ಕೊರೊನಾವೈರಸ್ ನಿಂದ ಇಳಿತ ಕಂಡ ಭಾರತ-ಚೀನಾ ಪ್ರಯಾಣದ ಬುಕಿಂಗ್

ಸೋಮವಾರ ಚೀನಾದ ವುಹಾನ್ ವಿಶ್ವವಿದ್ಯಾಲಯದ ಮತ್ತೊಬ್ಬ ಕೇರಳದ ವಿದ್ಯಾರ್ಥಿ ಕೊರೊನಾವೈರಸ್‌ಗೆ ಗುರಿಯಾಗಿರುವ ಪ್ರಕರಣ ವರದಿಯಾಗಿದೆ.

ಕೊರೊನಾವೈರಸ್ ನಿಂದ ಇಳಿತ ಕಂಡ ಭಾರತ-ಚೀನಾ ಪ್ರಯಾಣದ ಬುಕಿಂಗ್

Thursday February 06, 2020,

2 min Read

ಚೀನಾದಲ್ಲಿ ಮಾರಣಾಂತಿಕ ಕೊರೊನಾವೈರಸ್ ಹರಡಿರುವ ಕಾರಣ ಚೀನಾ ಮತ್ತು ಭಾರತದ ನಡುವಿನ ಪ್ರಯಾಣದ ನಿರ್ಬಂಧಗಳು ಬುಕಿಂಗ್ ಮೇಲೆ ಪರಿಣಾಮ ಬೀರಿವೆ ಮತ್ತು ಉದ್ಯಮವು ಈ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ ಎಂದು ಪ್ರಯಾಣ ಮತ್ತು ಆತಿಥ್ಯ ಸೇವಾ ಪೂರೈಕೆದಾರರು ಮಂಗಳವಾರ ತಿಳಿಸಿದ್ದಾರೆ.


ನೆರೆಯ ದೇಶದಲ್ಲಿ ನೆಲೆಸಿರುವ ಚೀನಾದ ಪ್ರಯಾಣಿಕರು ಮತ್ತು ವಿದೇಶಿಯರಿಗೆ ಇ-ವೀಸಾ ಸೌಲಭ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಭಾರತ ಭಾನುವಾರ ಪ್ರಕಟಿಸಿದೆ ಮತ್ತು ಜನವರಿ 15 ರಿಂದ ಚೀನಾಕ್ಕೆ ಪ್ರಯಾಣ ಮಾಡಿರುವವರನ್ನು ನಿರ್ಬಂಧಿಸಬಹುದು ಎಂದು ಹೊಸದಾಗಿ ಹೇಳಿದೆ.


“ಚೀನಾ ಮತ್ತು ಹಾಂಗ್ ಕಾಂಗ್‌ಗೆ ಪ್ರಯಾಣವನ್ನು ನಿರ್ಬಂಧಿಸಿರುವುದರಿಂದ, ಪ್ರಯಾಣದ ಬುಕಿಂಗ್ ನಲ್ಲಿ ಭಾರಿ ಇಳಿತವನ್ನು ಕಂಡಿದೆ," ಎಂದು ಮೇಕ್‌ಮೈಟ್ರಿಪ್ ಕಂಪನಿಯ ಸಹ ಸಂಸ್ಥಾಪಕ ಮತ್ತು ಸಿಇಒ ರಾಜೇಶ್ ಮಾಗೋವ್ ಹೇಳಿದ್ದಾರೆ.


ಈಗ, ಭಾರತ ಸರ್ಕಾರವು ಭಾರತದಿಂದ ಹೊರಡುವ ಎಲ್ಲಾ ವಿಮಾನಯಾನ ಸಂಸ್ಥೆಗಳನ್ನು ಚೀನಾದಿಂದ ಬರುವ ಪ್ರಯಾಣಿಕರನ್ನು ನಿಷೇಧಿಸಿರುವುದರಿಂದ ಮತ್ತು ಕಳೆದ ಎರಡು ವಾರಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಚೀನೀ ಅಥವಾ ವಿದೇಶಿಯರ ವೀಸಾಗಳನ್ನು ರದ್ದುಗೊಳಿಸುವುದರೊಂದಿಗೆ, ಈ ಎರಡು ದೇಶಗಳ ನಡುವಿನ ಪ್ರಯಾಣಗಳು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ಅವರು ಹೇಳಿದರು.


ಕಳೆದ ಕೆಲವು ವರ್ಷಗಳಿಂದ, ಹೆಚ್ಚಿದ ವ್ಯಾಪಾರ ಚಟುವಟಿಕೆಗಳಿಂದಾಗಿ ಭಾರತ ಮತ್ತು ಚೀನಾ ನಡುವಿನ ವಾಯುಯಾನವು ಗಮನಾರ್ಹವಾಗಿ ಬೆಳೆದಿತ್ತು. "ರೋಗದ ಏಕಾಏಕಿ ಪರಿಣಾಮದಿಂದ ಪ್ರಯಾಣ ನಿರ್ಬಂಧಗಳನ್ನು ಜಾರಿಗೆ ತಂದಿರುವ ಕಾರಣ ನಾವು ಪ್ರಯಾಣದ ವ್ಯಾಪಾರ ವಿಭಾಗದಲ್ಲಿ ಇಳಿತ ಕಾಣುತ್ತಿದ್ದೇವೆ," ಎಂದು ಮಾಗೋವ್ ಹೇಳಿದರು.


ಮೇಕ್‌ಮೈಟ್ರಿಪ್, ಇಡೀ ಪ್ರವಾಸೋದ್ಯಮ ಉದ್ಯಮಗಳ ಜೊತೆಗೆ ಪರಿಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದೆ ಮತ್ತು ರೋಗದ ಹರಡುವಿಕೆಯನ್ನು ತಡೆಗಟ್ಟಲು ತೆಗೆದುಕೊಂಡ ಕ್ರಮಗಳು ಶೀಘ್ರದಲ್ಲೇ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.


"ನಾವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ಜಾಗತಿಕವಾಗಿ ನಮ್ಮ ವಿಮಾನಯಾನ ಮತ್ತು ಪಾಲುದಾರರ ಜೊತೆಗೆ ಹಾಗೂ ಆರೋಗ್ಯ ಇಲಾಖೆ ಮತ್ತು ಸರ್ಕಾರದ ಪ್ರತಿನಿಧಿಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಇದು ನಮ್ಮ ಗ್ರಾಹಕರಿಗೆ ಉತ್ತಮ ಮಾರ್ಗದರ್ಶನ ಮತ್ತು ಸಹಾಯ ಮಾಡಲು ಅನುಕೂಲವಾಗುತ್ತದೆ," ಎಂದು ಥಾಮಸ್ ಕುಕ್ ನ ಇಂಡಿಯಾದ ಎಂಡಿ ಮಾಧವನ್ ಮೆನನ್ ಹೇಳಿದರು.


ಇಂತಹ ಸಂದರ್ಭಗಳಲ್ಲಿ, ಉತ್ತಮ ತಜ್ಞರ ಸಲಹೆಯನ್ನು ತೆಗೆದುಕೊಂಡು ನಿರ್ಧಾರಗಳನ್ನು ಮಾಡುವುದು ಅತ್ಯಗತ್ಯ ಮತ್ತು ಇದು ನಮ್ಮ ಗ್ರಾಹಕರು ಮತ್ತು ಉದ್ಯಮದ ಹಿತದೃಷ್ಟಿಯಿಂದ ಮುಖ್ಯವಾಗಿದೆ," ಎಂದು ಅವರು ಹೇಳಿದರು.


ಮತ್ತೊಂದೆಡೆ, ಈವರೆಗೆ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಎಂದು ಫೆಡರೇಶನ್ ಆಫ್ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್‌ಹೆಚ್‌ಆರ್‌ಐ) ಹೇಳಿದೆ. ಆದರೂ, ಇದು ಆರಂಭಿಕ ದಿನಗಳಾಗಿದ್ದು, "ನಾವು ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುತ್ತಿದ್ದೇವೆ,” ಎಂದಿದ್ದಾರೆ.


ಪ್ರಸ್ತುತ, ಚೀನಾದಲ್ಲಿ ಕೇವಲ ಒಂದೆರಡು ಪ್ರದೇಶಗಳು ಮಾತ್ರ ವೈರಸ್‌ಗೆ ತುತ್ತಾಗಿವೆ ಮತ್ತು ಅವುಗಳಿಂದ ಭಾರತಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಹಾಗೂ ಆ ನಗರಗಳಿಂದ ಬಹಳಷ್ಟು ಜನರು ಭಾರತಕ್ಕೆ ಬರುವುದಿಲ್ಲ, ಎಂದು ಎಫ್‌ಹೆಚ್‌ಆರ್‌ಎಐ ಜಂಟಿ ಗೌರವ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಹೇಳಿದ್ದಾರೆ.


“ಇದನ್ನು ಹೇಳಿದ ನಂತರ, ಪ್ರಯಾಣ ಉದ್ಯಮದಲ್ಲಿನ ಪ್ರತಿಯೊಬ್ಬರೂ ಇನ್ನೂ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ಹೆಚ್ಚು ಜಾಗರೂಕರಾಗಿದ್ದಾರೆ. ಇದು ಸ್ಥಳೀಯವಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ, ಇದು ಆತಿಥ್ಯ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಆದಾಯದ ಇಳಿತಕ್ಕೆ ಕಾರಣವಾಗಬಹುದು," ಎಂದು ಅವರು ಹೇಳಿದರು.


ನಾವು ಈ ಕೆಟ್ಟ ದಿನಗಳು ಬಹು ಬೇಗ ಹೋಗುತ್ತವೆ ಮತ್ತು ತಿಂಗಳ ಅಂತ್ಯದ ವೇಳೆಗೆ ಪರಿಸ್ಥಿಗಳು ಸಾಮಾನ್ಯ ಸ್ಥಿತಿಗೆ ಬರುತ್ತವೆ ಎಂದು ಭಾವಿಸುತ್ತೇವೆ," ಎಂದು ಶೆಟ್ಟಿ ಹೇಳಿದರು.


ಚೀನಾದ ವುಹಾನ್ ವಿಶ್ವವಿದ್ಯಾಲಯದ ಮತ್ತೊಬ್ಬ ಕೇರಳದ ವಿದ್ಯಾರ್ಥಿ ಕೊರೊನಾವೈರಸ್‌ ಗೆ ಗುರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟಾರೆಯಾಗಿ ಇದು ಭಾರತದ 3ನೇ ಪ್ರಕರಣವಾಗಿದೆ. ಕೇರಳ ಸರ್ಕಾರ ಕೊರೊನಾವೈರಸ್ ಅನ್ನು 'ರಾಜ್ಯ ವಿಪತ್ತು' ಎಂದು ಘೋಷಿಸಿದೆ.