ಆವೃತ್ತಿಗಳು
Kannada

ಬದುಕನ್ನೇ ಬದಲಿಸಿದ "ಕರ್ಮ"

ವಿಶ್ವಾಸ್​ ಭಾರಾಧ್ವಜ್​​​

Vishwas Bharadwaj
28th Oct 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

2 ವರ್ಷಗಳ ಹಿಂದೆ ಬಿಡುಗಡೆಗೊಂಡ ಕರ್ಮ ಕಾದಂಬರಿಯ ಮೂಲಕ ರಾತ್ರೋ ರಾತ್ರಿ ಜನಪ್ರಿಯತೆ ಪಡೆದುಕೊಂಡ ಯುವ ಕಾದಂಬರಿಕಾರ ಕರಣಂ ಪವನ್ ಪ್ರಸಾದ್. ಕರ್ಮ ಕಾದಂಬರಿಯನ್ನು ಕನ್ನಡ ಸಾರಸ್ವತ ಲೋಕದ ದಿಗ್ಗಜ, ಸರಸ್ವತಿ ಸಮ್ಮಾನ್ ಪುರಸ್ಕ್ರತ ಸಾಹಿತಿ ಎಸ್.ಎಲ್ ಭೈರಪ್ಪ ಮೆಚ್ಚಿಕೊಂಡಿದ್ದರು ಅನ್ನುವ ಒಂದೇ ಅಂಶ ಕಾದಂಬರಿಗೆ ಇನ್ನಿಲ್ಲದ ಮಾನ್ಯತೆ ತಂದು ಕೊಟ್ಟಿತು. ಕರ್ಮ ಕಾದಂಬರಿಗಾಗಿ ಸುಮಾರು 1 ವರ್ಷ ಕಾಲ ತಮ್ಮ ವೃತ್ತಿ ಬದುಕಿನಿಂದ ದೂರ ಉಳಿದು ಸಂಶೋಧನೆ ನಡೆಸಿದ್ದು ಕರಣಂರ ನಿಷ್ಠೆ ಹಾಗೂ ಬದ್ಧತೆಗೆ ಹಿಡಿದ ಕೈಗನ್ನಡಿ. ಫಲವಾಗಿ ಕರ್ಮ ಬಿಡುಗಡೆಯಾದ ಕೆಲವೇ ತಿಂಗಳಲ್ಲಿ ಎರಡನೇ ಹಾಗೂ ಮೂರನೇ ಮುದ್ರಣ ಕಂಡಿತು. ಅಷ್ಟೇ ಅಲ್ಲ ಇತ್ತೀಚೆಗಷ್ಟೆ ಆಂಗ್ಲ ಭಾಷೆಗೂ ಅನುವಾದಗೊಂಡಿತು. ಕನ್ನಡ ಸಾಹಿತ್ಯದಲ್ಲಿ ಗಟ್ಟಿತನದ ಕೃತಿಗಳು ಹೊರಬರುತ್ತಿಲ್ಲ ಅನ್ನುವ ಕೂಗಿನ ಮಧ್ಯೆ ಇದಕ್ಕೆ ಅಪವಾದವೆಂಬಂತೆ ಸಾಹಿತ್ಯದಲ್ಲಿ ಸೃಜನಾತ್ಮಕ ಕೃಷಿ ಮಾಡುತ್ತಿರುವ ಅಪರೂಪದ ಬರಹಗಾರ ಕರಣಂ ಪವನ್ ಪ್ರಸಾದ್.

image


ಕರಣ್ ಪವನ್ ಪ್ರಸಾದ್ರ ಹಿನ್ನೆಲೆ ಹಾಗೂ ಕಲಾನಂಟು:

ಮೂಲತಃ ನಾಟಕಕಾರರಾದ ಕರಣಂ ಪವನ್ ಪ್ರಸಾದ್ ಹುಟ್ಟಿದ್ದು, ಬೆಳೆದಿದ್ದು ಹಾಗೂ ಕಲಿತಿದ್ದು ಬೆಂಗಳೂರಿನಲ್ಲಿ. ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ತಮ್ಮ ಪದವಿ ಪೂರ್ವ ಕಾಲೇಜು ವಿದ್ಯಾಭ್ಯಾಸವನ್ನು ಬಸವನಗುಡಿಯ ನ್ಯಾಷನಲ್‍ ಕಾಲೇಜಿನಲ್ಲಿ ವಿಜ್ಞಾನದ ವಿಭಾಗದ ಕಲಿಕೆಯೊಂದಿಗೆ ಮುಗಿಸಿದರು. ನಾಟಕ ರಂಗದ ಮೇಲೆ ಅದಮ್ಯ ಒಲವು ಹೊಂದಿದ್ದ ಪವನ್, ತಮ್ಮ ಹೈಸ್ಕೂಲು ಕಲಿಯುತ್ತಿದ್ದ ದಿನಗಳಲ್ಲೇ ಭರತೇಶ ವೈಭವ ನಾಟಕವನ್ನು ಆಧುನಿಕ ಕನ್ನಡಕ್ಕೆ ರೂಪಾಂತರಿಸಿ ವಿನೂತನ ರಂಗಪ್ರಯೋಗ ಮಾಡಿದ್ದರು. ಭರತೇಶ ವೈಭವ ನಾಟಕದಲ್ಲಿ ಬಾಹುಬಲಿ ಪಾತ್ರವನ್ನು ತಾವೇ ನಿರ್ವಹಿಸುವ ಮೂಲಕ ತಾವೊಬ್ಬ ಅಪ್ರತಿಮ ಕಲಾವಿದರೂ ಹೌದು ಅನ್ನುವುದನ್ನು ಸಾಬೀತು ಮಾಡಿದ್ದರು. ಈ ಮೂಲಕ ಅವರ ಕಲಾನಂಟು ಶುರುವಾಯಿತು.

ಬಹುಮುಖೀ ಚಿಂತನೆಯ ಪ್ರಸಾದ್ ಅಪ್ಪಟ ಪ್ರತಿಭಾವಂತ:

ಹೈಸ್ಕೂಲು ದಿನಗಳಿಂದ ಹಿಡಿದು ಕಾಲೇಜು ದಿನಗಳವರೆಗೆ ಚರ್ಚಾಸ್ಪರ್ಧೆಯ ಅತ್ಯುತ್ತಮ ವಾಕ್ಪಟುವಾಗಿ, ನಟನೆ, ಬೀದಿ ನಾಟಕಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದರು. ಬೆಂಗಳೂರು ವಿಶ್ವ ವಿದ್ಯಾನಿಲಯವನ್ನು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದ ಪಾಲುದಾರಿಕೆ ಕೂಡ ಇವರ ಹಿರಿಮೆ. ತಮ್ಮ ಬಿಎಸ್ಸಿ ವಿದ್ಯಾಭ್ಯಾಸವನ್ನು ಅದೇ ವಿಶ್ವ ವಿದ್ಯಾನಿಲಯದಲ್ಲಿ ಮುಗಿಸಿದ ಕರಣಂ ಪವನ್ ಪ್ರಸಾದ್, ಕಾಲೇಜು ದಿನಗಳಲ್ಲೂ ನಾಟಕ ಹಾಗೂ ಕಲಾ ಕ್ಷೇತ್ರದಲ್ಲಿ ಸಕ್ರಿಯರಾಗಿ ಚಟುವಟಿಕಾಶೀಲರಾಗಿದ್ದರು. ವಿಶ್ವವಿದ್ಯಾನಿಲಯದ ನಾಟಕ ತಂಡದ ರೂವಾರಿಯಾಗಿ, ಚರ್ಚಾ ಪಟುವಾಗಿ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಕರಣಂ ತಾವು ಸಾಂಸ್ಕ್ರತಿಕ ಹಾಗೂ ಸಾಹಿತ್ಯಕ ಕ್ಷೇತ್ರದ ಮುಂದಿನ ರಾಯಭಾರಿ ಅನ್ನುವುದನ್ನು ಸ್ಪಷ್ಟಪಡಿಸಿದ್ದರು. ಶಬ್ಧಾತೀತ ತರಂಗಗಳು ಹಾಗೂ ಸಿಲಿಕಾನ್ ಬಗ್ಗೆ ಕನ್ನಡದಲ್ಲಿ ವಿಜ್ಞಾನ ಪ್ರಬಂಧವನ್ನು ಮಂಡಿಸಿದ ಅವರು ತಮ್ಮ ವಿಜ್ಞಾನದ ಆಸಕ್ತಿಯನ್ನೂ ಅಭಿವ್ಯಕ್ತಗೊಳಿಸಿದ್ದರು. ಹೈಸ್ಕೂಲ್ ಶಾಲಾ ದಿನಗಳಿಂದ ಅವರ ಬರವಣಿಗೆ ಪ್ರಾಥಮಿಕ ಪ್ರಯತ್ನ ಪ್ರಾರಂಭವಾಗಿದ್ದೇ ವಿಜ್ಞಾನಿಗಳ ಬಗ್ಗೆ ಕಿರು ನಾಟಕ ಬರೆಯುವ ಮೂಲಕ.

ನಾಟಕಕಾರರಾಗಿ, ನಟರಾಗಿ ರಂಗಕರ್ಮಿಯಾದ ಪ್ರಸಾದ್:

ತಮ್ಮ ಪದವಿಯ ನಂತರ ರಂಗ ಭೂಮಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡ ಕರಣಂ ಪವನ್ ಪ್ರಸಾದ್, ಹಲವು ಹೊಸ ಹೊಸ ಕ್ರಿಯಾತ್ಮಕ ರಂಗಪ್ರಯೋಗಗಳನ್ನು ನಡೆಸಿದರು. ಪವನ್ರ ಮೊದಲ ನಾಟಕ ‘ಬೀದಿ ಬಿಂಬ ರಂಗದತುಂಬ’. ಇದನ್ನು ರಚಿಸಿ, ನಿರ್ದೇಶಿಸಿ, ನಟಿಸಿದ ಅವರು ಪರಿಕಲ್ಪನೆ, ವಿನ್ಯಾಸ, ರಂಗಸಜ್ಜಿಕೆ ಹಾಗೂ ಪಾತ್ರಗಳ ನಿರೂಪಣೆಯಿಂದ ನಾಟಕದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ವಂದೇ ಮಾತರಂ ಟ್ರಸ್ಟ್ ಮೂಲಕ ನಿರ್ಮಾಣಗೊಂಡ ಈ ನಾಟಕ ಈವರೆಗೂ ಸರಿಸುಮಾರು 28 ಅಮೋಘ ಪ್ರದರ್ಶನಗಳನ್ನು ಕಂಡಿದೆ. ಪವನ್ ಪ್ರಸಾದ್​​ಗೆ ಅಪಾರ ಮನ್ನಣೆ ದೊರಕಿಸಿಕೊಟ್ಟ ಈ ಪ್ರಯೋಗ, ಬೆಂಗಳೂರಿನ ಪ್ರಮುಖ ಸಾಫ್ಟ್​​ವೇರ್ ಕಂಪೆನಿಗಳಿಂದ ಹಿಡಿದು ಧಾರವಾಡ, ಹುಬ್ಬಳ್ಳಿ ಹೀಗೆ ಎಲ್ಲೆಡೆ ಆಹ್ವಾನ ಪ್ರದರ್ಶನಗಳನ್ನು ಕಂಡಿದೆ. ಇದೇ ಸಂದರ್ಭದಲ್ಲಿ ರಂಗಭೂಮಿ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ಹಾಗೂ ಕಂಪೆನಿಗಳಲ್ಲಿ ನಾಟಕ ಹೇಳಿಕೊಡುವ ವೃತ್ತಿಯನ್ನು ಕೈಗೊಂಡಿದ್ದು ಅವರ ಕಲಾಪ್ರೇಮಕ್ಕೆ ಸೂಕ್ತ ಉದಾಹರಣೆ.

image


ಪವನ್ ಹೆಸರನ್ನು ಪ್ರಚಲಿತಕ್ಕೆ ತಂದ ಪುರಹರ ನಾಟಕ:

ಕರಣಂ 2012ರಲ್ಲಿ ಬರೆದು ನಟಿಸಿದ 2ನೇ ನಾಟಕವೇ ‘ಪುರಹರ’. ತನ್ನ ಮೌಲಿಕಸತ್ವದಿಂದ ರಂಗಭೂಮಿಯಲ್ಲಿ ಹೊಸ ಛಾಪನ್ನು ಮೂಡಿಸಿದ ರಂಗಪ್ರಯೋಗವಿದು. ರಂಗಭೂಮಿಯಲ್ಲಿ ಪವನ್ ಪ್ರಸಾದ್​​ ಹೆಸರು ಪ್ರಚಲಿತಕ್ಕೆ ಬರುವಂತೆ ಮಾಡಿದ ನಾಟಕವೂ ಪುರಹರ. ಅರಬ್ ಆದಿಲ್ ಶಾ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಪವನ್ ನಟನೆ ಮತ್ತೆ ವೀಕ್ಷಕರ ಮನಸೂರೆಗೊಂಡು ಶಹಬ್ಬಾಸ್​​ಗಿರಿ ಪಡೆದುಕೊಂಡಿತು. ಈ ಎಲ್ಲಾ ಬೆಳವಣಿಗೆಗೆಳ ನಡುವೆ ತಮ್ಮ ಆರ್ಥಿಕ ಸಂಕಷ್ಟವನ್ನು ನಿಭಾಯಿಸಿಕೊಂಡ ಪವನ್, ತಮಗೆ ಒದಗಿದ್ದ ಅನೇಕ ಸಿನಿಮಾ ಆಹ್ವಾನಗಳನ್ನು ಸಾರಾಸಗಟಾಗಿ ತಿರಸ್ಕರಿಸಿದರು.

ಇನ್ಮುಂದೆ ನಾಟಕ ಮಾಡುವುದಿಲ್ಲ ಅಂದುಬಿಟ್ಟರು ಪವನ್:

ಇವೆಲ್ಲವಕ್ಕಿಂತಲೂ ಅಚ್ಚರಿಯ ವಿಚಾರವೆಂದರೇ ದಿಢೀರನೇ ಒಂದು ದಿನ ಅವರು ತಮ್ಮ ಅಚ್ಚುಮೆಚ್ಚುನ ರಂಗ ಕ್ಷೇತ್ರದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು. ‘ಇನ್ನು ಮುಂದೆ ನಾನು ನಾಟಕ ಮಾಡುವುದಿಲ್ಲ, ಇಡೀ ತಂಡಕ್ಕೆ, ಟ್ರಸ್ಟಿಗೆ ತಿಳಿಸಿಬಿಡಿ’ ಎಂದು ಹೇಳಿ ರಂಗಭೂಮಿಯಿಂದಲೇ ಕಣ್ಮರೆಯಾಗಿ ಬಿಟ್ಟರು. ಆಹ್ವಾನ ಪ್ರದರ್ಶನ ಏರ್ಪಡಿಸಿದವರು, ನಾಟಕ ಅಭಿಮಾನಿಗಳು ಎಲ್ಲರೂ ಅವರು ನಾಟಕಗಳಿಗೆ ಮರಳಬೇಕೆಂದು ಕೇಳಿಕೊಂಡರು. ಅವರು ನಿಶ್ಚಯ ಬದಲಿಸಲಿಲ್ಲ.

ಸಾಫ್ಟ್​​ವೇರ್ ಉದ್ಯಮ ತೆರೆದ ನಾಟಕಕಾರ:

ತಮ್ಮ ವಿದ್ಯಾಭ್ಯಾಸಕ್ಕೆ ಸಬಂಧ ಪಡದಿದ್ದರೂ, ಸಾಫ್ಟ್​​ವೇರ್ ಡಿಸೈನ್ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದ ಪವನ್ ಪ್ರಸಾದ್ ಅದನ್ನು ವೃತ್ತಿಯನ್ನಾಗಿ ಮಾಡಿಕೊಂಡು, ತಮ್ಮದೇ ಹೊಸ ಕಂಪೆನಿ ತೆರೆದರು. ಮೊದಮೊದಲು ಅರ್ಥವಾಗದಿದ್ದ ಈ ಹೊಸ ಕ್ಷೇತ್ರ ನಿಧಾನವಾಗಿ ಅವರ ಕೈವಶವಾಗುತ್ತಾ ಬಂದಿತು. ನಂತರದ ದಿನಗಳಲ್ಲಿ ಅದರಲ್ಲಿ ಹಲವಾರು ಪಾಲುದಾರರು ಸೇರಿಕೊಂಡು ಸಂಸ್ಥೆಯನ್ನು ಬೆಳೆಸತೊಡಗಿದರು. ಇದರಿಂದ ಅವರ ಆರ್ಥಿಕ ಮಟ್ಟ ಸುಸ್ಥಿತಿಗೆ ಬಂದಿತು. ಇದೇ ಸಂದರ್ಭದಲ್ಲಿ ಅವರಿಗೆ ಹೊಳೆದ ಕಥೆಯ ಎಳೆಯೇ ‘ಕರ್ಮ’ ಕಾದಂಬರಿ.

ಕಾದಂಬರಿಗಾಗಿ ಸತತ ಒಂದೂವರೆ ವರ್ಷ ನಿರಂತರ ಅಧ್ಯಯನ:

ಈ ಕಾದಂಬರಿಯ ರಚನೆಗಾಗಿ ಮತ್ತೆ ಒಂದೂವರೆ ವರ್ಷ ಸತತ ಅಧ್ಯಯನಕ್ಕಾಗಿ ಅಜ್ಞಾತವಾಸ ನಡೆಸಿದರು. 2013ರ ಜುಲೈನಲ್ಲಿ ಖ್ಯಾತ ಕಾದಂಬರಿಕಾರ ಎಸ್ ಎಲ್ ಭೈರಪ್ಪನವರನ್ನು ಭೇಟಿ ಮಾಡಿ ಚರ್ಚೆ ನಡೆಸಿ ಆ ಬಳಿಕವಷ್ಟೆ ಕರ್ಮವನ್ನು ಬಿಡುಗಡೆಗೊಳಿಸಿದರು. ನಾಟಕಕಾರರಾಗಿ ಹೆಸರು ಮಾಡಿದ್ದ ಕರಣಂ ಪವನ್ ಪ್ರಸಾದ್​ಗೆ ಸಾಹಿತಿಯಾಗಿ ಗುರುತಿಸಿಕೊಳ್ಳಲು ವೇದಿಕೆ ಒದಗಿಸಿದ್ದು ಕರ್ಮ ಕಾದಂಬರಿ. ವರ್ಷಗಳ ಕಾಲ ಕಲಾರಂಗದಿಂದ ದೂರವಿದ್ದವರು ಹೀಗೇಕೆ ಕಾದಂಬರಿಯನ್ನು ಬರೆದು ಮುಗಿಸಿ ಈಗ ಕಾಣಿಸಿಕೊಂಡಿರಿ ಎಂಬ ಪ್ರಶ್ನೆಗೆ ಅವರೇ ನೀಡುವ ಉತ್ತರ “ಏನೇ ಆದರೂ ನಾಟಕ ಶುದ್ಧ ಅಭಿವ್ಯಕ್ತಿಯಾಗಲಾರದು, ಎಷ್ಟೇ ಉನ್ನತವಾಗಿ ಬರೆದರೂ ಮನರಂಜನೆ ಮನಸ್ಸಿನಲ್ಲಿ ಬಂದು ಜನರಿಗಾಗಿ ಹಾದರ ಮಾಡಬೇಕಾಗುತ್ತದೆ. ಕಾದಂಬರಿಯೊಂದೇ ಶುದ್ಧ ಅಭಿವ್ಯಕ್ತಿ. ನಾಟಕ, ಸಿನಿಮಾ ಮಾಡಲು ಹಲವಾರು ಜನರಿದ್ದಾರೆ. ಆದರೆ ಗಂಭೀರ ಗಟ್ಟಿ ಸಾಹಿತ್ಯ ನೀಡಲು ಈಗ ಯಾರೂ ಇಲ್ಲ. ಅದೆಲ್ಲಕ್ಕೂ ಮಿಗಿಲಾಗಿ ಇದು ಆತ್ಮ ತೃಪ್ತಿ ನೀಡುತ್ತಿದೆ ಹಾಗಾಗಿ ಈ ಕ್ಷೇತ್ರವನ್ನು ಆರಿಸಿಕೊಂಡಿದ್ದೇನೆ”. ಹೀಗೆ ತಮಗನಿಸಿದ್ದನ್ನು ನೇರವಾಗಿ ಅಭಿವ್ಯಕ್ತಪಡಿಸುವ ನೇರವಂತಿಕೆಯ ಅವರ ಸ್ವಭಾವವೇ ಅವರ ಸಾಹಿತ್ಯದ ಮೊನಚಾದ ಗಟ್ಟಿ ನೆಲಗಟ್ಟಿನ ಮಾನದಂಡ.

image


ಕರ್ಮ ಕಾದಂಬರಿಯನ್ನು ಮನೋಹರ ಗ್ರಂಥಮಾಲ ಮತ್ತು ಸಾಹಿತ್ಯ ಪ್ರಕಾಶನ ಮುಂತಾದವರು ಮೆಚ್ಚಿದ್ದರೂ, ಪ್ರಕಟಿಸಲು ಉದಾಸೀನ ಮತ್ತು ನಿರ್ಲಕ್ಷ್ಯ ಮಾಡಿದ್ದರು. ಇದರಿಂದ ಬೇಸರಗೊಂಡ ಪವನ್, ತಮ್ಮದೇ ಪಾಲುದಾರ ಸಂಸ್ಥೆಯಾದ ಕಾನ್ಕೇಕವ್ ಮೀಡಿಯಾದ ಮೂಲಕ ಪ್ರಕಾಶನ ವಿಭಾಗ ಮಾಡಿ ಬಿಡುಗಡೆಗೊಳಿಸಿದರು. ಕಾದಂಬರಿ ಬಿಡುಗಡೆಯಾದ ಮೂರೇ ತಿಂಗಳಲ್ಲಿ ಎರಡನೇ ಮುದ್ರಣವನ್ನೂ ಕಂಡಿತು. ಒಂದೇ ವರ್ಷದಲ್ಲಿ ಮೂರನೇ ಮುದ್ರಣವನ್ನು ತಲುಪಿ, ಸದ್ಯ ನಾಲ್ಕೆನೇ ಮುದ್ರಣದ ಹೊಸ್ತಿಲಿನಲ್ಲಿದೆ. ಕರ್ಮ ಸಾಹಿತ್ಯಾಸಕ್ತರನ್ನು ತನ್ನತ್ತ ತೀವ್ರವಾಗಿ ಸೆಳೆದಿದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ?

ಜನಮನ ಗಮನ ಸೆಳೆಯುತ್ತಿದೆ ‘ನನ್ನಿ’:

ಇತ್ತೀಚೆಗಷ್ಟೆ ಕರಣಂ ಪವನ್ ಪ್ರಸಾದ್​​ರವರ ಎರಡನೇ ಕಾದಂಬರಿ ‘ನನ್ನಿ’ ಸಹ ಬಿಡುಗಡೆಗೊಂಡಿದೆ. ಶತಾವಧಾನಿ ಆರ್ ಗಣೇಶ್ ಸೇರಿದಂತೆ, ವಿದ್ವಾಂಸರಿಂದ ಮತ್ತು ಓದುಗರಿಂದ ಸಾಕಷ್ಟು ಮೆಚ್ಚುಗೆಗಳಿಸಿ ನನ್ನಿ ನಾಗಾಲೋಟದಿಂದ ಪುಸ್ತಕದಂಗಡಿಯಲ್ಲಿ ಮಾರಾಟ ಕಾಣುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪುಸ್ತಕ ಮಾರಾಟಗಾರರು ನನ್ನಿಯ ಮಾರಾಟದಲ್ಲಿ ಲಾಭ ಕಂಡಿದ್ದಾರೆ. ನನ್ನಿಯ ಕಥಾವಸ್ತು ಹಾಗೂ ನಿರೂಪಣೆಯನ್ನು ಸಾಹಿತ್ಯಪ್ರೇಮಿಗಳು ಒಪ್ಪಿಕೊಂಡು ಆಸ್ವಾಧಿಸಿದ್ದಾರೆ. ಪವನ್​ರ ಸಾಹಿತ್ಯ ಕೃಷಿ ಹೊಸತೊಂದು ಬರವಣಿಗೆಯ ಶೈಲಿಯನ್ನು ಕನ್ನಡಕ್ಕೆ ಪರಿಚಯಿಸಿಕೊಟ್ಟಿದೆ.

ಸದ್ಯ ಇಂಟರ್ ಫೇಸ್​​ ಡಿಸೈನರ್ ವೃತ್ತಿಯನ್ನು ಮುಂದುವರೆಸುತ್ತಾ ಅದರ ಜೊತೆಗೇ ಅಧ್ಯಯನ ಮತ್ತು ಬರವಣಿಗೆಯಲ್ಲಿ ಕರಣಂ ಪವನ್ ಪ್ರಸಾದ್‍ ತಮ್ಮನ್ನು ತಾವು ಆಸ್ಥೆಯಿಂದ ತೊಡಗಿಸಿಕೊಂಡಿದ್ದಾರೆ. ಹಲವು ಹಳೇ ಕಲಾವಿದರ ಅಪೇಕ್ಷೆ ಮೇರೆಗೆ ಅವರ ನಾಟಕಗಳು ಸದ್ಯ ಇತರ ತಂಡಗಳಿಂದ ಪ್ರದರ್ಶನಗೊಳ್ಳುತ್ತಿದೆ. ಪುರಹರ ನಾಟಕವನ್ನು ಮತ್ತೆ ಮಾಡುವುದಾಗಿ ಒಪ್ಪಿಕೊಂಡಿರುವ ಪವನ್, ಮುಂಬರುವ ದಿನಗಳಲ್ಲಿ ಮತ್ತೆ ನಾಟಕ ಕ್ಷೇತ್ರದಲ್ಲೂ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ. ಆದರೆ ಇವೆಲ್ಲದರ ಮಧ್ಯೆ ತಾವೊಬ್ಬ ಕನ್ನಡ ಸಾಹಿತ್ಯದ ಎಮರ್ಜಿಂಗ್ ರೈಟರ್ ಅನ್ನುವುದನ್ನು ತಮ್ಮ ಬರವಣಿಗೆಯ ಮೂಲಕವೇ ಸಾರಿ ಸಾರಿ ಹೇಳುತ್ತಿದ್ದಾರೆ ಕರಣಂ ಪವನ್ ಪ್ರಸಾದ್.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags