ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ಕಾಂತಾ ಕಲೆಯನ್ನು ಪುನರುಜ್ಜೀವನಗೊಳಿಸಿ ನೂರಾರು ಮಹಿಳಾ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುತ್ತಿರುವ ಭೂಸೇನಾಧಿಕಾರಿಯ ಪತ್ನಿ

ಉದ್ಯಮಿ ಮತ್ತು ಭೂಸೇನಾಧಿಕಾರಿಯ ಪತ್ನಿಯಾಗಿರುವ ಫರಾಖಾನ್ ಸಾಂಪ್ರದಾಯಿಕ ಕಾಂತಾ ಕಲೆಯನ್ನು ಪುನರುಜ್ಜೀವನಗೊಳಿಸುವುದರಲ್ಲಿ ನಿರತರಾಗಿದ್ದಾರೆ. ದುಪ್ಪಟ್ಟಾ ಮತ್ತು ಸೀರೆಗಳ ಮೇಲೆ ಆಕರ್ಷಕವಾದ ಎಂಬ್ರಾಯಿಡರಿ ವಿನ್ಯಾಸಗಳನ್ನು ರಚಿಸುವ “ಫರಾಖಾನರ ಕಾಂತಾ” ಎಂಬ ವಿಶಿಷ್ಟ ಕಲೆ ಪಶ್ಚಿಮ ಬಂಗಾಳದ ಕುಶಲಕರ್ಮಿ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ಕಾಂತಾ ಕಲೆಯನ್ನು ಪುನರುಜ್ಜೀವನಗೊಳಿಸಿ ನೂರಾರು ಮಹಿಳಾ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸುತ್ತಿರುವ ಭೂಸೇನಾಧಿಕಾರಿಯ ಪತ್ನಿ

Tuesday October 15, 2019,

4 min Read

ಫರಾಖಾನ್ ಮಹಿಳೆಯರು ವೈದ್ಯರಾಗಿ ಕೆಲಸ ಮಾಡುವುದು ಗೌರವಾನ್ವಿತ ವೃತ್ತಿ ಎನಿಸಿಕೊಂಡಿದ್ದ ಕಾಲದಲ್ಲಿ ಬೆಳೆದವರು. ಅದರಂತೆ ಅವರು ವೈದ್ಯರಾಗಲೆಂದು ಅಲಿಘರ್ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದರು. ಆದರೆ ದುರಾದೃಷ್ಟದಿಂದ ಅವರು ಆ ಸಮಯದಲ್ಲಿ ಕಾಯಿಲೆ ಬಿದ್ದರು. ಇದರಿಂದಾಗಿ ಅವರು ವೈದ್ಯರಾಗುವುದು ತಪ್ಪಿತು. ಬದಲಾಗಿ ಅವರು ಬಾಂಬೆ ವಿಶ್ವವಿದ್ಯಾನಿಲಯ ಸೇರಿ ವಿಜ್ಞಾನದಲ್ಲಿ ಬಿಎಸ್ಸಿ ಗೌರವ ಪದವಿ ಪಡೆದರು.


ಇದು ಸರಿಸುಮಾರು 90 ನೇ ಇಸವಿಯಲ್ಲಿ ಜರುಗಿದ ಘಟನೆ. ಫರಾ ಮುಂದೊಂದು ದಿನ ತಾವು ಭಾರತದ ಪೂರ್ವ ರಾಜ್ಯಗಳಾದ ಬಂಗಾಳ, ಒರಿಸ್ಸಾಮತ್ತು ತ್ರಿಪುರಾದಲ್ಲಿ ಪ್ರಚಲಿತವಾಗಿದ್ದ ಎಂಬ್ರಾಯಿಡರಿಗೆ ಸಂಬಂಧಿಸಿದ ಕಾಂತಾ ಕಲೆಯ ಪುನರುಜ್ಜೀವನಕ್ಕೆ ಕಾರಣವಾಗುತ್ತೇನೆಂದು ಕನಸುಮನಸಿನಲ್ಲಿಯೂ ಅಂದುಕೊಂಡಿರಲಿಲ್ಲ.


ಇಂದು ಫರಾ ತಮ್ಮ ಕೌಶಲ್ಯದಿಂದ ಸಾಂಪ್ರದಾಯಿಕ ಕಾಂತಾ ಕಲೆಯನ್ನು ಪ್ರಸಕ್ತ ಶೈಲಿಗಳೊಂದಿಗೆ ಸಮೀಕರಿಸಿ ಅದನ್ನು ಒಂದು ಅದ್ವಿತೀಯ ಕಲೆಯನ್ನಾಗಿ ಪರಿವರ್ತಿಸಿ ಅದರಲ್ಲಿ ತೊಡಗಿಕೊಂಡಿರುವ ನೂರಾರು ಕುಶಲಕರ್ಮಿ ಮಹಿಳೆಯರ ಬದುಕನ್ನು ಹಸನುಗೊಳಿಸಿದ್ದಾರೆ.


ಪದವೀಧರರಾದ ನಂತರ ಫರಾ ಭೂಸೇನೆಯಲ್ಲಿದ್ದ ಅವರ ಪತಿಯನ್ನು ವಿವಾಹವಾದರು. ಆದರೆ ಅವರ ಸಂಬಂಧಿಕರಿಗೆ ಅವರು ಹೊರಗೆ ಹೋಗಿ ಯಾವುದೇ ವೃತ್ತಿಯಲ್ಲಿ ತೊಡಗಿಕೊಳ್ಳುವುದು ಇಷ್ಟವಿರಲಿಲ್ಲ.


ಆದರೆ ಅವರ ತಾಯಿಯವರ ಬಟ್ಟೆಗಳಿಗೆ ವಿವಿಧ ವಿನ್ಯಾಸಗೊಳಿಸುವ ಕಲೆ ಫರಾರವರಿಗೆ ರಕ್ತದಲ್ಲೇ ಬಂದಿರಬಹುದು. ಫರಾ ಭೂಸೇನೆಯ ಕೌಟುಂಬಿಕ ವಲಯದಲ್ಲಿ ಹಳೆಯ ಸೀರೆಗಳಿಗೆ ಆಧುನಿಕತೆಯ ಮೆರಗು ನೀಡಿ ಅವುಗಳಿಗೆ ನಾವೀನ್ಯತೆ ಒದಗಿಸುವುದರಲ್ಲಿ ಪ್ರಾವೀಣ್ಯತೆ ಪಡೆದು ಜನಪ್ರಿಯರಾದರು.

ಸಾಂಪ್ರದಾಯಿಕ ಕಾಂತಾ ಕಲೆಯ ಪುನರುಜ್ಜೀವನ

“ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ ಅಲ್ಲಿ ನೇಮಕವಾಗಿದ್ದ ನನ್ನ ಪತಿಯ ಜೊತೆ ನಾನು ನಾಲ್ಕು ತಿಂಗಳು ನೆಲೆಸಿದ್ದೆ. ನಾನು ಅಲ್ಲಿ ಸೈನಕರಿಗೆ ಅಡುಗೆ ಮಾಡುತಿದ್ದೆ ಮತ್ತು ಅವರಿಗೆ ಹೊಸ ಬಗೆಯ ಅಡುಗೆ ತಯಾರಿಸಿಕೊಳ್ಳುವುದನ್ನು ಕಲಿಸುತಿದ್ದೆ. ಅದರೊಂದಿಗೆ ಅಲ್ಲಿ ನೆಲೆಸಿದ್ದ ಕಾಶ್ಮೀರದ ಕುಶಲಕರ್ಮಿಗಳ ಜೊತೆ ಬೆರೆತು ಅವರು ತಯಾರಿಸುತಿದ್ದ ಸುಂದರವಾದ ಎಂಬ್ರಾಯಿಡರಿ ಮಾಡಿದ ಶಾಲುಗಳನ್ನು ನೋಡಿದೆ. ನಾನು ಆ ಶಾಲುಗಳನ್ನು ನೋಡಿಯೇ ನನ್ನ ಹೊಸ ವ್ಯಾಪಾರ ಪ್ರಾರಂಭಿಸಲು ನಿರ್ಧರಿಸಿದೆ” ಎಂದು ಫರಾ ಹೇಳುತ್ತಾರೆ.

ಆಗ ಅವರ ಅದೃಷ್ಟವೆಂಬಂತೆ ಹೈದರಾಬಾದಿನ ಅಮೇರಿಕಾ ತೆಲುಗು ಸಂಘವು ಅವರನ್ನು ಈ ಕಲೆಯನ್ನು ಅಟ್ಲಾಂಟಾದಲ್ಲಿ ಪರಿಚಯಿಸಲು ಆಹ್ವಾನ ನೀಡಿತು. ಅಲ್ಲಿಗೆ ಕೊಂಡೊಯ್ದಿದ್ದ ಕುಶಲಕಲೆಯ ವಸ್ತುಗಳು ಕ್ಷಣಮಾತ್ರದಲ್ಲಿ ಮಾರಾಟವಾದವು.


ಅವರ ವ್ಯಾಪಾರವು ವೃದ್ಧಿಯಾಯಿತು. ಆದರೆ 2004 ರಲ್ಲಿ ಅವರ ಪತಿ ಪಶ್ಚಿಮ ಬಂಗಾಳದ ದೂರದ ನಗರ ಪಂಗಾರಕ್ಕೆ ನೇಮಕವಾಗಿದ್ದರಿಂದ ಫರಾ ಅಲ್ಲಿಗೆ ಹೋಗಬೇಕಾಯಿತು. “ಶ್ರೀನಗರವು ಬಹಳ ದೂರದಲ್ಲಿದ್ದರಿಂದ ವ್ಯಾಪಾರವು ಕ್ಷೀಣಿಸತೊಡಗಿತು. ಅಲ್ಲಿ ಅಂತರ್ಜಾಲದ ಕೊರತೆಯಿಂದಾಗಿ ವ್ಯಾಪಾರವನ್ನು ಮುಂದುವರೆಸುವುದು ಬಹಳ ಕಷ್ಟಕರವಾಯಿತು” ಎಂದು ಫರಾ ಹೇಳುತ್ತಾರೆ.


ಶಾಂತಿನಿಕೇತನ ಮತ್ತು ಅದರ ಸುತ್ತಮುತ್ತಲಿದ್ದ ಗ್ರಾಮಗಳಿಗೆ ಭೇಟಿ ನೀಡುವ ಅವಕಾಶವೊಂದು ಅವರಿಗೆ ಒದಗಿಬಂದು ಅವರು ಅಲ್ಲಿನ ಸಾಂಪ್ರದಾಯಿಕ ಕಾಂತಾ ಕಲೆಯಲ್ಲಿ ಪರಿಣಿತರಾದ ಕುಶಲಕರ್ಮಿಗಳನ್ನು ಪರಿಚಯ ಮಾಡಿಕೊಂಡರು.


“ನಾನು ಕಾಂತಾ ಕಲೆಯು 1000 ವರ್ಷಗಳಷ್ಟು ಹಳೆಯದು ಎಂಬುದನ್ನು ತಿಳಿದುಕೊಂಡೆ. ಅದು ವೇದಗಳ ಮತ್ತು ಪೂರ್ವ ವೇದಗಳ ಕಾಲದಲ್ಲಿ ಇತ್ತು ಎಂಬುದು ಇತಿಹಾಸದಲ್ಲಿದ್ದರೂ ಈಗ ಅದು ಜನಪ್ರಿಯವಾಗಿರಲಿಲ್ಲ. ಆ ಕಲೆಯನ್ನು ನಂಬಿದ್ದ ಮಹಿಳಾ ಕುಶಲಕರ್ಮಿಗಳು ಬಹಳಷ್ಟು ನಿರಾಶರಾಗಿದ್ದರು. ಅವರು ಕಲೆ ಅದೃಶ್ಯವಾಗುವ ಹಂತದಲ್ಲಿತ್ತು” ಎಂದು ಫರಾ ನೆನಪಿಸಿಕೊಳ್ಳುತ್ತಾರೆ.

ಒಂದೇ ವರ್ಷದಲ್ಲಿ ಕಾಂತಾ ಕಲೆಯ ಸಂಕೀರ್ಣತೆಗಳನ್ನು ಅರ್ಥ ಮಾಡಿಕೊಂಡು ಫರಾ ಅದನ್ನು ಪುನರುಜ್ಜೀವನಗೊಳಿಸಲು ತೀರ್ಮಾನಿಸಿದರು. ಅವರು ಅಲ್ಲಿನ ಕುಶಲಕರ್ಮಿಗಳ ನಂಬಿಕೆ ವಿಶ್ವಾಸಗಳನ್ನು ಗಳಿಸಿದರು. ಇದರೊಂದಿಗೆ “ಫರಾಖಾನರ ಕಾಂತಾ” ಕಲೆಯ ಉದಯವಾಯಿತು.


“ನನ್ನ ಭೂಸೇನಾ ಕುಟುಂಬದ ವಲಯದಲ್ಲಿ ಕಾಂತಾ ಕಲೆಯಿಂದ ಅಲಂಕೃತವಾದ ಸೀರೆ ದುಪ್ಪಟ್ಟಾಗಳನ್ನು ಮಾರಲು ಪ್ರಾರಂಭಿಸಿದಾಗ ನನಗೆ ಬಹಳಷ್ಟು ಉತ್ತೇಜನ ದೊರೆಯಿತು. ನಾನು ಶಾಲು ಮಾರಾಟದ ವ್ಯಾಪಾರದಲ್ಲಿ ಗಳಿಸಿದ್ದ ಎಲ್ಲಾ ಹಣವನ್ನು ಇದರಲ್ಲಿ ತೊಡಗಿಸಿದೆ” ಎಂದು ಫರಾ ಹೇಳುತ್ತಾರೆ.

ಫಲ ನೀಡಿದ ಕಲೆ

ಫರಾ ಪತಿಯವರಿಗೆ ಮುಂದಿನ ನೇಮಕಾತಿ ಕೊಲ್ಕತ್ತಾ ನಗರಕ್ಕೆ ಆಯಿತು. ಇದು ಒಂದು ಅದೃಷ್ಟವೇ ಸರಿ. ಏಕೆಂದರೆ ಅದೇ ರಾಜ್ಯದಲ್ಲಿ ಭೂಸೇನಾ ಅಧಿಕಾರಿಗಳನ್ನು ಎರಡನೇ ಬಾರಿ ನೇಮಕಗೊಳಿಸುವುದು ಬಹಳ ಅಪರೂಪ.


ಕೊಲ್ಕತ್ತಾದ ಯಾವ ಅಂಗಡಿಯಲ್ಲಿಯೂ ಕಾಂತಾ ಕಲೆಯಿಂದ ರಚಿತವಾದ ಬಟ್ಟೆಗಳನ್ನು ಇಟ್ಟಿರಲಿಲ್ಲ. ಆಗ 2000 ನೇ ಇಸವಿಯಲ್ಲಿ ಹಲವಾರು ಸಮಾರಂಭ ಮತ್ತು ಸನ್ನಿವೇಶಗಳಲ್ಲಿ ಫರಾ ಈ ಕಲೆಯ ಬಗ್ಗೆ ಅರಿವು ಮೂಡಿಸಲು ಮುಂದಾದರು.


ಭೂಸೇನಾಧಿಕಾರಿಗಳ ಪತ್ನಿಯರ ಕಲ್ಯಾಣ ಸಂಘವು ಫರಾರಿಗೆ ಈ ಕಲೆಯ ಬಗ್ಗೆ ಇದ್ದ ಆಸಕ್ತಿಯನ್ನು ಗಮನಿಸಿ ಕೊಲ್ಕೊತ್ತಾದ ವಿಲಿಯಮ್ ಪೋರ್ಟಿನಲ್ಲಿ ಒಂದು ಅಂಗಡಿ ನೀಡಿತು. ಅಲ್ಲಿಂದ ಫರಾ ತಮ್ಮ ವ್ಯಾಪಾರದಲ್ಲಿ ಎಂದೂ ಹಿಂದೆ ತಿರುಗಿ ನೋಡಲಿಲ್ಲ.


“ಐದು ವರ್ಷಗಳಲ್ಲಿ ನನ್ನ ಅಂಗಡಿ ವಾಯುಸೇನೆ, ಭೂಸೇನೆ ಮತ್ತು ಸಮುದ್ರಸೇನೆ ಮೂರೂ ಸೇನೆಯ ಕೌಟುಂಬಿಕ ವಲಯದಲ್ಲಿ ಅಪಾರವಾಗಿ ಜನಪ್ರಿಯವಾಯಿತು. ಕೊಲ್ಕತ್ತಾಗೆ ಬಂದ ಎಲ್ಲರಿಗೂ ಅದನ್ನು ಭೇಟಿ ಮಾಡಲೇಬೇಕಾದ ಸ್ಥಳವೆನ್ನುವಷ್ಟು ಪ್ರಸಿದ್ಧಿಯಾಯಿತು. ಪಾರ್ಟಿಗಳಲ್ಲಿ ಹೆಂಗಸರು ಫರಖಾನರ ಕಾಂತಾ ಕಲೆಯಿಂದ ಅಲಂಕೃತಗೊಂಡ ಉಡುಪುಗಳನ್ನು ಧರಿಸತೊಡಗಿದರು. ನನ್ನ ಸ್ನೇಹಿತರು ನನ್ನನ್ನು ಕಾಂತಾ ರಾಣಿ ಎಂದು ಹೊಗಳತೊಡಗಿದರು” ಎಂದು ಹೇಳುತ್ತಾ ಫರಾ ನಗುತ್ತಾರೆ.


ಕಾಂತಾ ಕಲೆಯನ್ನು ಪುನರುಜ್ಜೀವನಗೊಳಿಸಲು ಫರಾ ಮಾಡಿದ ಪ್ರಯತ್ನಗಳು ಯಶಸ್ವಿಯಾದವು. "ನಾನು ಈ ಕಲೆಯನ್ನು ಪ್ರಾರಂಭಿಸಿದಾಗ ಕೆಲವೇ ಕೆಲವು ಮಂದಿ ಸಂಪೂರ್ಣವಾಗಿ ಕೌಶಲ್ಯ ಹೊಂದಿದವರು (ಕರಿಗಾರರು) ಇದ್ದರು. ಈಗ ಬಹಳಷ್ಟು ಮಂದಿ ಕಲೆಯಲ್ಲಿ ನುರಿತವರಿದ್ದಾರೆ. ನಾನು ರೇಶ್ಮೆಯ ವಸ್ತ್ರಗಳನ್ನು ಕೊಳ್ಳುತ್ತೇನೆ. ಈ ಕುಶಲಕರ್ಮಿ ಮಹಿಳೆಯರು ಅವುಗಳ ಮೇಲೆ ಕೈಯಿಂದಲೇ ಎಂಬ್ರಾಯಿಡರಿ ಮಾಡುತ್ತಾರೆ. ಒಂದು ದುಪ್ಪಟ್ಟಾ ತಯಾರಿಸಲು ಎರಡರಿಂದ ಮೂರು ತಿಂಗಳುಗಳು ಬೇಕಾಗುತ್ತವೆ” ಎಂದು ಫರಾ ಹೇಳುತ್ತಾರೆ. ಈಗ ಅವರ ಬಳಿ ಕಾಂತಾ ಕಲೆಯಲ್ಲಿ ನುರಿತರಾಗಿರುವ 600 ನೋಂದಾಯಿತ ಮಹಿಳಾ ಕುಶಲಕರ್ಮಿಗಳಿದ್ದಾರೆ.


ಫರಾ ತಯಾರಿಸಿದ ವಸ್ತ್ರಗಳು ಪ್ರಪಂಚದ ಎಲ್ಲೆಡೆಯಿರುವ ಅಂಗಡಿಗಳು, ಸ್ವಿಟ್ಜರ್ ಲ್ಯಾಂಡಿನ ಮ್ಯೂಸಿಯಮ್ ಮತ್ತು ಪಂಚತಾರಾ ಹೋಟೇಲುಗಳಿಗೆ ಸರಬರಾಜಾಗುತ್ತವೆ. ಮತ್ತು jaypore.com ಎಂಬ ಇ-ಕಾಮರ್ಸ ಕಂಪೆನಿ ಇವರ ಉತ್ಪನ್ನಗಳನ್ನು ಮಾರಾಟ ಮಾಡುವ ಮುಖ್ಯ ಕಂಪೆನಿಯಾಗಿದೆ.


“ಮೊದಮೊದಲು ಕುಶಲಕರ್ಮಿಗಳಿಗೆ ಅವರು ತಯಾರಿಸಿದ ಉತ್ಪನ್ನಗಳು ಮತ್ತು ಅವರ ಕಲೆ ಉತ್ಕೃಷ್ಟವಾದವು ಎಂಬುದನ್ನು ಮನವರಿಕೆ ಮಾಡಿಕೊಡುವುದು ತುಂಬಾ ಕಷ್ಟಕರವಾಯಿತು. ಆದರೆ ಈಗ ಅವರಲ್ಲಿ ಆತ್ಮವಿಶ್ವಾಸ ಮತ್ತು ಘನತೆಗಳು ಮೂಡಿವೆ. ಏಕೆಂದರೆ ಅವರು ಈ ಹಿಂದಿನಂತೆ ಬಡವರಾಗಿ ಉಳಿದಿಲ್ಲ. ಅವರು ದೊಡ್ಡ ಕನಸುಗಳನ್ನು ಕಾಣಲು ಪ್ರಾರಂಭಿಸಿದ್ದಾರೆ ಮತ್ತು ತಮ್ಮ ಕುಶಲಕರ್ಮಿ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಬಹುದೆಂಬ ಭರವಸೆಯನ್ನು ಬೆಳೆಸಿಕೊಂಡಿದ್ದಾರೆ” ಎಂದು ಫರಾ ಹೇಳುತ್ತಾರೆ.


10-15 ಲಕ್ಷ ಬಂಡವಾಳದೊಂದಿಗೆ ಪ್ರಾರಂಭವಾದ ಉದ್ಯಮವು ಇಂದು 1.5 ಕೋಟಿ ರೂಪಾಯಿ ವಹಿವಾಟನ್ನು ಹೊಂದಿದೆ.


ಕಾಂತಾ ದುಪ್ಪಟ್ಟಾಗಳು ಒಂದಕ್ಕೆ 1,000 ದಿಂದ 15,000 ರೂಪಾಯಿಗಳವರಗೆ ಮಾರಾಟವಾಗುತ್ತವೆ ಮತ್ತು ಸೀರೆಗಳು ಒಂದಕ್ಕೆ 5,000 ದಿಂದ 25,000 ರೂಪಾಯಿಗಳವರಗೆ ಮಾರಾಟವಾಗುತ್ತವೆ.


ಫರಾರವರ ಕುಟುಂಬವು ಕೊಲ್ಕೋತ್ತಾದಲ್ಲಿ ವಾಸ್ತವ್ಯ ಹೂಡಿದೆ. ಇದರಿಂದಾಗಿ ಅವರಿಗೆ ಗ್ರಾಮಗಳಿಗೆ ಹೋಗಿಬರಲು ಅನುಕೂಲವಾಗಿದೆ.


“ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ನೇಯ್ಗೆ ಕೆಲಸವನ್ನು ಪುನರುಜ್ಜೀವನ ಮಾಡಬೇಕೆಂಬ ದೂರದೃಷ್ಟಿಯನ್ನು ನಾನು ಹೊಂದಿದ್ದೇನೆ. ನೇಕಾರರ ಸಂಖ್ಯೆ 1.5 ಲಕ್ಷದಿಂದ 65,000 ಕ್ಕೆ ಇಳಿದಿದೆ. ಅವರ ಕಲೆಯನ್ನು ಮುಂದುವರಿಸಲು ಅವರಿಗೆ ಅಲ್ಲಿ ಯಾವುದೇ ಯೋಜನೆಗಳಿಲ್ಲ. ನಾನು ನನ್ನ ಪತಿಯೊಂದಿಗೆ ಸೇರಿ ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡಲು ನಿರ್ಧರಿಸಿದ್ದೇನೆ” ಎಂದು ಫರಾ ಹೇಳುತ್ತಾರೆ.

ಕೋಲ್ಕತ್ತಾದಲ್ಲಿ ಕಾಂತಾ ಕಲೆಯ ಉತ್ಪನ್ನಗಳಿಗಾಗಿಯೇ ಒಂದು ಅಂಗಡಿ ಮಳಿಗೆಯನ್ನು ತೆರೆಯಲು ಅವರು ಯೋಜನೆಯನ್ನು ಹಮ್ಮಿಕೊಂಡಿದ್ದಾರೆ.