ಆವೃತ್ತಿಗಳು
Kannada

ಉದ್ಯಮ ಕ್ಷೇತ್ರದಲ್ಲಿ ಅತೀ ಹೆಚ್ಚು ವೇತನ ಪಡೆಯುತ್ತಿರುವ ಭಾರತದ ಟಾಪ್ 10 ಮಹಿಳೆಯರು

ಟೀಮ್​​ ವೈ.ಎಸ್​​​.

YourStory Kannada
10th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಉದ್ಯಮ ಕ್ಷೇತ್ರ ಇಂದು ಬಹಳಷ್ಟು ಮುಂದುವರೆದಿದೆ. ಇದರಲ್ಲಿ ಮಹಿಳೆಯರೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗೆ ಶ್ರಮಿಸುತ್ತಿರುವ ಅನೇಕ ಮಹಿಳೆಯರ ವಾರ್ಷಿಕ ಆದಾಯದ ಪಟ್ಟಿ ಇಲ್ಲಿದೆ. ಅನೇಕ ಉದ್ಯಮ ಪತ್ರಿಕೆಗಳು ಹಾಗೂ ಮ್ಯಾಗಜಿನ್‌ಗಳ ಪ್ರಕಾರ ಯಾಹೂ ಸಂಸ್ಥೆಯ ಸಿಇಓ ಮರಿಸ್ಸಾ ಮೇಯರ್ ಪ್ರಪಂಚದಲ್ಲಿಯೇ ಅತೀ ಹೆಚ್ಚು ಸಂಬಳ ಪಡೆಯುವ ಮಹಿಳಾ ಕಾರ್ಯನಿರ್ವಾಹಕಿ. 2014ರಲ್ಲಿ ಅವರು ಹತ್ತಿರ ಹತ್ತಿರ 42.1 ಮಿಲಿಯನ್ ಯುಎಸ್ ಡಾಲರ್ ಹಣವನ್ನು ಸಂಬಳವಾಗಿ ಪಡೆಯುತ್ತಿದ್ದರು. ಇನ್ನು ಕೆಲವು ಅತೀ ಹೆಚ್ಚು ಸಂಬಳ ಪಡೆಯುವ ಮಹಿಳೆಯರೆಂದರೆ, ಸುಮಾರು 31.6 ಮಿಲಿಯನ್ ಯುಎಸ್ ಡಾಲರ್ ಸಂಬಳ ಪಡೆಯುವ ಮಾರ್ಟಿನ್ ರೂಥ್‌ಬ್ಲಾಟ್, ಈ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿರುವ 19.6 ಮಿಲಿಯನ್ ಯುಎಸ್ ಡಾಲರ್ ಸಂಬಳ ಪಡೆಯುವ ಮೆಗ್ ವೈಟ್‌ಮ್ಯಾನ್ ಮತ್ತು ಪೆಪ್ಸಿಕೋ ಸಂಸ್ಥೆಯ ಸುಮಾರು 19.1 ಮಿಲಿಯನ್ ಯುಎಸ್ ಡಾಲರ್ ಸಂಬಳ ಪಡೆಯುವ 81ನೇ ಸ್ಥಾನದಲ್ಲಿರುವ ಇಂದ್ರಾ ನೂಯಿ.

image


ಈ ಸ್ಪರ್ಧೆಯಲ್ಲಿ ಭಾರತವೇನೂ ಹಿಂದೆ ಬಿದ್ದಿಲ್ಲ. ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಟಾಪ್ 10 ಮಹಿಳೆಯರ ಪಟ್ಟಿ ಇಲ್ಲಿದೆ.

1.ಕಾವೇರಿ ಕಲಾನಿಧಿ, ವ್ಯವಸ್ಥಾಪಕ ನಿರ್ದೇಶಕಿ, ಸನ್ ಟಿವಿ

ಪ್ರಮುಖ ಮಾಧ್ಯಮ ದಿಗ್ಗಜ ಕಲಾನಿಧಿ ಮಾರನ್ ಅವರ ಪತ್ನಿಯಾಗಿರುವ ಕಾವೇರಿ ಕಲಾನಿಧಿ ತಮ್ಮ ಸಂಬಳ 72 ಕೋಟಿ ಎಂದು ಘೋಷಿಸಿಕೊಂಡಿದ್ದಾರೆ. 2014ರಲ್ಲಿ ಅವರ ಒಟ್ಟು ಕಾಂಪನ್ಸೇಟೆಡ್ ಪೇ ಪ್ಯಾಕೇಜ್ 598,900,000 ಆಗಿತ್ತು. ಅಲ್ಲದೇ 2010ರ ನವೆಂಬರ್​​ನಲ್ಲಿ ಸ್ಪೈಸ್ ಜೆಟ್ ಸಂಸ್ಥೆಯ ಛೇರ್‌ಮನ್ ಆಗಿಯೂ ಕಾವೇರಿ ಕಲಾನಿಧಿ ಕಾರ್ಯನಿರ್ವಹಿಸಿದ್ದಾರೆ. ನವೆಂಬರ್ 15, 2010ರಿಂದ ಜನವರಿ 30 2015ರವರೆಗೆ ಅವರು ಸ್ಪೈಸ್ ಜೆಟ್ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

2.ಕಿರಣ್ ಮಜುಂದಾರ್ ಶಾ, ಸಿಎಂಡಿ, ಬಯೋಕಾನ್ ಲಿಮಿಟೆಡ್

image


ಭಾರತದ ಅತೀ ದೊಡ್ಡ ಬಯೋಫಾರ್ಮಾ ಸಂಘಟನೆಯ ಸಿಎಂಡಿಯಾಗಿರುವ ಕಿರಣ್ ಮಜುಂದಾರ್‌ ಶಾ ಪ್ರಪಂಚದ ಅತ್ಯಂತ ಪ್ರಭಾವಶಾಲಿ 100 ಮಂದಿ ಮಹಿಳೆಯರ ಪೈಕಿ ಒಬ್ಬರು. 2014ರಲ್ಲಿ ವಿಜ್ಞಾನ ಮತ್ತು ರಾಸಾಯನಿಕ ಶಾಸ್ತ್ರ ವಿಭಾಗದ ಅಭಿವೃದ್ಧಿಗಾಗಿ ಮಾಡಿದ ಅತ್ಯದ್ಭುತ ಸಾಧನೆಗಾಗಿ ಅವರು ಆದ್ಮೆರ್ ಗೋಲ್ಡ್ ಮೆಡಲ್ ಗೌರವಕ್ಕೂ ಪಾತ್ರರಾಗಿದ್ದಾರೆ. ಫೋರ್ಬ್ಸ್ ಪತ್ರಿಕೆ, ಕಿರಣ್ ಮಜುಂದಾರ್ ಶಾ ಭಾರತದ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆ ಎಂದು ಹೇಳಿದೆ. 2014ರ ವರ್ಷದಲ್ಲಿ ಅವರ ಒಟ್ಟು ಸಂಬಳ 16,347,463 ರೂ.

3.ಊರ್ವಿ ಎ ಪಿರಮಲ್, ಅಶೋಕ್ ಪಿರಮಲ್ ಗ್ರೂಪ್‌ನ ಅಧ್ಯಕ್ಷರು

32ನೇ ವರ್ಷದಲ್ಲಿ ತಮ್ಮ ಪತಿಯನ್ನು ಕಳೆದುಕೊಂಡ ಊರ್ವಿ ಉದ್ಯಮ ಪ್ರಪಂಚಕ್ಕೆ ಕಾಲಿಟ್ಟಿದ್ದು 1984ರಲ್ಲಿ. ತಮ್ಮ ಪತಿ ಅಶೋಕ್ ಅವರ ಬಳಿಕ ಸಂಸ್ಥೆಯನ್ನು ಮುನ್ನಡೆಸುವ ಜವಾಬ್ದಾರಿ ಊರ್ವಿಯವರ ಹೆಗಲೇರಿತು. 2005ರಲ್ಲಿ ಊರ್ವಿ ಹಾಗೂ ಅವರ ಮಕ್ಕಳು ಸೇರಿ ಜವಳಿ ಉದ್ಯಮ ಮತ್ತು 2 ಎಂಜನಿಯರಿಂಗ್ ಸಂಸ್ಥೆಯನ್ನು ಆರಂಭಿಸಿದರು. ಇವರ ಒಟ್ಟು ಆಸ್ತಿಯೂ ಅಷ್ಟೇನೂ ಹೆಚ್ಚಿರಲಿಲ್ಲ. ಉದ್ಯಮದಲ್ಲಿ ಚೇತರಿಕೆ ಕಾಣಲು 7 ವರ್ಷಗಳ ಕಾಲ ಅವರು ಕಾಯಬೇಕಾಯಿತು. ಇಂದು ಹಲವು ಕ್ಷೇತ್ರಗಳ ಉದ್ಯಮದಲ್ಲಿ ಊರ್ವಿ ತೊಡಗಿಕೊಂಡಿದ್ದಾರೆ. 2012-13ರಲ್ಲಿ ಅವರ ವಾರ್ಷಿಕ ಆದಾಯ 7.3 ಕೋಟಿ ಆಗಿತ್ತು.

4.ಚಂದಾ ಕೊಚ್ಚಾರ್, ಎಂಡಿ ಮತ್ತು ಸಿಇಓ, ಐಸಿಐಸಿಐ ಬ್ಯಾಂಕ್

2005ರಿಂದ ಚಂದಾ ಕೊಚ್ಚಾರ್ ಅವರು ನಿರಂತರವಾಗಿ ಉದ್ಯಮದ ಅತ್ಯಂತ ಪ್ರಭಾವಶಾಲಿ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ. 2009ರಲ್ಲಿ ಪೋರ್ಬ್ಸ್ ನಿಯತಕಾಲಿಕೆಯ ಪ್ರಪಂಚದ 100 ಮಂದಿ ಪ್ರಭಾವಶಾಲಿ ಮಹಿಳೆಯರ ಪಟ್ಟಿಯಲ್ಲಿ 20ನೆಯವರಾಗಿದ್ದಾರೆ. ಪ್ರಮುಖವಾಗಿ ಭಾರತದ ಚಿಲ್ಲರೆ ಬ್ಯಾಂಕಿಂಗ್‌ ವಲಯದಲ್ಲಿ ಹಾಗೂ ಐಸಿಐಸಿಐ ಗ್ರೂಪ್‌ನ ನಾಯಕತ್ವ ವಹಿಸಿಕೊಳ್ಳುವ ಮೂಲಕ ಚಂದಾ ಕೊಚ್ಚರ್ ಗುರುತಿಸಿಕೊಂಡಿದ್ದಾರೆ. ಇದಲ್ಲದೇ ಭಾರತ ಹಾಗೂ ಜಾಗತಿಕ ಮಟ್ಟದ ಅನೇಕ ವೇದಿಕೆಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. 2014ರಲ್ಲಿ ಚಂದಾ ಕೊಚ್ಚಾರ್ ಅವರ ಒಟ್ಟು ವಾರ್ಷಿಕವಾಗಿ 52,282,644 ರೂ. ಆಗಿತ್ತು.

image


5.ಶೋಭನಾ ಭಾರ್ಟಿಯಾ, ಅಧ್ಯಕ್ಷರು, ಹೆಚ್‌ಟಿ ಇಂಡಿಯಾ ಸಂಸ್ಥೆ

ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಶೋಭನಾ ಭಾರ್ಟಿಯಾ ಅವರು ಹಿಂದೂಸ್ತಾನ್ ಟೈಮ್ಸ್ ಸಮೂಹದ ಅಧ್ಯಕ್ಷರು ಹಾಗೂ ಸಂಪಾದಕೀಯ ನಿರ್ದೇಶಕರು. ಉದ್ಯಮದ ಚಾಕಚಕ್ಯತೆಯನ್ನು ತಮ್ಮ ತಂದೆ ಕೆ.ಕೆ. ಬಿರ್ಲಾರಿಂದ ಬಳುವಳಿಯಾಗಿ ಪಡೆದವರು ಶೋಭನಾ. ಶೋಭನಾ ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಯಾನ ಆರಂಭಿಸಿದಾಗ ಆ ಕ್ಷೇತ್ರ ಇನ್ನೂ ಲಾಭದಾಯಕ ಉದ್ಯಮವಾಗಿ ಗುರುತಿಸಿಕೊಂಡಿರಲಿಲ್ಲ. ಇಂದು ಭಾರತದಲ್ಲಿ ಹಿಂದೂಸ್ತಾನ್ ಟೈಮ್ಸ್ ಮಾಧ್ಯಮ ಸಂಸ್ಥೆ ಅತ್ಯುತ್ತಮ ಲಾಭ ಗಳಿಕೆಯ ಹಾಗೂ ಯಶಸ್ವಿ ಮಾಧ್ಯಮ ಉದ್ಯಮವಾಗಿ ಗುರುತಿಸಿಕೊಂಡಿದೆ. 2014ರ ಆರ್ಥಿಕ ವರ್ಷದಲ್ಲಿ ಹಿಂದೂಸ್ತಾನ್ ಟೈಮ್ಸ್ ಸಂಸ್ಥೆಗೆ 155 ಕೋಟಿ ರೂ. ಲಾಭ ಪಡೆಯುವಂತೆ ಮುನ್ನಡೆಸಿದ್ದರು. 2013ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2014ರಲ್ಲಿ ಆದಾಯ 24 ಕೋಟಿ ಹೆಚ್ಚುವರಿಯಾಗಿತ್ತು. 2014ರಲ್ಲಿ ಶೋಭನಾರ ವಾರ್ಷಿಕ ಆದಾಯ 26,880,000 ಆಗಿತ್ತು.

image


6.ಪ್ರೀತಾ ರೆಡ್ಡಿ, ವ್ಯವಸ್ಥಾಪಕ ನಿರ್ದೇಶಕಿ, ಅಪೋಲೋ ಆಸ್ಪತ್ರೆ ಎಂಟರ್ ಪ್ರೈಸ್

ಭಾರತದ ಅತೀ ದೊಡ್ಡ ಹೆಲ್ತ್‌ ಕೇರ್ ಉದ್ಯಮದ ವ್ಯವಸ್ಥಾಪಕ ನಿರ್ದೇಶಕಿ ಪ್ರೀತಾ ರೆಡ್ಡಿ. ಪ್ರೀತಾ ರೆಡ್ಡಿಯವರನ್ನು ಹೆಲ್ತ್ ಕೇರ್ ವಿಭಾಗದ ಉದ್ಯಮ ಪ್ರವರ್ತಕಿ ಮಹಿಳೆ ಎಂದೇ ಗುರುತಿಸಲಾಗುತ್ತದೆ. 2014ರ ಆರ್ಥಿಕ ವರ್ಷದಲ್ಲಿ ಅವರ ವಾರ್ಷಿಕ ಆದಾಯ 51,110,000 ರೂ. ಆಗಿತ್ತು. ಪ್ರೀತಾ ರೆಡ್ಡಿಯವರ ಮುಂದಾಳತ್ವದಲ್ಲಿ ಭಾರತ ಸರ್ಕಾರದೊಂದಿಗೆ ಸೇರಿ ಅಪೋಲೋ ಸಂಸ್ಥೆ ಎನ್ ಎ ಬಿ ಹೆಚ್( ನ್ಯಾಷನಲ್ ಅಕ್ರೆಡಿಟೇಷನ್ ಬೋರ್ಡ್ ಫಾರ್ ಹಾಸ್ಪಿಟಲ್ ಎಂಡ್ ಹೆಲ್ತ್ ಕೇರ್ ಪ್ರೊವೈಡರ್ಸ್) ಅನ್ನು ಪರಿಚಯಿಸಿತು.

image


7.ವಿನೀತಾ ಸಿಂಘಾನಿಯಾ, ವ್ಯವಸ್ಥಾಪಕ ನಿರ್ದೇಶಕಿ, ಜೆಕೆ ಲಕ್ಷ್ಮಿ ಸಿಮೆಂಟ್

2013ರ ಉದ್ಯಮ ಕ್ಷೇತ್ರದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ ವಿನೀತಾ ಸಿಂಘಾನಿಯಾ. ಸಿಮೆಂಟ್ ಉತ್ಪಾದಕರ ಅಸೋಸಿಯೇಶನ್‌ನ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆಯಾಗಿ 2009 ರಿಂದ 2012ರವರೆಗೆ ವಿನೀತಾ ಸಿಂಘಾನಿಯಾ ಕಾರ್ಯನಿರ್ವಹಿಸಿದ್ದಾರೆ. 1998ರಲ್ಲಿ ತಮ್ಮ ಪತಿ ಶ್ರೀಪತಿ ಸಿಂಘಾನಿಯಾರ ಆಕಸ್ಮಿಕ ನಿಧನದ ಬಳಿಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವರು ವಿನೀತಾ ಸಿಂಘಾನಿಯಾ. ವಿನೀತಾರ ನಾಯಕತ್ವದಲ್ಲಿ ಜೆಕೆ ಲಕ್ಷ್ಮಿ ಸಿಮೆಂಟ್ಸ್ ಸಂಸ್ಥೆ 2012-2013ನೇ ಸಾಲಿನಲ್ಲಿ ಶೇ.62ರಷ್ಟು ಲಾಭ ಪಡೆಯಿತು. ಕೇವಲ ಐದೇ ವರ್ಷಗಳಲ್ಲಿ ಸಂಸ್ಥೆಯ ಆದಾಯ 100 ಕೋಟಿಯಿಂದ 450 ಕೋಟಿಗೆ ಏರಿಕೆಯಾಗುವಂತೆ ಮಾಡಿದ ಹೆಗ್ಗಳಿಕೆ ವಿನೀತಾರದ್ದು. 2014ರ ಆರ್ಥಿಕ ವರ್ಷದಲ್ಲಿ ಅವರ ವೇತನ 43, 973,000 ರೂ.ಗಳಾಗಿತ್ತು.

8.ವಿನೀತಾ ಬಾಲಿ, ಬ್ರಿಟಾನಿಯಾ ಇಂಡಸ್ಟ್ರೀಸ್

2005ರ ಜನವರಿಯಿಂದ 2014ರ ಮಾರ್ಚ್‌ವರೆಗೆ ಬ್ರಿಟಾನಿಯಾ ಸಂಸ್ಥೆಯ ಸಿಇಓ ಆಗಿದ್ದವರು ವಿನೀತಾ ಬಾಲಿ. ಇದೇ ವೇಳೆಯಲ್ಲಿ ವಿನೀತಾರವರು ಪ್ರಪಂಚದ 50 ಮಂದಿ ಮಹಿಳಾ ಉದ್ಯಮಿಗಳಲ್ಲಿ ಗುರುತಿಸಿಕೊಂಡಿದ್ದವರು. ಅಲ್ಲದೇ ಫೋರ್ಬ್ಸ್ ಲೀಡರ್ ಶಿಪ್ ಪುರಸ್ಕಾರಕ್ಕೂ ಅವರು ಭಾಜನರಾಗಿದ್ದಾರೆ. 2014ರ ಆರ್ಥಿಕ ವರ್ಷದಲ್ಲಿ ಅವರ ವಾರ್ಷಿಕ ಆದಾಯ 41,083,742 ರೂ. ಆಗಿತ್ತು.

image


9.ರೇಣು ಸೂದ್ ಕಾರ್ನಾಡ್, ವ್ಯವಸ್ಥಾಪಕ ನಿರ್ದೇಶಕಿ, ಹೆಚ್‌ಡಿಎಫ್‌ಸಿ

2010ರಿಂದ ಹೆಚ್‌ಡಿಎಫ್‌ಸಿ ಸಂಸ್ಥೆಯ ಎಂಡಿಯಾಗಿ ಕಾರ್ಯನಿರ್ವಹಿಸುತ್ತಿರುವ ರೇಣು ಸೂದ್ ಕಾರ್ನಾಡ್ ಅವರು ಸಂಸ್ಥೆಯ ಪ್ರಾಡಕ್ಟ್ ಡೆವಲಪ್‌ಮೆಂಟ್, ಸ್ಟ್ರಾಟೆಜಿ ಮತ್ತು ಬಜೆಟ್‌ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ರೇಣುಸೂದ್ ಅವರು ಆರ್ಥಿಕ ತಜ್ಞೆಯೂ ಹೌದು. ಅಂತರಾಷ್ಟ್ರೀಯ ಉದ್ಯಮಗಳಲ್ಲಿ ಅವರ ಪರಿಣಿತಿ ಅಪಾರ. 2014ರ ಆರ್ಥಿಕ ವರ್ಷದಲ್ಲಿ ಅವರ ವಾರ್ಷಿಕ ಆದಾಯ 71,619,159 ರೂ. ಆಗಿತ್ತು.

10. ಸುನೀತಾ ರೆಡ್ಡಿ, ಜಂಟಿ ವ್ಯವಸ್ಥಾಪಕ ನಿರ್ದೇಶಕಿ, ಅಪೋಲೋ ಆಸ್ಪತ್ರೆ

ಅಪೋಲೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಪ್ರೀತಾ ರೆಡ್ಡಿ ಅವರ ಸೋದರಿ ಸುನೀತಾ ರೆಡ್ಡಿಯವರು ಅಪೋಲೋ ಗ್ರೂಪ್‌ ಆಫ್‌ ಹಾಸ್ಪಿಟಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕಿ. ಸುನೀತಾರ ಆರ್ಥಿಕ ಜ್ಞಾನ ಬಹಳ ಪ್ರಖ್ಯಾತ. ಅಪೋಲೋ ಆಸ್ಪತ್ರೆಯ ವೈದ್ಯಕೀಯ ಮೌಲ್ಯಗಳನ್ನು ಹೆಚ್ಚಿಸುವಲ್ಲಿ ಅವರ ಪಾತ್ರ ಹಿರಿದು. ಸುನೀತಾ ರೆಡ್ಡಿಯವರ ನಾಯಕತ್ವದಲ್ಲಿ ಮುಂದುವರೆಯುತ್ತಿರುವ ಅಪೋಲೋ ರೀಚ್ ಹಾಸ್ಪಿಟಲ್ ಮಾಡೆಲ್ ವರ್ಲ್ಡ್ ಬ್ಯಾಂಕ್‌ನ ಪ್ರಶಂಸೆಗೂ ಪಾತ್ರವಾಗಿದೆ. 2014ರ ಆರ್ಥಿಕ ವರ್ಷದಲ್ಲಿ ಅವರ ವಾರ್ಷಿಕ ಆದಾಯ 51,840,000 ರೂ. ಆಗಿತ್ತು.

image


 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories