ಅವರ ಪ್ರತೀ ಕವಿತೆಗಳಲ್ಲೂ ಮಲ್ಲಿಗೆ ಕಂಪಿದೆ, ಮಣ್ಣಿನ ಘಮವಿದೆ-ಇದು ಶತಮಾನದ ಕವಿ ಕೆಎಸ್​​ನರ ಜನ್ಮಶತಮಾನೋತ್ಸವ ವರ್ಷ

ಟೀಮ್​​ ವೈ.ಎಸ್​​.

3rd Nov 2015
  • +0
Share on
close
  • +0
Share on
close
Share on
close

“ನೋವು, ಕಂಬನಿ, ಬದುಕು-ಕರವಸ್ತ್ರ ಕವಿತೆ” ಹೀಗಂತ ದುಃಖ ಪರಿಶಮನಕ್ಕಿರುವ ಸುಲಭ ಉಪಾಯವೇ ಕವಿತೆ ಬರೆಯುವುದು ಹಾಗೂ ಓದುವುದು ಎಂದವರು ಪ್ರೇಮಕವಿ ಕೆ.ಎಸ್ ನರಸಿಂಹಸ್ವಾಮಿ. ಮಲ್ಲಿಗೆಕವಿ ಎಂದೇ ಗುರುತಿಸಿಕೊಳ್ಳುವ ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ ಇಂದಿಗೂ ಸುವಾಸನೇ ಬೀರುತ್ತಲೇ ಇದೆ. ಕನ್ನಡ ಸಾಹಿತ್ಯದ ಪ್ರೇಮ ಕಬ್ಬಿಗ ಕೆ.ಎಸ್ ನರಸಿಂಹಸ್ವಾಮಿಯವರಿಗೆ ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಗೌರವವಿದೆ. ನರಸಿಂಹಸ್ವಾಮಿಯವರ ಪದ್ಯಗಳ ಲಾಲಿತ್ಯಕ್ಕೆ ರಾಜಗೌರವವಿದೆ. ಕೆಎಸ್ಎನ್ ಕವಿತೆಗಳ ಮೆಚ್ಚದ ಸಾಹಿತ್ಯ ಪ್ರೇಮಿಯೇ ಇಲ್ಲ. ಈ ವರ್ಷ ಆ ಮಹಾಕವಿಯ ಮೈಸೂರು ಮಲ್ಲಿಗೆಯ 100ನೇ ದಳದ ಪರಿಮಳ ಘಮ. ಕೆಎಸ್ಎನ್​​​ರವರ 100ನೇ ಜನ್ಮಜಯಂತಿಯ ಈ ರಾಜ್ಯೋತ್ಸವದಲ್ಲಿ, ಸಾಹಿತ್ಯಲೋಕವನ್ನು ಉತ್ತುಂಗಕ್ಕೇರಿಸಿದ ನವೋದಯ ಕಾವ್ಯ ಸುಕುಮಾರನ ನೆನಪು ಮಾಡಿಕೊಳ್ಳಬೇಕಿದೆ. ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರಾದ ಕೆಎಸ್​​​ನರವರ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಲೇಖನಿಯ ಲಾಲಿತ್ಯ ಅತ್ಯದ್ಭುತ, ಅಮೋಘ ಹಾಗೂ ಅವರ್ಣನೀಯ. ಮೈಸೂರು ಮಲ್ಲಿಗೆ ಭಾವ ಜೀವಿಗಳ ಅಚ್ಚುಮೆಚ್ಚಿನ ಸಂಕಲನ. ಅವರು ಮಲ್ಲಿಗೆ ಘಮ-ಮಣ್ಣಿನ ಕಂಪು ವಾಸನೆ ಪರಿಚಯಿಸಿದ ಕವಿಯಷ್ಟೇ ಅಲ್ಲ ಕವಿತೆಗಳ ಮೂಲಕ ಪ್ರೇಮಸುಧೆ ಹರಿಸಿದ ಕಬ್ಬಿಗ.

image


ಕನ್ನಡದ ಸಾಹಿತ್ಯಾರಾಧಕರು ಎಂದಿಗೂ ಮರೆಯಲಾರದ ಮೈಸೂರು ಮಲ್ಲಿಗೆಯ ಕಂಪು

ಕೆ.ಎಸ್.ನರಸಿಂಹಸ್ವಾಮಿ, ಕನ್ನಡಿಗರ ಅಚ್ಚುಮೆಚ್ಚಿನ ಕವನಸಂಕಲನ ಮೈಸೂರು ಮಲ್ಲಿಗೆಯನ್ನು ಬರೆದ ಮಗುಮನಸ್ಸಿನ ಕವಿ. ನರಸಿಂಹಸ್ವಾಮಿಯವರ ಮೊದಲ ಕವನ ಸಂಕಲನ 'ಮೈಸೂರು ಮಲ್ಲಿಗೆ', ಮನೆ ಮನೆಯ ಮಾತಾಗಿ, ಕಾವ್ಯವಾಗಿ, ಹಾಡಾಗಿ ರಸೋನ್ಮಾದ ಮೂಡಿಸಿದೆ. ಇದುವರೆಗೂ 25ಕ್ಕೂ ಹೆಚ್ಚು ಬಾರಿ ಮುದ್ರಣ ಕಂಡಿರುವ ಅಪರೂಪದ ಕವನ ಸಂಕಲನವಿದು. ಮೈಸೂರು ಮಲ್ಲಿಗೆಯಲ್ಲಿ ಬಹುತೇಕ ಕವಿತೆಗಳು ದಾಂಪತ್ಯ ಗೀತೆಗಳಾಗಿವೆ. ನವಿಲೂರು, ಹೊನ್ನೂರು ಮೊದಲಾದವು ಗ್ರಾಮ ಬದುಕಿನ ನೆಲೆಗಳು. ಮೈಸೂರು ಮಲ್ಲಿಗೆಯ ಕವಿತೆಗಳು ಭಾವಗೀತೆಗಳ ಮೂಲಕ ಜನಪ್ರಿಯವಾಗಿವೆ. ಕೆಲವು ವರ್ಷಗಳ ಹಿಂದೆ ಇದೇ ಹೆಸರಿನಿಂದ ಚಲನಚಿತ್ರವೂ ನಿರ್ಮಾಣವಾಗಿದೆ. ಮೈಸೂರು ಮಲ್ಲಿಗೆಯ ಕವಿತೆಗಳನ್ನು ಕನ್ನಡದ ಯಾವ ಭಾವ ಜೀವಿಯೂ ಮರೆಯುವ ಹಾಗಿಲ್ಲ. ಈ ಭಾವಗೀತೆಗಳ ಸಂಕಲನದ ಸಿಡಿಗಳು ಹಾಗೂ ಪುಸ್ತಕಗಳು ಹಲವಾರು ಸಾವಿರ ಪ್ರತಿಗಳು ಖರ್ಚಾಗಿವೆ. ಮಲ್ಲಿಗೆಯ ಘಮ ಹಾಗೂ ಮಣ್ಣಿನ ಕಂಪು ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ.

ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ 1915ರಲ್ಲಿ ಜನಿಸಿದರು. ಮೈಸೂರಿನಲ್ಲಿ ಇಂಟರ್ ಮೀಡಿಯಟ್ ಕಲಿತ ಕೆಎಸ್​​ನ ಬಳಿಕ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡಿದರಾದರೂ, ಪೂರ್ತಿಗೊಳಿಸಲು ಸಾಧ್ಯವಾಗಲಿಲ್ಲ. ೧೯೩೭ರಲ್ಲಿ ಸರಕಾರಿ ಸೇವೆಗೆ ಸೇರಿ ೧೯೭೦ರಲ್ಲಿ ನಿವೃತ್ತರಾದರು. ತಮ್ಮ ಜೀವನದುದ್ದಕ್ಕೂ ಆರ್ಥಿಕವಾಗಿ ಸಂಕಷ್ಟದಲ್ಲೇ ಬದುಕಿದ ನರಸಿಂಹ ಸ್ವಾಮಿಗಳು ಎರಡು ಬಾರಿ ಮನೆ ಕಟ್ಟಿ ಎರಡೂ ಬಾರಿ ಮಾರಿದ್ದರು. ತಮ್ಮ ಪತ್ನಿ ವೆಂಕಮ್ಮರವರನ್ನು ಅಪಾರವಾಗಿ ಪ್ರೀತಿಸುತ್ತಿದ್ದ ನರಸಿಂಹ ಸ್ವಾಮಿಯವರು, ತಮ್ಮ ಬಹುತೇಕ ಪದ್ಯಗಳಿಗೆ ಪತ್ನಿಯೇ ಪ್ರೇರಣೆ ಎಂದು ಮುಕ್ತವಾಗಿ ಹಲವಾರು ಬಾರಿ ಹೇಳಿಕೊಂಡಿದ್ದಾರೆ. ಇಂಗ್ಲೀಷ್​​ನ ಪ್ರೇಮ ಕವಿ ರಾಬರ್ಟ್ ಬರ್ನ್ಸ್​​ವರ ಪ್ರಭಾವವೂ ಅವರ ಕವಿತೆಗಳ ಮೇಲಿತ್ತು.

image


ಕೆಎಸ್‌ನ ಕನ್ನಡ ಸಾರಸ್ವತ ಲೋಕವನ್ನು ಉತ್ತುಂಗಕ್ಕೆ ಒಯ್ದ ನವೋದಯ ಕಾವ್ಯ ಸುಕುಮಾರ. ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು. ಕವಿ ವಿಮರ್ಶಕ ಡಾ. ಎಚ್.ಎಸ್.ವೆಂಕಟೇಶಮೂರ್ತಿಯವರು ಕೆಎಸ್‌ನ ಬಗ್ಗೆ ಬರೆಯುತ್ತಾ, “ನವೋದಯದ ಕಾವ್ಯ ಸಂದರ್ಭದಲ್ಲಿ ಹೆಸರು ಮಾಡಿದ್ದ ಈ ಕವಿ, ತಮ್ಮ ಸುಕುಮಾರ ಜಗತ್ತಿನಿಂದ, ನಿಷ್ಠುರವಾದ ಬದುಕಿನ ಸಂದರ್ಭಕ್ಕೆ ಹೊರಳಿದ್ದು`ಶಿಲಾಲತೆ'ಯಲ್ಲಿ. ಆದ್ದರಿಂದ ಸಂಗ್ರಹಕ್ಕೆ ಒಂದು ಐತಿಹಾಸಿಕ ಮಹತ್ವವಿದೆ” ಎಂದು ದಾಖಲಿಸಿದ್ದಾರೆ. ಜೊತೆಗೆ ಮೈಸೂರು ಮಲ್ಲಿಗೆಯ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಇಂಗ್ಲಿಷ್ ಗೀತೆಗಳ ಪ್ರಭಾವವನ್ನು ಗುರುತಿಸಬಹುದು ಎಂದು ಡಾ. ಹೆಚ್.ಎಸ್.ವಿ. ಗುರುತಿಸಿದ್ದಾರೆ. ತಾವು ಬರೆದ ಕವಿತೆಗಳು ಪ್ರೇಮ ಕವಿತೆಗಳಲ್ಲ ಬದಲಿಗೆ ದಾಂಪತ್ಯ ಕವಿತೆಗಳೆಂದು ಸ್ವತಃ ಕೆಎಸ್‌ನ ಹೇಳಿಕೊಂಡಿದ್ದಾರೆ.

ಕನ್ನಡ ಸಾರಸ್ವತ ಲೋಕದಲ್ಲಿ ನರಸಿಂಹ ಸ್ವಾಮಿಯೆಂಬ ದಿವ್ಯ ನಕ್ಷತ್ರ

೧೯೩೩ ರಲ್ಲಿ ಪ್ರಕಟವಾದ ಕಬ್ಬಿಗನ ಕೂಗು ನರಸಿಂಹಸ್ವಾಮಿಗಳ ಮೊದಲ ಕವನ. ಆದರೆ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿದ್ದು ೧೯೪೨ರಲ್ಲಿ ಪ್ರಕಟವಾದ ಮೈಸೂರು ಮಲ್ಲಿಗೆ ಕವನ ಸಂಕಲನ. ಐರಾವತ, ದೀಪದ ಮಲ್ಲಿ, ಉಂಗುರ, ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ, ತೆರೆದ ಬಾಗಿಲು, ನವ ಪಲ್ಲವ, ದುಂಡುಮಲ್ಲಿಗೆ, ನವಿಲದನಿ, ಸಂಜೆ ಹಾಡು, ಕೈಮರದ ನೆಳಲಲ್ಲಿ, ಎದೆ ತುಂಬ ನಕ್ಷತ್ರ, ಮೌನದಲಿ ಮಾತ ಹುಡುಕುತ್ತ, ದೀಪ ಸಾಲಿನ ನಡುವೆ, ಮಲ್ಲಿಗೆಯ ಮಾಲೆ, ಹಾಡು-ಹಸೆ ಅವರ ಇತರೆ ಕವನ ಸಂಕಲನಗಳು. ಕಾವ್ಯ ಇವರ ಪ್ರಮುಖ ಆಸಕ್ತಿಯಾದರೂ ಗದ್ಯದಲ್ಲೂ ಅವರು ಕೃಷಿ ಮಾಡಿದ್ದಾರೆ. ಮಾರಿಯ ಕಲ್ಲು, ದಮಯಂತಿ, ಉಪವನ, ಅನುವಾದ, ಮೋಹನಮಾಲೆ, ನನ್ನ ಕನಸಿನ ಭಾರತ, ಸುಬ್ರಹ್ಮಣ್ಯ ಭಾರತಿ, ಮುಂತಾದ ಗದ್ಯದ ಪ್ರಕಾರಗಳಲ್ಲಿ ನರಸಿಂಹ ಸ್ವಾಮಿಯವರ ಲೇಖನಿಯ ಚಮತ್ಕಾರವಿದೆ. ಪುಷ್ಕಿನ್ ಕವಿತೆಗಳು, ರಾಬರ್ಟ್ ಬರ್ನ್ಸ್ ಪ್ರೇಮಗೀತೆಗಳು ಇವರ ಅನುವಾದಿತ ಕವಿತೆಗಳು. ಇದರ ಜೊತೆಗೆ ಕೆಎಸ್​​​ನರವರ ಆಯ್ದ ಕವನಗಳು ಚೆಲುವು, ಮಾತು ಮುತ್ತು, ನಿಲ್ಲಿಸದಿರೆನ್ನ ಪಯಣವನು, ಅಂತಿಂತ ಹೆಣ್ಣು ನೀನಲ್ಲ, ದೀಪದ ಮಲ್ಲಿ, ಅಕ್ಕಿ ಆರಿಸುವಾಗ, ನಿನ್ನೊಲುಮೆಯಿಂದಲೆ, ಬಾರೆ ನನ್ನ ಶಾರದೆ, ನಿನ್ನ ಹೆಸರು, ರಾಯರು ಬಂದರು, ಬಳೇಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹನು, ನಮ್ಮುರು ಚೆಂದವೋ ನಿಮ್ಮೂರು ಚೆಂದವೋ, ಸಿರಿಗಿರಿಯ ನೀರಿನಲಿ ಬಿರಿದ ತಾವರೆಯಲ್ಲಿ, ನಿನ್ನ ಪ್ರೇಮದ ಪರಿಯ, ಹಕ್ಕಿಯ ಹಾಡಿಗೆ ತಲೆದೂಗುವ ಹೂ ಮುಂತಾದ ಕವಿತೆಗಳು ಓದುಗರನ್ನು ಹಾಗೂ ಕವಿತಾಪ್ರೇಮಿಗಳನ್ನು ಇನ್ನಿಲ್ಲದಂತೆ ಕಾಡಿದೆ.

ಸಹಜ ಸರಳ ನಿರ್ಮಲ-ಇದೇ ಕೆ.ಎಸ್.ಎನ್.ರ ಕಾವ್ಯದ ಬೀಜಮಂತ್ರ ಎಂದು ಎಚ್​ಎಸ್​​ವಿ,​​ ನರಸಿಂಹ ಸ್ವಾಮಿಯವರ ಸಾಹಿತ್ಯ ಕೃಷಿಯನ್ನು ವರ್ಣಿಸಿದ್ದಾರೆ. ತಮ್ಮ ಪದ್ಯಗಳ ರಮಣೀಯ ಭಾವಸಾಗರದಲ್ಲಿ ಭಾವುಕ ಸಾಹಿತ್ಯ ಪ್ರೇಮಿ ರಸಿಕರನ್ನು ತೇಲಿಸಿದ ಕಬ್ಬಿಗ. ಇಂದಿಗೂ ಕರುನಾಡಿನ ಯಾವುದೇ ಮೂಲೆಯಲ್ಲಿ ನಡೆವ ಸಾಹಿತ್ಯಗೋಷ್ಠಿಗಳಲ್ಲಿ ನರಸಿಂಹ ಸ್ವಾಮಿಯವರ ಪದ್ಯಗಳು ಹಾಗೂ ಬರವಣಿಗೆ ಚರ್ಚೆಗೆ ಬರುತ್ತಲೇ. ಇದೆ ಇದು ಅವರ ಸಾಹಿತ್ಯ ಕೃಷಿಯ ಅಮರತ್ವಕ್ಕೆ ಸಾಕ್ಷಿ..

ಅವರಿಗೆ ಗೌರವಿಸಬೇಕಾಗಿದ್ದಿದ್ದು ನಮ್ಮ ಸರ್ಕಾರದ ಆದ್ಯ ಕರ್ತವ್ಯವಾಗಿತ್ತು

ನರಸಿಂಹ ಸ್ವಾಮಿಯವರ ಸಾಹಿತ್ಯ ಸೇವೆಯನ್ನು ಗುರುತಿಸಿದ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡಿದ ಪ್ರಶಸ್ತಿ ಫಲಕಗಳ ಪಟ್ಟಿಯೂ ದೊಡ್ಡದಿದೆ. ೧೯೫೭ರಲ್ಲಿ ಶಿಲಾಲತೆ'ಗೆ ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ಚಂದನ ಅಭಿನಂದನ ಗ್ರಂಥ ಸಮರ್ಪಣೆ, ೧೯೭೭ರಲ್ಲಿ ತೆರೆದ ಬಾಗಿಲು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ಕೇರಳದ ಕವಿ ಕುಮಾರ್ ಆಶಾನ್ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಪಂಪ ಪ್ರಶಸ್ತಿ, ಗೊರೂರು ಪ್ರಶಸ್ತಿ, ದೇವರಾಜ್ ಬಹದ್ದೂರ್ ಬಹುಮಾನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಕೇಂದ್ರ ಸಾಹಿತ್ಯ ಅಕಾಡೆಮಿ ತನ್ನ ಪ್ರತಿಷ್ಠಿತ ಫೆಲೋಶಿಪ್ ಕೆಎಸ್​​​ನ ಅವರಿಗೆ ೧೯೯೯ರಲ್ಲಿ ಕೊಟ್ಟು ಗೌರವಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಿಲಿಟ್ ನೀಡಿ ಕೆಎಸ್​​​ನ ಅವರನ್ನು ಗೌರವಿಸಿದೆ. ೧೯೮೬ರಲ್ಲಿ ಮೈಸೂರು ಮಲ್ಲಿಗೆ ಧ್ವನಿ ಸುರುಳಿ ಬಿಡುಗಡೆಯಾಯಿತು. ೧೯೯೧ರಲ್ಲಿ ಮೈಸೂರು ಮಲ್ಲಿಗೆ ಚಲನಚಿತ್ರವಾಗಿ ಬಿಡುಗಡೆ ಕಂಡಿತು. ಇದರ ಅತ್ಯುತ್ತಮ ಗೀತರಚನೆಗೆ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಸಹ ಲಭಿಸಿತು. ೧೯೯೦ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪದವಿ ನರಸಿಂಹ ಸ್ವಾಮಿಯವರ ನಿರಂತರ ಕಾವ್ಯಕೃಷಿಗೆ ದೊರಕಿದ ಅತ್ಯುನ್ನತ ಗೌರವ.

ಕನ್ನಡದಲ್ಲಿ ನವಿರಾದ ಕವಿತೆಗಳ ಮೂಲಕ ಪ್ರೇಮಸುಧೆ ಹರಿಸಿದ ಅಪ್ಪಟ ಮೃದುಚಿತ್ತದ ಮಹಾಕವಿ ೨೦೦೩ ಡಿಸೆಂಬರ್ ೨೮ ರಂದು ಬಾರದ ಲೋಕಕ್ಕೆ ತೆರಳಿದರು. ಜನಮಾನಸದಿಂದ ದೂರಾದರೂ ತಮ್ಮ ಕವಿತೆಗಳ ಮೂಲಕ ಪ್ರೇಮಸುಧೆ ಹರಿಸುತ್ತಾ ಚಿರಂಜೀವತ್ವ ಪಡೆದ ಮಹಾನ್ ಚೇತನ ಕೆ.ಎಸ್ ನರಸಿಂಹ ಸ್ವಾಮಿ.

  • +0
Share on
close
  • +0
Share on
close
Share on
close
Report an issue
Authors

Related Tags

    Our Partner Events

    Hustle across India