ಲಾಕ್‌ಡೌನ್‌ ವೇಳೆ ತಯಾರಾಯ್ತು ಸಾಕ್ಷ್ಯಚಿತ್ರ: ಇದು 14ರ ಕೊಚ್ಚಿ ಹುಡುಗನ ಪ್ರಯತ್ನ

ಲಾಕ್‌ಡೌನ್‌ ವೇಳೆ ಎಲ್ಲ ನಾಗರಿಕರು ಮನೆಯಲ್ಲಿದ್ದಾಗ, 14 ವರ್ಷದ ಕೇರಳದ ಶ್ರೀಹರಿ ರಾಜೇಶ್‌ ‘ಸೈಲೆಂಟ್‌ ರೋಡ್ಸ್‌ʼ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ.

ಲಾಕ್‌ಡೌನ್‌ ವೇಳೆ ತಯಾರಾಯ್ತು ಸಾಕ್ಷ್ಯಚಿತ್ರ: ಇದು 14ರ ಕೊಚ್ಚಿ ಹುಡುಗನ ಪ್ರಯತ್ನ

Wednesday June 17, 2020,

1 min Read

ಖಾಲಿ ಹೊಡೆಯುತ್ತಿರುವ ನಗರಗಳು, ಜನರಿಲ್ಲದ ಪ್ರವಾಸಿ ತಾಣಗಳು ಮತ್ತು ಟ್ರಾಫಿಕ್‌ ಇಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು ಲಾಕ್‌ಡೌನ್‌ ಸಮಯದಲ್ಲಿ ಎಲ್ಲೆಡೆ ಕಂಡುಬರುವ ಸಾಮಾನ್ಯ ದೃಷ್ಯವಾಗಿದ್ದವು. ಜನರ ಆರೋಗ್ಯ ಕಾಪಾಡಿಕೊಳ್ಳಲು ಅನಿವಾರ್ಯವಾಗಿದ್ದ ಲಾಕ್‌ಡೌನ್‌ನಿಂದ ನಗರಗಳು ಮರುಭೂಮಿಯಂತೆ ಕಾಣತೊಡಗಿದ್ದವು.


ಲಾಕ್‌ಡೌನ್‌ ವೇಳೆ ಎಲ್ಲ ನಾಗರಿಕರು ಮನೆಯಲ್ಲಿದ್ದಾಗ, ಕೇರಳದ 14 ವರ್ಷದ ಶ್ರೀಹರಿ ರಾಜೇಶ್‌ ‘ಸೈಲೆಂಟ್‌ ರೋಡ್ಸ್‌ʼ ಎಂಬ ಸಾಕ್ಷ್ಯಚಿತ್ರವನ್ನು ತಯಾರಿಸಿದ್ದಾರೆ. ಈ ಚಿತ್ರವನ್ನು ಸಂಪೂರ್ಣವಾಗಿ ಕೊಚ್ಚಿಯ ರಸ್ತೆಗಳಲ್ಲಿ ಅವಶ್ಯಕತೆ ಇದ್ದವರಿಗೆ ತಮ್ಮ ತಂದೆಯ ಜೊತೆಗೆ ಆಹಾರ ವಿತರಿಸಲು ಹೋದಾಗಲೇ ಚಿತ್ರಿಕರಿಸಲಾಗಿದೆ.


ಶ್ರೀಹರಿ ರಾಜೇಶ್‌ (ಚಿತ್ರಕೃಪೆ: ಎಎನ್‌ಐ)




“ಜನರಿಂದ ಯಾವಾಗಲೂ ತುಂಬಿರುವ ಕೊಚ್ಚಿಯ ರಸ್ತೆಗಳನ್ನು ಎಲ್ಲರೂ ನೋಡಿದ್ದಾರೆ. ಹಾಗಾಗಿ ನಾನು ಖಾಲಿ ರಸ್ತೆಗಳನ್ನು ಜನರಿಗೆ ತೋರಿಸಬೇಕೆಂದು ಯೋಚಿಸಿದೆ. ನನ್ನ ಮೊಬೈಲ್‌ ಫೋನಿನಲ್ಲೆ ಚಿತ್ರಿಸಿ, ಅದಕ್ಕೆ ‘ಸೈಲೆಂಟ್‌ ರೋಡ್ಸ್‌ʼ ಎಂದು ಹೆಸರು ಕೊಟ್ಟೆ,” ಎನ್ನುತ್ತಾನೆ ಶ್ರೀಹರಿ, ವರದಿ ಎಎನ್‌ಐ.


ಕೇರಳದ ಕೊಚ್ಚಿ ಪೊಲೀಸರ ಸಾಮಾಜಿಕ ಉಪಕ್ರಮವಾದ ನಮ್ಮ ಫೌಂಡೇಶನ್‌ ಜತೆ ಸೇರಿ ಸಮುದಾಯದ ಸೇವೆ ಮಾಡುವಾಗ ಈ ಚಿತ್ರವನ್ನು ಚಿತ್ರಿಕರಿಸಲಾಗಿದೆ.


ಈ ಹಿಂದೆ, ಶ್ರೀಹರಿ ‘ಪುಕಾ - ದಿ ಕಿಲ್ಲಿಂಗ್‌ ಸ್ಮೋಕ್‌ʼ ಎಂಬ ದ್ವಿಭಾಷಾ ಕಿರುಚಿತ್ರವನ್ನು ಮಾಡಿದ್ದರು. 33 ನಿಮಿಷದ ಈ ಚಿತ್ರದಲ್ಲಿ ಚಿಕ್ಕಮಕ್ಕಳು ಮಾದಕ ವಸ್ತುಗಳನ್ನು ಮತ್ತು ತಂಬಾಕು ಸೇವಿಸುವುದರ ಕುರಿತಾಗಿತ್ತು. ಶ್ರೀಹರಿ ಈ ಕಿರುಚಿತ್ರಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವುದಲ್ಲದೇ, ಚಿತ್ರದ ಒಂದು ಪಾತ್ರದಲ್ಲಿ ನಟಿಸಿದ್ದಾರೆ.


“ಏನೇನೊ ಚಿತ್ರಿಕರಿಸುವ ಬದಲು, ಜನರಿಗೆ ಉಪಯೋಗವಾಗುವಂಥದ್ದನ್ನು ನಾನು ಮಾಡಲು ಬಯಸುತ್ತೇನೆ. ಈ ಕಾರಣದಿಂದ ನನ್ನ ಕೆಲಸದಲ್ಲಿ ಜಾಗೃತಿ ಮುಖ್ಯ ಪಾತ್ರ ವಹಿಸುತ್ತದೆ,” ಎಂದು ದಿ ನ್ಯೂ ಇಂಡಿಯನ್‌ ಎಕ್ಸ್ಪ್ರೆಸ್‌ ಗೆ ನೀಡಿದ ಸಂದರ್ಶನದಲ್ಲಿ ಶ್ರೀಹರಿ ಹೇಳಿದ್ದರು.


ಕೊಚ್ಚಿಯ ಎರ್ನಾಕುಲಂ ನಗರದ ನಿವಾಸಿಯಾದ ಶ್ರೀಹರಿ, ಎಲೂರ್‌ನ ಭವನ ವಿದ್ಯಾ ಮಂದಿರ ಶಾಲೆಯಲ್ಲಿ ಓದುತ್ತಿದ್ದಾನೆ.

“ಟ್ರಾಫಿಕ್‌ ನಿಯಮಗಳನ್ನು ಪಾಲಿಸದಿರುವುದನ್ನು ಹೇಳುವ ಅಲಾರಾಂ ಆಫ್‌ ಲೈಫ್‌ ಎಂಬ ಯೋಜನೆಯನ್ನು ಮಾಡಬೇಕೆಂದಿದ್ದೇನೆ. ಇದಕ್ಕಾಗಿ ನನ್ನ ಕುಟುಂಬದಿಂದ ನನಗೆ ತುಂಬಾ ಬೆಂಬಲವಿದೆ,” ಎನ್ನುತ್ತಾನೆ ಶ್ರೀಹರಿ, ವರದಿ ಎಡೆಕ್ಸ್‌ ಲೈವ್‌.