ಆವೃತ್ತಿಗಳು
Kannada

ಮಂಚನಬೆಲೆಯಲ್ಲಿ ಕಾಡಾನೆ ಸಿದ್ದನ ಪ್ರಾಣ ಉಳಿಸಲು ಎರಡನೇ ಹಂತದ ಚಿಕಿತ್ಸಾ ಕಾರ್ಯಾಚರಣೆ ಶುರು

ಟೀಮ್​ ವೈ.ಎಸ್​. ಕನ್ನಡ

YourStory Kannada
16th Nov 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ವನ್ಯಜೀವಿ ಹೋರಾಟಗಾರರ ಕೂಗು ಅರಣ್ಯ ರೋಧನವಾಗುವ ಅಪಾಯವಿತ್ತು, ಆದರೆ ಮಾಧ್ಯಮಗಳ ನಿರಂತರ ವರದಿ ಹಾಗೂ ಪರಿಸರ ಪ್ರೇಮಿಗಳ ಕಳಕಳಿಪೂರ್ವಕ ಆಗ್ರಹದ ಪರಿಣಾಮ ಹಾಗಾಗದೇ ಸಮಸ್ಯೆಯೊಂದು ತಾರ್ಕಿಕ ಅಂತ್ಯ ಕಾಣುತ್ತಿದೆ. ಯೆಸ್! ತನ್ನ ಬಲಗಾಲಿಗೆ ಗಾಯ ಮಾಡಿಕೊಂಡು ಕಳೆದ ಎರಡೂವರೆ ತಿಂಗಳಿನಿಂದ ಸಂಕಟಪಟ್ಟು ನೋವಿನಿಂದ ನರಳಿದ ಕಾಡಾನೆ ಸಿದ್ದ ಈಗ ಕೊಂಚ ಮಟ್ಟಿಗೆ ಚೇತರಿಸಿಕೊಳ್ಳುತ್ತಿದೆ. ರಾಮನಗರ ಜಿಲ್ಲೆಯ ಮಂಚನಬೆಲೆ ಜಲಾಶಯದ ಬಳಿ ರಾಗಿಹೊಲವೊಂದರಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮುದ್ದೆ ಸಿದ್ದನ ಚಿಕಿತ್ಸೆ ನಿರಂತರ ನಡೆಯುತ್ತಿದೆ. ಸಮಾಧಾನದ ವಿಚಾರವೆಂದರೆ ಆನೆ ಸಿದ್ದ ಚಿಕಿತ್ಸೆಗೆ ಸೂಕ್ತವಾಗಿ ಸ್ಪಂಧಿಸುತ್ತಿದೆ.

image


ಚಿಕಿತ್ಸೆಯ ಮೊದಲ ಹಂತವಾಗಿ ಗಾಯಗೊಂಡಿದ್ದ ಆನೆಯ ಬಲಗಾಲಿನಿಂದ ಸುಮಾರು 10 ಲೀಟರ್​ಗೂ ಅಧಿಕ ಕೀವು ಹಾಗೂ ಕೆಟ್ಟ ರಕ್ತ ಹೊರ ತೆಗೆಯಲಾಗಿದೆ. ತೀರಾ ಮೊನ್ನೆ ಮೊನ್ನೆಯಷ್ಟೆ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸೇನಾ ತುಕುಡಿ ಸಿದ್ಧನ ಚಿಕಿತ್ಸೆಗಾಗಿ ಪ್ರತ್ಯೇಕ ಕಬ್ಬಿಣದ ಪಂಜರ ನಿರ್ಮಿಸಿತ್ತು. ಲೆಫ್ಟಿನೆಂಟ್ ರವಿಕುಮಾರ್ ನೇತೃತ್ವದಲ್ಲಿ ಸುಮಾರು ನೂರಾರು ಎಮ್.ಇ.ಜಿ ಸೇನಾ ಸಿಬ್ಬಂದಿಗಳು ರಾಗಿ ಹೊಲದ ಒಂದು ಮಗ್ಗುಲಲ್ಲಿ ಕಬ್ಬಿಣದ ಪಂಜರ ನಿರ್ಮಿಸಿದ್ದಾರೆ. ಪಂಜರ ನಿರ್ಮಾಣದ ಬಳಿಕ ಮಾಗಡಿಯಿಂದ ತರಿಸಲಾಗಿದ್ದ ಕ್ರೇನ್ ಸಹಾಯದಿಂದ ಆನೆಯನ್ನು ಪಂಜರದೊಳಗೆ ನಿಲ್ಲಿಸಲಾಯ್ತು. ಅದಾದ ನಂತರವಷ್ಟೆ ಆನೆಯ ಕಾಲಿಗೆ ಚಿಕಿತ್ಸೆ ಕೊಡುವ ಕಾರ್ಯ ಆರಂಭಿಸಲಾಯಿತು. ಆನೆಯ ಕಾಲಿಗೆ ಚಿಕಿತ್ಸೆಗೆ ತೊಂದರೆಯಾಗದಂತೆ ಪಂಜರದ ಮಧ್ಯೆ ಮಧ್ಯೆ ಮರದ ದಿಮ್ಮಿಗಳನ್ನು ಅಳವಡಿಸಲಾಗಿದೆ.

ಈಗಾಗಲೆ ಸ್ಥಳದಲ್ಲಿ ಬನ್ನೇರುಘಟ್ಟಾ ಜಿಯೋಲಜಿಕಲ್ ಪಾರ್ಕ್​ನ ತಜ್ಞ ಪಶು ವೈದ್ಯರಾದ ಡಾ. ಸುಜಯ್, ಹಾಗೂ ವೈಲ್ಡ್ ಲೈಫ್ ಎಸ್.ಒ.ಎಸ್ ಅನ್ನುವ ವೈಲ್ಡ್ ಲೈಫ್ ಸಂಸ್ಥೆಯ ಡಾ. ಅರುಣ್ ಕುಮಾರ್ ಮೊಕ್ಕಾಂ ಹೂಡಿದ್ದಾರೆ. ಇವರ ಜೊತೆ ಬಂಡೀಪುರದ ವೈದ್ಯರಾದ ಡಾ. ನಾಗರಾಜ್​ ಅವರ ನೆರವೂ ಸಹ ಲಭ್ಯವಾಗಿದೆ.

ಇದನ್ನು ಓದಿ: ವನ್ಯಜೀವಿಗಳ ಪಾಲಿನ ಸಂರಕ್ಷಕ- ಜೀವ ಸಂಕುಲಗಳನ್ನು ಕಾಪಾಡಲು ಪಾಠ ಮಾಡುವ ಶಿಕ್ಷಕ

ಸದ್ಯ ಸಿದ್ದನ ಊದಿಕೊಂಡಿದ್ದ ಬಲಗಾಲಿನೊಳಗಿದ್ದ ಸುಮಾರು 10 ಲೀಟರ್ ಗೂ ಹೆಚ್ಚು ಕೀವು ಹಾಗೂ ಕೆಟ್ಟ ರಕ್ತವನ್ನು ಡಿವೈಸ್ ಒಂದರ ಸಹಾಯದಿಂದ ಪಂಪ್ ಮಾಡಿ ಹೊರತೆಗೆಯಲಾಗಿದೆ. ಹೈಡ್ರೋಜನ್ ಫೆರಾಕ್ಸೈಡ್ ಮುಂತಾದ ನೋವು ನಿವಾರಕ ಔಷಧದ ಜೊತೆ ನಮ್ಮ ಸ್ವದೇಶಿ ಪದ್ದತಿ ಆಯುರ್ವೇದದ ಔಷದ ಗುಣವುಳ್ಳ ಬೇವಿನ ಎಣ್ಣೆ, ಜೇನು ತುಪ್ಪ ಹಾಗೂ ಅರಿಷಿಣದಂತಹ ಉತ್ಪನ್ನ ಗಳನ್ನೂ ಆನೆಗೆ ನೀಡಲಾಗ್ತಿದೆ.

ಪ್ರತಿನಿತ್ಯ ಹತ್ತಿರ ಹತ್ತಿರ ಸಾವಿರ ಕೆಜಿಯಷ್ಟು ಆಹಾರ ತಿನ್ನುವ ಆನೆ ಸಿದ್ದ ಕಳೆದ ಕೆಲವು ದಿನಗಳಿಂದ ಆಹಾರ ಸೇವನೆಯನ್ನೇ ನಿಲ್ಲಿಸಿತ್ತು. ಆದ್ರೀಗ ಸಾಕಷ್ಟು ಪ್ರಮಾಣದಲ್ಲಿ ಜೊಂಡು ಹುಲ್ಲು, ಕಬ್ಬು, ರಾಗಿ ಹುಲ್ಲು, ರಾಗಿ ಮುದ್ದೆ ಹಾಗೂ ತೆಂಗಿನ ಕಾಯಿ ಹೋಳುಗಳನ್ನು ತಿನ್ನಲು ಆರಂಭಿಸಿದೆ. ಆನೆಯ ದೇಹ ಸ್ಥಿತಿ ಸ್ಥಿರವಾಗುತ್ತಿದೆ. ಆದ್ರೆ ಕಳೆದ 20 ದಿನಗಳಿಂದ ಒಂದೇ ಮಗ್ಗುಲಲ್ಲಿ ಮಲಗಿದ ಕಾರಣ ಸಿದ್ಧನ ಬೆನ್ನಿನಲ್ಲಿ ಗಾಯವಾಗಿದೆ. ವೈದ್ಯರು ಹೇಳುವಂತೆ ಸಿದ್ಧ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಕನಿಷ್ಟ 3 ತಿಂಗಳು ಬೇಕು. 

ಇದನ್ನು ಓದಿ:

1. ಭಾರತದ ಏಕೈಕ ಮಹಿಳಾ ಕಮಾಂಡೋ ಟ್ರೈನರ್​- ನಿಜ ಜೀವನದಲ್ಲೂ ಸೀಮಾ ಫೈಟರ್​

2. ಕ್ಯಾಬ್​ ಸೇವೆಗಳಲ್ಲಿ ಬಿಗ್​ ಫೈಟ್​-OLAಕ್ಕೆ ಅಗ್ರಪಟ್ಟದ ತವಕ- ಉಬರ್​ಗೆ ಸವಾಲು ಎದುರಿಸುವುದೇ ಕಾಯಕ

3. ಅಂದು ಓದಿಗಾಗಿ ಸಾಲ- ಇಂದು ಓದುವವರಿಗೆ ಸಹಾಯ- ಇದು ಗೌರೀಶ್​ ಸಾಹಸದ ಕಥೆ..!

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags