ಆವೃತ್ತಿಗಳು
Kannada

ಇದು ಕುಚೇಲ ಕುಬೇರನಾದ ಕಥೆ- ಪಾತ್ರೆಯೊಂದಿಗೆ ಲಾಭದ ಯಾತ್ರೆ

ಟೀಮ್​ ವೈ.ಎಸ್​​.

YourStory Kannada
4th Nov 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಉದ್ಯಮ ಅನ್ನೋ ಪದ ಭಾರತದಲ್ಲಿ ಚಿತ್ತಾಕರ್ಷಕವಾಗಿ ಪ್ರಚಲಿತಕ್ಕೆ ಬರುವ ಮೊದಲೇ, ಪ್ರವಾಹಕ್ಕೆ ವಿರುದ್ಧವಾಗಿ ಈಜಿ ಉದ್ಯಮದಲ್ಲಿ ಅದ್ಭುತ ಯಶಸ್ಸು ಗಳಿಸಿದ್ದ ಹಲವು ಉದ್ಯಮಿಗಳಿದ್ದರು. ತಮ್ಮ ಜೀವಮಾನವನ್ನೆಲ್ಲಾ ಸವೆಸಿ ಒಂದು ಬ್ರಾಂಡ್ ನಿರ್ಮಿಸಿ, ಉದ್ಯಮವನ್ನು ಬೆಳೆಸಿರುವ ಹಲವು ಉದಾರಣೆಗಳಿವೆ. ಹಾಗೇ ಕೆಲವರು ಆ ಯಶಸ್ಸನ್ನು ಮುಂದುವರಿಸಿರುವ ಹಾಗೂ ಕೆಲವರು ವೈಫಲ್ಯರಾಗಿ ಅದನ್ನು ನೆಲಕಚ್ಚಿಸಿರುವ ನಿದರ್ಶನಗಳಿಗೂ ಕೊರತೆಯಿಲ್ಲ. ಇಲ್ಲಿ ನಾವು ಅಡುಗೆಪಾತ್ರೆಗಳ ಉತ್ಪಾದನೆ ಹಾಗೂ ಮಾರಾಟವನ್ನೇ ದೊಡ್ಡ ಉದ್ಯಮವನ್ನಾಗಿಸಿ, ಬೆಳೆಸಿದ ವ್ಯಕ್ತಿಯನ್ನು ನಿಮಗೆ ಪರಿಚಯಿಸುತ್ತೇವೆ. ಇವರ ಜೀವನ ಹಲವು ಏರಿಳಿತಗಳಿಂದ ಕೂಡಿತ್ತೆಂದರೂ ತಪ್ಪಾಗಲ್ಲ. 34 ವರ್ಷಗಳ ವ್ಯಾವಹಾರಿಕ ಜೀವನದಲ್ಲಿ, ಇವರು ಯಶಸ್ಸಿಗಿಂತ ಹೆಚ್ಚು ವೈಫಲ್ಯಗಳನ್ನೇ ಕಂಡಿದ್ದು. ಆದ್ರೆ ಸೋಲೊಪ್ಪದೆ ಮತ್ತೆ ಫೀನಿಕ್ಸ್​​​ನಂತೆ ಎದ್ದು ಹೋರಾಡುವ ಇವರ ದೃಢಸಂಕಲ್ಪ ಎಲ್ಲರಿಗೂ ಮಾದರಿಯೇ ಸರಿ. ತನ್ನ ದಾರಿಯಲ್ಲೀಗ ಪುತ್ರನೂ ಸೇರಿರುವುದು ಇವರಿಗೆ ಕೊಂಚ ಸಮಾಧಾನ ನೀಡಿದೆ. ಅಂದಹಾಗೇ, ನಾವು ಇಷ್ಟು ಹೊತ್ತೂ ಹೇಳಿದ್ದು ಶಾಂತಿಲಾಲ್ ಜೈನ್ ಅವರ ಬಗ್ಗೆ. 1987ರಿಂದಲೂ ಸ್ಟೈನ್‍ಲೆಸ್ ಸ್ಟೀಲ್ ಪಾತ್ರೆಗಳ ಉತ್ಪಾದನೆ ಹಾಗೂ ಮಾರಾಟದಲ್ಲಿ ತೊಡಗಿಕೊಂಡಿರುವ ಉಕ್ಕಿನಂತ ವ್ಯಕ್ತಿ.

image


ಪ್ರಾರಂಭ

ಶಾಂತಿಲಾಲ್ ಬೆಳೆದಿದ್ದು ಚೆನ್ನೈನಲ್ಲಿ. 10 ತರಗತಿ ಓದುತ್ತಿದ್ದಾಗ ತಮ್ಮ 16ನೇ ವಯಸ್ಸಿನಲ್ಲೇ ಕೆಲಸಕ್ಕೆ ಸೇರಿದ್ದರು. ಕ್ರಮೇಣ ಕೆಲಸ ಮಾಡುತ್ತಾ ಸ್ವಲ್ಪ ಹಣ ಕೂಡಿಟ್ಟರು. ಬಳಿಕ 10 ಸಾವಿರ ರೂಪಾಯಿ ಹೊಂದಿಸಿಕೊಂಡು ತಮ್ಮದೇ ಸ್ಟೈನ್‍ಲೆಸ್ ಸ್ಟೀಲ್ ಪಾತ್ರೆಗಳನ್ನು ಉತ್ಪಾದಿಸುವ ಕಾರ್ಖಾನೆ ಪ್ರಾರಂಭಿಸಿದರು. ಚಾರ್‍ಮಿನಾರ್ ಹೆಸರಿನಲ್ಲಿ ಗ್ಯಾಸ್ ಲೈಟರ್ ಹಾಗೂ ವಾಟರ್ ಫಿಲ್ಟರ್‍ಗಳನ್ನೂ ಉತ್ಪಾದಿಸತೊಡಗಿದ ಶಾಂತಿಲಾಲ್ ಕಡಿಮೆ ಅವಧಿಯಲ್ಲೇ ದಕ್ಷಿಣ ಭಾರತದಲ್ಲಿ ಒಂದು ಉತ್ತಮ ಬ್ರಾಂಡ್​​​ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದರು. ವಿಶೇಷ ಅಂದ್ರೆ 25 ವರ್ಷಗಳೇ ನಂತರ ಈಗಲೂ 300ಕ್ಕೂ ಹೆಚ್ಚು ಕಂಪನಿಗಳು ಶಾಂತಿಲಾಲ್ ಅವರು ನಡೆದು ಬಂದ ದಾರಿಯಲ್ಲೇ ಸಾಗುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪದಾರ್ಪಣೆ

1989ರಲ್ಲಿ ಶಾಂತಿಲಾಲ್ ಜೈನ್ ರಫ್ತು ವ್ಯಾಪಾರವನ್ನೂ ಆರಂಭಿಸಿದರು. ಮೊದಲು ಕೇವಲ ಶ್ರೀಲಂಕಾಕ್ಕೆ ಹಡಗಿನ ಮೂಲಕ ರಫ್ತು ಮಾಡಿದರು. ಕ್ರಮೇಣ 1990ರಲ್ಲಿ ಅವರ ಅದೃಷ್ಟ ಖುಲಾಯಿಸಿತು. ಕೆನಡಾದಿಂದ ತಾವು ಉತ್ಪಾದಿಸೋದಕ್ಕಿಂತ 10 ಪಟ್ಟು ಹೆಚ್ಚು ಪೂರೈಸಲು ಆರ್ಡರ್ ದೊರಕಿತು. ಈ ಮೂಲಕ ಶಾಂತಿಲಾಲ್ ‘ಶೈನ್’ ಎಂಬ ಹೊಸ ಬ್ರಾಂಡ್‍ ಅನ್ನೂ ಬಿಡುಗಡೆ ಮಾಡಿದರು. ‘ಶೈನ್’ ಈಗ 20ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರಿಂದ ಒಳ್ಳೆಯ ಹೆಸರು ಪಡೆದಿದೆ.

ಹೀಗೆ ಉದ್ಯಮ ಬೆಳೆಯುತ್ತಾ ಹೋದಂತೆ 1990ರ ದಶಕದಲ್ಲಿ ಭಾರತೀಯ ಪಾತ್ರೆಗಳನ್ನು ವಿದೇಶಗಳಿಗೆ ರಫ್ತು ಮಾಡಿದ ಮೊದಲಿಗರಲ್ಲಿ ಶಾಂತಿಲಾಲ್ ಜೈನ್ ಕೂಡ ಒಬ್ಬರಾದರು. ಶಾಂತಿಲಾಲ್ 1997ರಲ್ಲಿ ದುಬೈನಲ್ಲಿ, 2001ರಲ್ಲಿ ಪನಾಮಾದಲ್ಲಿ ಬಳಿಕ ಆಫ್ರಿಕಾದ ನೈಜೀರಿಯಾದಲ್ಲಿ ಕಛೇರಿಗಳನ್ನು ತೆರೆದರು. ಅದೇ ಸಮಯದಲ್ಲಿ ಅಡುಗೆ ಪಾತ್ರಗಳ ರಫ್ತಿನಲ್ಲಿ ಭಾರತ, ಚೀನಾ ದೇಶವನ್ನೇ ಹಿಂದಕ್ಕೆ ಹಾಕಿತ್ತು.

2004ರಲ್ಲಿ ದೊಡ್ಡ ಪ್ರಮಾಣದಲ್ಲಿ ಪಾತ್ರೆಗಳನ್ನು ಉತ್ಪಾದಿಸುವ ಸಲುವಾಗಿ ಚೆನ್ನೈನಲ್ಲಿ ಬರೊಬ್ಬರಿ 1000 ಸಿಬ್ಬಂದಿಯೊಂದಿಗೆ ಘಟಕವೊಂದನ್ನು ಸ್ಥಾಪಿಸಲಾಯ್ತು. ಮುಂದಿನ 10 ವರ್ಷಗಳಲ್ಲಿ ಭಾರತದ ಅತೀ ದೊಡ್ಡ ಅಡುಗೆ ಪಾತ್ರೆ ಉತ್ಪಾದನೆ ಮತ್ತು ಮಾರಾಟ ಮಾಡುವ ಕಂಪನಿಯಾಗುವ ಇರಾದೆ ಶಾಂತಿಲಾಲ್ ಅವರದ್ದಾಗಿತ್ತು. ಹೀಗಾಗಿಯೇ ಅವರ ಒಡೆತನದಲ್ಲಿದ್ದ ಕಂಪನಿಯನ್ನು ಪಾಲುದಾರಿಕೆ ಸಂಸ್ಥೆಯಾಗಿ ಬದಲಿಸಲಾಗಿತ್ತು. ಕ್ರಮೇಣ ಪಾಲುದಾರಿಕೆಯಿಂದ ಶೈನ್ ಸಾರ್ವಜನಿಕ ನಿಯಮಿತ ಕಂಪನಿಯಾಗಿ ಬದಲಾಯ್ತು. ಈ ಮೂಲಕ ಶಾಂತಿಲಾಲ್ 80ಕ್ಕೂ ಹೆಚ್ಚು ದೇಶಗಳಿಗೆ ಪಾತ್ರೆಗಳನ್ನು ರಫ್ತು ಮಾಡತೊಡಗಿದರು.

ಸಮಸ್ಯೆ ಮತ್ತು ಸೋಲು

ಆದ್ರೆ ಈ ಯಶಸ್ಸು ಹೀಗೇ ಮುಂದುವರಿಯಲಿಲ್ಲ. 2006ರಿಂದ ಉದ್ಯಮ ನೆಲಕಚ್ಚತೊಡಗಿತು. ಕಾರ್ಮಿಕರ ಮುಷ್ಕರ, ಮಾರುಕಟ್ಟೆಯ ಪರಿಸ್ಥಿತಿ ಹಾಗೂ ಕೌಟುಂಬಿಕ ಕಲಹಗಳಂತಹ ವೈಯಕ್ತಿಕ ಹಾಗೂ ವೃತ್ತಿಪರ ಸಮಸ್ಯೆಗಳಿಂದ ಉದ್ಯಮ ಪಾತಾಳಕ್ಕಿಳಿಯತೊಡಗಿತು. ಹಾಗೇ ಕೇಂದ್ರ ಸರ್ಕಾರದ ಕೆಲ ನೀತಿ ನಿಯಮಗಳಿಂದಾಗಿಯೂ ಉದ್ಯಮಕ್ಕೆ ನಷ್ಟವಾಗತೊಡಗಿತು.

ಹೋರಾಟ ಮತ್ತು ಯಶಸ್ಸು

ವಿದೇಶೀ ಕಚೇರಿಗಳನ್ನು ಬಂದ್ ಮಾಡುವ ಮೂಲಕ ಹಾಗೂ ಬೇರೆ ಕಂಪನಿಗಳೊಂದಿಗೆ ವಿಲೀನಗೊಳಿಸುವ ಮೂಲಕ ಈ ನಷ್ಟದಿಂದ ತಪ್ಪಿಸಿಕೊಳ್ಳಲು ಶಾಂತಿಲಾಲ್ ಪ್ರಯತ್ನಿಸಿದರು. ಅದರಂತೆ ಕೊಂಚ ಮಟ್ಟಿಗೆ ಯಶಸ್ವಿಯನ್ನೂ ಗಳಿಸಿದರು. ಎಷ್ಟೇ ಸಮಸ್ಯೆಗಳು ಬಂದ್ರೂ ಅವರಲ್ಲಿನ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಇದೇ ಅವರ ಯಶಸ್ಸಿನ ಗುಟ್ಟು ಕೂಡ.

ಅವರು ಮೈಗೂಡಿಸಿಕೊಂಡಿದ್ದ ವಿನಮ್ರತಾ ಗುಣದಿಂದಾಗಿಯೇ ಶಾಂತಿಲಾಲ್ ತಮ್ಮ ಕೆಲಸದ ಮೇಲೆ ಗಮನ ಹರಿಸಲು ಸಾಧ್ಯವಾಗಿದ್ದು. ಇದರ ಬಗ್ಗೆ ಒಂದು ಹಾಸ್ಯಭರಿತ ಕಥೆ ಕೂಡ ಇದೆ. ‘ನನಗೆ ಪ್ರಶಸ್ತಿ ನೀಡುವ ಕುರಿತು ಸರ್ಕಾರದಿಂದ ಒಂದು ಪತ್ರ ಬಂದಿತ್ತು. ಭಾರತೀಯ ಅಡುಗೆ ಪಾತ್ರೆಗಳನ್ನು ಉತ್ಪಾದಿಸಿ, ವಿದೇಶಗಳಿಗೆ ರಫ್ತು ಮಾಡಿರುವ ನನ್ನ ಕೊಡುಗೆಯನ್ನು ಮೆಚ್ಚಿ 1992ರಲ್ಲಿ ಪ್ರಶಸ್ತಿ ನೀಡಲು ಆಹ್ವಾನಿಸಲಾಗಿತ್ತು. ಆದ್ರೆ ಇದು ಯಾವುದೋ ಅನಾಮಿಕ ಸುಳ್ಳು ಸಂಸ್ಥೆಯಿರಬೇಕು ಅಂತ ನಾವು ಆ ಪತ್ರಕ್ಕೆ ಪ್ರಾಮುಖ್ಯತೆ ಕೊಡಲಿಲ್ಲ’ ಅಂತ ಹೇಳ್ತಾರೆ ಶಾಂತಿಲಾಲ್. ವಿಶೇಷ ಅಂದ್ರೆ ತಪ್ಪು ತಿಳುವಳಿಕೆಯಿಂದ ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೊಂದನ್ನು ಅವರು ಧಿಕ್ಕರಿಸಿದ್ದರು.

‘ಉದ್ಯಮದಲ್ಲಿರುವ ಇತರರು ಶಾಂತಿಲಾಲ್‍ಅವರನ್ನು ಸ್ಟೈನ್‍ಲೆಸ್ ಸ್ಟೀಲ್ ಪಾತ್ರೆಗಳ ಮೋಡಿಗಾರ ಅಂತ ಕರೆಯುತ್ತಾರೆ. ಕೆಲಸ ಮಾಡುವ ಉತ್ಸಾಹ ಅವರನ್ನು ಯಾವುತ್ತೂ ಕೂರಲು ಬಿಟ್ಟಿಲ್ಲ’ ಅಂತಾರೆ ಶಾಂತಿಲಾಲ್ ಅವರೊಂದಿಗೆ ಉದ್ಯಮದಲ್ಲಿ ಕೈಜೋಡಿಸಿರುವ ಅವರ ಪುತ್ರ ಪ್ರೇಮ್‍ಶ್ರೀ. ಇನ್ನು 50 ವರ್ಷದ ಶಾಂತಿಲಾಲ್ ಜೈನ್‍ರಿಗೆ ಈ ಅಡುಗೆ ಪಾತ್ರೆಗಳ ವಲಯವನ್ನು ಸಂಘಟಿಸಿ, ವ್ಯವಸ್ಥಿತಗೊಳಿಸುವ ಉದ್ದೇಶವಿದೆ. ‘ಹೀಗೆ ವ್ಯವಸ್ಥಿತವಾಗಿ ಉದ್ಯಮದಲ್ಲಿ ಮುಂದುವರಿದು, ಭಾರತದಾದ್ಯಂತ 30 ಕೋಟಿಗೂ ಹೆಚ್ಚು ಮನೆಗಳನ್ನು ತಲುಪುವ ಯೋಜನೆಯಿದೆ’ ಅಂತಾರೆ ಶಾಂತಿಲಾಲ್.

image


ಬರ್ತನ್‍ವಾಲೆ ಪ್ರಾರಂಭ

ಪಾತ್ರೆಗಳ ವಿನ್ಯಾಸವೇ ಇವರ ಮೊದಲ ಆದ್ಯತೆ. ‘ಹೀಗಾಗಿಯೇ ಗುಣಮಟ್ಟದ ಜೊತೆಗೆ ಅದರ ವಿನ್ಯಾಸದ ಬಗ್ಗೆಯೂ ನಾವು ಗಮನ ಹರಿಸುತ್ತೀವಿ. ವಿನ್ಯಾಸದಲ್ಲಿ ನಾವು ಯಾವತ್ತೂ ಮುಂದಿದ್ದೇವೆ, ಹಾಗೂ ಬೇರೆ ಕಂಪನಿಗಳವರು ನಮ್ಮನ್ನು ಹಿಂಬಾಲಿಸುತ್ತಾರೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಶಾಂತಿಲಾಲ್.

ಭಾರತದ ಹೊಸ ಪೀಳಿಗೆಯನ್ನು ಸೆಳೆಯಲೆಂದೇ ಶಾಂತಿಲಾಲ್ ಬರ್ತನ್‍ವಾಲೆ ಲಾಂಚ್ ಮಾಡಿದ್ದಾರೆ. ಅದಕ್ಕೆ ಅವರ ಪುತ್ರ ಪ್ರೇಮ್‍ಶ್ರೀ ಕೂಡ ಕೈಜೋಡಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಬರ್ತನ್‍ವಾಲೇ ಪ್ರಾರಂಭವಾಗಿದ್ದು, ಈಗಿನ್ನೂ ಆನ್‍ಲೈನ್ ಲೋಕದ ಕುರಿತು ತಂತ್ರಗಳನ್ನು ಕಲಿಯುತ್ತಿದ್ದಾರೆ. ‘ಬೇರೆ ಕಂಪನಿಗಳು ತಯಾರಿಸದ ಕೆಲವು ಉತ್ಪನ್ನಗಳು ನಮ್ಮಲ್ಲಿ ಮಾತ್ರ ಲಭ್ಯವಿರುವ ಕಾರಣ ಬೆಲೆ ಕಾದಾಟದಿಂದ ನಾವು ಯಾವತ್ತೂ ದೂರ.’ ಅನ್ನೋದು ಶೈನ್ ಯಶಸ್ಸಿನ ಬಗ್ಗೆ ಪ್ರೇಮ್‍ಶ್ರೀ ಹೇಳೋ ಮಾತು. ಈ ಕ್ಷೇತ್ರದಲ್ಲಿ ಆನ್‍ಲೈನ್ ಸದ್ಯಕ್ಕಿನ್ನೂ ಸಣ್ಣಮಟ್ಟದಲ್ಲಿದೆ. ಆದ್ರೆ ಸಮಯ ಕಳೆದಂತೆ, ನೈಪುಣ್ಯತೆ ಹೆಚ್ಚುತ್ತಿದ್ದಂತೆ ಅಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವ ಆಲೋಚನೆ ಅವರದು.

ಹಲವು ಏಳು ಬೀಳುಗಳ ನಡುವೆಯೇ ಶಾಂತಿಲಾಲ್ ತಮ್ಮ ಉದ್ಯಮ ಜೀವನದಲ್ಲಿ ಮುನ್ನುಗ್ಗುತ್ತಿದ್ದಾರೆ. ಗೆಲುವಿನೊಂದಿಗೆ ಈ ಪಯಣವನ್ನು ನಿಲ್ಲಿಸುವ ಉದ್ದೇಶ ಅವರದು. ಅವರಿಗೆ ಯಶಸ್ಸು ಸಿಗಲಿ ಅಂತ ನಾವೂ ಹಾರೈಸೋಣ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories