ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್ ಕುಟುಂಬದ ಖಾಸ್ಬಾತ್
ಟೀಮ್ ವೈ.ಎಸ್. ಕನ್ನಡ
ಕನ್ನಡ ಸಿನಿಮಾರಂಗದಲ್ಲಿ ಇತ್ತಿಚಿನ ದಿನಗಳಲ್ಲಿ ವಿಭಿನ್ನ ಪ್ರಯತ್ನಗಳು ಆಗುತ್ತಿವೆ. ರಾಷ್ಟ್ರಮಟ್ಟದ ಸಿನಿಮಾರಂಗದತ್ತ ಕನ್ನಡ ಸಿನಿಮಾಗಳು ಹೆಜ್ಜೆ ಇಡುತ್ತಿವೆ. ಈಗ ಅಂತಹದೊಂದು ವಿಭಿನ್ನ ಪ್ರಯತ್ನ ಆರಂಭವಾಗಿದ್ದು ಉತ್ತರ ಕರ್ನಾಟಕದ ನಿರ್ಮಾಪಕರೊಬ್ಬರು ಒಂದೇಬಾರಿಗೆ 10 ಸಿನಿಮಾವನ್ನು ನಿರ್ಮಾಣ ಮಾಡಿ ಹೊಸ ಕಲಾವಿದರು ಹಾಗೂ ತಂತ್ರಜ್ಞರು ಮತ್ತು ನಿರ್ದೇಶಕರಿಗೆ ಕೆಲಸ ನೀಡಿದ್ದಾರೆ.
ಹತ್ತು ಚಿತ್ರಗಳ ಸರದಾರ
ಹರ್ಷ ಎಸ್. ಖಾಸನೀಸ್... ಹತ್ತು ಚಿತ್ರಗಳನ್ನು ನಿರ್ಮಾಣ ಮಾಡುತ್ತಿರುವ ವ್ಯಕ್ತಿ. ಅಪ್ಪಟ ಕನ್ನಡ ಪ್ರತಿಭೆಯಾಗಿರೋ ಹರ್ಷ ಎಸ್ ಖಾಸನೀಸ್ ಉತ್ತರ ಕರ್ನಾಟಕದ ಕಲಘಟಗಿಯವರು. ಖಾಸಗಿ ಉದ್ಯಮಿಯಾಗಿರುವ ಹರ್ಷ ಚಿಕ್ಕದಿಂದಲೇ ಸಿನಿಮಾ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿದ್ದವರು. ಚಿತ್ರದ ವಿಭಿನ್ನ ಪೋಸ್ಟರ್ ಗಳನ್ನ ನೋಡಿ ಇಂತಹದೊಂದು ಸಿನಿಮಾ ನಾವು ನಿರ್ಮಾಣ ಮಾಡಬೇಕು ಅಂತ ಆಸೆ ಹೊಂದಿದ್ದರಂತೆ. ಆದ್ರೆ ಇಂದು ಹತ್ತು ಚಿತ್ರಗಳನ್ನು ಒಟ್ಟೊಟ್ಟಿಗೆ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕನಸನ್ನ ನನಸು ಮಾಡಿಕೊಂಡಿರುವುದರ ಜೊತೆಗೆ ಸಾಕಷ್ಟು ಜನರಿಗೆ ಅನ್ನದಾತರಾಗಿದ್ದಾರೆ. ಮಾರ್ಕೆಟಿಂಗ್ ನಲ್ಲಿ ಸಾಕಷ್ಟು ಅನುಭವ ಹೊಂದಿರೋ ಹರ್ಷ ಮತ್ತು ತಂಡದವರಿಗೆ ಸಿನಿಮಾ ಫೀಲ್ಡ್ ಅಷ್ಟೇನೂ ಕಷ್ಟ ಅನಿಸಿಲ್ಲವಂತೆ. ಹರ್ಷ ಎಂಟರ್ಟೈನ್ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮೂಲಕ ಈ ಹತ್ತು ಸಿನಿಮಾಗಳು ತಯಾರಾಗ್ತಿದ್ದು ಮೋಸ್ಟ್ ಕ್ರಿಯೇಟಿವ್ ಅನ್ನಿಸಿರುವ ವ್ಯಕ್ತಿಗಳಿಗೆ ಅವ್ರ ತಂಡದಲ್ಲಿ ಅವಕಾಶ ನೀಡಿದ್ದಾರೆ. ಹರ್ಷ ಅವ್ರ ಜೊತೆಯಲ್ಲಿ ಸಂಜೀವ್ ಎಸ್ ಖಾಸನೀಸ್ ಮತ್ತು ಶ್ರೀಕಾಂತ್ ಎಸ್ ಖಾಸನೀಸ್ ಕೂಡ ಸಾಥ್ ನೀಡಿದ್ದು ಈ ಮೂವರು ಸಹೋದರರು ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದ್ಬುತ ಸಿನಿಮಾಗಳನ್ನ ನೀಡುವ ಮುನ್ಸೂಚನೆ ನೀಡಿದ್ದಾರೆ.
ಆ ಹತ್ತು ಸಿನಿಮಾಗಳು
ಕನ್ನಡ ಸಿನಿಮಾರಂಗದಲ್ಲಿ ಹತ್ತು ಸಿನಿಮಾಗಳು ಒಂದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗ್ತಿರೋದು ಇದೇ ಮೊದಲು. ಹತ್ತು ವಿಭಿನ್ನ ಸಿನಿಮಾಗಳಾಗಿದ್ದು ಬಹುತೇಕ ಹೊಸಬರೇ ಇಲ್ಲಿ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಐರಾ,ಎಂ.ಟಿವಿ ಸುಬ್ಬಲಕ್ಷ್ಮಿ, ಸೆಕೆಂಡು ಬಕೆಟು ಬಾಲ್ಕನಿ- ಕಾಮಿಡಿ ಎಂಟ್ರಟೈನರ್, ಶಾದಿಭಾಗ್ಯ-ರೊಮ್ಯಾಂಟಿಕ್ ಕಾಮಿಡಿ,ಪ್ರೇಮದಲ್ಲಿ, ಪ್ರೀತಿ ಪ್ರಾಪ್ತಿರಸ್ತು ಹೀಗೆ ಇನ್ನು ಅನೇಕ ಸಿನಿಮಾಗಳ ಚಿತ್ರೀಕರಣ ಒಮ್ಮೆಲೆ ನಡೆಯುತ್ತಿದೆ. ಪ್ರತಿ ಸಿನಿಮಾದ ತಂತ್ರಜ್ಞರು -ಕಲಾವಿದರು ಎಲ್ಲರೂ ಹೊಸಬರಾಗಿರುವುದರಿಂದ ಮತ್ತು ಒಂದು ಸಿನಿಮಾ ಕಲಾವಿದರು ತಂತ್ರಜ್ಞರು ಮತ್ತೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳದೆ ಇರುವುದರಿಂದ ಸಾಕಷ್ಟು ಜನರಿಗೆ ಅವಕಾಶಗಳು ಸಿಕ್ತಿದೆ. ಅದಷ್ಟೆ ಅಲ್ಲದೆ ಯಾವುದೇ ಸಿನಿಮಾಗಳು ಕೊಂಚವೂ ತೊಂದರೆ ಇಲ್ಲದಂತೆ ಸಲೀಸಾಗಿ ಚಿತ್ರೀಕರಣ ನಡೆಯುತ್ತಿದೆ.
" ಸಿನಿಮಾ ಅಂದ್ರೆ ಎಲ್ಲರಿಗೂ ಇಷ್ಟ ಆಗಬೇಕು ಜನ ಮೆಚ್ಚುವಂತಿರಬೇಕು. ವಿಭಿನ್ನವಾಗಿದೆ ಅನಿಸಬೇಕು. ಅಂತಹ ಸಿನಿಮಾಗಳು ಮಾತ್ರ ನಮ್ಮ ಸಂಸ್ಥೆ ಅಡಿಯಲ್ಲಿ ನಿರ್ಮಾಣ ಆಗುತ್ತದೆ."
- ಹರ್ಷ ಎಸ್ ಖಾಸನೀಸ್, ಹರ್ಷ ಎಂಟರ್ಟೈನ್ಮೆಂಟ್ ಮುಖ್ಯಸ್ಥರು
ಕನ್ನಡಕ್ಕೆ ಬಂತು ಪ್ಯಾಕೆಜ್ ಸಿಸ್ಟಮ್
ಅಂದಹಾಗೇ ಇಲ್ಲಿ ತನಕ ನಿರ್ಮಾಪಕರು ಹಣ ನೀಡ್ತಾರೆ ನಿರ್ದೇಶಕರು ಸಿನಿಮಾ ಡೈರೆಕ್ಟ್ ಮಾಡ್ತಾರೆ ಅನ್ನುವ ಪಾಲಿಸಿ ಚಿತ್ರರಂಗದಲ್ಲಿತ್ತು. ಆದ್ರೆ ಈಗ ಅದು ಬದಲಾಗಿದೆ. ಹರ್ಷ ಎಂಟರ್ಟೈನ್ಮೆಂಟ್ ನಲ್ಲಿ ನಿರ್ಮಾಣವಾಗುವ ಪ್ರತಿ ಸಿನಿಮಾ ಪ್ಯಾಕೇಜ್ ಸಿಸ್ಟಮ್ ನಲ್ಲಿ ನಡೆಯುತ್ತದೆ. ಒಂದು ಸಿನಿಮಾಗೆ ಇಂತಿಷ್ಟು ಅಂತ ಹಣ ಫಿಕ್ಸ್ ಮಾಡಲಾಗುತ್ತದೆ. ಆ ಬಜೆಟ್ ಮೇಲೆ ಸಿನಿಮಾ ತಯಾರಾಗುತ್ತದೆ. ಈ ರೀತಿಯಲ್ಲಿ ಸಿನಿಮಾ ನಿರ್ಮಾಣ ಮಾಡಿದ್ರೆ ನಿರ್ದೇಶಕರು ಜವಾಬ್ದಾರಿ ಹೆಚ್ಚಿರುತ್ತದೆ. ಸಿನಿಮಾ ಮತ್ತು ಕೆಲಸದ ಮಹತ್ವ ಮತ್ತಷ್ಟು ತಿಳಿಯುತ್ತದೆ ಅನ್ನುವುದು ಹರ್ಷ ಅವರ ಅಭಿಪ್ರಾಯ. ಹರ್ಷ ಅವರ ಸಂಸ್ಥೆಯಲ್ಲಿ ನಿರ್ಮಾಣವಾಗ್ತಿರೋ ಸಿನಿಮಾಗಳೆಲ್ಲ ಹೈ ಬಜೆಟ್ ಚಿತ್ರಗಳಲ್ಲ. ಮಿನಿಮಮ್ ಬಜೆಟ್ ನಲ್ಲಿ ಅದ್ಬುತ ಚಿತ್ರಗಳನ್ನ ನೀಡುವುದು ಅವ್ರ ಉದ್ದೇಶ. ಈ ಹತ್ತು ಸಿನಿಮಾಗಳ ನಂತ್ರ ಮತ್ತಷ್ಟು ಉತ್ತಮ ಸಿನಿಮಾಗಳನ್ನ ನಿರ್ಮಿಸುವ ಐಡಿಯಾ ಇವರದ್ದು. ಈ ಐಡಿಯಾ ಕೂಡ ಕಾರ್ಯರೂಪಕ್ಕೆ ಬರಲಿ.
1. ನಿಮ್ಮ ಸ್ಟಾರ್ಟ್ಅಪ್ ಗೆಲುವಿಗೆ ಇವಿಷ್ಟೇ ಮೂಲ ಕಾರಣ..!
2. ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ