50 ವರ್ಷದ ತನ್ನ ತಾಯಿಗಾಗಿ ವರ ಹುಡುಕುತ್ತಿರುವ ಮಗಳು
ತಾನು ಮದುವೆಯಾಗುವ ಸಮಯದಲ್ಲಿ ತನ್ನ ತಾಯಿಗೆ ವರವನ್ನು ಹುಡುಕುವ ಟ್ವಿಟ್ ಮಾಡಿದ್ದಾರೆ ಆಸ್ತಾ ವರ್ಮಾ. ಸದ್ಯ ಈ ಟ್ಟಿಟ್ ವೈರಲ್ ಆಗಿದೆ.
ಎಲ್ಲರ ಜೀವನದಲ್ಲಿ ಸಂಗಾತಿ ಎನ್ನುವ ಜೀವ ಬಹು ಮುಖ್ಯವಾದದು. ತಮ್ಮ ಪ್ರತಿಯೊಂದು ಹೆಜ್ಜೆಯಲ್ಲೂ ಸಂಗಾತಿ ಇರಬೇಕು ಎಂದುಕೊಳ್ಳುವವರು ಎಷ್ಟೋ ಮಂದಿ. ಕಷ್ಟ ಸುಖಗಳನ್ನು ಹಂಚಿಕೊಳ್ಳೋದಿಕ್ಕೆ ಸಂಗಾತಿ ಬೇಕೆ ಬೇಕು. ಆದರೆ ಕೆಲವೊಮ್ಮೆ ದುರದೃಷ್ಟವಶಾತ್ ಸಂಗಾತಿ ಅಗಲಿದರೆ ಅದರಿಂದಾಗುವ ದುಖಃ ಜೀವನ ಪರ್ಯಂತ ಇರುವಂತದ್ದು. ಸಂಗಾತಿ ಅಗಲಿಕೆಯ ನಂತರ ಆ ದುಃಖದ ನಡುವೆಯು ಹೊಸ ಜೀವನ ಆರಂಭಿಸುತ್ತಾರೆ. ಆದರೆ ಈ ಹೊಸ ಜೀವನ ಆರಂಭಿಸುವಾಗಲೂ ಕೆಲವೊಂದು ಅಡೆ ತಡೆಗಳು ಬಂದೇ ಬರುತ್ತವೆ. ನಮ್ಮ ಸಮಾಜ ಮರು ಮದುಗೆ ಒಪ್ಪುವುದು ತೀರಾ ಕಡಿಮೆ. ಪರಿಸ್ಥಿತಿ ಬದಲಾದರೂ ಸಂಪ್ರದಾಯ ಎಂಬ ಸಂಕೋಲೆ ಕಟ್ಟಿ ಹಾಕುತ್ತದೆ. ಇನ್ನು ವಯಸ್ಸಿನ ಅಡ್ಡಿಯೂ ಮರು ಮದುವೆಗಳಿಗೆ ಅಡ್ಡಗಾಲು ಹಾಕುತ್ತದೆ. ಇದೀಗ ಇಂಥಹ ಸವಾಲುಗಳು ಮಧ್ಯೆ ತನ್ನ ತಾಯಿಗೆ ವರ ಹುಡುಕುತ್ತಿದ್ದಾರೆ ಆಸ್ತಾ ವರ್ಮಾ.
ಹೌದು, ಕಾನೂನು ಶಿಕ್ಷಣ ಓದುತ್ತಿರುವ ಆಸ್ತಾ ವರ್ಮಾ ತನ್ನ 50 ರ ವಯಸ್ಸಿನ ತಾಯಿಗೆ ಸೂಕ್ತ ವರನ ಹುಡುಕಾಟದಲ್ಲಿದ್ದಾರೆ. ತನ್ನ ತಾಯಿಯ ಜೊತೆಗಿನ ಫೋಟೋ ಒಂದನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವರ್ಮಾ ಮನವಿಯೊಂದನ್ನು ಮಾಡಿದ್ದಾರೆ. ತನ್ನ ತಾಯಿಗೆ 50 ವರ್ಷದ ಸೂಕ್ತ ವರ ಬೇಕು. ನೋಡಲು ಚೆನ್ನಾಗಿರಬೇಕು. ಅವರು ಸಸ್ಯಹಾರಿಗಳು ಮತ್ತು ಮದ್ಯಪಾನ ಮಾಡಬಾರದವರಾಗಿರಬೇಕು ಎಂದು ಹೇಳಿದ್ದಾರೆ. ಸದ್ಯ ಆಸ್ತಾ ವರ್ಮಾ ಅವರ ಈ ಟ್ವಿಟ್ ಗೆ ಅನೇಕ ಮಂದಿ ಖುಷಿಯಾಗಿದ್ದಾರೆ. ಅಷ್ಟೆ ಅಲ್ಲ ಅನೇಕರು ಇವರಿಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಮೇಲಿನ ಈ ಪ್ರೀತಿ, ಕಾಳಜಿಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಅಕ್ಟೋಬರ್ 31 ರಂದು ಆಸ್ತಾ ವರ್ಮಾ ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಇದುವರೆಗೂ 5 ಸಾವಿರಕ್ಕೂ ಅಧಿಕ ಮಂದಿ ಪ್ರತಿಕ್ರಿಯಿಸಿದರೆ, 5,000ಕ್ಕೂ ಹೆಚ್ಚು ಮಂದಿ ರೀಟ್ವೀಟ್ ಮಾಡಿದ್ದಾರೆ. ಸುಮಾರು 6 ಸಾವಿರಕ್ಕೂ ಹೆಚ್ಚು ಮಂದಿ ಟ್ವೀಟ್ ಅನ್ನು ಲೈಕ್ ಮಾಡಿದ್ದಾರೆ. ಇದರಲ್ಲಿ ಹಲವರು 50ರ ಆಸುಪಾಸಿನ ಒಂದಿಷ್ಟು ಪುರುಷರ ಮಾಹಿತಿಯನ್ನು ಹಂಚಿಕೊಂಡಿದ್ದರೆ, ಇನ್ನೊಂದಿಷ್ಟು ಮಂದಿ ಹಲವರಿಗೆ ಟ್ಯಾಗ್ ಮಾಡಿದ್ದಾರೆ.
ಮಕ್ಕಳು ತಮ್ಮ ಜೀವನದ ಜಂಜಾಟಗಳಲ್ಲಿ ಕಳೆದು ಹೋಗುತ್ತಿರುವ ಕಾಲದಲ್ಲಿ ಆಸ್ತಾ ವರ್ಮಾ ರಂತಹ ಮಕ್ಕಳು ಸಮಾಜದ ಕಟ್ಟು ಪಾಡುಗಳನ್ನು ಬದಿಗಿಟ್ಟು ತಮ್ಮ ಪೋಷಕರ ಜೀವನದ ಬಗ್ಗೆ ಕಾಳಜಿ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.