ದೇಶ ಸುತ್ತುವುದಕ್ಕೆ ಸಾಕೇ ಸಾಕು ದಿನಕ್ಕೆ 300 ರೂಪಾಯಿ...!

ಟೀಮ್​​ ವೈ.ಎಸ್​​.ಕನ್ನಡ

29th Nov 2015
  • +0
Share on
close
  • +0
Share on
close
Share on
close

ದೇಶ ದೇಶವನ್ನು ಸುತ್ತಬೇಕು ಎನ್ನೋದು ಹಲವರ ಬಯಕೆ. ಕಾಲಿಗೆ ಚಕ್ರ ಕಟ್ಟಿಕೊಂಡಂತೆ ದೇಶಾದ್ಯಂತ ಸುತ್ತಿ ಅನುಭವದ ಮೂಟೆ ಕಟ್ಟಿಕೊಳ್ಳಬೇಕು ಅಂತ ಹಲವರು ಹಂಬಲಿಸುತ್ತಲೇ ಇರ್ತಾರೆ, ಕೆಲವರು ರಜೆ ತೆಗೆದುಕೊಂಡ ಅಲ್ಲಿಂದಿಲ್ಲಿಗೆ ಸುತ್ತಾಡಿ ತಮ್ಮ ಬಯಕೆಯನ್ನು ಈಡೇರಿಸಿಕೊಂಡರೆ, ಇನ್ನೂ ಕೆಲವರು ತಮ್ಮ ಉದ್ಯೋಗಕ್ಕೆ ಗುಡ್​​ಬೈ ಹೇಳಿ ಸುತ್ತುವ ಚಟಕ್ಕೆ ಬಿದ್ದವರೂ ಉಂಟು. ಆದರೆ, ಒಂದಿಷ್ಟು ಮಂದಿಗೆ ಪ್ರವಾಸ ಕೈಗೊಳ್ಳುವುದು ಒಂದು ಪ್ರಯಾಸದ ಅನುಭವ. ಕಾರಣ ದೇಶಾದ್ಯಂತ ಸುತ್ತಾಡಬೇಕು ಅಂದ್ರೆ ಅದೊಂದು ದುಬಾರಿ ಖರ್ಚು ಅನ್ನೋ ಫಿಲಿಂಗ್.

image


ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳುವುದು ಸಾಧ್ಯವಿಲ್ಲ ಎನ್ನುವಂತವರು ಈ ಲೇಖನವನ್ನು ಒಮ್ಮೆ ಓದಿ.ಇನ್ನು, ಹಣ ಬೇಕಾದಷ್ಟಿದೆ, ಆದ್ರೆ ಕಡಿಮೆ ಬಜೆಟ್ ನಲ್ಲಿ ಪ್ರವಾಸ ಮುಗಿಸಬೇಕು ಎನ್ನುವವರೂ ಕೂಡ ಒಮ್ಮೆ ಇಲ್ಲಿ ಕಣ್ಣಾಡಿಸಿ. ಇವೆರಡರ ಮಧ್ಯೆ ಹೊಸದೊಂದು ಅನುಭವ ನಿಮಗಿಲ್ಲಿ ಕಾದಿದೆ.

ಜುಲೈ ತಿಂಗಳಲ್ಲಿ ನಾನು ನನ್ನ ಉದ್ಯೋಗಕ್ಕೆ ಗುಡ್ ಬೈ ಹೇಳಿ ದೇಶ ಸುತ್ತುವ ಅದ್ಭುತ ಅನುಭವಕ್ಕೆ ಕಾಲಿಟ್ಟೆ. ಮೊದಲು ನಾನು ಲೆಕ್ಕ ಹಾಕಿದ್ದು ನನ್ನ ಬಳಿ ಇರುವ ಹಣ ಎಷ್ಟು ಅಂತ. ಸರಿಯಾಗಿ ನನ್ನ ಕೈಲಿ ಪ್ರತಿದಿನವೊಂದಕ್ಕೆ ಕೇವಲ 300 ರೂಪಾಯಿ (5 ಡಾಲರ್​​ಗೂ ಕಡಿಮೆ) ಖರ್ಚು ಮಾಡುವಷ್ಟು ಮಾತ್ರ ಹಣ ಇತ್ತು. ಬರೋಬ್ಬರೀ 120 ದಿನ ನಾನು ರಸ್ತೆಯಲ್ಲಿ ಸಂಚರಿಸುತ್ತ ಕಳೆದಿದ್ದೆ ಮತ್ತು ಅಷ್ಟರಲ್ಲೇ ಇಡೀ ಪ್ರವಾಸವನ್ನು ಮುಗಿಸೋದು ಹೇಗೆ ಎನ್ನೋದನ್ನು ಕಲಿತಿದ್ದೆ.

image


ಇಷ್ಟು ಕಡಿಮೆ ಬಜೆಟ್ ನಲ್ಲಿ ಪ್ರವಾಸದ ಸಮಯ ಕಳೆಯೋದು ಹೇಗೆ ಎನ್ನೋ ಉಪಾಯಗಳನ್ನು ನಿಮಗಿಲ್ಲಿ ನಾನು ಹೇಳಲೇಬೇಕು. ಈ ಐಡಿಯಾಗಳನ್ನು ಅಳವಡಿಸಿಕೊಂಡು ನೀವು ನಿಮ್ಮ ಅಲೆಮಾರಿ ಮನಸ್ಸಿಗೆ ಅಪರಿಚಿತ ಸ್ಥಳಗಳನ್ನು ದರ್ಶನ ಮಾಡಿಸಿಕೊಳ್ಳಿ ಅಥವಾ ನಿಮ್ಮ ಕೆಲಸದ ಮಧ್ಯೆಯೂ ನಿಗದಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಎಂಜಾಯ್ ಮಾಡಿ.

ಪ್ರಯಾಣದ ಹೆಜ್ಜೆಯನ್ನು ಮುಂದಿಡೋ ಮೊದಲು ಆದಷ್ಟು ರಫ್ ಅಂಡ್ ಟಫ್ ಆಗಿರೋದಕ್ಕೆ ಸಿದ್ದತೆ ಮಾಡಿಕೊಳ್ಳಿ. ಹಣ ಇಲ್ಲದ ಅಪರಿಚಿತ ಸ್ಥಳಗಳಲ್ಲೂ ಗಟ್ಟಿಯಾಗಿ ನಿಲ್ಲೋದಕ್ಕೆ ಮಾನಸಿಕ ಸ್ಥೈರ್ಯ ಮತ್ತು ವಿಲ್ ಪವರ್ ಗಟ್ಟಿಯಾಗಿರಬೇಕು.

ದೂರದ ಪ್ರಯಾಣ

ನಿಮ್ಮ ಪ್ರವಾಸದ ದೂರ ಹೆಚ್ಚಾಗಿದ್ದಷ್ಟು ನೀವು ಕಡಿಮೆ ಖರ್ಚಿನ ಸಾರಿಗೆಯನ್ನು ಬಳಸೋದು ಬೆಸ್ಟ್.ಹೀಗಾಗಿ ದೂರದ ಪ್ರಯಾಣಕ್ಕೆ ಸಾರಿಗೆ ಬಸ್ಸುಗಳಿಗಿಂತ ರೈಲ್ವೇ ಪ್ರಯಾಣ ಹೆಚ್ಚು ಸೂಕ್ತ.

ಭಾರತೀಯ ರೈಲ್ವೆ

ನೀವು ಭಾರತದಲ್ಲಿದ್ದೀರಿ ಅಂದಮೇಲೆ, ಇಲ್ಲಿನ ರೈಲ್ವೇ ಸಂಪರ್ಕಗಳು ಪ್ರವಾಸಕ್ಕೆ ಒಂದು ವರದಾನವೇ ಹೌದು. ಅತ್ಯಂತ ಸಂಕೀರ್ಣವಾದ ಆದರೆ ಅಷ್ಟೇ ಕಡಿಮೆ ಖರ್ಚಿನಲ್ಲಿ ನಿಮ್ಮನ್ನು ಕರೆದೊಯ್ಯೋ ಜನರಲ್ ಕಂಪಾರ್ಟ್​ಮೆಂಟ್ ಗಳೇ ಟ್ರಾವೆಲ್ ಮಾಡೋದಕ್ಕೆ ಸೂಕ್ತ. ಜನರಲ್ ಬೋಗಿಗಳಲ್ಲಿ ನೂಕುನುಗ್ಗಲು ಇರುತ್ತೆ ಎನ್ನೋದು ನಿಜವಾದ್ರೂ ಅವೇ ನಿಮ್ಮ ಅನುಭವವನ್ನು ಕಟ್ಟಿಕೊಡುತ್ತವೆ. ಜನರಲ್ ಬೋಗಿಗಳಲ್ಲಿ ಕಳೆಯೋ ಒಂದರ್ಧ ಗಂಟೆ ಸಮಯ ನಿಮಗೆ ಇಡೀ ಪ್ರದೇಶದ ಪರಿಚಯವನ್ನು ಜನರ ಸಂಸ್ಕೃತಿಯನ್ನು ತಿಳಿಸಿಬಿಡುತ್ತದೆ.

ಜನರಲ್ ಕಂಪಾರ್ಟ್​ಮೆಂಟ್ ಗಳಲ್ಲಿ ಉಸಿರಾಡೋದಕ್ಕೂ ಕಷ್ಟ, ನಿಲ್ಲುವುದಕ್ಕೂ ಸಾಧ್ಯವಿಲ್ಲದಷ್ಟು ಜನಜಂಗುಳಿ, ಟಾಯ್ಲೆಟ್ ಪಕ್ಕದ ದುರ್ನಾತವನ್ನಂತೂ ಸಹಿಸಿಕೊಳ್ಳೋದಕ್ಕೆ ಸಾಧ್ಯವೇ ಇಲ್ಲ, ಆದರೆ ಈ ಎಲ್ಲ ಹಿಂಸೆಗಳ ಕೊನೆಯಲ್ಲಿ ನಿಮಗೊಂದು ಅದ್ಭುತ ಅನುಭವವೇ ನಿಮ್ಮ ಮುಂದಿರುತ್ತೆ. ಇಂಥ ಹಿಂಸೆಯ ವಾತಾವರಣದಲ್ಲೂ ಗಟ್ಟಿ ಮನಸ್ಸು ಮಾಡಿ ಪ್ರಯಾಣಿಸೋ ಸಹನೆಯನ್ನು ತಂದುಕೊಂಡಷ್ಟು ನಿಮಗೆ ಹೊಸ ಹೊಸ ಜನರ ಪರಿಚಯವಾಗತ್ತೆ, ಹೊಸ ಭಾಷೆ ಕಿವಿಗೆ ಬೀಳತ್ತೆ, ಹೊಸ ಮುಖಗಳು ನಗುತ್ತವೆ.

image


ಅದೆಷ್ಟೋ ಮಂದಿ ಪ್ರತಿನಿತ್ಯ ಇಂಥ ಕೋಚ್ ಗಳಲ್ಲಿ ಟ್ರಾವೆಲ್ ಮಾಡುತ್ತಾರೆ. ಮಕ್ಕಳು ಮರಿಗಳು,ಹೆಂಗಸರು, ವಯೋವೃದ್ದರು, ನೋವಿನಿಂದ ಬಳಲುವವರು ಎಲ್ಲರೂ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಪ್ರಯಾಣಿಸೋದು ನಿಜಕ್ಕೂ ಗ್ರೇಟ್. ಇಂಥ ಅನುಭವ ನಿಮಗೆ ಕಾಯ್ದಿರಿಸಿದ ಕೋಚ್ ಗಳಲ್ಲಿ ಸಿಗೋದಿಲ್ಲ. ಇವರೆಲ್ಲರಿಗೆ ಸಾಧ್ಯವಾಗೋ ಜರ್ನಿ ನನಗ್ಯಾಕೆ ಆಗಲ್ಲ? ಇದೊಂದೆ ಪ್ರಶ್ನೆ ಸಾಕು,ಜನರಲ್ ಬೋಗಿಯಲ್ಲಿ ಮಾಡೋ ಪ್ರಯಾಣವೂ ಸುಖ ಕೊಡುತ್ತೆ. ಹೀಗಾಗಿಯೇ ಇಂಥ ಅಪರಿಚಿತ ಮುಖಗಳಲ್ಲೂ ಪರಿಚಯದ ವಾಸನೆ ಕಂಡುಕೊಂಡು ನಾನು ಹತ್ತಾರು ಪ್ರದೇಶಗಳನ್ನು ಜನರಲ್ ಬೋಗಿಯಲ್ಲಿಯೇ ಸಂಚರಿಸೋದು. ಯಾರೊ ಹಿರಿಯರು ಹೇಳಿದ ಮಾತಿನಂತೆ, ಭಾರತೀಯ ರೈಲ್ವೇಯ ಜನರಲ್ ಬೋಗಿಯಲ್ಲಿ ಇಡೀ ಭಾರತವನ್ನೇ ನೋಡಬಹುದು.

ಬಿಟ್ಟಿ ಜರ್ನಿ ಬಿಡಬೇಡಿ

ಹೈ ವೇ ಪಕ್ಕದಲ್ಲಿ ನಿಮ್ಮ ಲಗೇಜ್ ಜೊತೆ ನಿಂತು ಸುಮ್ಮನೇ ಹೋಗುವ ವಾಹನಗಳತ್ತ ಡ್ರಾಪ್ ಕೇಳಿ.ಒಂದಲ್ಲ ಒಂದು ವೆಹಿಕಲ್ ನ ಬಿಟ್ಟಿಯಾಗಿ ಟ್ರಾವೆಲ್ ಮಾಡೋ ಅದೃಷ್ಟ ನಿಮಗೆ ಗ್ಯಾರಂಟಿ ಸಿಗತ್ತೆ.ಅಪರಿಚಿತ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸೋದು ಕೂಡ ನಿಮ್ಮ ಪ್ರವಾಸದ ಅನುಭವಕ್ಕೆ ಹೊಸ ಮೆರುಗು ನೀಡೋದು ಶ್ಯುರ್. ರೈಲ್ವೇ ಪ್ರಯಾಣಕ್ಕಿಂತ ಬಿಟ್ಟಿ ಜರ್ನಿಯೇ ಲೇಸು.

ಉಚಿತ ಪ್ರಯಾಣದ ಲಾಭ ಪಡೆದುಕೊಳ್ಳೋದಕ್ಕೆ ಯಾವ ಟಿಪ್ಸ್ ಕೂಡ ಇಲ್ಲ. ನಿಮ್ಮ ಧೈರ್ಯ,ಎದೆಗಾರಿಕೆ, ಸ್ವಲ್ಪ ಮಟ್ಟಿಗೆ ನಾಚಿಕೆ ಬಿಡಬೇಕು ಅಷ್ಟೆ. ನೀವೂ ಕೂಡ ನನ್ನ ರೀತಿ ಲಕ್ಕಿಯಾಗಿದ್ರೆ ಮರ್ಸಿಡಿಸ್ ಬೆಂಝ್ ನಲ್ಲೂ ಬಿಟ್ಟಿ ಟ್ರಾವೆಲ್ ಮಾಡಬಹುದು. ಹೈವೆಯ ಟ್ರಕ್ ಗಳಲ್ಲಿ ಹತ್ತಿಕೊಂಡರೆ ಟ್ರಕ್ ಡ್ರೈವರ್ ಗಳ ಲೈಫ್ ಸ್ಟೈಲ್ ಬಗ್ಗೆ ತಿಳಿದಂತಾಗತ್ತೆ. ಅತ್ಯಂತ ಕಡಿಮೆ ಬಜೆಟ್ ನಲ್ಲಿ ಪ್ರಪಂಚವನ್ನೇ ಸುತ್ತಿಬಿಡಬಹುದಾದ ರೀತಿ ಅಂದ್ರೆ ಅದು ಬಿಟ್ಟಿ ಜರ್ನಿ ಎನ್ನೋದ್ರಲ್ಲಿ ಎರಡು ಮಾತಿಲ್ಲ.

ಕಡಿಮೆ ದೂರದ ಪ್ರಯಾಣ

ಸ್ಥಳೀಯ ಪ್ರದೇಶಗಳನ್ನು ಸುತ್ತಾಡುವುದಕ್ಕೆ ಉಚಿತ ಸೇವೆಯೇ ಅತ್ಯುತ್ತಮ. ಭಾರತದಲ್ಲಿ ಸಾಮಾನ್ಯವಾಗಿ ದ್ವಿಚಕ್ರ ವಾಹನ ಸವಾರರು ನಿಮ್ಮನ್ನು ಡ್ರಾಪ್ ಮಾಡಿಯೇ ಮಾಡ್ತಾರೆ. ಕಾರುಗಳಲ್ಲಿ ನಿಮಗೆ ಡ್ರಾಪ್ ಸಿಗೋದು ಕಷ್ಟವಾದರೂ ಬೈಕ್ ನಲ್ಲಿ ಕೂರುವುದಕ್ಕಂತೂ ನೋ ಪ್ರಾಬ್ಲಮ್. ಇನ್ನು ನೀವು ಸಂಚರಿಸಬೇಕಾದ ಸ್ಥಳ ನಗರದಲ್ಲಿ ಆರೇಳು ಕಿಲೋ ಮೀಟರ್ ಒಳಗಿದ್ರೆ ಕಾಲ್ನಡಿಗೆಯನ್ನು ನಂಬಿಕೊಳ್ಳೊದು ದೇಹದ ಆರೋಗ್ಯಕ್ಕೂ ಒಳ್ಳೆಯದು. ನಗರದ ಸೌಂದರ್ಯವನ್ನು ಸವಿಯುತ್ತಾ,ಅಕ್ಕಪಕ್ಕದ ಏರಿಯಾಗಳ ಬಗ್ಗೆ ತಿಳುದುಕೊಳ್ಳುತ್ತಾ ನಡೆದಯೋದೆ ಒಂಥರಾ ಚಂದದ ಅನುಭವ.ನಡೆದೂ ನಡೆದೂ ರೂಢಿಯಾದರೆ ಕಡಿಮೆ ದೂರವನ್ನು ಕ್ರಮಿಸೋದಕ್ಕೆ ನೀವು ವಾಹನಗಳನ್ನು ಅವಲಂಬಿಸೋದಿಲ್ಲ.

ವಸತಿ ವ್ಯವಸ್ಥೆ

ಸಂಬಂಧಗಳ ಮಹತ್ವವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಲೇಬೇಕು. ಹೆಚ್ಚೆಚ್ಚು ಸಾಮಾಜಿಕವಾಗಿದ್ದುಕೊಂಡು, ಒಂದಿಷ್ಟು ಫನ್ನಿಯಾಗಿ, ಮತ್ತೊಂದಿಷ್ಟು ಒಳ್ಳೆಯ ಹೃದಯ ಹೊಂದಿದ್ದು ,ಅಳಿದುಳಿದ ಮುಜುಗರವನ್ನು ನೀವು ಬಿಟ್ಟಿದ್ದೇ ಆದರೆ ಅತ್ಯುತ್ತಮ ಬಾಂಧವ್ಯ ಹೊಂದಿದ ಸಂಬಂಧಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಅಹಂ ಬಿಟ್ಟು, ಒರಟುತನ ಇಲ್ಲದೆ, ವೈರುದ್ದ ಮನಸ್ಥಿತಿಯನ್ನು ಹೊಂದಿಲ್ಲದೇ ಇರುವುದು ಉತ್ತಮ. ಹೊಸತನ್ನು ಕಲಿಯುವ ಉತ್ಸಾಹ ನಿಮ್ಮಲ್ಲಿದ್ದರೆ ಕೆಲವು ತಿಂಗಳುಗಳ ನಂತರ ನೀವು ಅತ್ಯಂತ ಸಮಾಧಾನ ನೆಮ್ಮದಿ ಹೊಂದಿದ ವ್ಯಕ್ತಿಯಾಗಿರ್ತೀರ. ನಿಮ್ಮ ಸಂಬಂಧಿಕರನ್ನು ಆಗಾಗ ನೆನಪಿಸಿಕೊಂಡು ಮಾತನಾಡಿ, ಹಳೆಯ ಗೆಳೆಯರಿಗೆ ಫೋನ್ ಮಾಡಿ, ನಿಮ್ಮ ದೃಷ್ಟಿಯಲ್ಲಿ ವ್ಯಾಲ್ಯೂ ಇಲ್ಲದ ವ್ಯಕ್ತಿಗೂ ಬೆಲೆ ಕೊಡಿ, ಅವರೇ ನಿಮ್ಮ ಸಂಪತ್ತು ಅನ್ನೋದನ್ನು ನೀವೂ ಅರ್ಥ ಮಾಡಿಕೊಳ್ಳಿ. ಒಂದೆರಡು ದಿನಗಳನ್ನು ಅವರೊಟ್ಟಿಗೆ ಕಳೆಯುತ್ತೇವೆ ಅಂತಂದ್ರೆ ಅವರಿಂದ ಬರುಪವ ಸ್ಪಂದನೆ ನಿಮ್ಮಚ್ಚು ಚಕಿತಗೊಳಿಸುತ್ತೆ. ಅವರೂ ಕೂಡ ನಿಮ್ಮೊಂದಿಗೆ ಸಮಯ ಕಳೆಯಲು ಬಯಸಿ ನಿಮಗೆ ವ್ಯವಸ್ಥೆ ಕಲ್ಪಿಸುತ್ತಾರೆ.

ಇದೆಲ್ಲದರ ಜೊತೆಗೆ, ಆಶ್ರಮಗಳು, ದೇವಸ್ಥಾನಗಳು, ಬಸದಿಗಳು, ಬಸ್ ಟರ್ಮಿನಲ್ ಗಳು, ರೈಲ್ವೇ ಸ್ಟೇಷನ್ ಗಳು, ರೋಡ್ ಡಿವೈಡರ್ ಗಳು, ಪಾರ್ಕ್ ಗಳು ಮತ್ತು ಇನ್ನಿತರೇ ಹಣ ಖರ್ಚಿಲ್ಲದ ಸ್ಥಳಗಳಲ್ಲಿ ಉಳಿದುಕೊಳ್ಳಿ. ಮೊದ ಮೊದಲು ಇಂಥ ಸ್ಥಳಗಳಲ್ಲಿ ನಿದ್ರೆ ಮಾಡೋದು ಉಳಿದುಕೊಳ್ಳೋದು ಮುಜುಗರ ಅನಿಸಬಹುದು. ಆದರೆ ಒಮ್ಮೆ ರೂಢಿಯಾದರೆ ಇದರಷ್ಟು ಕಂಫರ್ಟ್ ಬೇರೊಂದಿಲ್ಲ. ಪ್ರತಿ ಕಾರ್ಯವನ್ನೂ ಪ್ರಾರಂಭಿಸುವ ಮುಂಚೆ ಮೊದಲ ಹೆಜ್ಜೆಯನ್ನು ಎತ್ತಿಡೋದೆ ದೊಡ್ಡ ಕಷ್ಟ, ನಂತರದ್ದೆಲ್ಲ ತೀರಾ ಸುಲಭ.ಹೆಜ್ಜೆಯೊಂದು ಮುಂದೆ ಸಾಗಿದರೆ ಇನ್ನೊಂದು ಹೆಜ್ಜೆ ನಿಮ್ಮನ್ನೇ ಹಿಂಬಾಲಿಸುತ್ತೆ.

ನೀರು ಎಂಬ ಮೂಲಾಧಾರ: ಮೂವತ್ತು ವರ್ಷದಷ್ಟು ಹಿಂದೆ ನೀವು ಪ್ರಯಾಣಿಸುವ ಪ್ಲ್ಯಾನ್ ಮಾಡಿದ್ರೆ ಆ ಸಮಯದಲ್ಲಿ ನೀರು ದೊಡ್ಡ ಸಮಸ್ಯೆಯೇ ಆಗಿರಲಿಲ್ಲ. ಎಲ್ಲ ಕಡೆಯೂ ನೀರು ಉಚಿತವಾಗಿ ಬೇಕಾದಷ್ಟು ಸಿಗುತ್ತಿತ್ತು. ಆದ್ರೀಗ ಕುಡಿಯುವ ನೀರು ವಾಣಿಜ್ಯೀಕರಣಗೊಂಡು ಹಣದ ವಸ್ತುವಾಗಿ ಬಹಳವರ್ಷಗಳಾಯ್ತು. ಡೋಂಟ್ ವರಿ. ಕುಡಿಯೋ ನೀರಿಗಾಗಿ ನೀವು ಹಣ ಖರ್ಚು ಮಾಡಬೇಕಾದ ಅವಶ್ಯಕತೆಯಿಲ್ಲ. ನೀವು ಊಟ ತಿಂಡಿ ಮಾಡೋ ಹೊಟೇಲ್, ಡಾಬಾ ಗಳಲ್ಲಿ ಒಂದಿಷ್ಟು ನೀರು ತುಂಬಿಸಿಕೊಳ್ಳಿ, ನಿಮ್ಮ ಬ್ಯಾಗ್ ನಲ್ಲಿ ಎರಡು ಬಾಟಲ್ ಗಳು ಯಾವತ್ತು ಇರಲಿ, ಯಾವುದೋ ಹಳ್ಳಿಗಾಡಿನಲ್ಲಿ ಟ್ರೆಕ್ಕಿಂಗ್ ಹೋಗುವಂತ ಸಂದರ್ಭದಲ್ಲಿ ಅಲ್ಲಿನ ಮನೆಗಳಲ್ಲಿ ಕೇಳಿ ನೀರು ಪಡೆದುಕೊಳ್ಳಿ.ನಿಮ್ಮ ನೀರಿನ ಅವಶ್ಯಕತೆ ಪೂರೈಸಿದಂತಾಗತ್ತೆ. ನೀರನ್ನೂ ಕೊಡದೇ ವಾಪಸ್ ಕಳುಹಿಸೋ ಮನೆಗಳು ಎಲ್ಲಿಯೂ ಇಲ್ಲ.

ಆಹಾರ: ಭಾರತದಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ತಿನಿಸುಗಳನ್ನು ಮಾರಾಟ ಮಾಡೋ ಅಂಗಡಿಗಳು ಮಳಿಗೆಗಳು ಸಾಕಷ್ಟಿವೆ. ಭಾರತದ ಬಡ ದೇಶವಾಗಿದ್ದು ಪ್ರತಿದಿನ 100 ರೂಪಾಯಿಗಿಂತಲೂ ಕಡಿಮೆ ಖರ್ಚಿನಲ್ಲಿ ದಿನ ಕಳೆಯುವ ಬಡವರಿದ್ದಾರೆ ಎನ್ನೋದನ್ನು ಮರೆಯಬೇಡಿ. ಅವರೇ ನಿಮಗೆ ಸ್ಪೂರ್ತಿ.ಕಡಿಮೆ ದರವನ್ನು ಹೊಂದಿರುವ ಡಾಭಾಗಳಿಗೆ ಹೋಗಿ ಊಟ ಮಾಡಿ, ನಿಮ್ಮ ಹೊಟ್ಟೆಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಿಮ್ಮ ಮನಸ್ಸೇ ಎಲ್ಲದಕ್ಕೂ ಮೂಲ. ಮನಸ್ಸೇ ನಿಮ್ಮ ದೇಹವನ್ನು ಗಟ್ಟಿಯಾಗಿಡತ್ತೆ. ನಿಮ್ಮ ಸ್ನೇಹಿತರು ಬಂಧುಗಳು ಯಾರಾದರೂ ಇದ್ದರೆ ಅವರ ಮನೆಯಲ್ಲಿಯೇ ಊಟ ಮಾಡಿ, ಆದರೆ ಮಾಡುವ ಅಡುಗೆ ಕೆಲಸದಲ್ಲಿ ಅವರಿಗೊಂದಿಷ್ಟು ಸಹಾಯ ಮಾಡಿದರೆ ಖುಷಿಯಾಗುತ್ತಾರೆ. ಆಶ್ರಮ, ಮಂದಿರ, ದೇವಸ್ಥಾನಗಳಲ್ಲಿ ಸಿಗುವ ಪ್ರಸಾದವೂ ನಿಮ್ಮ ಹೊಟ್ಟೆಯ ಹಸಿವನ್ನು ನೀಗಿಸಲಿ. ಪದೇ ಪದೇ ನೀರು ಕುಡಿಯತ್ತಿದ್ದರೆ ಯಾವ ರೋಗವೂ ನಿಮ್ಮ ಬಳಿ ಸುಳಿಯೋದಿಲ್ಲ.

ಆಲ್ಕೋಹಾಲ್: ಲೋಕಲ್ ಆಗಿ ಸಿಗುವ ಕಚ್ಚಾ ಡ್ರಿಂಕ್ಸ್ ಕುಡಿಯಲೇಬೇಡಿ. ಕಡಿಮೆ ಖರ್ಚಿನಲ್ಲಿ ಸಿಗತ್ತೆ ಅಂತ ಕಚ್ಚಾ ಸಾರಾಯಿಯತ್ತ ನೀವು ಕೈ ಇಟ್ಟರೆ ಸಾವಿನ ಸನಿಹಕ್ಕೂ ಹೋಗಿ ಬರಬಹುದು.ಆಲ್ಕೋಹಾಲ್ ಬೇಕೇ ಬೇಕು ಎನ್ನುವಂತಿದ್ರೆ, ನಿಮ್ಮ ಬಂಧುಗಳಿಂದ ಇಲ್ಲಾ ಸ್ನೇಹಿತರಿಂದ ಆಫರ್ ಗಾಗಿ ಕಾಯಿರಿ. ಟ್ರಕ್ ಗಳಲ್ಲಿ ಸಂಚರಿಉಸವಾಗ ಡ್ರೈವರ್ ಗಳ ಸ್ನೇಹ ಸಂಪಾದಿಸಿಕೊಂಡರೆ ನಿಮಗೆ ಖುಷಿ ಖುಷಿಯಾಗಿಯೇ ಆಲ್ಕೋಹಾಲ್ ಆತಿಥ್ಯವೂ ಸಿಕ್ಕೇ ಸಿಗತ್ತೆ. ಅವಶ್ಯಕತೆ ಇರುವವರಿಗೆ 10 ರೂಪಾಯಿ ಕೊಡೋದಕ್ಕೂ ಹಿಂದೆ ಮುಂದೆ ನೋಡೋ ಮಂದಿ ಆಲ್ಕೋಹಾಲ್ ಹಂಚಿಕೊಳ್ಳೋದಕ್ಕೆ ಅರೆ ನಿಮಿಷವೂ ಯೋಚಿಸೋದಿಲ್ಲ.

ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಖರ್ಚು:

ಇವೆರಡೂ ನಿಮಗೆ ಫ್ರೀ ಆಗಿ ಸಿಗುವಂತಾದ್ರೆ ನಿಮ್ಮಂತ ಲಕ್ಕಿ ಇನ್ನೊಬ್ಬರಿಲ್ಲ. ಇಂಥ ಸಹಾಯ ಮಾಡೋ ಫ್ರೆಂಡ್ಸ್ ನಮಗಿದ್ರೆ ಅವರೇ ದೊಡ್ಡವರು. ಮೊಬೈಲ್ ಮತ್ತು ಇಂಟರ್ನೆಟ್ ಸಹಾಯ ಮಾಡೋದು ನಿಜಕ್ಕೂ ದೊಡ್ಡ ಸಂಗತಿಯೇ.

ಮೊಬೈಲ್ ಇಂಟರ್ನೆಟ್ ಸಹಾಯ ನೀಡುವ ಗೆಳೆಯರಿಗೆ ನಿಮ್ಮ ಒಂದಿಷ್ಟು ಸಮಯ ಕೊಡಿ, ನೀವು ಹಣ ಗಳಿಸುವ ಹೊತ್ತಲ್ಲಿ ಕೊಂಚ ಸಹಾಯ ಮಾಡಿ. ಅಂಥ ಗೆಳೆಯರನ್ನು ಕಾಪಾಡಿಕೊಳ್ಳಬೇಕಾದ್ದು ನಿಮ್ಮ ಕರ್ತವ್ಯ.

ಉಳಿದ ಸಂಗತಿಗಳು: ಇವೆಲ್ಲದರ ಹೊರತಾಗಿ ಮಾಡಿಕೊಳ್ಳುವ ಸಿದ್ದತೆಗಳು ಬೇಕಾದಷ್ಟಿವೆ. ಮೇಲಿನ ಎಲ್ಲ ವಿಷಯಗಳತ್ತ ಗಮನ ನೀಡಿದರೆ ಅವೇ ಬೇಕಾದಷ್ಟು ಖರ್ಚು ಉಳಿಸುತ್ತವೆ. ನಮ್ಮಲ್ಲಿ ಕಡಿಮೆ ಹಣವಿದ್ದಾಗ ನಮಗೆ ಜನರ ಸಹಾಯ ಅತ್ಯಗತ್ಯ. ಕಡಿಮೆ ಖರ್ಚಿನಲ್ಲಿ ಸಾಕಷ್ಟು ದೂರವನ್ನು ಕ್ರಮಿಸುವಾಗ ನಮಗೆ ಬೇರೆ ಬೇರೇ ವಿಭೀನ್ನ ವ್ಯಕ್ತಿತ್ವದ ವ್ಯಕ್ತಿಗಳು ಎದುರಾಗುತ್ತಾರೆ. ಅವರೆಲ್ಲರನ್ನೂ ಭೇಟಿಯಾದಾಗ ನಮಗೆ ಒಂದು ವಿಷಯ ಖಂಡಿತ ಅರ್ಥವಾಗೋದು: ಎಲ್ಲ ಮನುಷ್ಯರೂ ಒಂದೇ ಎನ್ನೋದು. ಜನರಿಗೆ ಪ್ರೀತಿ ಸಿಕ್ಕಿದಾಗ ಕಣ್ಣುಗಳಲ್ಲಿ ಹೊಳಪು ಮೂಡತ್ತದೆ, ಭಯಗೊಂಡಾಗ ದೇಹ ಸ್ಪಂದಿಸೋದಿಲ್ಲ. ಇದರ ಹೊರತಾಗಿ ಪ್ರವಾಸ ಎನ್ನೋದು ಒಂದು ಅನುಭವಗಳ ಮೂಟೆ. ಒಂದೊಂದು ಸಂದರ್ಭವೂ ಒಂದೊಂದು ವಿಭಿನ್ನ ಅನುಭವವನ್ನು ತೆರದಿಡೋದು ವಾಸ್ತವ.

ಈ ಲೇಖನದಲ್ಲಿ ಉದ್ದೇಶಪೂರ್ವಕವಾಗಿ ಸ್ಪಾನ್ಸರ್ ಪ್ರೋಗ್ರಾಮ್ ಗಳ ಬಗ್ಗೆ ಹೇಳಿಲ್ಲ.

ನಿಮ್ಮ ದೇಶ ವಿದೇಶಗಳ ಪ್ರವಾಸದ ಅಂತ್ಯದಲ್ಲಿ ಅವುಗಳಿಂದ ಕಲಿತ ಪಾಠವನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ. ನಿಮಗೆ ಸಹಾಯ ಮಾಡಿದ ವ್ಯಕ್ತಿಗಳಿಗೆ ಕೃತಜ್ಞತೆ ಸಲ್ಲಿಸಿ. ಅಂತ ವ್ಯಕ್ತಿಗಳಿಗೆ ಪ್ರತ್ಯುಪಕಾರ ಮಾಡುವುದು ನಿಮ್ಮ ಆದ್ಯ ಕರ್ತವ್ಯ. ನಿಮ್ಮ ಮೂಲಕ್ಕೆ ಅಂಟಿಕೊಂಡು ನಿಮ್ಮ ತಾಯ್ನೆಲವನ್ನು ಮರೆಯದೆ ದೇಶವನ್ನು ಸುತ್ತಿ, ಅನುಭವಗಳನ್ನು ಪಡೆದುಕೊಳ್ಳಿ. ಹ್ಯಾವ್ ಎ ಹ್ಯಾಪಿ ಜರ್ನಿ.

ಅನುವಾದಕರು: ಪಿಪಿಜಿ

Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

    • +0
    Share on
    close
    • +0
    Share on
    close
    Share on
    close

    Our Partner Events

    Hustle across India