ಇವರು ಐಟಿ ಕೆಲಸ ಬಿಟ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮನೆಯ ಅಲಂಕಾರಿಕ ವಸ್ತು ಮತ್ತು ಬ್ಯಾಗ್‌ಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ

ಅಮಿತಾ ದೇಶಪಾಂಡೆ ಮತ್ತು ನಂದನ್‌ ಭಟ್‌ರವರಿಂದ 2013 ರಲ್ಲಿ ಸ್ಥಾಪನೆಯಾದ ಪುಣೆ ಮೂಲದ ಆರೋಹಣ ಇಕೋಸೋಶಿಯಲ್‌ ಸಂಸ್ಥೆಯು ಬುಡಕಟ್ಟು ಜನರಿಗೆ ಜೀವನೋಪಾಯ ಒದಗಿಸುವ ಜತೆಗೆ ದೇಶದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದೆ.

ಇವರು ಐಟಿ ಕೆಲಸ ಬಿಟ್ಟು ಪ್ಲಾಸ್ಟಿಕ್‌ ತ್ಯಾಜ್ಯವನ್ನು ಮನೆಯ ಅಲಂಕಾರಿಕ ವಸ್ತು ಮತ್ತು ಬ್ಯಾಗ್‌ಗಳನ್ನಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದ್ದಾರೆ

Sunday July 21, 2019,

4 min Read

Q

ಆರೋಹಣ ಇಕೋಸೋಶಿಯಲ್‌ನ ಸಂಸ್ಥಾಪಕರಾದ ನಂದನ್‌ ಮತ್ತು ಅಮಿತಾ ದೇಶಪಾಂಡೆ

ಇತರೆಲ್ಲ ವಸ್ತುಗಳಂತೆ ಪ್ಲಾಸ್ಟಿಕ್‌ಗೆ ತನ್ನದೇ ಆದ ಮೌಲ್ಯವಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ವರದಿಯ ಪ್ರಕಾರ ದೇಶದಲ್ಲಿ ಶೇಕಡಾ 60ರಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಮಾತ್ರ ಮರುಬಳಕೆಯಾಗುತ್ತಿದೆ. ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ಗಳನ್ನು ಅಂದರೆ ಶಾಂಪೂ ಬಾಟಲ್‌ಗಳು ಮತ್ತು ಪಾಲಿಥಿನ್‌ ಟ್ಯಾರಿಪ್ಯಾಥ್ಲೇಟ್‌ನಿಂದ ತಯಾರಿಸಿದ ನೀರಿನ ಬಾಟಲ್‌ಗಳನ್ನು ತಿಪ್ಪೆ ಆಯುವವರು ಆರಿಸಿಕೊಂಡು ಹೋಗಿ ಪುನರ್ಬಳಕೆ ಮಾಡುವ ಕಂಪೆನಿಗಳಿಗೆ ಯೋಗ್ಯ ದರದಲ್ಲಿ ಮಾರಾಟ ಮಾಡುತ್ತಾರೆ. ಆದರೆ ರಸ್ತೆ ಬದಿಗಳಲ್ಲಿ ಮತ್ತು ಕಸದ ತೊಟ್ಟಿಗಳ ಬಳಿ ಹೇರಳವಾಗಿ ಬಿದ್ದಿರುವ ಮರುಬಳಕೆಗೆ ಯೋಗ್ಯವಲ್ಲದ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್‌ ಚೀಲಗಳು ಮತ್ತು ಪ್ಯಾಕಿಂಗ್‌ ಕವರ್‌ಗಳಿಂದ ಸಮಸ್ಯೆ ಉಂಟಾಗುತ್ತಿದೆ.


ಈ ಸಮಸ್ಯೆಯನ್ನು ನಿವಾರಿಸುವ ದೃಷ್ಟಿಯಿಂದ ಪುಣೆ ಮೂಲದ ಆರೋಹಣ ಇಕೋಸೋಶಿಯಲ್‌ ಸಂಸ್ಥೆಯು ಜೈವಿಕ ವಿಘಟನೆ ಹೊಂದದ ಮತ್ತು ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್‌ ಬಳಸಿ ಬಟ್ಟೆಯನ್ನು ತಯಾರಿಸುವ ಕೆಲಸವನ್ನು ಪ್ರಾರಂಭಿಸಿದೆ. ಕಂಪೆನಿಯ ಕುಶಲಕರ್ಮಿಗಳು ಮತ್ತು ಕಾರ್ಮಿಕರು ಕೈ ಮಗ್ಗ ಹಾಗೂ ಸಾಂಪ್ರದಾಯಿಕ ಚರಕದ ಮೂಲಕ ಬಟ್ಟೆಯನ್ನು ನೇಯ್ದು ಕೈ ಚೀಲಗಳನ್ನು, ಕರಕುಶಲ ಸಾಮಗ್ರಿಗಳನ್ನು ಮತ್ತು ಮನೆಯ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಬಹು ಮುಖ್ಯವಾಗಿ ಈ ಸಂಸ್ಥೆಯು ಗ್ರಾಮೀಣ ಪ್ರದೇಶದ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗದ ಜತೆಗೆ ಯೋಗ್ಯ ಸಂಬಳವನ್ನು ನೀಡುತ್ತಿದೆ


ಶಾಸ್ತ್ರೀಯ ಸಂಗೀತದಲ್ಲಿ ಸ್ವರಗಳ ಏರಿಕೆಯೇ "ಆರೋಹಣ" . ಅದೇ ರೀತಿ ಸಮಾಜದಲ್ಲಿ ಜನರನ್ನು ಕೆಳಸ್ತರದಿಂದ ಮೇಲಕ್ಕೆ ಎತ್ತಿದಾಗ ಮಾತ್ರ ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸಲು ಸಾಧ್ಯ. ಐಟಿ ವೃತ್ತಿಪರರಾಗಿದ್ದ ಅಮಿತ್‌ ದೇಶಪಾಂಡೆ ಮತ್ತು ನಂದನ್‌ ಭಟ್‌ ಎಂಬುವವರು ಇದೇ ಆಶಯದೊಂದಿಗೆ 2013ರಲ್ಲಿ ಸ್ಥಾಪಿಸಿದ ಸಂಸ್ಥೆಯೇ "ಆರೋಹಣ".


ಕಾರ್ಪೊರೇಟ್‌ ಜೀವನಕ್ಕೆ ವಿದಾಯ


ಅಮಿತಾ ಮತ್ತು ನಂದನ್‌ರವರು ಸಹ್ಯಾದ್ರಿ ಶ್ರೇಣಿಯಲ್ಲಿರುವ ಹರಿಶ್ಚಂದ್ರಘಡಕ್ಕೆ(ಮಹಾರಾಷ್ಟ್ರ) ಟ್ರೆಕ್ಕಿಂಗ್‌ಗೆ ಹೋದಾಗ ಪರಸ್ಪರ ಭೇಟಿಯಾಗುತ್ತಾರೆ, ದೇಶದ ಪ್ರಾಚೀನ ಕಾಲದ ಟ್ರೆಕ್ಕಿಂಗ್ ತಾಣದಲ್ಲಿ ಅಸಂಖ್ಯಾತ ಪ್ಲಾಸ್ಟಿಕ್‌ ತ್ಯಾಜ್ಯಗಳನ್ನು ಎಸೆದು ಅನೇಕ ಸಸ್ಯ ಮತ್ತು ಪ್ರಾಣಿ ಸಂಕುಲಕ್ಕೆ ಹಾನಿಯುಂಟು ಮಾಡಿರುವುದು ಇವರ ಗಮನಕ್ಕೆ ಬಂದು ಬಹಳ ಅಘಾತವುಂಟಾಗುತ್ತದೆ.


ಈ ಬದಲಾವಣೆಯ ಯೋಜನೆಯತ್ತ ಕಾಲಿಡುವ ಮುನ್ನ ನಂದನ್‌ರವರು ಸೋನಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಮಿತಾರವರು ಕೆಪಿಐಟಿನ ಉದ್ಯೋಗಿಯಾಗಿದ್ದರು. ಈ ಸಮಯದಲ್ಲಿ ಅಮಿತಾರವರಿಗೆ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವತ್ತ ಒಲವು ಮೂಡುತ್ತದೆ. ನಂತರ ವೃತ್ತಿಯನ್ನು ತ್ಯಜಿಸಿ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಸೂಕ್ತ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ತದ ನಂತರ ಪುನಃ ನಂದನ್‌ರವರ ಜತೆ ಸೇರಿ ಆರೋಹಣ ಇಕೋಸೋಶಿಯಲ್‌ ಸಂಸ್ಥೆಯನ್ನು ಆರಂಭಿಸುತ್ತಾರೆ.


ಆರೋಹಣ ಸಂಸ್ಥೆಯು ಪ್ಲಾಸ್ಟಿಕ್‌ ನೇಯುವ ಉದ್ದೇಶದಿಂದ ಪ್ರಾರಂಭವಾಗಿರಲಿಲ್ಲ. ಇವರಿಬ್ಬರೂ ಮೊದಲ ಎರಡು ವರ್ಷಗಳ ಕಾಲ ದೇಶಾದ್ಯಂತ ಸಂಚರಿಸಿ ವಿವಿಧ ಬಗೆಯ ಪ್ಲಾಸ್ಟಿಕ್‌ನ ಮಹತ್ವದ ಕುರಿತು ತಿಳಿದುಕೊಂಡರು. ಅಷ್ಟೇ ಅಲ್ಲದೇ ನಗರ ಪ್ರದೇಶಗಳಲ್ಲಿ ದಿನ ನಿತ್ಯ ನಾಯಿ ಕೊಡೆಗಳಂತೆ ಹೊಸ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದರೂ ಗ್ರಾಮೀಣ ವಿಭಾಗದ ಜನರಿಗೆ ಕೃಷಿಯೇತರ ಉದ್ಯೋಗದ ಕೊರತೆಯಿರುವುದು ಇವರ ಗಮನಕ್ಕೆ ಬರುತ್ತದೆ.


ಪ್ಲಾಸ್ಟಿಕ್‌ ಉತ್ಪನ್ನಗಳು


ಕ

ಆರೋಹಣ ಇಕೋಸೋಶಿಯಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಗ್ರಾಮೀಣ ಪ್ರದೇಶದ ಮಹಿಳೆ

2015ರಲ್ಲಿ ಪ್ರಾರಂಭವಾದ ಆರೋಹಣ ಸಂಸ್ಥೆಯು ಪ್ಲಾಸ್ಟಿಕ್‌ ನೇಯ್ಗೆ ಪ್ರಾರಂಭಿಸುವ ಮುನ್ನ ಅದರ ಸಹ ಸಂಸ್ಥಾಪಕರು ಎರಡು ಅಂಶಗಳ ಕಡೆ ಗಮನಹರಿಸಲು ನಿರ್ಧರಿಸಿದರು. ಇತರ ಕಂಪೆನಿಗಳಿಗಿಂತ ಭಿನ್ನವಾಗಿದ್ದು, ತಂತ್ರಜ್ಞಾನ ಮತ್ತು ಯಾಂತ್ರಿಕ ಕೊರತೆಯಿದ್ದರೂ ದೈಹಿಕ ಶ್ರಮದ ಮೂಲಕ ಉತ್ಪಾದನೆ ನಡೆಸುತ್ತಿರುವ ಹೆಮ್ಮೆ ಆರೋಹಣ ಸಂಸ್ಥೆಗಿದೆ. ಇದರ ಸಂಸ್ಥಾಪಕರು ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮೀಣ ಪ್ರದೇಶದ ಜನರಿಕೆ ಕೈ ಮಗ್ಗದ ಕಲೆಯನ್ನು ಕಲಿಸಿದ್ದಾರೆ – ಈ ಕಲೆಯನ್ನು ಕರಗತ ಮಾಡಿಕೊಳ್ಳಲು ವರ್ಷಾನುಗಟ್ಟಲೆ ಸಮಯ ಹಿಡಿಯುವ ಹಿನ್ನೆಲೆಯಲ್ಲಿ ಇದು ಇವರ ಅತ್ಯುತ್ತಮ ಸಾಧನೆಯಾಗಿದೆ.


“ಪ್ಲಾಸ್ಟಿಕ್‌ ನೇಯ್ಗೆ ಮಾಡುವುದಕ್ಕಿಂತ ಬಟ್ಟೆ ನೇಯ್ಗೆ ತುಂಬಾ ಸುಲಭವಾಗಿದೆ, ಇಲ್ಲಿ ಎಲ್ಲವನ್ನೂ ದೈಹಿಕ ಶ್ರಮದ ಮೂಲಕವೇ ಮಾಡಬೇಕಾಗಿರುವುದರಿಂದ ತುಂಬಾ ಸಮಯ ವ್ಯಯ ಮಾಡಬೇಕಾಗುತ್ತದೆ” ಎಂದು ಅಮಿತಾರವರು ಹೇಳುತ್ತಾರೆ.


ಅವರ ಒಂದು ಘಟಕವು ಅಮಿತಾರವರ ಹುಟ್ಟೂರಾದ ದಾದ್ರ ಮತ್ತು ನಗರ ಹಾವೇಲಿಯಲ್ಲಿದೆ. ಇವರು ಅಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ಘಟಕವನ್ನು ಸ್ಥಾಪಿಸಿ 13ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದ್ದಾರೆ. ಈ ಉದ್ಯೋಗಕ್ಕೆ ಸೇರಿಕೊಂಡವರು ಘಟಕದ ಅಕ್ಕ ಪಕ್ಕದಲ್ಲಿರುವ ಮಾವಿನ ತೋಪುಗಳಲ್ಲಿ ಜೀವನ ನಡೆಸುತ್ತಿರುವ ಮಹಿಳೆಯರೇ ಆಗಿದ್ದಾರೆ. ಅವರಿಗೆ ತಿಂಗಳಿಗೆ 6,000 ದಿಂದ 15,000 ರೂ ವರೆಗೆ ವೇತನವನ್ನು ನೀಡಲಾಗುತ್ತಿದೆ. ಅವರ ಕೆಲಸಕ್ಕನುಗುಣವಾಗಿ ವೇತನ ಕೊಡದೇ ಒಂದು ನಿರ್ದಿಷ್ಟ ವೇತನ ನಿಗದಿಪಡಿಸಲಾಗುತ್ತಿದೆ.


“ಜೀವನೋಪಾಯಕ್ಕೆ ಪರ್ಯಾಯ ಮಾರ್ಗ ಇಲ್ಲದಂತಹ ಬುಡಕಟ್ಟು ಪ್ರದೇಶದಲ್ಲಿ ನಾವಿದ್ದೇವೆ. ಇಲ್ಲಿ ವಾಸವಾಗಿರುವ ಜನರು ಮುಂಗಾರು ಬೆಳೆಯನ್ನೇ ಅವಲಂಬಿಸಿದ್ದು ಅವರ ಚಿಕ್ಕ ಚಿಕ್ಕ ಭೂಮಿಯಲ್ಲಿ ನೀರಿನ ಕೊರತೆಯಿಂದಾಗಿ ವರ್ಷದಲ್ಲಿ ಒಂದು ಬೆಳೆಯನ್ನು ಮಾತ್ರ ತೆಗೆಯಬಹುದಾಗಿದೆ” ಎಂದು ನಂದನ್‌ರವರು ಹೇಳುತ್ತಾರೆ.


ಸಾಮಾಜಿಕ ಉದ್ಯಮವು ತ್ಯಾಜ್ಯವನ್ನು ಸಂಗ್ರಹಿಸುವ ಎನ್‌ಜಿಓಗಳೊಂದಿಗೆ ಸೇರಿಕೊಂಡು ಪ್ಲಾಸ್ಟಿಕ್ ಚೀಲಗಳನ್ನು ಒಟ್ಟುಗೂಡಿಸುತ್ತಿದೆ. ಪ್ಲಾಸ್ಟಿಕ್‌ ಚೀಲಗಳನ್ನು ಮೊದಲು ಚೆನ್ನಾಗಿ ತೊಳೆದು ಬಿಸಿಲಲ್ಲಿ ಒಣಗಿಸಲಾಗುತ್ತದೆ. ನಂತರ ಇವುಗಳನ್ನು ಪಟ್ಟಿಗಳನ್ನಾಗಿ ಕತ್ತರಿಸಿ ಚರಕದ ಮೂಲಕ ತಿರುಗಿಸಲಾಗುತ್ತದೆ. ಲಭ್ಯವಿರುವ ತ್ಯಾಜ್ಯಗಳ ಆಧಾರದಮೇಲೆ ಆರೋಹಣ ಸಂಸ್ಥೆಯು ವಿನ್ಯಾಸವನ್ನು ರೂಪಿಸುತ್ತದೆ.


ಕೊನೆಯಲ್ಲಿ ಕೈ ಮಗ್ಗವನ್ನು ಬಳಸಿಕೊಂಡು ಪ್ಲಾಸ್ಟಿಕ್‌ ನೂಲಿನಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ. ಪ್ಲಾಸ್ಟಿಕ್‌ನ್ನು ನೂಲನ್ನಾಗಿ ಪರಿವರ್ತಿಸಿ ಅದನ್ನು ನೇಯ್ದ ನಂತರ ಅದನ್ನು ಪುಣೆ ಕಾರ್ಯಗಾರಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಉತ್ಪನ್ನದ ವಿನ್ಯಾಸ ರೂಪಿಸಿ ಉತ್ಪನ್ನವನ್ನು ಸಿದ್ದಗೊಳಿಸಲಾಗುತ್ತದೆ. 50 ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಗಳು ಸೇರಿ ಆರೋಹಣದ ಒಂದು ಬೀಚ್ ಬ್ಯಾಗ್ ಆಗುತ್ತದೆ, ಸಂಸ್ಥಾಪಕರ ಅಂದಾಜಿನ ಪ್ರಕಾರ 2015 ಆಗಸ್ಟ್ ನಿಂದ ಇಲ್ಲಿಯವರೆಗೆ 7,76,500 ಬ್ಯಾಗ್ ಗಳನ್ನು ಕಚ್ಚಾವಸ್ತುವಾಗಿ ಬಳಸಿದ್ದಾರೆ.


ಚಿಲ್ಲರೆ ವ್ಯಾಪಾರವಷ್ಟೇ ಅಲ್ಲದೇ ಪ್ರದರ್ಶನ ಮೇಳಗಳ ಮೂಲಕವೂ ಇವುಗಳನ್ನು ಮಾರಾಟ ಮಾಡಲಾಗುತ್ತದೆ. ಆರೋಹಣ ಸಂಸ್ಥೆಯು ಟೆಡ್‌ಎಕ್ಸ್, ಕುವೈತ್‌, ಎಲ್‌ಓರಿಯಲ್‌ ನಂತಹ ಪ್ರತಿಷ್ಠಿತ ವಾಣಿಜ್ಯ ಕಂಪನಿಗಳಿಂದ ಆರ್ಡರ್‌ಗಳನ್ನು ಸ್ವೀಕರಿಸುತ್ತಿದೆ, 2018 ರಲ್ಲಿ, 10,000 ಕ್ಕಿಂತ ಹೆಚ್ಚು ಉತ್ಪನ್ನಗಳನ್ನು ಸಂಸ್ಥೆಯು ಮಾರಾಟ ಮಾಡಿದೆ.


ಕ

ಆರೋಹಣ ಸಂಸ್ಥೆಯ ಉತ್ಪನ್ನಗಳಲ್ಲಿ ಕೆಲವು ಫೈಲ್‌ ಕವರ್‌ಗಳು, ಮನೆಯ ಅಲಂಕಾರಿಕ ವಸ್ತುಗಳು ಚೀಲಗಳು ಮತ್ತು ಯೋಗ ಮಾಡಲು ಬಳಸುವ ಚಾಪೆಗಳನ್ನೊಳಗೊಂಡಿದೆ.

ಆರೋಹಣ ಸಂಸ್ಥೆಯು ಏಕಸ್ವಾಮ್ಯತೆಯನ್ನು ಹೊಂದಿದ್ದು, ತನ್ನ ಪ್ರಥಮ ವರ್ಷದಲ್ಲಿ 14 ಲಕ್ಷ ರೂ. ಬೆಲೆಯ ಉತ್ಪನ್ನವನ್ನು ಮಾರಾಟ ಮಾಡಿದೆ ಮತ್ತು ಸದ್ಯ 51 ಲಕ್ಷ ರೂ. ವ್ಯವಹಾರವನ್ನು ಹೊಂದಿದೆ. 2019 ರಲ್ಲಿ ತನ್ನ ಮಾರಾಟವನ್ನು ದ್ವಿಗುಣಗೊಳಿಸಿದ್ದು, ಸಂಸ್ಥೆಯು ಅಂತರಾಷ್ಟ್ರೀಯ ಯೋಜನೆಗಳ ಸಹಾಯ ಪಡೆದಿದೆ ಮತ್ತು ಇಲ್ಲಿಯವರೆಗೆ ಯಾವುದೇ ಬಾಹ್ಯ ದೇಣಿಗೆ ಅಥವಾ ಹೂಡಿಕೆಯನ್ನು ಸಂಗ್ರಹಿಸಿಲ್ಲ.


ಆರೋಹಣವು ಸಾಮಾಜಿಕ ಉದ್ಯಮವಾಗಿ ಗುರುತಿಸಿಕೊಂಡಿದೆ - ಎನ್‌ಜಿಓಗಳ ನಿಯಮಗಳಿಗೆ ಒಳಪಡುವಂತಹ ದೇಣಿಗೆಯನ್ನು ಮಾತ್ರ ಸ್ವೀಕರಿಸುತ್ತಿದ್ದು, ಇತರೆಲ್ಲ ಲಾಭದಾಯಕ ಕಂಪೆನಿಗಳಂತೆ ಹೆಚ್ಚಿನ ಮಟ್ಟದಲ್ಲಿ ಹಣ ಸಿಗದೇ ಇರುವುದರಿಂದ ಹೂಡಿಕೆದಾರರಿಂದ ಹಣ ಹೊಂದಿಸುವುದು ಕಷ್ಟವಾಗುತ್ತಿದೆ.


“ನಾವು ಕಾರ್ಪೊರೇಟ್‌ ಹಿನ್ನೆಲೆಯಿಂದ ಬಂದವರಾಗಿದ್ದು ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿದ್ದೇವೆ ಮತ್ತು ಮಾರುಕಟ್ಟೆಯಲ್ಲಿ ಯೋಗ್ಯ ಬೆಂಬಲ ಸಿಗಲಿದೆ ಎನ್ನುವುದನ್ನು ತಿಳಿದಿದ್ದೇವೆ” ಎಂದು ನಂದನ್‌ರವರು ಹೇಳುತ್ತಾರೆ


ಭವಿಷ್ಯದ ಯೋಜನೆ


ಆರೋಹಣ ಸಂಸ್ಥೆಯು ಪುಣೆಯ ಇನ್ನೊಂದು ಹಳ್ಳಿಯಲ್ಲಿ ಘಟಕವನ್ನು ತೆರೆಯಲು ಯೋಚಿಸಿದೆ. ಈ ವರ್ಷದ ಅಂತ್ಯದೊಳಗೆ ಘಟಕವನ್ನು ಸ್ಥಾಪಿಸುವ ಗುರಿ ಸಂಸ್ಥಾಪಕರದ್ದಾಗಿದೆ. ಸಂಸ್ಥೆಯ ಕಾರ್ಯಚಟುವಟಿಕೆಯ ಬಗ್ಗೆ ಆಸಕ್ತಿ ಇರುವವರಿಗೆ ಭೇಟಿ ನೀಡಲು ಕೇಂದ್ರವನ್ನು ಸ್ಥಾಪಿಸಲಾಗುತ್ತದೆ, ಮುಂದಿನ ದಿನಗಳಲ್ಲಿ ಸಂಸ್ಥೆಯ ವತಿಯಿಂದ ಕಾರ್ಯಗಾರ ಮತ್ತು ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನು ರೂಪಿಸಲಾಗಿದೆ.


ಪ್ಲಾಸ್ಟಿಕ್‌ ಬಟ್ಟೆಗಳು ಮತ್ತು ಇತ್ತೀಚೆಗೆ ಬಿಡುಗಡೆಯಾಗಿರುವ ಮನೆಯ ಅಲಂಕಾರಿಕ ವಸ್ತುಗಳ ಕುರಿತು ಹೊಸ ಯೋಚನೆಯ ಮೂಲಕ ಉತ್ಪನ್ನಗಳನ್ನು ತಯಾರಿಸಲು ಅಮಿತಾ ಮತ್ತು ನಂದನ್‌ರವರು ಮಾರುಕಟ್ಟೆಯಲ್ಲಿ ನಿರಂತರವಾಗಿ ಕೆಲಸಮಾಡುತ್ತಿದ್ದಾರೆ. ಆರೋಹಣ ಸಂಸ್ಥೆಯು ನಿರಂತರವಾಗಿ ಕಾರ್ಯಗಾರ ನಡೆಸುತ್ತಿದೆ ಮತ್ತು ಕೃಷಿ ಮಾರುಕಟ್ಟೆ ವಲಯಗಳಲ್ಲಿ ತೊಡಗಿಸಿಕೊಂಡಿದೆ. ಆದಾಗ್ಯೂ, ಪ್ರದರ್ಶನ ಮಳಿಗೆಗಳಿಗೆ ಆಗಮಿಸುವ ಗ್ರಾಹಕರಿಗೆ ಪ್ಲಾಸ್ಟಿಕ್‌ ಬಳಕೆ ಮಾಡದಿರರಲು ಪ್ರೋತ್ಸಾಹಿಸುವ ಕೆಲಸವನ್ನು ಅಮಿತಾ ಮತ್ತು ನಂದನ್‌ರವರು ಮಾಡುತ್ತಿದ್ದಾರೆ.


“ನಾಗರಿಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಮತ್ತು ಸರ್ಕಾರ ಶಿಸ್ತಿನ ಕ್ರಮ ಕೈಗೊಳ್ಳಬೇಕು” ಎನ್ನುವ ಅಭಿಪ್ರಾಯ ಅಮಿತಾರವರದಾಗಿದೆ.


ಪ್ಲಾಸ್ಟಿಕ್‌ ಪ್ರತ್ಯೇಕಗೊಳಿಸುವ ವ್ಯವಸ್ಥೆಯ ಕೊರತೆಯೇ ದೇಶದ ದೊಡ್ಡ ಸಮಸ್ಯೆಯಾಗಿದೆ. ಉದಾಹರಣೆಗೆ, ಆಹಾರದ ತ್ಯಾಜ್ಯದೊಂದಿಗೆ ಬೆರೆತಿರುವ ಪ್ಲಾಸ್ಟಿಕ್‌ನ್ನು ಮರುಬಳಕೆ ಮಾಡಲು ಸಾಧ್ಯವಿಲ್ಲ. “ರೆಫ್ಯೂಸ್, ರೆಡ್ಯೂಸ್‌, ರೀಯೂಸ್‌ ಎಂಡ್‌ ರೀಸೈಕಲ್‌” ಧ್ಯೇಯದಿಂದ ಪ್ಲಾಸ್ಟಿಕ್‌ ನಿಯಂತ್ರಣ ಸಾಧ್ಯ ಎನ್ನುವುದು ಆರೋಹಣ ಸಂಸ್ಥೆಯ ನಂಬಿಕೆಯಾಗಿದೆ.


‘ಆರೋಹಣ’ದ ಮಗ್ಗಗಳಲ್ಲಿ ಪ್ಲಾಸ್ಟಿಕ್‌ ಉಪಯೋಗಿಸುತ್ತಿರುವ ಹೊರತಾಗಿಯೂ ಪ್ಲಾಸ್ಟಿಕ್‌ ಬಳಕೆಯ ನಿಷೇಧವೊಂದೇ ಇದಕ್ಕೆ ಪರಿಹಾರ ಎನ್ನುವುದು ನನ್ನ ಅಭಿಪ್ರಾಯ ಎನ್ನುತ್ತಾರೆ ಅಮಿತಾ. ತಮ್ಮ ಸಂಸ್ಥೆಯು ಎಂದಿಗೂ ಸಣ್ಣ ಸಣ್ಣ ಬ್ಯಾಗ್‌ಗಳನ್ನು ಉತ್ಪಾದಿಸುವುದಿಲ್ಲವೆಂದು ಅವರು ಹೇಳುತ್ತಾರೆ. ಒಂದು ವೇಳೆ ಕಲ್ಪನೆಗೂ ಮೀರಿ, ಭಾರತ ಮತ್ತು ಆರೋಹಣ ಸಂಸ್ಥೆಯು ಪ್ಲಾಸ್ಟಿಕ್‌ ಬಳಕೆಯಿಂದ ಮುಕ್ತವಾಗುವ ಸಮಯ ಬಂದೊದಗಿದರೂ ಅಮಿತಾರವರಲ್ಲಿ ಯಾವುದೇ ಗೊಂದಲಗಳಿಲ್ಲ.

“ನಮಗೆ ಸಾಕಷ್ಟು ಪ್ಲಾಸ್ಟಿಕ್‌ಗಳು ಪೂರೈಕೆಯಾಗುತ್ತಿವೆ. ಒಂದುವೇಳೆ ಪ್ಲಾಸ್ಟಿಕ್‌ಗಳನ್ನು ಹೊಂದಿಸಲು ಕಷ್ಟವಾದರೆ ನಮ್ಮ ಮಗ್ಗಗಳನ್ನು ಇನ್ನೇನಾದರೂ ಹೊಸತನ್ನು ಮಾಡಲು ಉಪಯೋಗಿಸಿಕೊಂಡು ಅತ್ಯಂತ ಸಂತೋಷದಿಂದ ಇರುತ್ತೇವೆ,” ಎಂದು ಅಮಿತಾರವರು ಹೇಳುತ್ತಾರೆ