ಆವೃತ್ತಿಗಳು
Kannada

ನಿಮ್ಮೊಳಗಿನ ಕಲಾವಿದನಿಗೊಂದು ವೇದಿಕೆ - 'ಓಪನ್ ಸ್ಕೈ'ನಲ್ಲಿ ಕಲಾ ಸಂಗಮ

ಟೀಮ್​ ವೈ.ಎಸ್​.ಕನ್ನಡ

YourStory Kannada
13th Jan 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬೆಂಗಳೂರಿನಂತಹ ಮಹಾನಗರಗಳಲ್ಲಿ ಶಿಕ್ಷಣವನ್ನು ಹೊರತುಪಡಿಸಿ ಯುವಜನತೆಯ ಕಲಾ ಶ್ರೀಮಂತಿಕೆಗೂ ಮಣೆ ಹಾಕುತ್ತಿರುವುದು ನಿಜಕ್ಕೂ ಒಳ್ಳೆಯ ಟ್ರೆಂಡ್. ಹೈಸ್ಕೂಲ್ ಕಷ್ಟ, ಕಾಲೇಜು ಅದಕ್ಕಿಂತ್ಲೂ ಕಠಿಣ, ಹಾಗಾಗಿ ವಿದ್ಯಾರ್ಥಿಗಳೆಲ್ಲ ವೀಕೆಂಡ್​ಗಾಗಿ ಕಾಯ್ತಾರೆ. ತಮ್ಮ ನೆಚ್ಚಿನ ಹವ್ಯಾಸಗಳಿಗೆ ಸಮಯ ಮೀಸಲಿಟ್ಟು, ಸೃಜನಶೀಲತೆಯನ್ನು ಬೆಳೆಸಿಕೊಳ್ಳುತ್ತಾರೆ, ಅದರಲ್ಲೇ ಸಂತೋಷ ಕಾಣ್ತಾರೆ.

image


'ಓಪನ್ ಸ್ಕೈ ಸ್ಲಾಮ್' ಇದೊಂದು ಸಮುದಾಯ ಚಾಲಿನ ಸಾಹಸೋದ್ಯಮ. ಹದಿಹರೆಯದವರಿಗೆ ಸೃಜನಶೀಲತೆಯ ಜಗತ್ತನ್ನು ಆಳವಾಗಿ ಪರಿಚಯಿಸಲು 'ಓಪನ್ ಸ್ಕೈ ಸ್ಲಾಮ್' ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನ ಕಲಾಪ್ರೇಮಿಗಳಿಗಾಗಿ ಆರಂಭವಾದ ಈ ಸಂಸ್ಥೆ ಮುಂಬೈ, ಹೈದ್ರಾಬಾದ್, ಚೆನ್ನೈ, ಪುಣೆ, ಕ್ಯಾಲಿಕಟ್, ಗೋಲ್ಡ್ ಕೋಸ್ಟ್ ಮತ್ತು ಆಸ್ಟ್ರೇಲಿಯಾವರೆಗೂ ತಲುಪಿದೆ. ಸಂಗೀತ, ನೃತ್ಯ, ಕವಿತೆ, ಜಾದೂ ಇವನ್ನೆಲ್ಲ ಕಲಾಪ್ರೇಮಿಗಳಿಗೆ ತಲುಪಿಸುವ ಸಮಗ್ರ ವೇದಿಕೆ ಇದು. ಭಾರತ ಹಾಗೂ ಪಾಕಿಸ್ತಾನದ ಕಲಾವಿದರ ಸಂಗಮಕ್ಕೂ 'ಓಪನ್ ಸ್ಕೈ ಸ್ಲಾಮ್' ಸೇತುವೆಯಂತೆ ಕೆಲಸ ಮಾಡಿದೆ. ಉಭಯ ದೇಶಗಳ ಯುವ ಕಲಾವಿದರು ಗಡಿಯಲ್ಲಿ ಒಂದುಗೂಡಿ ಹೊಸ ಹೊಸ ಕಲ್ಪನೆಗಳು, ಹವ್ಯಾಸಗಳು, ದೃಷ್ಟಿಕೋನಗಳು ಮತ್ತು ರಾಜಕೀಯ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿದ್ದಾರೆ. ಈ ಮೂಲಕ ಭಾರತ-ಪಾಕ್ ಕಲಾವಿದರ ಮಧ್ಯೆ ಸ್ನೇಹದ ಬಾಂಧವ್ಯ ಕೂಡ ಬೆಸೆದಿದೆ.

ಇದೆಲ್ಲ ಶುರುವಾಗಿದ್ದು ವರ್ಷದ ಹಿಂದೆ, 20ರ ಹರೆಯದ ಶಾನ್ ಡಿಸೋಜಾ ಹಾಗೂ ಟಿಮ್ ಲು ಸೊರ್ಡೊ ಒಂದಷ್ಟು ಸ್ನೇಹಿತರನ್ನು ಒಂದೇ ಸೂರಿನಡಿ ಒಟ್ಟುಗೂಡಿಸಿದ್ರು. ಹೊಸ ಸಾಹಸಕ್ಕೆ ಕೈಹಾಕಿದ್ದ ಈ ಗೆಳೆಯರ ಬಳಗ ಡ್ಯಾನ್ಸರ್ಸ್ ಹಾಗೂ ಗಾಯಕರ ಬೆಂಬಲವನ್ನೂ ಕೋರಿತ್ತು. ಕೆಲವೇ ದಿನಗಳಲ್ಲಿ ಅವರ ಕನಸು ಟಿಸಿಲೊಡೆದಿತ್ತು. ''ನನಗೆ ಮೊದಲಿನಿಂದ್ಲೂ ಜನಶಕ್ತಿಯಲ್ಲಿ ನಂಬಿಕೆಯಿತ್ತು, ಆ ಸಮರ್ಥನೀಯ ಪ್ರತಿಭೆ ಜಗತ್ತನ್ನೇ ಬದಲಾಯಿಸಬಲ್ಲದು. 'ಓಪನ್ ಸ್ಕೈ' ಇದಕ್ಕೆ ಜೀವಂತ ನಿದರ್ಶನ. ತೀರ್ಮಾನಗಳನ್ನು ಬದಿಗಿಟ್ಟು ಪ್ರತಿಯೊಬ್ಬರೂ ಕಲೆಯ ಮೇಲಿನ ಒಲವನ್ನು ಪ್ರದರ್ಶಿಸುತ್ತಾರೆ'' ಎಂದು ಶಾನ್ ಹೆಮ್ಮೆಯಿಂದ ಹೇಳಿಕೊಳ್ತಾರೆ.

ಇದೀಗ 'ಓಪನ್ ಸ್ಕೈ' ಬಹಳಷ್ಟು ಅಭಿಪ್ರಾಯಗಳು ಹಾಗೂ ಜೀವನ ಶೈಲಿಯ ಮಿಶ್ರಣದಂತಾಗಿದೆ. ಸುಂದರವಾದ ಮುಕ್ತ ಮನಸ್ಸುಗಳನ್ನು ಒಂದೆಡೆ ಸೇರಿಸುವ ತಾಣ ಇದು. ಬೆಂಗಳೂರಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಸಂಸ್ಥೆಯನ್ನು ಶ್ರುತಿ ಮೋಹನ್, ದೀಪ್ತೆನ್ ಸರ್ಕಾರ್ ಹಾಗೂ ಐಶ್ವರ್ಯ ಐಯ್ಯರ್ ಮುನ್ನಡೆಸುತ್ತಿದ್ದಾರೆ. ಸಮುದಾಯವೇ ಓಎಸ್ಎಸ್​ನ ಪ್ರಬಲ ಶಕ್ತಿ. ತೀರ್ಪಿನಿಂದ ಹೊರತಾದ ರೀತಿಯಲ್ಲಿ ಅಗತ್ಯವಿರುವ ಎಲ್ಲ ಕಲಾವಿದರಿಗೂ ವೇದಿಕೆ ಕಲ್ಪಿಸಿಕೊಡುವುದು ಓಎಸ್ಎಸ್​ನ ಪ್ರಮುಖ ಉದ್ದೇಶ. ಕೇವಲ ಗುಂಪುಗಳಲ್ಲಿ ಹಾಡಿದ ಗಾಯಕನಿರಬಹುದು, ಅಥವಾ ಆಗಷ್ಟೇ ಬರೆಯಲು ಆರಂಭಿಸಿದ ಯುವ ಕವಿ ಇರಬಹುದು ಎಲ್ಲರಿಗೂ ಓಪನ್ ಸ್ಕೈ ವೇದಿಕೆ ಕಲ್ಪಿಸಿಕೊಡುತ್ತಿದೆ. ಅವರ ಆಸಕ್ತಿಗೆ ನೀರೆರೆದು ಪೋಷಿಸುತ್ತಿದೆ. ಓಎಸ್ಎಸ್ ಅಂದ್ರೆ ಕಲೆ, ಹಣ ಮಾಡುವ ಉದ್ದೇಶ ನಮಗಿಲ್ಲ, ಎಲ್ಲ ಬಗೆಯ ಪಾಲುದಾರಿಕೆಗೂ ಸಂಸ್ಥೆ ಸಿದ್ಧವಾಗಿದೆ ಎನ್ನುತ್ತಾರೆ ದೀಪ್ತೆನ್. ಓಎಸ್ಎಸ್​ನಲ್ಲಿ ಕಲೆಯನ್ನು ವಾಣಿಜ್ಯೀಕರಣಗೊಳಿಸುವುದಿಲ್ಲ, ಸಹಯೋಗ ಮತ್ತು ಸಮುದಾಯದ ಸಬಲೀಕರಣಕ್ಕೆ ಪ್ರಮುಖ ಆದ್ಯತೆ ಅಂತಾ ಅವರು ಮನಬಿಚ್ಚಿ ಮಾತನಾಡಿದ್ದಾರೆ.

image


''ವಿವಿಧ ಪ್ರಕಾರಗಳ ಜನರು 'ಓಪನ್ ಸ್ಕೈ' ಪರಿಕಲ್ಪನೆಯನ್ನು ಒಪ್ಪಿಕೊಂಡಿದ್ದಾರೆ. ಇದು ನಮ್ಮ ಎಂಜಿನ್​ಗೆ ಇಂಧನವಿದ್ದಂತೆ. 5-55 ವರ್ಷದವರೆಗಿನ ಕಲಾವಿದರು ಓಪನ್ ಸ್ಕೈನಲ್ಲಿ ಪ್ರದರ್ಶನ ನೀಡ್ತಾರೆ. ಎಲ್ಲರನ್ನೂ ಸ್ವಾಗತಿಸುವ ಈ ವೇದಿಕೆಯನ್ನು ಇಷ್ಟಪಡದವರೇ ಇಲ್ಲ, ಸ್ಪರ್ಧಿಗಳಿಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಸದವಕಾಶ ಇಲ್ಲಿ ಸಿಗುತ್ತಿದೆ. ಇತರರನ್ನು ಗಮನಿಸುತ್ತ, ಅವರಿಂದಲೂ ಕಲಿಯುತ್ತ ಬೇರೆ ಬೇರೆ ಪ್ರಾಕಾರಗಳನ್ನು ಕಲಾವಿದರು ಪ್ರಯೋಗ ಮಾಡುತ್ತಾರೆ. ನಾನು ಶಾಸ್ತ್ರೀಯ ನೃತ್ಯಗಾತಿ ಆದ್ರೆ ಇಲ್ಲಿ ಎಲ್ಲರಿಂದ್ಲೂ ಪ್ರೋತ್ಸಾಹ ಪಡೆದು ಕವಯತ್ರಿ ಕೂಡ ಆಗಿದ್ದೇನೆ'' ಎನ್ನುತ್ತಾರೆ ಶ್ರುತಿ ಮೋಹನ್.

ಕೆಫೆಯಿಂದ ಹಿಡಿದು ರೆಸ್ಟೋರೆಂಟ್​ಗಳವರೆಗೆ, ಟೆರೆಸ್​ನಿಂದ ಸಾರ್ವಜನಿಕ ಉದ್ಯಾನವನಗಳಲ್ಲಿ, ಅನಾಥಾಶ್ರಮಗಳು, ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಓಎಸ್ಎಸ್ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಪುಸ್ತಕ, ಕ್ರೀಡಾ ಉಪಕರಣಗಳನ್ನು ಒದಗಿಸಲು ಓಎಸ್ಎಸ್ ನೆರವಾಗುತ್ತಿದೆ. 'ಓಪನ್ ಸ್ಕೈ'ಸಮುದಾಯದ ಯುವ ಕಲಾವಿದರು ಮತ್ತು ಕವಿಗಳು ಹಲವಾರು ಸರ್ಕಾರಿ ಶಾಲೆಗಳಿಗೆ ಗ್ರಂಥಾಲಯ ಮತ್ತು ಆಟದ ಮೈದಾನ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.

ಇಂಥದ್ದೊಂದು ಸಂಸ್ಥೆಯನ್ನು ಆರಂಭಿಸಲು ಮುಂದಾದಾಗ ಜನರ ಪ್ರತಿಕ್ರಿಯೆ ಹೇಗಿರಬಹುದು ಅನ್ನೋ ಸಂದೇಹ ಅವರಲ್ಲಿತ್ತು. ಮೊದಲು ಗ್ರಂಥಾಲಯ ನಿರ್ಮಾಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಯ್ತು. ಸರ್ಕಾರಿ ಶಾಲೆಯ ಮಕ್ಕಳಿಗಾಗಿ 50 ಪುಸ್ತಕಗಳನ್ನು ವಿತರಿಸಲು ಓಪನ್ ಸ್ಕೈ ಮುಂದಾಗಿತ್ತು. ಅಚ್ಚರಿ ಎಂಬಂತೆ 400ಕ್ಕೂ ಹೆಚ್ಚು ಪುಸ್ತಕಗಳು ದಾನವಾಗಿ ಸಿಕ್ಕಿದ್ದವು. ಇನ್ನು ಪೈಪೋಟಿ ಬಗ್ಗೆ ಮಾತನಾಡುತ್ತ, ಬೇರೆ ಸಂಘಟನೆಗಳೊಂದಿಗೆ ನಮ್ಮನ್ನು ನಾವು ಹೋಲಿಕೆ ಮಾಡಿಕೊಳ್ಳುತ್ತಿಲ್ಲ ಎನ್ನುತ್ತಾರೆ ಐಶ್ವರ್ಯ. ಯಾರೊಂದಿಗೂ ಪೈಪೋಟಿಗಿಳಿಯುತ್ತಿಲ್ಲ ಅನ್ನೋದು ಅವರ ನೇರ ನುಡಿ. ಕಲೆ ಎಲ್ಲರ ಸ್ವತ್ತು, ಜಗತ್ತೇ ಅವರಿಗೆ ವೇದಿಕೆ ಎಂಬ ತತ್ವದಲ್ಲಿ ಅವರು ನಂಬಿಕೆ ಇಟ್ಟಿದ್ದಾರೆ. ಓಎಸ್ಎಸ್ ಭವಿಷ್ಯದಲ್ಲಿ ಕೆಲವು ವಿಶಿಷ್ಟ ಯೋಜನೆಗಳನ್ನು ಹಾಕಿಕೊಂಡಿದೆ. ಈ ಪರಿಕಲ್ಪನೆಯನ್ನು ಪ್ರಸಾರ ಮಾಡುವುದು ಅವರ ಪ್ಲಾನ್, ಉಳಿದ ಚಮತ್ಕಾರವನ್ನೆಲ್ಲ ಸಮುದಾಯದವರೇ ಮಾಡ್ತಾರೆ ಅನ್ನೋ ನಂಬಿಕೆ ಅವರಲ್ಲಿದೆ. ಜಗತ್ತಿನಲ್ಲಿ ಯಾರು ಕೂಡ ತಮ್ಮ ಕಲೆಯ ಪ್ರದರ್ಶನಕ್ಕೆ ಕಾಲೇಜು ಉತ್ಸವ, ಕೌಟುಂಬಿಕ ಕಾರ್ಯಕ್ರಮಗಳಿಗಾಗಿ ಕಾಯುವಂತಾಗಬಾರದು ಎನ್ನುತ್ತಾರೆ ಶ್ರುತಿ.

image


''ಪ್ರತಿ ಮಗುವಿನಲ್ಲೂ ಒಬ್ಬ ಕಲಾವಿದನಿದ್ದಾನೆ, ಆದ್ರೆ ಕಲಾವಿದನಾಗಿಯೇ ಉಳಿಯುವುದು ಹೇಗೆ ಎನ್ನುವುದೇ ಸಮಸ್ಯೆ'' ಎಂದಿದ್ದ ಪಿಕಾಸೋ ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. 'ಓಪನ್ ಸ್ಕೈ'ನಂತಹ ಸಂಸ್ಥೆಗಳು ಒಬ್ಬ ಕಲಾವಿದ ಕಲಾವಿದನಾಗಿಯೇ ಉಳಿಯಲು ನೆರವಾಗುತ್ತಿವೆ. ಈ ಪ್ರಯತ್ನ ಹೀಗೆ ಮುಂದುವರಿದ್ರೆ ಪ್ರತಿಯೊಬ್ಬ ಕಲಾವಿನದ ಬದುಕು ಕೂಡ ಹಸನಾಗುವುದರಲ್ಲಿ ಅನುಮಾನವಿಲ್ಲ.

ಲೇಖಕರು: ಸೌರವ್ ರಾಯ್

ಅನುವಾದಕರು: ಭಾರತಿ ಭಟ್

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags