ಪ್ರವಾಸಿಗರನ್ನು ಸೆಳೆಯಲು ವರ್ಚುವಲ್ ರಿಯಾಲಿಟಿ- ರಾಮನಗರದಲ್ಲಿ "ಶೋಲೆ"ಮರು ಸೃಷ್ಟಿ..!
ಟೀಮ್ ವೈ.ಎಸ್. ಕನ್ನಡ
ಬಾಲಿವುಡ್ ಚಿತ್ರರಂಗಕ್ಕೂ ಕರ್ನಾಟಕಕ್ಕೂ ದೊಡ್ಡ ಸಂಬಂಧವಿದೆ. ನಟರು, ಖಳನಟರನ್ನು ಕರ್ನಾಟಕ ಬಾಲಿವುಡ್ಗೆ ಕೊಡುಗೆಯಾಗಿ ನೀಡಿದೆ. ಕರ್ನಾಟಕದಲ್ಲಿನ ಸೌಂದರ್ಯ ಬಾಲಿವುಡ್ನ ಅದೆಷ್ಟೋ ಚಿತ್ರಗಳಲ್ಲಿ ಸೂಪರ್ ಸ್ಪಾಟ್ ಆಗಿ ಕಾಣಿಸಿಕೊಂಡಿದ್ದು ಸುಳ್ಳಲ್ಲ. ಬಾಲಿವುಡ್ ತಂತ್ರಜ್ಞರ ಕೈಯಲ್ಲಿ ಸುಂದರವಾಗಿ ಚಿತ್ರೀಕರಣಗೊಂಡು ವಿಶ್ವವಿಖ್ಯಾತವಾಗಿರುವ ಸ್ಥಳಗಳು ಕೂಡ ಕರ್ನಾಟದಲ್ಲಿವೆ. ಅವುಗಳ ಪಟ್ಟಿಗೆ ಈಗ ಮತ್ತೊಂದು ಸ್ಥಳ ಸೇರ್ಪಡೆಯಾಗಿದೆ.
70-80 ರ ದಶಕದಲ್ಲಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸದ್ದು ಮಾಡಿದ್ದ ಶೋಲೆ ಸಿನಿಮಾ. ಅಮಿತಾಬ್ ಬಚ್ಚನ್ ನಾಯಕನಟನಾಗಿದ್ದ "ಶೋಲೆ" ಚಿತ್ರದ ಅತಿ ಹೆಚ್ಚು ಭಾಗ ಶೂಟಿಂಗ್ ಆಗಿದ್ದು ರಾಮನಗರದ ರಾಮದೇವರ ಬೆಟ್ಟದಲ್ಲಿ . ರಾಮದೇವರ ಬೆಟ್ಟ ಚಿತ್ರ ಬಿಡುಗಡೆಯಾದ ಮೇಲೆ "ಶೋಲೆ" ಬೆಟ್ಟ ಅಂತ ಫೇಮಸ್ ಆಗಿದ್ದು ಸುಳ್ಳಲ್ಲ. ಈಗ ಅಲ್ಲಿ ಮತ್ತೆ "ಶೋಲೆ"ಯನ್ನು ರಿಕ್ರಿಯೇಟ್ ಮಾಡಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಿದ್ಧವಾಗಿದೆ.
" ಸರಕಾರದ ಮುಂದೆ ಶೋಲೆಯನ್ನು ರೀಕ್ರಿಯೆಟ್ ಮಾಡುವ ಪ್ರಸ್ತಾವನೆ ಬಂದಿದೆ. ಸಿನಿಮಾ ಇಂದು ಪವರ್ಫುಲ್ ಮಾಧ್ಯಮವಾಗಿ ಹೊರ ಹೊಮ್ಮಿದೆ. ರಾಮದೇವರ ಬೆಟ್ಟದಲ್ಲಿ ಅಂತಹ ಒಂದು ಮಹೋನ್ನತ ಚಿತ್ರ ಶೂಟಿಂಗ್ ಆಗಿರುವುದು ಹೆಮ್ಮೆಯ ಸಂಗತಿ, ಅದನ್ನು ಬಳಸಿಕೊಂಡು ನಾವು ಪ್ರವಾಸಿಗರನ್ನು ಹೆಚ್ಚೆಚ್ಚು ಸೆಳೆಯಬಹುದು ಎಂಬುದು ಇದರ ಉದ್ದೇಶ."
- ಪ್ರಿಯಾಂಕ ಖರ್ಗೆ, ಪ್ರವಾಸೋದ್ಯಮ ಸಚಿವ
ಹಿಂದಿ ಚಿತ್ರರಂಗದ ಮಾಸ್ಟರ್ಪೀಸ್ "ಶೋಲೆ" ಚಿತ್ರ ಚಿತ್ರೀಕರಣಗೊಂಡ ಜಾಗವಾದ ರಾಮನಗರದ ರಾಮದೇವರ ಬೆಟ್ಟದಲ್ಲಿ ಶೋಲೆ ಸಿನಿಮಾವನ್ನು ಮರುಸೃಷ್ಟಿ ಮಾಡಲು ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ನಲವತ್ತೆರೆಡು ವರ್ಷಗಳ ಹಿಂದೆ ಜೈ ದೇವ್ ಆಗಿ ಅಮಿತಾಬಚ್ಚನ್, ವೀರೂ ಆಗಿ ಧರ್ಮೇಂದ್ರ, ಬಸಂತಿಯಾಗಿ ಹೇಮಮಾಲಿನಿ, ಹೀಗೆ ಸಾಕಷ್ಟು ದಿಗ್ಗಜರು ರಾಮದೇವರಬೆಟ್ಟದಲ್ಲಿ ಓಡಾಡಿದ್ದರು. "ಶೋಲೆ" ಸೂಪರ್ ಹಿಟ್ ಆಗಿತ್ತು. ಈಗ ಮತ್ತೆ ಪ್ರವಾಸೋದ್ಯಮ ಇಲಾಖೆ "ಶೋಲೆ" ಜಪ ಶುರುಮಾಡಿಕೊಂಡಿದೆ. ಅದೆಲ್ಲವನ್ನು 3ಡಿ ವರ್ಚುಯಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಪ್ರವಾಸಿಗರಿಗೆ ತೋರಿಸಲು ಪ್ರಸ್ತಾವನೆ ಸಿದ್ದಗೊಂಡಿದೆ.
ಸುಮಾರು 42, 184 ಚದರ ಅಡಿಯಲ್ಲಿ ಆಗಿನ "ಶೋಲೆ"ಯನ್ನು ರೀಕ್ರಿಯೇಟ್ ಮಾಡಲು ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಪ್ರವಾಸೋದ್ಯಮ ಇಲಾಖೆ ನೀಡಿದೆ. ಈ 3 ಡಿ ವರ್ಚುಯಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ "ಶೋಲೆ"ಯನ್ನು ರೀಕ್ರಿಯೇಟ್ ಮಾಡಲು ಇಲಾಖೆ ಮತ್ತು ರಾಮನಗರ ಜಿಲ್ಲಾಡಳಿತ ಸುಮಾರು 7.5 ಕೋಟಿ ರೂ.ಗಳ ಎಸ್ಟಿಮೇಶನ್ ಹಾಕಿದೆ.
ವರ್ಚುಯಲ್ ರಿಯಾಲಿಟಿ ಎಂದರೇನು..?
3 ಡಿ ತಂತ್ರಜ್ಞಾನದಲ್ಲಿ ಪ್ರೇಕ್ಷಕರು ಕನ್ನಡಕ ಹಾಕಿಕೊಂಡರೆ ಎಲ್ಲವೂನಮ್ಮ ಕಣ್ಣ ಮುಂದೆ ನಡೆದಂತೆ ಆಗುತ್ತಿರುತ್ತದೆ. ಆದರೆ ಈ ವಿ.ಆರ್. ತಂತ್ರಜ್ಞಾನದಲ್ಲಿ ಸಿನಿಮಾದ ಕ್ಯಾರೆಕ್ಟರ್ಗಳು ನಮ್ಮ ಪಕ್ಕದಲ್ಲೇ ಕುಳಿತು ಡೈಲಾಗ್ಗಳನ್ನು ಹೇಳುವಂತೆ ಭಾಸವಾಗುತ್ತದೆ. ಅಲ್ಲದೇ ಎಲ್ಲ ಕಲಾವಿದರೂ ಜೀವಂತವಾಗಿಯೇ ಇರುವಂತೆ ಫೀಲ್ ಆಗುತ್ತದೆ. ಇಂತಹ ಒಂದು ತಂತ್ರಜ್ಞಾನದಿಂದ ಪ್ರವಾಸಿಗರನ್ನು ಹೆಚ್ಚೆಚ್ಚು ಸೆಳೆಯಬಹುದು ಎಂಬುದು ಇಲಾಖೆಯ ಅಭಿಪ್ರಾಯವಾಗಿದೆ.
ಶೋಲೆ ವಿ.ಆರ್. ವಿಲೇಜ್ನಲ್ಲಿ ಏನೇನು ಇರುತ್ತೆ..?
ಪ್ರವಾಸೋದ್ಯಮ ಇಲಾಖೆ ಸೃಷ್ಟಿ ಮಾಡಲು ಹೊರಟಿರುವ ಈ ‘3ಡಿ ವರ್ಚುವಲ್ ರಿಯಾಲಿಟಿ ವಿಲೇಜ್’ನಲ್ಲಿ ಎರಡೂವರೆ ವರ್ಷ ಆ ಬೆಟ್ಟದಲ್ಲಿ ಏನೇನು ಶೂಟಿಂಗ್ ನಡೆದಿತ್ತೋ ಎಲ್ಲವೂ ಇರುತ್ತದೆ. ಅಮಿತಾಬ್ಬಚ್ಚನ್, ಧರ್ಮೇಂದ್ರ, ಹೇಮಮಾಲಿನಿ ಸೇರಿದಂತೆ ಎಲ್ಲರು ಇರುತ್ತಾರೆ.
"ಶೋಲೆ" ಸಿನಿಮಾದಲ್ಲಿ ಅಮಿತಾಬ್ಬಚ್ಚನ್ ಹೇಳಿದ ಡೈಲಾಗ್ಗಳು ಇಲ್ಲಿ ರಿಪೀಟ್ ಆಗುತ್ತವೆ. ಅಷ್ಟೇ ಅಲ್ಲದೇ ಪ್ರವಾಸಿಗರು ಕೂಡ ಇವರ ಜತೆ ಡೈಲಾಗ್ ಹೇಳಬಹುದು, ಅದಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ರೂಪಿಸಲಾಗಿದೆಯಂತೆ. ಬಸಂತಿ ನೃತ್ಯ ಮಾಡಿದ್ದು, ಕೈ ಕತ್ತರಿಸಿ ನಟಿಸಿದ್ದ ಠಾಕೂರ್ ಹೀಗೆ ಎಲ್ಲವನ್ನೂ ಮರು ಸೃಷ್ಟಿ ಮಾಡಲು ಸಿದ್ಧತೆ ನಡೆಸಲಾಗಿದೆ.
ರಾಮನಗರ ಜಿಲ್ಲಾ ಆಡಳಿತ ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಲಿಸಿದೆ. ಖಾಸಗಿ ಸಹಭಾಗಿತ್ವ ನೀಡಿ ಅಥವಾ ಸರಕಾರವೇ ಆಗುವ ವೆಚ್ಚವನ್ನು ಭರಿಸಬಹುದು ಎಂಬುದು ಪ್ರಸ್ತಾವನೆಯಲ್ಲಿದೆಯಂತೆ. ಎಲ್ಲವೂ ಸಾಧ್ಯವಾದರೆ ಕೆಲವೇ ದಿನಗಳಲ್ಲಿ ನಾವು ಶೋಲೆಯನ್ನು ವರ್ಚ್ಯುವಲ್ ರಿಯಾಲಿಟಿ ತಂತ್ರಜ್ಞಾನದ ಮೂಲಕ ಅನುಭವಿಸಬಹುದು.
1. ನಾಳಿನ ಬಗ್ಗೆ ಕನಸು- ಸೋಲಿನ ಬಗ್ಗೆ ಅವಲೋಕನ- ಸ್ಟಾರ್ಟ್ಅಪ್ ಯಶಸ್ಸಿನ ಮಂತ್ರ
2. "ಬಾಲೆ"ಇದು ವುಮೆನ್ ಹುಡ್ ಸೆಲೆಬ್ರೇಷನ್
3. ಕನ್ನಡಿಗರ ಒಡನಾಡಿ- ಕೃಷಿಕರ ಜೀವನಾಡಿ- ಕೇವಲ ನೆನಪಾಗಿ ಉಳಿಯಲಿದೆ ಮೈಸೂರು ಬ್ಯಾಂಕ್