ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಸಹಾಯ ಮಾಡಲು 2 ಲಕ್ಷ ಡಾಲರ್ ಸಂಗ್ರಹಿಸಿದ ಆರು ವರ್ಷದ ಬಾಲಕ

ಓವನ್ ಕೋಲಿ ಎಂಬ ಆರು ವರ್ಷದ ಬಾಲಕನು ಆಸ್ಟ್ರೇಲಿಯಾದಲ್ಲಿ ಹಬ್ಬಿದ್ದ ಕಾಡ್ಗಿಚ್ಚಿಗೆ ಪರಿಹಾರ ನೀಡಲು ಜೇಡಿಮಣ್ಣಿನಿಂದ ಕೋಲಾಗಳನ್ನು ಮಾಡುವ ಮೂಲಕ ದೇಣಿಗೆಯನ್ನು ಸಂಗ್ರಹಿಸಿದ್ದಾನೆ.

ಆಸ್ಟ್ರೇಲಿಯಾದ ಕಾಡ್ಗಿಚ್ಚಿಗೆ ಸಹಾಯ ಮಾಡಲು 2 ಲಕ್ಷ ಡಾಲರ್ ಸಂಗ್ರಹಿಸಿದ ಆರು ವರ್ಷದ ಬಾಲಕ

Tuesday January 21, 2020,

2 min Read

ದೊಡ್ಡ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ ನಾವು ಸಣ್ಣಪುಟ್ಟ ಕೆಲಸಗಳನ್ನು ಬಹಳ ಪ್ರೀತಿಯಿಂದ ಮಾಡಬಹುದು ಎಂದು ಮದರ್ ತೆರೇಸಾ ಹೇಳುತ್ತಾರೆ.


ಮಾಡುವ ಯಾವುದೇ ಕೆಲಸವಾಗಲಿ, ಅದು ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಅಲ್ಲೊಂದು ಶ್ರದ್ಧೆ, ಪ್ರೀತಿ ಇದ್ದರೆ ಅದು ಖಂಡಿತಾ ಯಶಸ್ವಿಯಾಗುತ್ತದೆ ಎಂಬುದಕ್ಕೆ ಆಸ್ಟ್ರೇಲಿಯಾದ ಬೆಂಕಿ ಅವಘಡದ ಪರಿಹಾರಕ್ಕಾಗಿ ಆರು ವರ್ಷದ ಬಾಲಕನೊಬ್ಬ ದೇಣಿಗೆಯನ್ನು ಸಂಗ್ರಹಿಸುತ್ತಿರುವುದೆ ಸಾಕ್ಷಿ.


ಇತ್ತೀಚಿಗೆ ಘಟಿಸಿದ ಆಸ್ಟ್ರೇಲಿಯಾ ಅರಣ್ಯದ ಬೃಹತ್ ಕಾಡ್ಗಿಚ್ಚಿನಲ್ಲಿ ಕೋಟ್ಯಂತರ ಪ್ರಾಣಿಗಳು ಬಲಿಯಾದವು. ಇದು ತುಂಬಲಾರದ ನಷ್ಟವಾಗಿತ್ತು. ಇದಕ್ಕಾಗಿ ಜಗತ್ತಿನೆಲ್ಲೆಡೆಯಿಂದ ಪರಿಹಾರ ಹರಿದು ಬಂದಿತು. ಹಾಗೇ ಆಸ್ಟ್ರೇಲಿಯಾದ ಈ ಅಗ್ನಿ ಅವಘಟಕ್ಕೆ ಪರಿಹಾರನಿಧಿಗಾಗಿ ಹಣವನ್ನು ಸಂಗ್ರಹಿಸಲು ಮಣ್ಣಿನಿಂದ ಕೋಲಾದ ಪ್ರತಿಕೃತಿಗಳನ್ನು ಮಾಡಿ ಅದನ್ನು ಮಾರಾಟ ಮಾಡಿ ದೇಣಿಗೆಯನ್ನು ಸಂಗ್ರಹಿಸಿದ ಈ ಬಾಲಕನ ದೊಡ್ಡ ಕೆಲಸ ಎಲ್ಲರ ಗಮನ ಸೆಳೆಯುತ್ತಿದೆ.


ಓವನ್ ಕೋಲಿ (ಚಿತ್ರಕೃಪೆ: ಸಿಎನ್‌ಎನ್)


ಮಸ್ಸಾಚ್ಯೂಸೆಟ್ಸ್‌ನ ಹಿಂಗಕ್ಯಾಮ‌ನ "ಓವನ್ ಕೋಲಿ" ಎಂಬ ಬಾಲಕ ಜೇಡಿಮಣ್ಣಿನ ಮೂಲಕ ಕೋಲಾಗಳನ್ನು ಮಾಡುವ ಮೂಲಕ ಆಸ್ಟ್ರೇಲಿಯಾದ ಬುಷ್‌ಫೈರ್‌ನಲ್ಲಿ ಸಿಕ್ಕಿಬಿದ್ದ ಪ್ರಾಣಿಗಳ ಪರಿಹಾರಕ್ಕಾಗಿ ಹಣವನ್ನು ಸಂಗ್ರಹಿಸಲು ಶ್ರಮಿಸುತ್ತಿದ್ದಾ‌ನೆ, ವರದಿ ನ್ಯೂಸ್ 18.


ಎರಡು ವಾರಗಳ ಹಿಂದೆ ಆಸ್ಟ್ರೇಲಿಯಾದ ಕಾಡ್ಗಿಚ್ಚಿನ ಕುರಿತಾಗಿ ತಿಳಿದುಕೊಂಡ ಓವನ್ ಕೋಲಿ ಅದರ ಬಗ್ಗೆ ಅಸಮಾಧಾನಗೊಂಡಿದ್ದು, ಬೆಂಕಿಯಲ್ಲಿ ಪ್ರಾಣಿಗಳಿಗೆ ಗಾಯವಾಗಿದೆಯೇ ಎಂದು ತನ್ನ ತಾಯಿಯನ್ನು ಕೇಳಿ ತಿಳಿದುಕೊಂಡಿದ್ದಾನೆ ಎಂದು ಅವನ ತಾಯಿ ಕೈಟ್ಲಿನ್ ಕೋಲಿ ಸಿಎನ್‌ಎನ್‌ಗೆ ಹೇಳುತ್ತಾರೆ.


ಓವನ್ ಕೋಲಿ ಮಣ್ಣಿನಲ್ಲಿ ತಯಾರಿಸಿರುವ ಕೋಲಾಗಳು (ಚಿತ್ರಕೃಪೆ: ಸಿಎನ್‌ಎನ್)


ಓವನ್ ಬೂದು ಬಣ್ಣದ ಜೇಡಿಮಣ್ಣಿನಿಂದ ಕೋಲಾಗಳ ಪ್ರತಿಕೃತಿಗಳನ್ನು ತಯಾರಿಸಲು ಪ್ರಾರಂಭಿಸಿದನು. ಅವನ ತಂದೆ - ತಾಯಿ ನ್ಯೂ ಸೌತ್ ವೇಲ್ಸ್‌ನ ವನ್ಯಜೀವಿ ಪಾರುಗಾಣಿಕಾ ಗುಂಪಿನ ಸೌತ್ ಕೋಸ್ಟ್‌ಗೆ ದೇಣಿಗೆ ನೀಡಲು ಮಾರ್ಗವನ್ನು ಕಂಡುಕೊಂಡರು. ಓವನ್ 50$ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ದಾನ ಮಾಡುವ ವ್ಯಕ್ತಿಗೆ ತಯಾರಿಸಿದ ಮಣ್ಣಿನ ಕೋಲಾಗಳನ್ನು ಕಳುಹಿಸುತ್ತಿದ್ದಾನೆ. ಇಲ್ಲಿಯರವರೆಗೆ ಅವರು 55ಕ್ಕೂ ಹೆಚ್ಚು ಮಣ್ಣಿನ ಕೋಲಾಗಳನ್ನು ತಯಾರಿಸಿದ್ದಾರೆ.


"ಓವನ್ ಇದೇ ಮೊದಲ ಬಾರಿ ತನಗಾಗಿ ಹೊರತುಪಡಿಸಿ ಹಾಗೂ ಲೆಗೊವನ್ನು(ಗೊಂಬೆ) ಹೊರತುಪಡಿಸಿ, ಬೇರೆ ಯಾವುದನ್ನಾದರೂ ಬಯಸಿದ್ದು‌ ಮತ್ತು ನಾವು ಮಣ್ಣನಿಂದ ಕೆಲವು ಕೋಲಾಗಳನ್ನು ತಯಾರಿಸುತ್ತಿದ್ದೇವೆ. ಇದನ್ನು ಸ್ನೇಹಿತರು ಮತ್ತು ಕುಟುಂಬಕ್ಕೆ ದೇಣಿಗೆಗೆ ಪ್ರತಿಯಾಗಿ ನೀಡಲಾಗಿದೆ,” ಎಂದು ಕೈಟ್ಲಿನ್ ಕೋಲಿ ಸಿಎನ್‌ಎನ್‌ಗೆ ತಿಳಿಸಿದರು.


ಅವರು ಕೇವಲ ಒಂದು ವಾರದಲ್ಲಿ‌ 20,000$ (1.42 ಕೋಟಿ ರೂ) ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪ್ರಾಥಮಿಕ ಗುರಿ 1,000$ ಆಗಿತ್ತು. ನಂತರ ಇನ್ಸ್ಟಾಗ್ರಾಮ್‌ ಪೋಸ್ಟ್ ಮೂಲಕ ಹೆಚ್ಚಿನ ದೇಣಿಗೆಯನ್ನು ಪಡೆದರು. ನಂತರ ಕುಟುಂಬವು ಹೆಚ್ಚಿನ ಹಣವನ್ನು ಸಂಗ್ರಹಿಸಲು ಗೋಫಂಡ್‌ಮಿ ಅಭಿಯಾನವನ್ನು ಪ್ರಾರಂಭಿಸಿತು, ವರದಿ ನ್ಯೂಸ್ 18.ಕಾಮ್.


"ಯಾರು ಬೇಕಾದರೂ ಬದಲಾವಣೆಯನ್ನು ತರಬಹುದು. ಹಲವಾರು ಕೈಗಳು ಒಟ್ಟಿಗೆ ಸೇರಿದಾಗ ಇನ್ನೂ ದೊಡ್ಡ ಬದಲಾವಣೆಯನ್ನು ತರುವಲ್ಲಿ ಸಫಲವಾಗಬಹುದು. ಒಂದು ಮಹತ್ತರ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸಬಹುದೆಂಬ‌ ಕಲ್ಪನೆಯನ್ನು ನಾನು ಇಷ್ಟಪಡುತ್ತೇ‌ನೆ. ಇದನ್ನು ಇತರರು ನೋಡಿ, ಅಳವಡಿಸಿಕೊಂಡು ಬದಲಾವಣೆಯನ್ನು ತರುವಲ್ಲಿ ಕೈ ಜೋಡಿಸಬಹುದು" ಎಂದು‌ ಕೋಲಿ ಹೇಳುತ್ತಾರೆ.


ಸಿಡ್ನಿ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನಿಗಳ ಪ್ರಕಾರ, ಎನ್‌ಎಸ್‌ಡಬ್ಲ್ಯೂನಲ್ಲಿ ಬೆಂಕಿಯು ಸರಿಸುಮಾರು ಅರ್ಧ ಶತಕೋಟಿ ಪ್ರಾಣಿಗಳ ಮೇಲೆ ಪರಿಣಾಮ ಬೀರಿದೆ. ಅದರಲ್ಲಿ ಲಕ್ಷಾಂತರ ಹಕ್ಕಿಗಳು, ಸರೀಸೃಪಗಳು ಮತ್ತು ಸಸ್ತನಿಗಳು ಸೇರಿವೆ. ಕೀಟಗಳು ಮತ್ತು ಕಪ್ಪೆಗಳನ್ನು ಈ ಪಟ್ಟಿಯಲ್ಲಿ ಸೇರಿಸಿಲ್ಲ.


ಆಸ್ಟ್ರೇಲಿಯಾ ಅರಣ್ಯ ಮತ್ತೆ ಚಿಗೊರೆಡೆಯಲಿ, ಪ್ರಾಣಿಗಳ ಸಂತತಿ ಸಾವಿರವಾಗಲಿ, ಇಂತಹ ಸಹಾಯ ಹಸ್ತ ಚಾಚುವವರ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎಂದು ಹಾರೈಸೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.