ಯೆಲ್ಲೋ ಬಲ್ಬ್ಸ್​​ಹಿಂದಿದೆ ಶ್ರಮದ ಕಥೆ

ಟೀಮ್​ ವೈ.ಎಸ್​​.

ಯೆಲ್ಲೋ ಬಲ್ಬ್ಸ್​​ಹಿಂದಿದೆ ಶ್ರಮದ ಕಥೆ

Tuesday October 13, 2015,

5 min Read

ನಾನು ಯಾವಾಗಲೂ ಬಯಸಿದ್ದನ್ನು ಪಡೆದಿದ್ದೇನೆ. ಹಾಗೆಯೇ ಪಡೆಯುವ ಮುನ್ನ ನಾನು ಏನನ್ನು ಬಯಸುತ್ತೇನೆ ಎಂದು ಕೊಂಚ ಯೋಚಿಸುತ್ತೇನೆ.

ನೇಹಲ್ ಮೋದಿ, ಯಲ್ಲೋ ಬಲ್ಬ್ಸ್ ಸಂಸ್ಥೆಯ ಸಂಸ್ಥಾಪಕರು. ಇದು ಉತ್ತಮ ಆಲೋಚನೆಗಳು ಅತ್ಯುತ್ತಮವಾಗಿ ಕಾರ್ಯರೂಪಕ್ಕೆ ಇಳಿಯುವ ಮಾರುಕಟ್ಟೆಯ ಮಾರುಕಟ್ಟೆ.

ಮುಂಬೈನ ಕುಚ್ಚಿ ವ್ಯಾವಹಾರಿಕ ಕುಟುಂಬದಲ್ಲಿ ಜನಿಸಿದ ಅವರು ತಮ್ಮ ಶಾಲಾ ಕಲಿಕೆಯನ್ನು ಕೋಲ್ಕತ್ತಾದ ಸೇಂಟ್ ಥಾಮಸ್‌ನಲ್ಲಿ ಪೂರೈಸಿದರು. ಅವರು ತಮ್ಮ ಶಾಲಾದಿನಗಳನ್ನು ನೆನಪಿಸಿಕೊಳ್ಳಲು ಮುಖ್ಯ ಕಾರಣ ಆ ದಿನಗಳು ಸುಂದರವಾಗಿದ್ದವು ಅನ್ನುವುದಷ್ಟೇ ಅಲ್ಲ. ಜೊತೆಗೆ ಶಾಲೆ ಮುಗಿಯುವ ಹಂತದಲ್ಲಿ ಅವರು ತಮ್ಮ ಜೀವನಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ನೇಹಲ್ ತಮ್ಮ ಸಂಗಾತಿಯ ಆಯ್ಕೆಯನ್ನು ಬದುಕಿನ ನಿರ್ಣಾಯಕ ಹಂತ ಎಂದು ಭಾವಿಸಿದ್ದಾರೆ. ಏಕೆಂದರೆ, ಅವರ ಮೇಲೆ ಆ ಸಂಗಾತಿ ಪ್ರಭಾವ ಬೀರಿದ್ದರು. ನೇಹಲ್ ಚಾರ್ಟೆಡ್ ಅಕೌಂಟೆನ್ಸಿ ಪರೀಕ್ಷೆಯನ್ನು ಪಡೆದುಕೊಳ್ಳುವ ಹಿಂದೆ ಅವರ ಪ್ರಭಾವವಿತ್ತು.

ನೇಹಲ್, ಸಿಎ ಕಲಿಯುತ್ತಿದ್ದಾಗ ಸಾಕಷ್ಟು ಶೈಕ್ಷಣಿಕ ಏರುಪೇರುಗಳನ್ನು ಕಂಡರು. ಪ್ರಥಮ ಹಂತದಲ್ಲಿ ಕ್ಲಿಷ್ಟಕರ ಸಿಎ ವಿಷಯಗಳನ್ನು ಪೂರ್ಣಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೂ ಪ್ರಯತ್ನವನ್ನು ಕೈಬಿಡದೆ ಮತ್ತೆ ಪರೀಕ್ಷೆ ತೆಗೆದುಕೊಂಡರು. ಆಡಿಟರ್ ಆಗುವ ಗುರಿ ಹೊಂದಿದ್ದ ಅವರಿಗೆ ಉದ್ಯಮಿಯಾಗುವ ಯಾವ ಬಯಕೆಗಳೂ ಇರಲಿಲ್ಲ.

image


ಸಿಎ ಪದವಿ ಪಡೆದುಕೊಳ್ಳುತ್ತಿದ್ದಂತೆ ನೇಹಲ್ ಉದ್ಯೋಗಾನ್ವೇಷಣೆ ಶುರುಮಾಡಿದರು. ಮದುವೆಯಾದ ಬಳಿಕ ಚೆನ್ನೈಗೆ ಸ್ಥಳಾಂತರಗೊಂಡರು. ಹೊಸದಾಗಿ ಮದುವೆಯಾಗಿದ್ದ ಉಮೇದು, ಹೊಸಪಟ್ಟಣ ಇವುಗಳ ಮಧ್ಯೆಯೂ ನೇಹಲ್, ದೊಡ್ಡ ದೊಡ್ಡ ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳಿಗೆ ಅರ್ಜಿ ಸಲ್ಲಿಸಿದರು. 3 ತಿಂಗಳ ಕಾಲ ಸಾಕಷ್ಟು ಓಡಾಟದ ನಂತರ ಒಂದೇ ವಾರದಲ್ಲಿ ಅವರಿಗೆ 3 ಉದ್ಯೋಗಾವಕಾಶಗಳು ಲಭ್ಯವಾಗಿದ್ದವು. ಅವರು ಮೊದಲು ಅಮೆರಿಕನ್ ಎಕ್ಸ್ ಪ್ರೆಸ್ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಬಳಿಕ ಎಬಿಎನ್ ಆಮ್ರೋ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದರು. ಕೊನೆಗೆ ಕೋಲ್ಕತ್ತಾದ ಸಿಟಿ ಗ್ರೂಪ್ ಕಾರ್ಪೋರೇಟ್ ಬ್ಯಾಂಕಿಂಗ್ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಅವರ ಮಕ್ಕಳು ಬೆಳೆಯುತ್ತಿದ್ದ ಸಂದರ್ಭದಲ್ಲಿ ಅವರು ಕಾರ್ಪೋರೇಟ್ ಸಂಸ್ಥೆಗಳ ಒತ್ತಡದಿಂದ ದೂರವಾಗಿ ಹೊಸ ಉದ್ಯಮ ಆರಂಭಿಸುವ ನಿರ್ಧಾರ ಕೈಗೊಂಡರು. ತಮ್ಮ ಪತಿಯೊಂದಿಗೆ ಉದ್ಯಮ ಆರಂಭಿಸುವ ಮತ್ತು ಪ್ರಾಥಮಿಕ ಹಂತಗಳನ್ನು ನಿರ್ವಹಿಸುವ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದರು.

ಅವು ನಮ್ಮ ಪಾಲಿನ ನಿರ್ಣಾಯಕ ದಿನಗಳಾಗಿದ್ದವು. ಒಂದು ದಿನ ಯೋಗ ಹಾಗೂ ಉತ್ತಮ ಆರೋಗ್ಯ ಕೇಂದ್ರದ ನಿರ್ದೇಶಕಿಯಾಗಿದ್ದ ನಾನು ಇನ್ನೊಂದು ದಿನ ಸಾವಯವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಸಂಸ್ಥೆಯೊಂದರ ನಿರ್ವಾಹಕಿಯಾಗಿದ್ದೆ. ಆದರೆ ಈ ಸಂದರ್ಭದಲ್ಲಿಯೇ ಮಕ್ಕಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಉದ್ಯಮದತ್ತ ಗಮನಹರಿಸಿ ನಾನು ಮತ್ತು ನನ್ನ ಸಹೋದರ ಅದರಲ್ಲಿ ಕ್ರಿಯಾಶೀಲರಾಗಿದ್ದೆವು. ಈ ಮಾದರಿಗಳನ್ನು ನಾವು ಮೊದ ಮೊದಲು ನಮ್ಮ ಸ್ನೇಹಿತರು ಹಾಗೂ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಗೆಳೆಯರಿಗೆ ಮಾರಾಟ ಮಾಡಿದೆವು ಎಂದು ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ ನೇಹಲ್.

ಮಾರುಕಟ್ಟೆ ವ್ಯಾಪ್ತಿಗೆ ಅಗತ್ಯವಿರುವ ಆಲೋಚನೆಗಳನ್ನು ಜಾರಿಗೊಳಿಸುವ ತನ್ಮೂಲಕ ಈಗಾಗಲೇ ಮಾರುಕಟ್ಟೆಯಲ್ಲಿರುವ ಉದ್ಯಮಗಳಿಗೆ ಸೇವೆ ಒದಗಿಸುವ ಯೋಜನೆ ನೇಹಲ್ ಮನಸ್ಸಿನಲ್ಲಿ ಮೂಡತೊಡಗಿತ್ತು. ಹಾಗೆ ಹುಟ್ಟಿಕೊಂಡಿದ್ದೇ ಯಲ್ಲೋ ಬಲ್ಬ್ಸ್. ಇದು ಮಾರುಕಟ್ಟೆಗೆ ಅಗತ್ಯವಿರುವ ಆಲೋಚನೆಗಳನ್ನು, ಪರ್ಯಾಯ ವ್ಯವಸ್ಥೆಗಳನ್ನು, ಪರಿಹಾರೋಪಾಯಗಳನ್ನು ಒದಗಿಸುವ ಜೊತೆಗೆ ಪ್ರಚಾರಕ್ಕೆ ಅಗತ್ಯವಿರುವ ಮಾಧ್ಯಮ ಮನೆ ಸೇವೆಯನ್ನು ಒದಗಿಸುತ್ತದೆ.

ಇಲ್ಲಿದ್ದ ಅಂತರವನ್ನು ಹೋಗಲಾಡಿಸಲು ಬೇರೆ ಯೋಚನೆಯನ್ನೇ ಮಾಡದೇ ಮತ್ತೊಂದು ಮಾರ್ಕೆಟಿಂಗ್ ಸಮುದಾಯವನ್ನು ಅವರು ಲಾಂಚ್ ಮಾಡಿದ್ದರು. ಅದೇ ಮಾರ್ಕೆಟಿಂಗ್ ಮೋಜೋ.ಇನ್.

ಆದರೆ ಅದೇ ಹೆಸರಿನ ಸಂಸ್ಥೆ ಹಾಗೂ ವೆಬ್‌ಸೈಟ್ ವಿದೇಶದಲ್ಲಿ ಈಗಾಗಲೇ ನೊಂದಣಿಯಾಗಿದ್ದ ಕಾರಣ ನೇಹಲ್ ಬಲವಂತವಾಗಿ ಹಾಗೂ ಇಷ್ಟವಿಲ್ಲದಿದ್ದರೂ ಬೇರೆ ಹೆಸರನ್ನು ಹುಡುಕಬೇಕಾಯಿತು. ಜಾಗತಿಕವಾಗಿ ಬಲಾಢ್ಯವಾಗಿ ಬೇರೂರಬೇಕು ಅನ್ನುವ ಉದ್ದೇಶವಿಲ್ಲದಿದ್ದರೂ ಚಿಕ್ಕದಾಗಿ ಯೋಚಿಸಿ ಕಾರ್ಯಗತಗೊಳಿಸುವುದು ತಮಗೆ ಇಷ್ಟವಿರಲಿಲ್ಲ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ ನೇಹಲ್. ಇಲ್ಲಿ ಸಂಸ್ಥೆಯ ಲೋಗೋದಲ್ಲಿ ಹಳದಿ ಬಣ್ಣದ ಬಲ್ಬ್ ಚಿತ್ರವಿತ್ತು. ಇದು ಹೊಸ ಆಲೋಚನೆಗಳನ್ನು ಬಿಂಬಿಸುವ ಚಿತ್ರವಾಗಿತ್ತು. ಹಾಗಾಗಿ ಅಂತಿಮವಾಗಿ ಸಂಸ್ಥೆಗೆ ಮಾರ್ಕೆಟಿಂಗ್ ಮೋಜೋ.ಇನ್ ಎಂಬ ಹೆಸರಿನ ಬದಲಿಗೆ ಯಲ್ಲೋ ಬಲ್ಬ್ಸ್ ಎಂದು ನಾಮಕರಣ ಮಾಡಿದರು.

ಇಲ್ಲಿಂದ ನೇಹಲ್‌ರ ಬದುಕಿನ ಹೊಸ ಅಧ್ಯಾಯವೊಂದು ಆರಂಭವಾಯಿತು. ತಾಯಿಯಾಗಿ, ವಿದ್ಯಾರ್ಥಿನಿಯಾಗಿ, ನೇತಾರೆಯಾಗಿ, ನಿರ್ವಾಹಕಿಯಾಗಿ ಕೆಲಸ ಮಾಡಿದ್ದ ನೇಹಲ್ ಇದೀಗ ಉದ್ಯಮಿಯಾದರು.

ತಾಯಿ..

ಅವಳಿ ಮಕ್ಕಳ ತಾಯಿಯಾದ ನೇಹಲ್ 2012ರಲ್ಲಿ ತಮ್ಮ ಹೆರಿಗೆ ಆದ ಬಳಿಕ ಶೀಘ್ರದಲ್ಲೇ ಕೆಲಸಕ್ಕೆ ಹಿಂತಿರುಗಿದ್ದರು. ಅವರ ಮಗಳು ಕೇಳಿದ ಒಂದು ಮುಗ್ಧ ಪ್ರಶ್ನೆ ಅವರ ಮಹತ್ವದ ನಿರ್ಧಾರಕ್ಕೆ ಕಾರಣವಾಯಿತು. ನೀನೇಕೆ ನಮ್ಮನ್ನು ಶಾಲೆಯಿಂದ ಕರೆತರಲು ಬರುವುದಿಲ್ಲ ಎಂದು ಮಗಳು ತಾಯಿಯನ್ನು ಪ್ರಶ್ನಿಸಿದ್ದಳು. ನಂತರ ನೇಹಲ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವ ಭಾವನಾತ್ಮಕ ನಿರ್ಧಾರ ಕೈಗೊಂಡಿದ್ದರು. ಇದರಿಂದ ಮಕ್ಕಳಿಗೆ 4 ರಿಂದ 7 ವರ್ಷವಾಗುವ ತನಕ ಅವರ ಜೊತೆಯಲ್ಲಿ ಕಾಲ ಕಳೆಯಲು ಅವಕಾಶವಾಯಿತು. ಕೇವಲ ಶಾಲೆಯಿಂದ ಕರೆತರುವುದಷ್ಟೇ ಅಲ್ಲದೇ ಬರ್ತ್ ಡೇ ಪಾರ್ಟಿಗಳು, ಸ್ವಿಮ್ಮಿಂಗ್ ಕ್ಲಾಸ್ ಹಾಗೂ ಪಾರ್ಕ್‌ನಲ್ಲಿ ಮಕ್ಕಳೊಂದಿಗೆ ನೇಹಲ್ ಕಾಲ ಕಳೆಯುತ್ತಿದ್ದರು.

ಚಿಕಿತ್ಸಕಿ

ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದ ಬಿಡುವಿನ ವೇಳೆಯಲ್ಲಿ ನೇಹಲ್ ಆಧ್ಯಾತ್ಮಿಕ ಆಸಕ್ತಿ ಬೆಳೆಸಿಕೊಂಡರು. ಪ್ರಾಣಿಕ್ ಹೀಲಿಂಗ್ ಚಿಕಿತ್ಸಾ ಪದ್ಧತಿಯನ್ನು ಕಲಿಯುವ ಮೂಲಕ ಓರ್ವ ಪರಿಣಿತ ಚಿಕಿತ್ಸಕಿಯಾಗಿ ಗುರುತಿಸಿಕೊಂಡರು. ಇದರಿಂದ ಅವರ ಬದುಕಿನ ಅಸ್ತಿತ್ವ ಹಾಗೂ ಅಸ್ಮಿತೆ ಎರಡೂ ಉನ್ನತಮಟ್ಟಕ್ಕೇರಿದವು.

ಉದ್ಯಮಿ

ಉತ್ತಮ ಆಲೋಚನೆಗಳು ಮಾರುವವರಿಂದ ಅಥವಾ ಕೊಳ್ಳುವವರಿಂದ ಅಥವಾ ಇನ್ಯಾರಿಂದಲಾದರೂ ಬರಬಹುದು. ಆದರೆ ಆ ಆಲೋಚನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸದಿದ್ದರೆ ಅವಕ್ಕೆ ಬೆಲೆ ಇರುವುದಿಲ್ಲ. ನಮ್ಮ ಯೋಜನೆ ಇದ್ದಿದ್ದು ಉತ್ತಮ ಆಲೋಚನೆಗಳನ್ನು ಅತ್ಯುತ್ತಮವಾಗಿ ಕಾರ್ಯಗತಗೊಳಿಸಿ ಕೊಳ್ಳುವವರು ಹಾಗೂ ಮಾರುವವರಿಗೆ ಮಾರುಕಟ್ಟೆಯ ಸಮಾನ ಲಾಭ ದೊರಕಿಸಿಕೊಡುವುದಾಗಿತ್ತು ಎಂದು ನೇಹಲ್ ತಮ್ಮ ಯೋಜನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಓರ್ವ ಉದ್ಯಮಿಯಾಗಿ ಅವರು ಮಾರುಕಟ್ಟೆಯಲ್ಲಿ ಅಗತ್ಯವಿರುವ ಆಲೋಚನೆಗಳನ್ನು ಮಾರುವ ಯೋಜನೆ ಹೆಣೆದಿದ್ದಾರೆ. ಅವರ ಸಂಸ್ಥೆಯಲ್ಲಿ ನೋಂದಾಯಿಸಲು ಯಾವುದೇ ಚಾರ್ಜ್ ಮಾಡಲಾಗುವುದಿಲ್ಲ. ಆದರೆ, ಪರಿಹಾರೋಪಾಯಗಳು, ವಿಭಿನ್ನ ಆಲೋಚನೆಗಳು, ಕ್ರಿಯಾತ್ಮಕ ಜಾರಿಗೆ ಸಂಬಂಧಿಸಿದ ಯೋಜನೆಗಳನ್ನು ಹೊಂದಲು ಬೇಕಿರುವ ಸಬ್ ಸ್ಕ್ರಿಪ್ಶನ್ ಪ್ಲಾನ್(ಚಂದಾದಾರಿಕೆ ಯೋಜನೆ) ಮೂಲಕ ಆದಾಯ ಬರುತ್ತದೆ.

ನಾಯಕಿ

ನೇಹಲ್‌ರ ತಂಡದಲ್ಲಿ 6 ಮಂದಿ ಸದಸ್ಯರಿದ್ದಾರೆ. ಪೂರ್ಣಕಾಲಿಕ, ಅರೆಕಾಲಿಕ ಹಾಗೂ ಮನೆಯಲ್ಲಿ ಕುಳಿತು ಕೆಲಸ ನಿರ್ವಹಿಸಬಲ್ಲ ಉದ್ಯೋಗಿಗಳು ಅವರೊಂದಿಗಿದ್ದಾರೆ. ಅವರ ನಾಯಕತ್ವದ ಗುಣ ಸದಾ ಪ್ರತಿಭಾನ್ವೇಷಣೆಯಲ್ಲಿ ತೊಡಗಿರುತ್ತದೆ. ಆಸಕ್ತಿ ಹಾಗೂ ಶ್ರದ್ಧೆ ಹೊಂದಿರುವ ಯಾರನ್ನಾದರೂ ಗುರುತಿಸುವ ಸ್ವಭಾವ ನೇಹಲ್‌ರಿಗಿದೆ.

image


ಕೆಲವು ದಿನ ಸಂಸ್ಥೆಯ ಶೇ.20ರಷ್ಟು ಕೆಲಸಗಾರರು ಅನಾರೋಗ್ಯದ ಕಾರಣ ಗೈರುಹಾಜರಾದರೆ ಉಳಿದ ಕೆಲವರಿಗೂ ಇನ್ಯಾವುದೋ ತುರ್ತು ಕೆಲಸಗಳಿದ್ದರೆ ಮಧ್ಯಾಹ್ನ ಊಟಕ್ಕೂ ಬಿಡುವು ತೆಗೆದುಕೊಳ್ಳದಷ್ಟು ಕೆಲಸದ ಒತ್ತಡ ಕಾಣಿಸಿಕೊಳ್ಳುತ್ತದೆ. ಪ್ರಾರಂಭಿಕ ಹಂತದಲ್ಲಿರುವ ಪ್ರತಿಯೊಂದು ಸಂಸ್ಥೆಗಳಿಗೂ ಇಂತಹ ಸವಾಲು ಸರ್ವೇ ಸಾಮಾನ್ಯ. ಈ ಸಂದರ್ಭಗಳಲ್ಲಿ ಕೆಲಸಗಾರರಿಗೆ ಸಾಧ್ಯವಾದಷ್ಟು ಆರಾಮದಾಯಕ ವಾತಾವರಣ ಕಲ್ಪಿಸಿಕೊಡಬೇಕು. ಉದ್ಯೋಗಿಗಳು ಸಂಸ್ಥೆ ಕೆಲಸವನ್ನು ತಮ್ಮ ವೈಯಕ್ತಿಕ ಕೆಲಸ ಎಂದು ಭಾವಿಸಿ ನಿರ್ವಹಿಸುವಂತಿರಬೇಕು. ಹಾಗಾಗಿ ಅವರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಿ ಮನೆಯಲ್ಲಿ ಕುಳಿತೇ ಕೆಲಸ ಮಾಡುವ ಸೌಕರ್ಯ ಒದಗಿಸಿಕೊಡಲಾಗಿದೆ. ಬಹುತೇಕ ಮುಖ್ಯ ಕೆಲಸಗಳು ನಮ್ಮ ತಂಡದಲ್ಲಿ ಪೂರ್ಣಗೊಂಡಿದ್ದು ಹೀಗೆ ಎಂದು ನೇಹಲ್ ಹೇಳಿಕೊಂಡಿದ್ದಾರೆ.

ವಿದ್ಯಾರ್ಥಿನಿ

ನೇಹಲ್‌ಗೆ ಎದುರಾಗಿದ್ದ ವಿಚಿತ್ರ ಸಮಸ್ಯೆ ಇದಾಗಿತ್ತು. ಈಗಾಗಲೇ ಮಾರ್ಕೆಟಿಂಗ್ ವಿಭಾಗದಲ್ಲಿ ಉನ್ನತ ಪದವಿ ಗಳಿಸಿದ್ದ ನೇಹಲ್, ಉದ್ಯಮ ಆರಂಭಿಸುವ ಮುನ್ನ ಈ ನಿಟ್ಟಿನಲ್ಲಿ ಮಾಹಿತಿ ಕಲೆಹಾಕಲು ಮತ್ತೆ ವಿದ್ಯಾರ್ಥಿನಿಯಾಗಬೇಕಿತ್ತು. ಹಾಗಾಗಿ ವೆಬ್‌ಸೈಟ್ ಪುಸ್ತಕಗಳು ಹಾಗೂ ಇನ್ನಿತರ ಆನ್‌ಲೈನ್ ಮೂಲಗಳಿಂದ ಉದ್ಯಮ ಕ್ಷೇತ್ರದ ಆರಂಭಿಕ ಅಧ್ಯಾಯಗಳ ಕಲಿಕೆಯ ಸರಕನ್ನು ಓದುವ ಪ್ರಯತ್ನ ನಡೆಸಿದರು. ವಿದ್ಯಾರ್ಥಿನಿ ಜೀವನವನ್ನು ಕಳೆದು ಬಹಳಷ್ಟು ವರ್ಷಗಳ ನಂತರ ಉದ್ಯಮದ ಕಾರಣದಿಂದ ಮತ್ತೆ ವಿದ್ಯಾರ್ಥಿನಿಯಾದರು. ಇಲ್ಲಿ ಭಾರತೀಯ ಮಾರುಕಟ್ಟೆಯ ಕ್ರಿಯಾ ವಿಧಾನ, ಸವಾಲುಗಳು, ಅವಕಾಶಗಳು ಇನ್ನಿತರ ಸಣ್ಣ ಪುಟ್ಟ ಆಲೋಚನೆಗಳನ್ನು ನಡೆಸಲು ಸಾಧ್ಯವಾಯಿತು.

ಸವಾಲುಗಳು

ಬದುಕಿನಲ್ಲಿ ಈವರೆಗೆ ವಿಭಿನ್ನ ಸವಾಲುಗಳನ್ನು ಎದುರಿಸಿದ್ದ ನೇಹಲ್‌ರಿಗೆ ಉದ್ಯಮಿಯಾಗುವ ಮಾರ್ಗದಲ್ಲಿ ಮತ್ತಷ್ಟು ಸವಾಲುಗಳು ಎದುರಾದವು. ಅದರಲ್ಲಿ ಮುಖ್ಯ ಸವಾಲೆಂದರೆ ಕ್ರಿಯಾತ್ಮಕ ಆಲೋಚನೆಗಳನ್ನು ಹೊಂದಿರುವ ಪ್ರತಿಭಾವಂತರನ್ನು ಹುಡುಕಿ ಸಂಸ್ಥೆಗೆ ಸೇರಿಸಿಕೊಳ್ಳುವುದು. ಜೊತೆಗೆ ವೈಯಕ್ತಿಕ ಬದುಕಿನತ್ತಲೂ ಅವರು ಗಮನಹರಿಸಬೇಕಿತ್ತು. ಒಬ್ಬಳು ತಾಯಿಯಾಗಿ ಹಾಗೂ ಒಂದು ಸಂಸ್ಥೆಯ ಉದ್ಯೋಗಿಯಾಗಿ ಮಗುವಿನ ಆರೋಗ್ಯ ಸರಿ ಇಲ್ಲ ಎಂದಾಗ ಒಂದು ದಿನ ರಜೆ ತೆಗೆದುಕೊಳ್ಳಬಹುದು. ಆದರೆ, ಅದೇ ಒಬ್ಬ ಉದ್ಯಮಿಯಾಗಿ, ಟೆಲಿಕಾಲರ್ ಮತ್ತು ಸೇಲ್ಸ್ ಕೋ-ಆರ್ಡಿನೇಟರ್ ಹುದ್ದೆಯನ್ನು ನಿಭಾಯಿಸುವ ವ್ಯಕ್ತಿಯಾಗಿ ಒಂದು ದಿನದ ರಜೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಜೊತೆಗೆ ಮನೆಯಲ್ಲಿ ಕುಳಿತು ಸ್ಮಾರ್ಟ್ ಫೋನ್ ಮೂಲಕ ಮಾಡುವ ಕೆಲಸವೂ ಇದಾಗಿರುವುದಿಲ್ಲ ಎಂದು ತಮ್ಮ ವೃತ್ತಿ ಬದುಕು ಹಾಗೂ ಖಾಸಗಿ ಬದುಕಿನ ಅತೀ ಮುಖ್ಯ ಸವಾಲನ್ನು ಅವಲೋಕಿಸಿದ್ದಾರೆ ನೇಹಲ್.

ಭವಿಷ್ಯದ ಯೋಜನೆ

ನಿಮ್ಮ ಉದ್ಯಮದ ಮಾದರಿ ಬಹಳಷ್ಟು ಜನರಿಗೆ ಮೌಲ್ಯಯುತವಾಗಿದ್ದರೆ, ಒಂದು ವೇಳೆ ನಿಮ್ಮ ವ್ಯವಹಾರ ಅವರೊಂದಿಗೆ ಸುಗಮವಾಗಿದ್ದರೆ, ಅವರು ನಿಮ್ಮ ಉದ್ಯಮಕ್ಕೆ ಅಗತ್ಯವಿರುವ ಅಂಶ ಹಾಗೂ ಸೇವೆಯನ್ನು ಪುನಃ ಪುನಃ ನೀಡಲು ಸಿದ್ಧರಿರುತ್ತಾರೆ ಎನ್ನುವುದು ನೇಹಲ್‌ರ ಬಿಸಿನೆಸ್ ಮಂತ್ರ. ಇಂತಹ ಹಲವು ಸೂತ್ರದಡಿಯಲ್ಲಿ ನೇಹಲ್‌ 2020ರ ವೇಳೆಗೆ ತಮ್ಮ ಉದ್ಯಮದ ವ್ಯಾಪ್ತಿಯನ್ನು ವಿಸ್ತರಿಸುವ ನೀಲನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ವಿಶ್ವ ಮಾರುಕಟ್ಟೆಯಲ್ಲಿ ಗುರುತಿಸಿಕೊಳ್ಳುವುದು ಅವರ ಸಂಸ್ಥೆಯ ಹೆಬ್ಬಯಕೆ.

ಮುಂಬರುವ ದಿನಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕೆಲವು ಮುಖ್ಯ ಪಟ್ಟಣಗಳಲ್ಲಿ ಗ್ರಾಹಕರನ್ನು ಹೊಂದುವತ್ತ ಸಂಸ್ಥೆ ಗಮನ ಹರಿಸುತ್ತಿದೆ. ಜೊತೆಗೆ ಮೊಬೈಲ್ ಫ್ರೆಂಡ್ಲೀ ಬಿಸಿನೆಸ್ ಆ್ಯಪ್ ಲಾಂಚ್ ಮಾಡಲು ಯೋಚಿಸಲಾಗುತ್ತಿದೆ. ಸಾಕಷ್ಟು ಪ್ರತಿಭಾವಂತರನ್ನು ಹೊಂದಿದ್ದರೂ ಇನ್ನೂ ನೆಲೆ ನಿಲ್ಲಲು ಪರಿಶ್ರಮ ಪಡುತ್ತಿರುವ ಸಂಸ್ಥೆ ಭವಿಷ್ಯದಲ್ಲಿ ಸಾಕಷ್ಟು ಬೇಡಿಕೆಗಳನ್ನು ಪಡೆದುಕೊಳ್ಳುವ ಗುರಿ ಹೊಂದಿದೆ ಎಂದು ನೇಹಲ್ ಆಕಾಂಕ್ಷೆಯಿಂದ ಹೇಳುತ್ತಾರೆ.