ಕೈ ಕಳೆದುಕೊಂಡರೇನು ಕನಸಿದೆಯಲ್ಲ ಎಂದು ಜೀವನ ಕಟ್ಟಿಕೊಂಡ ವ್ಯಕ್ತಿ

ಸುಬೋಜಿತ್ ಭಟ್ಟಾಚಾರ್ಯ ಅವರು ಕೇವಲ 12 ವರ್ಷದವರಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಅಪಘಾತಕ್ಕೊಳಗಾಗಿ ಎರಡೂ ಕೈಗಳನ್ನು ಕಳೆದುಕೊಂಡರು. ಆದರೆ, ಇದು ಅವರನ್ನು ತಡೆಯಲಿಲ್ಲ. ಇಂದು, ಅವರು ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಲಡಾಖ್ನತ್ತ ಬೈಕನಲ್ಲಿ ಪ್ರವಾಸಕ್ಕೆ ಹೋಗಲು ಸಜ್ಜಾಗಿದ್ದಾರೆ.

ಕೈ ಕಳೆದುಕೊಂಡರೇನು ಕನಸಿದೆಯಲ್ಲ ಎಂದು ಜೀವನ ಕಟ್ಟಿಕೊಂಡ ವ್ಯಕ್ತಿ

Monday February 03, 2020,

4 min Read

“ಜೀವನವು ನಿಮಗೆ ನಿಂಬೆಹಣ್ಣುಗಳನ್ನು ನೀಡಿದಾಗ, ನಿಂಬೆ ಪಾನಕವನ್ನು ಮಾಡಿ.” ಇದು ಹಳೆಯ ಗಾದೆ, ಇದು ಅಹಿತಕರ ಘಟನೆಗಳನ್ನು ಅನುಕೂಲಕರವಾಗಿ ಪರಿವರ್ತಿಸಲು ಜನರನ್ನು ಪ್ರೋತ್ಸಾಹಿಸುತ್ತದೆ. 31 ವರ್ಷದ ಸುಬೋಜಿತ್ ಭಟ್ಟಾಚಾರ್ಯರು ಕೂಡ ಇದನ್ನೇ ಮಾಡಿದ್ದಾರೆ.


ಚಿಕ್ಕವರಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಅಪಘಾತಕ್ಕೊಳಗಾದ ನಂತರ ಸುಬೋಜಿತ್ ತನ್ನ ಎರಡೂ ಕೈಗಳನ್ನು ಕಳೆದುಕೊಂಡರು. ಆದರೆ, ಆ ಅಪಘಾತವು ಅವರನ್ನು ತನ್ನ ಗುರಿಗಳನ್ನು ಸಾಧಿಸುವುದಕ್ಕೆ ತೊಂದರೆಯನ್ನುಂಟು ಮಾಡಲಿಲ್ಲ. ಅವರು ಇದನ್ನು ಒಂದು ನಿರ್ಬಂಧದ ತರಹ ನೋಡಲಿಲ್ಲ, ಅವರು ತನ್ನ ಕನಸುಗಳನ್ನು ಈಡೇರಿಸುವತ್ತ ಕಾರ್ಯಪ್ರವೃತ್ತರಾದರು. ಇಂದು, ಅವರು ಬೆಂಗಳೂರು ಮೂಲದ ಸರ್ಕಾರೇತರ ಸಂಸ್ಥೆಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಲಡಾಖ್ಗೆ ಬೈಕನಲ್ಲಿ ದಂಡಯಾತ್ರೆ ಮಾಡಲು ಪ್ರವಾಸಕ್ಕೆ ಹೋಗಲು ಸಜ್ಜಾಗಿದ್ದಾರೆ.


ಸುಬೋಜಿತ್ ಭಟ್ಟಾಚಾರ್ಯ ಅವರ ಪತ್ನಿ ಜೂಲಿಯೊಂದಿಗೆ.


ಮುಕ್ತ ಶಾಲಾ ವೇದಿಕೆಯ ಮೂಲಕ ಶಿಕ್ಷಣವನ್ನು ಪೂರ್ಣಗೊಳಿಸುವುದರಿಂದಹಿಡಿದು ತನ್ನದೇ ಆದ ವಿನ್ಯಾಸದ ಸ್ಟುಡಿಯೊವನ್ನು ಸ್ಥಾಪಿಸಿ, ಜಿಲ್ಲಾ ಮಟ್ಟದಲ್ಲಿ ಫುಟ್‌ಬಾಲ್ ಆಡುವವರೆಗೆ, ಸುಬೋಜಿತ್ ಎಲ್ಲವನ್ನು ಮಾಡಿದ್ದಾರೆ. ಈ ಪ್ರಯಾಣ ಸುಲಭವಾಗಿರಲಿಲ್ಲ. ಅವರು ಕೆಲ ಕೆಟ್ಟ ಮನಸಿನ ಜನರಿಂದ ದೂರವಿದ್ದು, ತನ್ನ ಗುರಿ ಸಾಧಿಸಲು ಮಾರ್ಗಗಳನ್ನು ಕಂಡುಕೊಳ್ಳಬೇಕಾಗಿತ್ತು ಮತ್ತು ತನ್ನ ವೃತ್ತಿಜೀವನವನ್ನು ನಿರ್ಮಿಸಲು ಇನ್ನು ಪ್ರಯಾಣ ಮಾಡಬೇಕಿತ್ತು.


“ನನ್ನ ಜೀವನದಲ್ಲಿ ಸಾಕಷ್ಟು ಕಷ್ಟಗಳಿದ್ದವು. ಒಂದು ಹಂತದಲ್ಲಿ, ನಾನು ಖಿನ್ನತೆಯಿಂದ ಬಳಲುತ್ತಿದ್ದೆ. ಉದ್ದೇಶಪೂರ್ವಕವಾಗಿ ಏನನ್ನಾದರೂ ಮಾಡುವ ಮನೋಭಾವವು ಅಭಿವೃದ್ಧಿಹೊಂದಲು ನನಗೆ ಸಹಾಯ ಮಾಡಿತು” ಎಂದು ಸುಬೋಜಿತ್ ಭಟ್ಟಾಚಾರ್ಯ ಯುವರ್ ಸ್ಟೋರಿಗೆ ಹೇಳುತ್ತಾರೆ.


ಸುಬೋಜಿತ್ ಅವರ ಕಷ್ಟದ ದಿನಗಳು

ಸುಬೋಜಿತ್‌ ಅವರು 12 ವರ್ಷ ವಯಸ್ಸಿನವರಿದ್ದಾಗ, ಬೇಸಿಗೆ ರಜೆಗಾಗಿ ಬೆಂಗಳೂರಿನಲ್ಲಿರುವ ತನ್ನ ಸಹೋದರಿಯ ಮನೆಯಲ್ಲಿ ಉಳಿದುಕೊಂಡಿದ್ದರು. ಆಗ ಕುಡಗೋಲು ಬಳಸಿ ಮರದಿಂದ ಕೆಲವು ತೆಂಗಿನಕಾಯಿಗಳನ್ನು ತೆಗೆಯಲು ಅವರು ಪ್ರಯತ್ನಿಸುತ್ತಿದ್ದಾಗ, ಅಧಿಕ ಶಕ್ತಿಯಿರುವ ವಿದ್ಯುತ್ ತಂತಿಯೊಂದು ಅವರಿಗೆ ಬಡಿಯಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರ ಎರಡೂ ಕೈಗಳನ್ನು ಕತ್ತರಿಸಬೇಕೆಂದು ಹೇಳಿದರು.


"ಆಸ್ಪತ್ರೆಯಲ್ಲಿ ನನಗೆ ಎಚ್ಚರವಾಯಿತು. ನನ್ನ ತೋಳುಗಳಿಲ್ಲದ ಆ ಸ್ಥಿತಿಯನ್ನು ಅನುಭವಿಸಲು ನನಗೆ ಸಾಧ್ಯವಾಗಲಿಲ್ಲ. ನನ್ನ ದೇಹದ ಸುತ್ತಲೂ ಬ್ಯಾಂಡೇಜ್ನ ಇತ್ತು. ಅದಲ್ಲದೇ ನನ್ನ ಮುಂಗೈಗಳನ್ನು ತೆಗೆಯಲಾಗಿದೆ ಎಂದು ತಿಳಿದಾಗ, ನನ್ನ ಈ ಪರಿಸ್ಥಿಯ ಬಗ್ಗೆ ನನ್ನ ತಾಯಿಗೆ ಹೇಳಬಾರದೆಂದು ನಾನು ವೈದ್ಯರಿಗೆ ಮನವಿ ಮಾಡಿದೆ. ಯಾಕೆಂದರೆ ಅವರು ಈ ಹತಾಶೆಯನ್ನು ಮತ್ತು ನೋವನ್ನು ಹೇಗೆ ಎದುರಿಸುತ್ತಾರೆ ಎಂಬುದು ನನಗೆ ಚಿಂತೆಯಾಗಿತ್ತು,” ಎಂದು ಸುಬೋಜಿತ್ ನೆನಪಿಸಿಕೊಳ್ಳುತ್ತಾರೆ.


ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ಸುಬೋಜಿತ್


ಸುಬೋಜಿತ್ ಅನೇಕ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು, ಮತ್ತು ಸುಮಾರು ಹತ್ತು ತಿಂಗಳುಗಳನ್ನು ಬೆಂಗಳೂರಿನ ಆಸ್ಪತ್ರೆಯಲ್ಲಿ ಕಳೆದರು. ನಂತರ, ಅವರು ಚೇತರಿಸಿಕೊಳ್ಳಲು ಕೋಲ್ಕತ್ತಾದ ತಮ್ಮ ಊರಿಗೆ ಹಿಂದಿರುಗಿದರು. ಅಪಘಾತಕ್ಕೆ ಸಂಬಂಧಿಸಿದ ಭಾವನಾತ್ಮಕ ಮತ್ತು ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಳ್ಳಲು ಅವರಿಗೆ ಆರು ವರ್ಷಗಳೇ ಬೇಕಾಯಿತು. ಅವರ ಗೆಳೆಯರೆಲ್ಲರೂ ತಮ್ಮ ಹನ್ನೆರಡನೇ ತರಗತಿಯನ್ನು ಓದುತ್ತಿರುವಾಗ, ಸುಬೋಜಿತ್ ಪಶ್ಚಿಮ ಬಂಗಾಳದ ವಿದ್ಯಾಪೀಠನಲ್ಲಿರುವ ಚಾರ್ಘಾಟ್ ಮಿಲನ್ ಮಂದಿರ ಎಂಬ ಮುಕ್ತ ಶಾಲಾ ಸಂಸ್ಥೆಯಲ್ಲಿ VII ನೇ ತರಗತಿಯನ್ನು ಓದುತ್ತಿದ್ದರು.


ಅವರ ಮನೆಯ ಬಳಿ ಫುಟ್ಬಾಲ್ ಆಡುತ್ತಿರುವ ಹುಡುಗರ ಗುಂಪನ್ನು ನೋಡಿದ್ದು ಅವರ ಜೀವನಕ್ಕೆ ಮಹತ್ವದ ತಿರುವು ನೀಡಿತು.


“ಕೈಗಳಿಲ್ಲದ ವ್ಯಕ್ತಿಯು ಫುಟ್‌ಬಾಲ್‌ನಂತಹ ಆಟವನ್ನು ಆಡುವುದು ಅಸಾಧ್ಯವೆಂದು ಕಾಣುತ್ತದೆ, ಆದರೆ ನಾನು ಅದನ್ನು ಆಡದೆ ಬಿಟ್ಟುಕೊಡಲು ಇಷ್ಟಪಡಲಿಲ್ಲ, ಆದ್ದರಿಂದ, ಒಮ್ಮೆ ಚೆಂಡನ್ನು ಒದೆಯಲು ನನಗೆ ಅವಕಾಶ ನೀಡುವಂತೆ ಹುಡುಗರನ್ನು ವಿನಂತಿಸಿದೆ. ಕೆಲವು ಅಸಮ್ಮತಿಗಳ ನಂತರ, ಅವರು ಒಪ್ಪಿದರು. ದೇಹದ ಸಮತೋಲನದ ಸಂಪೂರ್ಣ ಕೊರತೆಯಿಂದಾಗಿ, ನಾನು ಆರಂಭದಲ್ಲಿಯೇ ಕೆಳಗೆ ಬಿದ್ದೆ. ನನ್ನನ್ನು ಮನೆಗೆ ಎತ್ತಿಕೊಂಡು ಹೋಗಬೇಕಾಯಿತು. ಇಷ್ಟೆಲ್ಲಾ ಆದರೂ, ಮರುದಿನವೇ ನಾನು ಮತ್ತೆ ಮೈದಾನಕ್ಕೆ ಹೋದೆ. ತಮಗಿಂತ ದೊಡ್ಡದಾದ ಕಾರಣಕ್ಕಾಗಿ ಹೋರಾಡುವುದಕ್ಕಿಂತ ಜೀವನದಲ್ಲಿ ಯಾವುದೂ ಹೆಚ್ಚು ಮುಖ್ಯವಲ್ಲ ಎಂದು ಹೇಳಲಾಗುತ್ತದೆ. ನಾನು ಅದನ್ನು ಮಾಡಲು ಬಯಸುತ್ತೇನೆ," ಎಂದು ಸುಬೋಜಿತ್ ಹೇಳುತ್ತಾರೆ.


ದಿ ಅಸೋಸಿಯೇಷನ್ ​​ಆಫ್ ಪೀಪಲ್ ವಿಥ್ ಡಿಸೆಬಿಲಿಟಿಯಲ್ಲಿ ಸುಬೋಜಿತ್ ತನ್ನ ಸಹೋದ್ಯೋಗಿಗಳೊಂದಿಗೆ


31 ವರ್ಷದ ಸುಬೋಜಿತ್ ಸಮಾಜ ನಿಗದಿಪಡಿಸಿದ ನಿಯಮಗಳಿಗೆ ಅನುಗುಣವಾಗಿ ಬದುಕಲು ಬಯಸಲಿಲ್ಲ. ಅವರು ಸ್ವತಃ ರೇಖೆಗಳನ್ನು ಎಳೆಯಲು ಬಯಸಿದರು ಮತ್ತು ಅಂಗವೈಕಲ್ಯ ಹೊಂದಿರುವ ಇತರರಿಗೂ ಅದೇ ರೀತಿ ಮಾಡಲು ಪ್ರೇರೇಪಿಸಿದರು. ಇದು ಜಿಲ್ಲಾ ಮಟ್ಟದ ಫುಟ್ಬಾಲ್ ಆಟಗಾರನಾಗಲು, ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾವನ್ನು ಪೂರ್ಣಗೊಳಿಸಲು ಮತ್ತು ಸ್ವಯಂ ಕಲಿಕೆಯ ಗ್ರಾಫಿಕ್ ಡಿಸೈನರ್ ಆಗಲು ಕಾರಣವಾಯಿತು.


ಭಾರತದ 2.68 ಕೋಟಿ ವಿಭಿನ್ನ ಸಾಮರ್ಥ್ಯದ ಜನರಲ್ಲಿ, 67.7 ಪ್ರತಿಶತದಷ್ಟು ಜನರು 2011 ರ ಜನಗಣತಿಯ ಪ್ರಕಾರ ನಿರುದ್ಯೋಗಿಗಳಾಗಿದ್ದಾರೆ. ಸುಬೋಜಿತ್ ಅವರಲ್ಲಿ ಒಬ್ಬರು. ಅವರು ತಮ್ಮ ಕೆಲಸಕ್ಕೆ ಅರ್ಜಿಯನ್ನು ಅನೇಕ ಕಂಪನಿಗಳಿಗೆ ಸಲ್ಲಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.


ದಿ ಅಸೋಸಿಯೇಷನ್ ​​ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ) ಯ ಸಿಇಒ ಅವರಿಂದ ಸುಬೋಜಿತ್ ಪ್ರಶಸ್ತಿ ಸ್ವೀಕರಿಸುತ್ತಿರುವುದು.


ಕಾರ್ಪೊರೇಟ್ ಜಗತ್ತಿಗೆ ವಿಭಿನ್ನ ಸಾಮರ್ಥ್ಯದ ಜನರನ್ನು ಸೇರಿಸಿಕೊಳ್ಳುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗಿದ್ದರೂ, ಬೆಂಬಲದ ಕೊರತೆಯಿಂದಾಗಿ ಅನೇಕರ ಆಕಾಂಕ್ಷೆಗಳು ಹಾಗೆಯೇ ಉಳಿದಿವೆ. ನಾನು ಕೂಡ ತಿಂಗಳುಗಟ್ಟಲೆ ಇದನ್ನು ಅನುಭವಿಸಿದ್ದೇನೆ. ಆದರೂ ನಾನು ಬಿಟ್ಟುಕೊಡಲಿಲ್ಲ. ತಾಳ್ಮೆಯಿಂದ ಕಾದೆ. ನಂತರ, ಅವರ ಅಸೋಸಿಯೇಷನ್ ​​ಆಫ್ ಪೀಪಲ್ ವಿಥ್ ಡಿಸೆಬಿಲಿಟಿ (ಎಪಿಡಿ) ಯಿಂದ ಅವರ ಕಡೆಯಿಂದ ಗ್ರಾಫಿಕ್ ಡಿಸೈನರ್ ಆಗಲು ನನಗೆ ಕರೆ ಬಂತು,” ಎಂದು ಸುಬೋಜಿತ್ ಹೇಳುತ್ತಾರೆ.


ಅನೇಕರಿಗೆ ಸ್ಫೂರ್ತಿ

ಕೈಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದು ತುಂಬಾ ಕಷ್ಟ. ದಿನನಿತ್ಯದ ಚಟುವಟಿಕೆಗಳಲ್ಲಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದರಿಂದ ಹಿಡಿದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಕಠಿಣ ಕಾರ್ಯವೆಂದು ತೋರುತ್ತದೆ.


ಅದನ್ನು ನಿಭಾಯಿಸಲು ಸಾಕಷ್ಟು ಧೈರ್ಯ ಬೇಕು. ಈ ಹೋರಾಟಗಳ ಹೊರತಾಗಿಯೂ, ಸುಬೋಜಿತ್ ಅದನ್ನು ನಿಭಾಯಿಸಿದ್ದು ಮಾತ್ರವಲ್ಲ, ಅದನ್ನು ಜಯಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಮಣಿಕಟ್ಟಿನ ಕನೆಕ್ಟರ್‌ನಂತೆ ಕಾರ್ಯನಿರ್ವಹಿಸುವ ಆವಕಾಡೊ ಎಂಬ ಪ್ರಾಸ್ಥೆಟಿಕ್ ಸಾಧನವನ್ನು ಬಳಸುತ್ತಾರೆ. ಕಷ್ಟದ ಕಾರ್ಯಗಳನ್ನು ಮತ್ತು ಗ್ರಾಫಿಕ್ ಡಿಸೈನಿಂಗ್ ಸೇರಿದಂತೆ ಸೂಕ್ಷ್ಮ ಕೆಲಸಗಳನ್ನು ಮಾಡಲು ಸುಬೋಜಿತ್ ಇದನ್ನು ಬಳಸುತ್ತಾರೆ.


ತನ್ನ ಮಾರ್ಪಡಿಸಿದ ಬೈಕ್‌ನಲ್ಲಿ ಸುಬೋಜಿತ್.


ಇದೆಲ್ಲದರ ನಡುವೆ. ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಕೆಲಸಕ್ಕೆ ಪ್ರಯಾಣಿಸುವುದು ಅತ್ಯಂತ ಪ್ರಯಾಸಕರವಾಯಿತು, ಹಾಗಾಗಿ ಸುಬೋಜಿತ್ ತನ್ನ ಮೊಪೆಡ್ ಅನ್ನು ಸುಲಭವಾಗಿ ಸವಾರಿ ಮಾಡುವ ರೀತಿಯಲ್ಲಿ ಮಾರ್ಪಡಿಸಿದರು.


“ನನ್ನ ಬೈಕ್‌ನ ಹ್ಯಾಂಡಲ್ ತೆಗೆದು ಮುಂಭಾಗದಲ್ಲಿ ರಂಧ್ರಗಳನ್ನು ಕೊರೆಯಲು ನಾನು ಮೆಕ್ಯಾನಿಕ್‌ನನ್ನು ಕೇಳಿದೆ, ಇದರಿಂದಾಗಿ ವಾಹನ ಚಲಾಯಿಸಲು ನನಗೆ ಸ್ವಲ್ಪ ಹಿಡಿತ ಸಿಗುತ್ತದೆ. ನಾನು ಅವನಿಗೆ ವೇಗವರ್ಧಕವನ್ನು ನನ್ನ ಪಾದದ ಬಳಿ ಇಡುವಂತೆ ವಿನಂತಿಸಿದೆ. ಈಗ, ನಾನು ಯಾರನ್ನೂ ಅವಲಂಬಿಸದೆ ನಾನೇ ಕೆಲಸಕ್ಕೆ ಹೋಗಲು ಸಮರ್ಥನಾಗಿದ್ದೇನೆ,” ಎಂದು ಸುಬೋಜಿತ್ ಹೇಳುತ್ತಾರೆ.


ಸುಬೋಜಿತ್ ನಗರದ ಸುತ್ತಲೂ ತನ್ನ ಬೈಕ್ ಸವಾರಿ ಮಾಡುತ್ತಿರುವುದು.


31 ವರ್ಷದ ಸುಬೋಜಿತ್ ಈ ವರ್ಷ ದೆಹಲಿಯಿಂದ ಲಡಾಖ್‌ಗೆ 1,000 ಕಿಲೋಮೀಟರ್ ದೂರದಲ್ಲಿ ಬೈಕ್‌ನಲ್ಲಿ ಪ್ರಯಾಣಿಸಲು ಯೋಜಿಸುತ್ತಿದ್ದಾರೆ.

"ಈ ರೀತಿಯ ಪ್ರಯಾಣವನ್ನು ಕೈಗೊಳ್ಳುವುದರ ಹಿಂದಿನ ಉದ್ದೇಶವೆಂದರೆ ನನ್ನಂತಹ ಲಕ್ಷಾಂತರ ಜನರಿಗೆ ಅವರ ಸ್ವಾತಂತ್ರ್ಯ ಮತ್ತು ಜೀವನ ಮಟ್ಟವನ್ನು ಸುಧಾರಿಸಲು ಹಲವು ಮಾರ್ಗಗಳಿವೆ ಎಂಬ ಸಂದೇಶವನ್ನು ನೀಡುವುದು," ಎಂದು ಅವರು ಹೇಳುತ್ತಾರೆ.