ಅಂದು ಕೃಷಿ ವಿಜ್ಞಾನಿ- ಇಂದು ಕನ್ನಡದ ಹೆಸರಾಂತ ಬರಹಗಾರ..!

ವಿಶ್ವಾಸ್​ ಭಾರಾಧ್ವಾಜ್​​​

31st Oct 2015
  • +0
Share on
close
  • +0
Share on
close
Share on
close

ಓರ್ವ ಕೃಷಿ ವಿಜ್ಞಾನಿಯಾಗಿ ಹಲವು ವರ್ಷಗಳ ಕಾಲ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿ ನಿವೃತ್ತರಾದವರೊಬ್ಬರನ್ನು ಕನ್ನಡದ ಸಾಹಿತ್ಯ ಲೋಕ ಒಪ್ಪಿಕೊಂಡಿದ್ದು ನಿಜಕ್ಕೂ ಅಪೂರ್ವ ಸಂಗತಿ. ಕನ್ನಡ ಸಾಹಿತ್ಯದಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಕಾಲದ ಬಳಿಕ ಒಂದು ನಿರ್ವಾತ ಸೃಷ್ಟಿಯಾಗಿತ್ತು. ಪತ್ತೆದಾರಿ, ಕೌತುಕ ಹಾಗೂ ವೈಜ್ಞಾನಿಕ ಸಂಗತಿಗಳ ಕುರಿತಾಗಿ ಕನ್ನಡದ ಓದುಗರಿಗೆ ಅರ್ಥವಾಗುವ ಶೈಲಿಯಲ್ಲಿ ಬರವಣಿಗೆ ನೀಡಬಲ್ಲ ಗಟ್ಟಿತನದ ಕೊರತೆಯಿತ್ತು. ಆ ನಿರ್ವಾತ ಅಥವಾ ಶೂನ್ಯವನ್ನು ಹೋಗಲಾಡಿಸಿ, ವೈಜ್ಞಾನಿಕ, ಚಾರಿತ್ರಿಕ ಹಾಗೂ ರೋಚಕ ಮಾಹಿತಿಗಳನ್ನು ತಮ್ಮ ಬರಹಗಳಲ್ಲಿ ಉಣಬಡಿಸಿದ ಕೀರ್ತಿ ಪ್ರೊ.ಕೆ.ಎನ್ ಗಣೇಶಯ್ಯನವರಿಗೆ ಸಲ್ಲಬೇಕು.

image


ಅತ್ಯಂತ ಕುತೂಹಲದ ಸಂಗತಿ ಎಂದರೆ ಗಣೇಶಯ್ಯನವರ ಈವರೆಗಿನ ಸಾಧನೆಯ ಬಯೋಡಾಟಾ ಸುಮಾರು 47 ಪುಟಗಳಷ್ಟಿದೆ. ಜೀವಿತದಲ್ಲಿ ಹೆಜ್ಜೆ ಇಟ್ಟ ಕ್ಷೇತ್ರಗಳ ಮಾಹಿತಿಯೇ ಒಂದು ಕಾದಂಬರಿಯಾಗುವಷ್ಟು ಸರಕು ಹೊಂದಿದೆ ಎಂದರೆ ಗಣೇಶಯ್ಯನವರ ದೈತ್ಯ ಸಾಧನೆಗೆ ಬೇರೆ ಅಳತೆಗೋಲೇ ಬೇಡ. ಈ ಲೇಖನ ವೃತ್ತಿಪರ ವಿಜ್ಞಾನಿ, ಸಾಹಿತ್ಯದ ಆಸಕ್ತಿ ಹೊಂದುವ ಮೂಲಕ ಹವ್ಯಾಸಿ ಬರಹಗಾರನಾದ ಹಾಗೂ ಬರಹಗಳ ಮೂಲಕವೇ ಕರ್ನಾಟಕದ ಮನೆಮಾತಾದ ಪ್ರಬುದ್ಧ ಕಾದಂಬರಿಕಾರ ಹಾಗೂ ಕಥೆಗಾರ ಪ್ರೊ.ಕೆ.ಎನ್ ಗಣೇಶಯ್ಯನವರ ಯಶೋಗಾಥೆ.

ಇತಿಹಾಸ ಅರಿಯದವನು ಇತಿಹಾಸವನ್ನು ಸೃಷ್ಟಿಸಲೂ ಸಾಧ್ಯವಿಲ್ಲ ಹೊಸ ಇತಿಹಾಸ ಬರೆಯಲೂ ಸಾಧ್ಯವಿಲ್ಲ ಜೊತೆಗೆ ಇತಿಹಾಸ ಪುನರ್​​ರಚಿಸುವುದೂ ಸಾಧ್ಯವಿಲ್ಲ ಅನ್ನುವ ಮಾತಿದೆ. ಆದರೆ ಕನ್ನಡಕ್ಕೊಬ್ಬರೇ ಗಣೇಶಯ್ಯ ಅನ್ನುವಂತೆ ಹೊಸ ಪೀಳಿಗೆಯ ಓದುಗರ ನೆಚ್ಚಿನ ಬರಹಗಾರ ಪ್ರೊ.ಕೆ.ಎನ್ ಗಣೇಶಯ್ಯ ಇತಿಹಾಸದ ಬೆನ್ನುಹತ್ತಿಯೇ ಚರಿತ್ರೆಯ ವಿಶಿಷ್ಟ ಹಾಗೂ ವಿಸ್ಮಯಕಾರಿ ಆಯಾಮಗಳನ್ನು ಪುನರ್​​ರಚಿಸತೊಡಗಿದ್ದಾರೆ.

1976ರಲ್ಲಿ ಬೆಂಗಳೂರಿನಲ್ಲಿ ಕೃಷಿ ವಿಜ್ಞಾನದಲ್ಲಿ ಬಿಎಸ್ಸಿ ಪವಿ ಗಳಿಸಿದ ಗಣೇಶಯ್ಯ, 1979ರಲ್ಲಿ ಕೃಷಿ, ಸಸ್ಯಗಳ ವಂಶವಾಹಿನಿ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. 1983ರಲ್ಲಿ ಕೃಷಿಯ ವಿಷಯದಲ್ಲೇ ಪಿಹೆಚ್​​ಡಿ ಪಡೆದುಕೊಂಡರು. ಕೃಷಿ ವಿಜ್ಞಾನಿ ಎನಿಸಿಕೊಂಡರು. ಸಾಹಿತ್ಯಾಸಕ್ತಿ ಗಣೇಶಯ್ಯನವರಿಗೆ ಮೊದಲಿನಿಂದಲೂ ಇದ್ದ ಹವ್ಯಾಸ. ಜೊತೆಗೆ ಅವರ ಪತ್ನಿ ವೀಣಾ ಸಹ ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಅವರ ಓದು ಹಾಗೂ ಬರಹಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟಿತು.

ಗಣೇಶಯ್ಯನವರ ಸಾಹಿತ್ಯ ಕೃಷಿ ಹಾಗೂ ಕೃತಿಗಳ ಪರಿಚಯ:

ಗಣೇಶಯ್ಯನವರು ಈ ವರೆಗೆ 7 ಕಾದಂಬರಿಗಳನ್ನೂ ಹಾಗೂ 8 ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಕನಕಮುಸುಕು, ಮೂಕದಾತು, ಶಿಲಾಕುಲವಲಸೆ, ಚಿತಾದಂತ, ಕರಿಸಿರಿಯಾನ, ಕಪಿಲಿಪಿಸಾರ ಹಾಗೂ ಏಳು ರೊಟ್ಟಿಗಳು ಅವರ ಕಾದಂಬರಿಗಳು. ಸಿಗೇರಿಯಾ, ಶಾಲಭಂಜಿಕೆ, ನೇಹಲ, ಕಲ್ದವಸಿ, ಮಿಹಿರಾಕುಲ, ಪದ್ಮಪಾಣಿ, ಅವರ ನೀಳ್ಗಥೆಗಳ ಸಂಕಲನಗಳು. ಭಿನ್ನಬಿಂಬ ಅವರ ಬಿಡಿ ಲೇಖನಗಳ ಸಂಕಲನ. ಇಷ್ಟೇ ಅಲ್ಲದೆ ಸುಮಾರು 257 ಬೇರೆ ಬೇರೆ ವೈಜ್ಞಾನಿಕ ಪ್ರಕಟಣೆಗಳನ್ನು ಅವರು ಹೊರತಂದಿದ್ದಾರೆ.

ಆರ್ಯರು ಪಶ್ಚಿಮದಿಂದ ವಲಸೆ ಬಂದವರಲ್ಲ, ಬದಲಿಗೆ ಇಲ್ಲಿಂದಲೇ ಪಾಶ್ಚಿಮಾತ್ಯ ದೇಶಗಳಿಗೆ ತೆರಳಿದವರು. ಸರಸ್ವತಿ ನದಿ ತೀರದಲ್ಲಿ ನಾಗರೀಕತೆ ಕಟ್ಟಿದ ಮೂಲ ಮನುಷ್ಯರು ಇಂಡಸ್ ವ್ಯಾಲಿಯವರೇ ವಿನಃ ಮ್ಯಾಕ್ಸ್​​ಮುಲ್ಲರ್ ಹೇಳುವಂತೆ ಐರೋಪ್ಯ ರಾಷ್ಟ್ರಗಳಿಂದಲೋ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೋ ಏಷ್ಯಾದ ಕಡೆಗೆ ಬಂದವರಲ್ಲ ಅನ್ನುವ ವಾದವನ್ನು ಮುಂದಿಟ್ಟ ಕೃತಿ ಗಣೇಶಯ್ಯನವರ ‘ಶಿಲಾಕುಲ’ ವಲಸೆ. ಹೈದರಾಬಾದ್ ನಿಜಾಮನ ಖಜಾನೆ ಬೀದರ್ ಕೋಟೆಯಲ್ಲಿತ್ತಾ..? ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಮುಂದುವರೆದಿದ್ದ ರಜಾಕಾರರ ಅಟ್ಟಹಾಸದ ಪರಿಣಾಮಗಳೇನು..? ಕೊನೆಗೆ ನಿಜಾಮನಲ್ಲಿದ್ದ ಅನಂತ ಸಂಪತ್ತು ಹೋಗಿದ್ದೆಲ್ಲಿಗೆ..? ನಿಜಾಮನ ಖಜಾನೆ ಕಾಯಲು ನಿಗ್ರೋ ಗುಲಾಮರನ್ನು ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತಾ..? ಅನ್ನುವ ಪ್ರಶ್ನೆಗಳಿಗೆ ಉತ್ತರಿಸುವ ಕಾದಂಬರಿಯೇ ‘ಏಳು ರೊಟ್ಟಿಗಳು’.

image


ಕರುನಾಡಿನ ಶ್ರೀಮಂತ ಸಾಮ್ರಾಜ್ಯ ಕೃಷ್ಣದೇವರಾಯನ ಖಜಾನೆ ಕಥೆ, ಆನೆಗಳ ಮೇಲೆ ಸಂಪತ್ತು ಹೇರಿಕೊಂಡು ಹೋದ ಕೃಷ್ಣದೇವರಾಯನ ನಂತರದ ಪೀಳಿಗೆ ಅವನ್ನು ಹೊತ್ತೊಯ್ದಿದ್ದು ಎಲ್ಲಿ..? ಈ ಖಜಾನೆ ಹುಡುಕಾಟದ ಹಿಂದಿರುವ ತಿರುಪತಿ ಧರ್ಮ ರಾಜಕಾರಣ, ಬೌದ್ಧರು ಹಾಗೂ ಹಿಂದೂಗಳ ನಡುವಿನ ತರ್ಕ ವಾದವಿವಾದ, ವೆಂಕಟೇಶ್ವರ ಮೂರ್ತಿ ಬೌದ್ಧರ ಅವಲೋಕಿತೇಶ್ವರನೇ?ಕೃಷ್ಣದೇವರಾಯನ ಖಜಾನೆ ಪೆನುಕೊಂಡದಲ್ಲಿತ್ತಾ ಅಥವಾ ತಿರುಪತಿಯಲ್ಲಿತ್ತಾ? ಅನ್ನುವ ಹತ್ತು ಹಲವು ಪ್ರಶ್ನೆಗಳನ್ನು ‘ಕರಿಸಿರಿಯಾನ’ ಕಾದಂಬರಿ ಚರ್ಚಿಸುತ್ತದೆ.

ಬುದ್ಧನ ಹಲ್ಲಿಗೂ ಅಲೆಗ್ಸಾಂಡರ್​​ನ ಸಂಪತ್ತಿಗೂ ನಡುವಿನ ಸಂಬಂಧ. ಶ್ರೀಲಂಕಾ, ಕಾಂಬೋಡಿಯಾ ಹಾಗೂ ಇನ್ನೆರಡು ರಾಷ್ಟ್ರಗಳಲ್ಲಿ ಸಂರಕ್ಷಿಸಲಾಗಿರುವ ನಾಲ್ಕು ಬುದ್ಧನ ಹಲ್ಲುಗಳಲ್ಲಿ ಬುದ್ಧನ ಮೂಲ ಹಲ್ಲು ಎಲ್ಲಿದೆ ಅನ್ನುವ ಪ್ರಶ್ನೆ. ತೇರವಾದಿಗಳು ಅನ್ನುವ ಅಜ್ಞಾತ ಬೌದ್ಧ ಸಂರಕ್ಷಕ ಪಡೆ ನಿಜವಾಗಲೂ ಇದೆಯೇ ಅನ್ನುವ ಪ್ರಶ್ನೆ. ಗ್ರೀಕ್​​ನ ಸಿಡಿಯುವ ನಕ್ಷತ್ರದ ಸಿಂಬಲ್​​ಗೂ ನಮ್ಮ ಸಾರನಾಥ ಸ್ಥಂಭ ಹಾಗೂ ಅಶೋಕ ಚಕ್ರಕ್ಕೂ ಇರುವ ಸಾಮ್ಯತೆ, ಭಾರತಕ್ಕೆ ದಂಡಯಾತ್ರೆ ಬಂದಿದ್ದ ಅಲೆಗ್ಸಾಂಡರ್ ಖಜಾನೆ ಹುಡುಕಾಟ ಇವುಗಳನ್ನು ತರ್ಕಿಸುವ ಕೃತಿ ‘ಚಿತಾದಂತ’.

ಆಂಜನೇಯ ಹೊತ್ತು ತಂದಿದ್ದ ಸಂಜೀವಿನಿ ಪರ್ವತ ಅಂಡಮಾನ್​​ನಲ್ಲಿತ್ತಾ..? ಜೀವರಕ್ಷಕ ಸಸ್ಯ ಸಂಜೀವಿನಿ ನಿಜಕ್ಕೂ ಇದೆಯಾ..? ಹನುಮಾನ್ ಅನ್ನುವ ಹೆಸರು ಅಂಡಮಾನ್​ನ ಮೂಲ ಹೆಸರಾ..? ರುಡಂತಿ ಅಥವಾ ಒಂದು ಜಾತಿಯ ಸೀತಾಳೆ ಸಸ್ಯವೇ ಸಂಜೀವಿನಿಯಾ ಅನ್ನುವ ಪ್ರಶ್ನೆಗಳನ್ನು ಹೊತ್ತ ಕಪಿಲಿಪಿಸಾರವೂ ಕನ್ನಡದ ಮಟ್ಟಿಗೆ ಅತ್ಯುತ್ತಮ ವೈಜ್ಞಾನಿಕ ಪ್ರಶ್ನೆಗಳನ್ನು ತರ್ಕಿಸುವ ಕಾದಂಬರಿ. ಡಾರ್ವಿನ್​​ನ ವಿಕಾಸವಾದ ನಿಜಕ್ಕೂ ಸತ್ಯವೇ..? ಜೀವ ವಿಕಾಸಕ್ಕಿಂತ ಮೊದಲು ಜೀವಕ್ಕೆ ಸಾವು ಇರಲಿಲ್ಲವೇ..? ಏಕಾಣು ಜೀವಿ ಬಹು ಅಣು ಜೀವಸತ್ವ ತಂತುಗಳ ಮಾನವನಾಗಿ ರೂಪುಗೊಂಡಿದ್ದು ಹೇಗೆ..? ನಿಜಕ್ಕೂ ಪ್ಯಾರಾಸೆಲ್ ದ್ವೀಪಗಳಲ್ಲಿ ಚೀನಿಯರು ಕಾನೂನು ಬಾಹಿರ ಸಂಶೋದನೆಗಳನ್ನು ನಿರ್ವಹಿಸುತ್ತಾರಾ..? ಮಾನವ ತನ್ನ ವಂಶಕ್ಕಾಗಿ ಆಸ್ತಿ ಮಾಡುವುದು ಜೀವಕೋಶದಲ್ಲಿರುವ ಸ್ವಾರ್ಥ ದಾತುವಿನ ಕಾರಣದಿಂದಲಾ ಅನ್ನುವ ವಿಮರ್ಷೆ ಇರುವ ಕಾದಂಬರಿ ಗಣೇಶಯ್ಯನವರ ‘ಮೂಕಧಾತು’.

ಹೀಗೆ ಪ್ರತಿಯೊಂದು ಕಾದಂಬರಿಗಳಲ್ಲೂ ರೋಚಕ ಹಾಗೂ ಕೌತುಕದ ಚಾರಿತ್ರಿಕ ಕಥಾಹಂದರಗಳನ್ನು ಥ್ರಿಲ್ಲಿಂಗ್ ಪಾತ್ರಗಳ ಮೂಲಕ ಕಟ್ಟಿಕೊಟ್ಟು ಓದುಗರನ್ನು ಸೆರೆಹಿಡಿದ ಜಾಣ್ಮೆ ಗಣೇಶಯ್ಯನವರದ್ದು. ಜಿಕೆವಿಕೆಯಲ್ಲಿ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ಸದ್ಯ ನಿವೃತ್ತಿಯಾಗಿರುವ ಪ್ರೊ.ಕೆ.ಎನ್ ಗಣೇಶಯ್ಯ ಲೇಖಕರಾಗಿಯೇ ಕರ್ನಾಟಕದ ಜನತೆಗೆ ಚಿರಪರಿಚಿತರು. ಅವರ ಸ್ವಂತ ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳು ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿ ನೀಡುವ ಮೂಲಕ ಸನ್ಮಾನಿಸಿವೆ.

ಗಣೇಶಯ್ಯನವರ ಪ್ರಸಿದ್ಧ ಭಾಷಣಗಳು ಹಾಗೂ ಚಿಂತನೆ:

ಧಾರವಾಡದಲ್ಲಿ ನಡೆದ 2014ರ`‘ಸಾಹಿತ್ಯ ಸಂಭ್ರಮ’ ದಲ್ಲಿ`ಪತ್ತೇದಾರಿ ಸಾಹಿತ್ಯ ನಶಿಸಲು ಕಾರಣ?’ ಎನ್ನುವ ಬಗ್ಗೆ ಚರ್ಚೆ ಮಂಡಿಸಲು ಅವರನ್ನು ಆಹ್ವಾನಿಸಲಾಗಿತ್ತು. ಈ ಸಾಹಿತ್ಯ ಕೂಟದಲ್ಲಿ ಗಣೇಶಯ್ಯ ಪವರ್ ಪಾಯಿಂಟ್ ಮೂಲಕ ಪತ್ತೇದಾರಿ ಸಾಹಿತ್ಯವನ್ನು ಅಮೂಲ್ಯ ಕಿರುಧಾನ್ಯ’ಗಳಿಗೆ ಹೋಲಿಸಿ ವಾದ ಮಂಡಿಸಿದ್ದರು. ರಾಗಿ, ನವಣೆ, ಸಾಮೆ ಮುಂತಾದ ಕಿರುಧಾನ್ಯಗಳು, ಪೌಷ್ಟಿಕಾಂಶಗಳ ಹೂರಣವಾಗಿ, ಬಡವರ ಆಹಾರಕ್ಕೆ ಆಧಾರಸ್ಥಂಭಗಳಾಗಿದ್ದರೂ, ದಶಕಗಳಿಂದ ಅವುಗಳನ್ನು ನಿರ್ಲಕ್ಷಿಸಿಲಾಗುತ್ತಿದೆ. ಆದರೆ ಇತ್ತೀಚೆಗೆ ಮನುಕುಲದ ಆರೋಗ್ಯ ಅವಘಡಕ್ಕೆ ಈಡಾಗಿದ್ದರಿಂದ ಅವುಗಳತ್ತ ಮತ್ತೆ ಗಮನಹರಿಸಿ ಸಂರಕ್ಷಣೆಗೆ ಮುಂದಾಗಿದ್ದೇವೆ. ಈಗ ಇಡೀ ಪ್ರಪಂಚವೇ ಕಿರುಧಾನ್ಯಗಳನ್ನು ಹುಡುಕಾಡುತ್ತಿದೆ. ಅದರಂತೆಯೆ ಪತ್ತೇದಾರಿ ಸಾಹಿತ್ಯವೂ ಮತ್ತೆ ಸಾಮಾನ್ಯ ಓದುಗರ ದಣಿವನ್ನು ತೀರಿಸುತ್ತಾ, ಅವರ ಓದುವ ಆಸಕ್ತಿ ವೃದ್ಧಿಸುತ್ತ, ಪ್ರಪಂಚಕ್ಕೆ ಅನೂಹ್ಯ ಮತ್ತು ಅನಿರೀಕ್ಷಿತ ಕೊಡುಗೆಗಳನ್ನು ನೀಡುತ್ತಲೆ ಬಂದಿದೆ. ಆದರೂ ಸಾಹಿತ್ಯದ ಪ್ರಮುಖ ಪ್ರಕಾರಗಳು ಈ ಪತ್ತೆಧಾರಿ ಸಾಹಿತ್ಯವನ್ನು ದಶಕಗಳಿಂದ ನಿರ್ಲಕ್ಷಿಸುತ್ತ ಬಂದಿದ್ದವು. ಆದರೆ ಇತ್ತೀಚೆಗೆ ಕನ್ನಡ ಸಾಹಿತ್ಯದ ಓದುಗ ವರ್ಗವನ್ನು ಇಂಗ್ಲೀಷ್​​ ರ ಸಾಹಿತ್ಯ ಕೊಳ್ಳುವ ಸ್ಥಿತಿ ಒದಗಿದೆ. ಈಗ ಇಡೀ ಸಾಹಿತ್ಯಕ್ಕೆ ಕುತ್ತು ಬಂದ ಸಂದರ್ಭದಲ್ಲಿ ಪತ್ತೇದಾರಿ ಮತ್ತು`ಜನಪ್ರಿಯ ಸಾಹಿತ್ಯದ ಪ್ರಾಮುಖ್ಯತೆ ಮಹತ್ವದ ಅರಿವಾಗುತ್ತಿದೆ. ಹಾಗಾಗಿ ಸಾಹಿತ್ಯದೊಳಗಿನ ಮಲತಾಯಿ ಧೋರಣೆಯೆ ಪತ್ತೇದಾರಿ ಸಾಹಿತ್ಯ ನಶಿಸಲು ಕಾರಣ ಎಂದು ಗಣೇಶಯ್ಯ ವಾದಿಸಿದ್ದರು. ಅವರು ಮಂಡಿಸಿದ ನಂತರ ಈ ವಿಷಯ ಮತ್ತು ವಾದ ಅಲ್ಲಿ ಚುರುಕಿನ ಚರ್ಚೆಗೆ ನಾಂದಿಯಾಗಿತ್ತು.

image


ಕೋಲಾರ ಜಿಲ್ಲೆಯ 2014ರ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗಣೇಶಯ್ಯನವರು ಅರಿವಿಗಾಗಿ ಚರಿತ್ರೆ ಅನ್ನುವ ವಿಷಯದ ಮೇಲೆ ಪ್ರಬುದ್ಧ ಭಾಷಣ ಮಂಡಿಸಿದ್ದರು. ಚರಿತ್ರೆಯನ್ನು ಅವಲೋಕಿಸುವುದರಿಂದ ನಮ್ಮನ್ನು ನಾವೇ ಮರುಕಾಣುವ ಜೊತೆಗೆ ನಮ್ಮ ಜೀವನಕ್ಕೂ, ದೇಶದ ಬೆಳವಣಿಗೆಗೂ ಆಧಾರಸಹಿತ ವಿವರಣೆ ನೀಡಬಹುದು. ಹಾಗೂ ಚಾರಿತ್ರಿಕ ಉದಾಹರಣೆಯ ಸಹಿತ ಕೋಲಾರ ಜಿಲ್ಲೆಯ ಜನ ಹಾಗೂ ರೈತರು ಹೇಗೆ ತಮ್ಮ ಭೂಮಿಯ ಮೇಲೆ ಬೀಳುವ ನೀರನ್ನು ಸದುಪಯೋಗಪಡಿಸಿಕೊಳ್ಳಬಹುದು ಅನ್ನುವ ಬಗ್ಗೆ ವಾದ ಮಂಡಿಸಿದ್ದರು. ಮಳೆಯ ನೀರನ್ನು ಮಾತ್ರ ನಂಬಿ, ಅದನ್ನೇ ಉಳಿಸಿ ಬಳಸಿಕೊಳ್ಳುವ ಮೂಲಕ ತಮ್ಮ ನೀರಿನ ಅಭಾವಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಅವರು ವಾದಿಸಿದ್ದರು.

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಜಿಕೆವಿಕೆಯಲ್ಲಿ ನಡೆಯುವ ತಿಂಗಳ ಹಬ್ಬದ ಸಾಹಿತ್ಯ ಕಾರ್ಯಕ್ರಮದಲ್ಲಿ ಗಣೇಶಯ್ಯನವರು`ಕುವೆಂಪು ಅವರ ಜೀವನದಲ್ಲಿ ದೇವರ ಕಲ್ಪನೆಯ ವಿಕಾಸದ ಬಗ್ಗೆ ಅವರ ಮಗಳು ಪುಣ್ಯಕೋಟಿಯ ಜೊತೆ ವಿಶಿಷ್ಟ ರೀತಿಯಲ್ಲಿ ವಿಷಯ ಮಂಡನೆ ಮಾಡಿದ್ದರು. ಕುವೆಂಪು ಜೀವನದ ಘಟನೆಗಳನ್ನು, ಅವರ ರಾಮಾಯಣ ದರ್ಶನಂನಲ್ಲಿನ ಕಾವ್ಯ ತುಣುಕುಗಳನ್ನು ಉಪಯೋಗಿಸಿ, ಅವರ ಜೀವನದ ಚಿತ್ರಗಳು, ಪುತ್ರಿ ಪುಣ್ಯಳ ಕಾವ್ಯಪಠಣ, ಕುವೆಂಪು ಅವರ ಭಾಷಣಗಳ ಆಡಿಯೋ ತುಣುಕುಗಳು, ವೀಡಿಯೋಗಳ ಮೂಲಕ ಸಭಿಗರ ಮನಸೆಳೆಯುವಲ್ಲಿ ಗಣೇಶಯ್ಯ ಹಾಗೂ ಅವರ ಪುತ್ರಿ ಪುಣ್ಯ ಯಶಸ್ವಿಯಾಗಿದ್ದರು. ಸುಮಾರು 100 ನಿಮಿಷಗಳ ಕಾಲ ಈ ಜೋಡಿ-ರೂಪಕ-ಭಾಷಣ ವಿಶೇಷ ಮನೋರಂಜನೆಯಾಗಿತ್ತು. ನೂರಾರು ಜನರ ಮನಸೂರೆಗೊಂಡಿತ್ತು. ಅಷ್ಟೇ ಅಲ್ಲ ಹೆಚ್.ಎಸ್.ವಿ ಅವರು ನಡೆಸುತ್ತಿದ್ದ ಕನ್ನಡದ ಕವಿಗಳ ಬಗೆಗಿನ ಕಲಿಕಾ ಶೀರ್ಷಿಕೆಯಲ್ಲಿ ತೇಜಸ್ವಿಯವರ ಬಗ್ಗೆ ಗಣೇಶಯ್ಯ, ತೇಜಸ್ವಿಕೆ ಮೈಸೂರು ತೊರೆದು ಮೂಡಿಗೆರೆಯಲ್ಲಿ ನೆಲೆಸಿದ್ದು ಎನ್ನುವ ಬಗ್ಗೆ ವಿಷಯ ಮಂಡನೆ ಮಾಡಿದ್ದರು.

ಗಣೇಶಯ್ಯನವರನ್ನು ಅರಸಿಕೊಂಡು ಬಂದ ಗೌರವಗಳು:

1991ರಲ್ಲಿ ಯುಎಸ್ಎನ ಫುಲ್​ಬ್ರೈ ಟ್ ಫೇಲೋಶಿಪ್, 1997ರಲ್ಲಿ ಅರಣ್ಯ ಪರಿಸರ ಹಾಗೂ ಪರಿಸರ ಇಲಾಖೆಯ ಪರಿಸರ ಪ್ರಶಸ್ತಿ, 2008ರಲ್ಲಿ ಯಲಹಂಕ ರೋಟರಿ ಕ್ಲಬ್​​ನ ವೊಕೇಶನಲ್ ಎಕ್ಸಲೆನ್ಸಿ ಪ್ರಶಸ್ತಿ, 2009ರಲ್ಲಿ ಕನಕಮುಸುಕು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಪ್ರಶಸ್ತಿ, ರಿಸೋರ್ಸ್ ಸಬ್ಸಿಟ್ಯೂಷನ್​ಗೆ ಬ್ರಿಟೀಶ್ ಪೆಟ್ರೋಲಿಯಂ ಪ್ರಶಸ್ತಿ, ಜಪಾನ್​​ನಲ್ಲಿ 2009ರಲ್ಲಿ ನಡೆದ ಏಷಿಯಾ ಪೆಸಿಫಿಕ್ ರಾಷ್ಟ್ರಗಳ ಪರಿಸರ ಹಾಗೂ ಅಭಿವೃದ್ಧಿ ಶೃಂಗದಲ್ಲಿ ಲಂಟಾನ ಕಮಾರಾ ಸಸ್ಯದ ಬಗ್ಗೆ ನೀಡಿದ ವಿವರವಾದ ಸೆಮಿನಾರ್​​ ಅವರಿಗೆ ರ್ಯೂಟಾರೋ ಹಷಿಮೋಟೋ ಗೋಲ್ಡ್ ಪ್ರೈಝ್ ಲಭಿಸಿದೆ. ಜೊತೆಗೆ 2010ರಲ್ಲಿ ಇರಾನ್​​ನ ಇಂಟರ್​​ನ್ಯಾಷನಲ್ ರೇಡಿಯೋ ಫೋರಮ್ ನೀಡುವ ರೇಡಿಯೋ ಭರವಸೆ ಹಾಗೂ ಜಾಗೃತಿ ಮಾಧ್ಯಮ ಪ್ರಶಸ್ತಿ ದೊರಕಿದೆ.

ವೈಜ್ಞಾನಿಕ ವಿಭಾಗದಲ್ಲಿ ಗಣೇಶಯ್ಯನವರನ್ನು ಅರಸಿಕೊಂಡು ಬಂದ ಗೌರವಗಳು:

1991ರಿಂದ ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್​​ನ ಫೆಲೋಶಿಪ್, 1997ರಿಂದ ನವದೆಹಲಿಯ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿಯ ಫೆಲೋಶಿಪ್, 2004ರಿಂದ ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸ್​​ನ ಫೆಲೋಶಿಪ್, ಬೆಂಗಳೂರಿನ ಕರೆಂಟ್ ಸೈನ್ಸ್ ಅಸೋಸಿಯೇಷನ್​​ನ ಫೆಲೋಶಿಪ್, 1995ರಲ್ಲಿ ಬೆಂಗಳೂರಿನ ಜವಾಹರ್​ಲಾಲ್ ನೆಹರೂ ಸೆಂಟರ್ ಫರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್​ನ ಗೌರವ ಸೀನಿಯರ್ ಫೆಲೋಶಿಪ್, ಬೆಂಗಳೂರಿನ ಅಶೋಕ ಟ್ರಸ್ಟ್​​ನ ಪರಿಸರ ಹಾಗೂ ವಾತಾವರಣಕ್ಕೆ ಸಂಬಂಧಿಸಿದ ಸಂಶೋಧನಾತ್ಮ ಫೆಲೋಶಿಪ್ ಮುಂತಾದ ಅಸಂಖ್ಯಾತ ಗೌರವಗಳು ಅವರನ್ನು ಅರಸಿಕೊಂಡು ಬಂದಿವೆ.

ಎಡಿಟೋರಿಯಲ್ ಬೋರ್ಡ್ ಹಾಗೂ ಉಳಿದ ಸೇವೆಗಳು:

ಪರ್ಯಾಯ ಶಕ್ತಿಮೂಲಗಳು ಹಾಗೂ ಪರಿಸರಾಭಿವೃದ್ಧಿಯ ಕುರಿತಾದ ಅಡ್ವಾನ್ಸ್​​ಡ್​​ ರಿಸರ್ಚ್ ಜರ್ನಲ್​​ನಲ್ಲಿ ಇತ್ತೀಚೆಗಷ್ಟೇ ಗಣೇಶಯ್ಯನವರನ್ನು ಎಡಿಟೋರಿಯಲ್​​ ಬೋರ್ಡ್​ಗೆ ನೇಮಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಕರೆಂಟ್ ಸೈನ್ಸ್, ಅರಣ್ಯ ಪರಿಸರ, ಫೈಟೋ ಮಾರ್ಫಾಲಜಿಯ ಅಂತರಾಷ್ಟ್ರೀಯ ಪತ್ರಿಕೆ, ಬಯೋಡೈವರ್ಸಿಟಿಯ ಜರ್ನಲ್ ಹಾಗೂ ಮೈಫಾರೆಸ್ಟ್ ಜರ್ನಲ್​​ಗಳಿಗೆ ಗಣೇಶಯ್ಯನವರು ಸಂಪಾದಕೀಯ ಸಮಿತಿಯ ಸಕ್ರಿಯ ಸದಸ್ಯರೂ ಆಗಿದ್ದಾರೆ.

ಮುಂದಿನ ಹೆಜ್ಜೆ:

ಪರಿಸರ ಸಮತೋಲನ, ವೈಜ್ಞಾನಿಕ ಚಿಂತನೆ, ಸಂಶೋಧನೆ ಹಾಗೂ ಬರಹಗಳೊಂದಿಗೆ ಸಾಹಿತ್ಯ ಕೃಷಿಯಲ್ಲೂ ತೊಡಗಿರುವ ಗಣೇಶಯ್ಯ ತಮ್ಮ ನಿವೃತ್ತಿಯ ನಂತರ ಪೂರ್ಣಕಾಲಿಕ ಬರವಣಿಗೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೆ ಅವರ ಹಲವು ಪುಸ್ತಕಗಳು ಮರುಮುದ್ರಣ ಕಂಡಿದ್ದು, ಅಭಿಮಾನಿ ಓದುಗರು ಅವರ ಮುಂದಿನ ಬರಹಗಳಿಗಾಗಿ ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ. ಸಧ್ಯ ಕಾಳುಮೆಣಸಿನ ರಾಣಿ ಚೆನ್ನಭೈರಾದೇವಿಯ ಕುರಿತಾದ ಪುಸ್ತಕವೊಂದರ ರಚನೆಯಲ್ಲಿ ತೊಡಗಿರುವ ಗಣೇಶಯ್ಯ ಮುಂಬರುವ ದಿನಗಳಲ್ಲಿ ಮಹಾಭಾರತದ ಕೃಷ್ಣನನ್ನು ಚಾರಿತ್ರಿಕವಾಗಿ ತೋರಿಸುವ ಸುಳಿವು ನೀಡಿದ್ದಾರೆ.

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India