊಂದಿಗೆ ತೊಡಗಿಕೊಳ್ಳಲು ಅನೇಕ‌ ಉದ್ಯಮಿಗಳು, ಗೃಹಿಣಿಯರು,‌‌ವೃತ್ತಿಪರರು ಸ್ವಯಂಸೇವಕರಾಗಿ ಈ ಕಾರ್ಯಕ್ಕೆ ಕೊಡುಗೆ ನೀಡಲು ಇಚ್ಛಿಸಿದರು.


ಕ

ಮಕ್ಕಳಿಗೆ ದೈಹಿಕ ತರಬೇತಿಯ ಭಾಗವಾಗಿ ಟೇಕ್ವಾಂಡೋ ಕಲಿಸಲಾಗುತ್ತಿರುವುದು.

ಮಕ್ಕಳ ಜಾಗೃತಿ ಸ್ಕ್ರೀನಿಂಗ್ ಮತ್ತು‌ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಆಯ್ಕೆ ಮಾಡಿದ ಫೆಸಿಲಿಟೇರರಿಗೆ ಮೊದಲು ಕಠಿಣ‌ ತರಬೇತಿಯನ್ನು ನೀಡಲಾಯಿತು. ಐದು ವಾರಗಳ ತರಬೇತಿ ಹಾಗೂ ತರಗತಿಯ ನಿರ್ವಹಣೆಯನ್ನು‌ ಹೊಂದಿತ್ತು. ಇಲ್ಲಿ ಮಕ್ಕಳ ಬೋಧನಾ ವಿಧಾನ ಮತ್ತು ಮಕ್ಕಳಲ್ಲಿ‌ ಕೌಶಲ್ಯ ಅಭಿವೃಧಿ ಮಾಡುವುದು ಮುಂತಾದವುಗಳನ್ನು ಕಲಿಸಿ‌ ಕೊಡಲಾಯಿತು.


ವೇಳಾಪಟ್ಟಿಯ ಪ್ರಕಾರ ಮಕ್ಕಳ ಜಾಗೃತಿಯ ಫೆಸಿಲಿಟರಗಳು ದಿನಕ್ಕೆ ಒಂದು ಗಂಟೆ ತಮಗೆ‌‌ ಮೀಸಲಾದ ಕಲಿಕಾ‌ ಕೇಂದ್ರಗಳಲ್ಲಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಾರೆ.

ಈ ಸಮಯದಲ್ಲಿ ಮಕ್ಕಳು ತಮ್ಮನ್ನು ಸ್ಪೈಸ್ ಮಾದರಿಯ ಪ್ರಕಾರ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಓದುವುದು, ಬರೆಯುವಂತಹ ಪ್ರಾರ್ಥಮಿಕ‌ ಕಾರ್ಯಗಳಲ್ಲದೆ

ಭಾಷಣ, ರಂಗಭೂಮಿ, ಕವನ ವಾಚನ, ನೃತ್ಯ, ಹಾಡುಗಾರಿಕೆ,‌ ಕಲೆ ಮತ್ತು ಕರಕುಶಲತೆ, ಕಥೆ ಹೇಳುವುದು, ಟೇಕ್ವಾಂಡೋ ಮತ್ತು ಕರಾಟೆಯಂತಹ ಸಮರ ಕಲಾ‌ ಪ್ರಕಾರಗಳು, ಮುಂತಾದರಲ್ಲಿ‌ ತೊಡಗಿಕೊಳ್ಳುತ್ತಾರೆ. ಈ ಚಟುವಟಿಕೆಗಳು ಸಾಮಾಜಿಕ,‌ ದೈಹಿಕ, ಬೌದ್ಧಿಕ,‌ ಸೃಜನಶೀಲತೆಯನ್ನು‌ ಗೌರವಿಸುವ ಗುರಿಯನ್ನು ಹೊಂದಿವೆ.


ಕ

ಮಕ್ಕಳ ಜಾಗೃತಿ ಎಲ್ಲಾ ಫೆಸಿಲಿಟರುಗಳು ಮತ್ತು ಸ್ವಯಂಸೇವಕರಿಗೆ ತರಬೇತಿ ಅವಧಿಗಳನ್ನು ನಡೆಸುತ್ತಿರುವುದು

"ನೀವು ಯಾವುದೇ ಸಮಯದಲ್ಲಿ‌ ನಮ್ಮ ಕಲಿಕಾ ಕೇಂದ್ರಕ್ಕೆ‌‌ ಕಾಲಿಟ್ಟರೆ, ವಿದ್ಯಾರ್ಥಿಗಳು‌ ನೆಲದ‌ ಮೇಲೆ‌ ಕೂತು ಮೋಜಿನ ಚಟುವಟಿಕೆಗಳಲ್ಲಿ ಮುಳುಗಿರುವುದು ಮತ್ತು‌ ತಂಡವನ್ನು ನಿರ್ಮಿಸುವಂತಹ ವ್ಯಾಯಾಮಗಳಲ್ಲೊ ಕೆಲಸ ಮಾಡುವುದು ಮಾಡುತ್ತಿರುತ್ತಾರೆ. ಅವರು ಆಟ ಆಡುವಾಗ, ಕಥೆಯನ್ನು ಒಟ್ಟಿಗೆ ಓದುವಾಗ ಅವರಲ್ಲಿಡಗಿರುವ ಗುಪ್ತ‌‌ ಪ್ರತಿಭೆಯನ್ನು‌ ಅನ್ವೇಷಿಸುವಾಗ ಅವರ ಮುಖದಲ್ಲಿನ‌ ಸಂತೋಷವನ್ನು‌ ನೀವು ಗಮನಿಸಬಹುದು" ಎಂದು‌ ಮಕ್ಕಳ‌ ಜಾಗೃತಿಯ ಕಾರ್ಯಕ್ರಮಗಳ ಉಪ‌ ಅಧಿಕಾರಿ ಸುನೈನಾ‌ ಛತ್ರಪತಿ ಹೇಳುತ್ತಾರೆ.


ಮಕ್ಕಳನ್ನು ಮೀರಿದ ಹೂಡಿಕೆ


ಹೆಚ್ಚಿನ ಮಕ್ಕಳು‌ ದುರ್ಬಲ‌ ಸಮುದಾಯಗಳಿಂದ ಬಂದಿರುವವರಾಗಿದ್ದು,‌ ಕೊಳಗೇರಿಗಳಲ್ಲಿ, ನಗರದ ಹೊರವಲಯದಲ್ಲಿ ಸಣ್ಣ ವಾಸಸ್ಥಳಗಳಲ್ಲಿ ವಾಸಿಸುತ್ತಾರೆ. ಬಡತನ, ಸಮರ್ಪಕತೆ, ಕುಟುಂಬದಲ್ಲಿ‌ ಸುಶಿಕ್ಷಿತ ಜನರನ್ನು ಹೊಂದಿಲ್ಲದೆ ಇರುವುದು,‌ ಸಾಮಾನ್ಯ ಆತ್ಮವಿಶ್ವಾಸದ ಕೊರತೆಯಿಂದಾಗಿ ಶಾಲೆಯಲ್ಲಿ ಮುಂದೆ ಬರಲು ಅವರಿಗೆ ಕಷ್ಟವಾಗುತ್ತದೆ.


"ವೈಯಕ್ತಿಕ ಆಘಾತದಿಂದಾಗಿ ಅಸ್ಥಿರವಾದ ಮಾನಸಿಕ ಮತ್ತು‌ ಭಾವನಾತ್ಮಕ ಮನಸ್ಸನ್ನು‌‌ ಹೊಂದಿರುವ ಮಕ್ಕಳನ್ನು ನಾವು ನೋಡಿದ್ದೇವೆ. ಕುಡಿತವನ್ನು ರೂಢಿಸಿಕೊಂಡ‌ ಪಾಲಕರು,‌ ಮನೆಯಲ್ಲಿ ಬೆಂಬಲವಿಲ್ಲದ ವಾತಾವರಣ ಕಂಡುಬರುತ್ತದೆ. ಪೋಷಕರ ಕಾರ್ಯಾಗಾರಗಳನ್ನು ಪರಿಚಯಿಸಲು ನಾವು ನಿರ್ಧರಿಸಿದಾಗ ಇದು ಕಂಡು ಬಂದಿದೆ" ಎಂದು ಸುನೈನಾ ಹೇಳುತ್ತಾರೆ.


ಮಕ್ಕಳ ಜಾಗೃತಿಯು ಪೋಷಕರಿಗೆ ಆವರ್ತಕ ಆಧಾರದ ಮೇಲೆ‌ ಅನೇಕ ಕಾರ್ಯಾಗಾರಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಅಲ್ಲಿ ಪೋಷಕರಿಗೆ ಮಕ್ಕಳನ್ನು ಹೇಗೆ ಪೋಷಿಸಬೇಕು ಎಂಬುದರ ಕುರಿತಾಗಿ ತಿಳಿಸಲಾಗುತ್ತದೆ. ಮನೆಯಲ್ಲಿ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸುವುದು. ಮಕ್ಕಳ ಪ್ರಗತಿಯತ್ತ ಗಮನ ಕೊಡುವುದು ಮತ್ತೆ ಕಾಳಜಿ‌ ಮಾಡುವುದು ಇತ್ಯಾದಿಗಳ‌ ಕುರಿತಾಗಿ ತಿಳಿಸಿ‌‌ ಕೊಡಲಾಗುತ್ತದೆ.


ಜೀವನವನ್ನು ರೂಪಿಸುವುದು


ಬೆಂಗಳೂರಿನ ಸಂತೆಬೀದಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ಹದಿನಾಲ್ಕು ವರ್ಷದ ಸುಧಾ ಆರ್ ಎಂಬ ವಿದ್ಯಾರ್ಥಿನಿಯು ನಾಚಿಕೆ ಸ್ವಭಾವದ ಹಾಗೂ ಏಕಾಂತತೆಯನ್ನು ಬಯಸುವ ಹುಡುಗಿಯಾಗಿದ್ದಳು. ಅವಳು ಶಾಲೆ, ತರಗತಿಗಳಿಗೆ ಹೋಗುವುದನ್ನು ದ್ವೇಷಿಸುತ್ತಿದ್ದಳು. ಯಾವುದೇ ಸ್ನೇಹಿತರನ್ನು ಹೊಂದಿರಲಿಲ್ಲ ಮತ್ತು ಕಲಿಯುವುದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರಲಿಲ್ಲ. 2016ರಲ್ಲಿ ತನ್ನ ಶಾಲೆಯಲ್ಲಿ ಮಕ್ಕಳ ಜಾಗೃತಿಯ ಸ್ಪೈಸ್ ಮಾದರಿಯನ್ನು ಪರಿಚಯಿಸಿದರು ಮತ್ತು ಕ್ಯಾಂಪಸ್ ಒಳಗೆ ಕಲಿಕಾ ಕೇಂದ್ರವನ್ನು‌ ತೆರೆದರು. ತದನಂತರ ಅವಳ ವ್ಯಕ್ತಿತ್ವದಲ್ಲಾದ ಸಂಪೂರ್ಣ ಬದಲಾವಣೆಯನ್ನು‌ ಗಮನಿಸಬಹುದು.


q

ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಈಡೇರಿಸಲು ಮಕ್ಕಳ ಜಾಗೃತಿ ಸಹಾಯ ಮಾಡುತ್ತದೆ.

"ಮಕ್ಕಳ ಜಾಗೃತಿಯ ಕಲಿಕಾ ಕೇಂದ್ರದ ಭಾಗವಾಗಿರುವುದು ನನಗೆ ಸ್ವಾತಂತ್ರ್ಯದ ಅರ್ಥವನ್ನು‌ ನೀಡಿತು. ಆಸಕ್ತಿದಾಯಕ ಚಟುವಟಿಕೆಗಳು ಮತ್ತು‌ ಆಟದಲ್ಲಿ ತೊಡಗಿಸಿಕೊಳ್ಳುವಂತಹ ಈ ಪರಿಕಲ್ಪನೆಯನ್ನು ನಾನು‌ ಇಷ್ಟಪಟ್ಟೆ. ಫೆಸಿಲಿಟರುಗಳು‌ ಬೆಂಬಲ ನೀಡಿದರು. ಯಾವುದೇ ಅಪಹಾಸ್ಯಕ್ಕೊಳಗಾಗುವ ಅಥವಾ ನಿರ್ಣಯಿಸಲ್ಪಡುವ ಭಯವಿಲ್ಲದೆ ನಾನು‌‌ ನಿಜವಾಗಿಯೂ ಇಷ್ಟಪಟ್ಟ ಕೆಲಸಗಳನ್ನು‌‌‌ ಮಾಡಲು‌ ಇದು ನನಗೆ ಅವಕಾಶ ನೀಡಿತು. ಇದು ಜನರಿಗೆ‌ ಪರಿಚಯವಾಗಲು ನಮಗೆ ಸಹಾಯ ಮಾಡಿತು. ನಾನು‌‌ ನಿಧಾನವಾಗಿ ತೆರೆದುಕೊಳ್ಳಲು‌‌ ಆರಂಭಿಸಿದೆ. ಆ ತರಗತಿಗಳಿಗೆ ಹಾಜರಾಗುವ ಸಮಯದಲ್ಲಿ ನನ್ನ‌‌‌ ನೃತ್ಯದ ಕುರಿತು ಅರಿವಾಯಿತು. ಬೆಂಗಳೂರಿನ ಚೌಡಯ್ಯ‌‌ ಸ್ಮಾರಕ‌‌ ಭವನದಲ್ಲಿ 500 ಜನರೆದುರಿಗೆ ನಾನು‌ ನೃತ್ಯ‌‌‌‌ ಪ್ರದರ್ಶಿಸಿದೆ‌" ಎಂದು ಅವರು ಹೇಳುತ್ತಾರೆ.


"ವಿದ್ಯಾರ್ಥಿಗಳ‌ ಆತ್ಮವಿಶ್ವಾಸದ ಮಟ್ಟವನ್ನು‌ ನಾನು ಗಮನಿಸಿದ್ದೇನೆ. ಅವರು ಉತ್ತಮವಾಗಿ ಸಮಸ್ಯೆಯ ಹೇಳಿಕೆಗಳನ್ನು ಹೆಚ್ಚು ವೇಗವಾಗಿ ವಿಶ್ಲೇಷಿಸಲು ಸಾಧ್ಯವಾಯಿತು. ನನ್ನ ತರಗತಿಯಲ್ಲಿ ನಿಧಾನವಾಗಿ ಕಲಿಯುವವರು ಸಹ ಹೆಚ್ಚಿನ ತೊಂದರೆಗಳಿಲ್ಲದೆ ಪರಿಕಲ್ಪನೆಗಳನ್ನು ಗ್ರಹಿಸಬಲ್ಲರು " ಎಂದು 17 ವರ್ಷಗಳಿಂದ ಶಾಲೆಯಲ್ಲಿ ಗಣಿತ ಮತ್ತು‌ ವಿಜ್ಞಾನ ವಿಷಯವನ್ನು‌ ಬೋಧಿಸುತ್ತಿರುವ ಎಚ್.ವಿ.ಪರಿಮಳಾ‌ ಹೇಳುತ್ತಾರೆ.


ಮಕ್ಕಳ ಜಾಗೃತಿಯು ಒಂದು ದಶಕದಿಂದ ಸರ್ಕಾರಿ ಶಾಲೆಗಳಲ್ಲಿ ಸ್ಪೈಸ್ ಮಾದರಿಯನ್ನು ಸಾಂಸ್ಥೀಕರಣಗೊಳಿಸುವ ಮೂಲಕ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಈ ಸಂಸ್ಥೆಯು 2018 ರಲ್ಲಿ 6 ರಿಂದ 14 ವಯಸ್ಸಿನ ಸುಮಾರು ‌9,400 ಮಕ್ಕಳನ್ನು ತಲುಪಿದೆ. ಈ ಸಮಯದಲ್ಲಿ 15,000 ಗಂಟೆಗಳ ಸಮಗ್ರ ಕಲಿಕೆಯನ್ನು‌ ನೀಡುವಲ್ಲಿ 30 ಕ್ಕೂ ಹೆಚ್ಚು ಫೆಸಿಲಿಟರಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ‌.


q

ಮಕ್ಕಳ ಜಾಗೃತಿಯ ತಂಡ

ಈ ಸಂಸ್ಥೆಯು ಟೇಕ್ವಾಂಡೋ ಅಕಾಡೆಮಿ, ಫ್ಲೈಯಿಂಗ್ ಫೀಟ್, ಹಿಪ್ಪೋ ಕ್ಯಾಂಪಸ್ ಗಳಂತಹ ಅನೇಕ‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮತ್ತು ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ‌ ಮಾಡಲು ಎದುರು ನೋಡುತ್ತಿದೆ. ಸಂಸ್ಥೆಗೆ ಹೆಚ್ಚಿನ ದೇಣಿಗೆಯು ವಿಪ್ರೋ, ಜನರಲ್ ಎಲೆಕ್ಟ್ರಿಕ್ ಮತ್ತು ಟಾರ್ಗೆಟ್ ನಂತಹ ಕಾರ್ಪೋರೆಟ್ ಸಂಸ್ಥೆಗಳಿಂದ ‌ಬಂತು. ಅಲ್ಲದೇ ಇದು ವೈಯಕ್ತಿಕ ಕೊಡುಗೆದಾರರಿಂದ, ಕ್ರೌಡ್ ಸೋರ್ಸಿಂಗ್‌ ನಂತಹ‌ ವೇದಿಕೆಯ ಮೂಲಕವು ದೇಣಿಗೆ ಪಡೆದಿದೆ.