ಎಲ್ಲ ವಹಿವಾಟುಗಳು ಎನ್‌ಪಿಸಿಐ, ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಸುರಕ್ಷಿತವಾಗಿದೆ: ಗೂಗಲ್‌ ಪೇ

ಗೂಗಲ್ ಪೇ ತನ್ನ ವೇದಿಕೆಯ ಮೂಲಕ ಮಾಡಿದ ಎಲ್ಲಾ ವಹಿವಾಟುಗಳು ರಿಸರ್ವ್ ಬ್ಯಾಂಕ್ ಮತ್ತು ಭಾರತದ ರಾಷ್ಟ್ರೀಯ ಪಾವತಿ ನಿಗಮ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ತಿಳಿಸಲಾದ ಪರಿಹಾರ ಪ್ರಕ್ರಿಯೆಗಳಿಂದ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಎಲ್ಲ ವಹಿವಾಟುಗಳು ಎನ್‌ಪಿಸಿಐ, ಆರ್‌ಬಿಐ ಮಾರ್ಗಸೂಚಿಗಳ ಅಡಿಯಲ್ಲಿ ಸುರಕ್ಷಿತವಾಗಿದೆ: ಗೂಗಲ್‌ ಪೇ

Monday June 29, 2020,

1 min Read

ಗೂಗಲ್‌ ಪೇ ಆ್ಯಪ್ ಅನಧಿಕೃತವಾಗಿರುವುದರಿಂದ, ಅದರಲ್ಲಿ ಮಾಡಿದ ಹಣ ವರ್ಗಾವಣೆ ಕಾನೂನಿನ ಅಡಿಯ ಪರಿಹಾರಗಳಿಗೆ ಒಳಗೊಳ್ಳುವುದಿಲ್ಲ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣವನ್ನು ಗೂಗಲ್‌ ನೀಡಿದೆ.


“ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ವದಂತಿಗಳು ಗೂಗಲ್‌ ಪೇ ಮುಖಾಂತರ ಹಣ ಕಳುಹಿಸುವಾಗ ಉಂಟಾಗುವ ಸಮಸ್ಯೆಗಳಿಗೆ ಕಾನೂನು ಪರಿಹಾರ ಸಿಗುವುದಿಲ್ಲ, ಆ್ಯಪ್ ಅನಧಿಕೃತವಾಗಿರುವುದೇ ಈ ಸಮಸ್ಯೆಗೆ ಕಾರಣ ಎಂಬ ತಪ್ಪು ಮಾಹಿತಿಯನ್ನು ಬಿತ್ತುತ್ತಿವೆ. ಇದು ತಪ್ಪು, ಇದನ್ನು ಎನ್‌ಪಿಸಿಐ ಜಾಲತಾಣದಲ್ಲಿ ಖಚಿತಪಡಿಸಿಕೊಳ್ಳಬಹುದಾಗಿದೆ,” ಎಂದು ಗೂಗಲ್‌ನ ವಕ್ತಾರರು ತಿಳಿಸಿದ್ದಾರೆ.

q


ಇವರು ಹೇಳುವಂತೆ, ಗೂಗಲ್‌ ಪೇ ಆ್ಯಪ್ ಅನಧಿಕೃತವೆಂದು ಆರ್‌ಬಿಐ ಎಲ್ಲೂ ಹೇಳಿಕೆ ನೀಡಿಲ್ಲ ಅಥವಾ ಲಿಖತವಾಗಿ ದೆಹಲಿ ಉಚ್ಛ ನ್ಯಾಯಾಲಯಕ್ಕೆ ತಿಳಿಸಿಲ್ಲ.


ಗೂಗಲ್‌ ಪೇ ಒಂದು ಮಧ್ಯಸ್ಥ ಪಾಲುದಾರಿಕಾ ಆ್ಯಪ್ ಆಗಿದ್ದು, ಅದು ಯಾವುದೇ ರೀತಿಯ ಪಾವತಿ ವ್ಯವಸ್ಥೆಯನ್ನು ಹೊಂದಿಲ್ಲ ಎಂದು ಆರ್‌ಬಿಐ ದೆಹಲಿ ಉಚ್ಛ ನ್ಯಾಯಾಲಯಕ್ಕೆ ಈ ತಿಂಗಳ ಆರಂಭದಲ್ಲಿ ತಿಳಿಸಿತ್ತು.

ಹಾಗಾಗಿ ಅದರ ಕಾರ್ಯಾಚರಣೆಗಳು 2007ರ ಪಾವತಿ ಮತ್ತು ಬಾಕಿತೀರಿಕೆ ವ್ಯವಸ್ಥೆಯ ಕಾಯ್ದೆಯನ್ನು ಉಲ್ಲಂಘಿಸುವುದಿಲ್ಲ ಎಂದು ಆರ್‌ಬಿಐ, ಮುಖ್ಯ ನ್ಯಾಯಾಧೀಶ ಡಿ ಎನ್‌ ಪಟೇಲ್‌ ಮತ್ತು ನ್ಯಾಯಾಧೀಶ ಪ್ರತೀಕ ಜೈನ್‌ ಅವರಿಗೆ ಹೇಳಿದೆ.


“ಗೂಗಲ್‌ ಪೇ ಕಾನೂನಿನ ಚೌಕಟ್ಟಿನ ಒಳಗೆ ಕಾರ್ಯನಿರ್ವಹಿಸುತ್ತದೆ. ಯುಪಿಐ ಮೂಲಕ ಪಾಲುದಾರ ಬ್ಯಾಂಕ್‌ಗಳಿಗೆ ಹಣ ವರ್ಗಾವಣೆ ಮಾಡುವ ತಾಂತ್ರಿಕ ಸೇವೆಯನ್ನು ನೀಡುವ ಮೂಲಕ ಗೂಗಲ್‌ ಪೇ ಕೆಲಸ ಮಾಡುತ್ತದೆ. ದೇಶದಲ್ಲಿರುವ ಯುಪಿಐ ಆ್ಯಪ್ಗಳನ್ನು ‘ಥರ್ಡ್‌ ಪಾರ್ಟಿ’ ಆ್ಯಪ್ಗಳೆಂದು ವಿಂಗಡಿಸಲಾಗಿದ್ದು, ಅವುಗಳು ‘ಪಾವತಿ ಘಟಕದ ನಿರ್ವಾಹಕ’ರಾಗುವ ಅವಶ್ಯಕತೆ ಇರುವುದಿಲ್ಲ,” ಎಂದು ಗೂಗಲ್‌ನ ವಕ್ತಾರರು ತಿಳಿಸಿದರು.


ಗೂಗಲ್‌ ಪೇ ಮೂಲಕ ಮಾಡುವ ಪ್ರತಿ ವಹಿವಾಟು ಮಾರ್ಗಸೂಚಿಯಲ್ಲಿರುವ ಪರಿಹಾರ ಪ್ರಕ್ರಿಯೆಗಳಿಂದ ಸಂಪೂರ್ಣವಾಗಿ ರಕ್ಷಿಸಲ್ಪಟ್ಟಿದೆ ಎಂದರು ಅವರು.


"ಗೂಗಲ್ ಪೇ ಮೂಲಕ ಮಾಡಿದ ಎಲ್ಲಾ ವಹಿವಾಟುಗಳನ್ನು ಆರ್‌ಬಿಐ/ಎನ್‌ಪಿಸಿಐನ ಅನ್ವಯವಾಗುವ ಮಾರ್ಗಸೂಚಿಗಳಿಂದ ರೂಪಿಸಲಾದ ಪರಿಹಾರ ಪ್ರಕ್ರಿಯೆಗಳಿಂದ ಸಂಪೂರ್ಣವಾಗಿ ರಕ್ಷಿಸಲಾಗಿದೆ, ಮತ್ತು ಬಳಕೆದಾರರು ಯಾವುದೇ ಸಮಸ್ಯೆಗಾಗಿ ಗೂಗಲ್ ಪೇನ 24/7 ಗ್ರಾಹಕ ಆರೈಕೆಯನ್ನು ಸಹಾಯಕ್ಕಾಗಿ ಸಂಪರ್ಕಿಸಬಹುದು" ಎಂದು ವಕ್ತಾರರು ಹೇಳಿದರು.