ಮುಂಬೈ ಮೂಲದ ಸಲಾಮ್ ಬಾಂಬೆ ಫೌಂಡೇಶನ್ ಭಾರತದಾದ್ಯಂತ ಸೌಲಭ್ಯವಂಚಿತ ಮಕ್ಕಳಿಗೆ ರೊಬೊಟಿಕ್ಸ್ ಅನ್ನು ಪರಿಚಯಿಸುತ್ತಿದೆ

ಸಲಾಮ್ ಬಾಂಬೆ ಫೌಂಡೇಶನ್ ಪ್ರಾರಂಭಿಸಿದ ಸ್ಕಿಲ್ಸ್ @ ಸ್ಕೂಲ್ ಕಾರ್ಯಕ್ರಮವು 2014 ರಿಂದ 20,000 ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿದೆ ಮತ್ತು ಮುಂಬೈ, ಕೋಲ್ಕತಾ ಮತ್ತು ಬೆಂಗಳೂರಿನಾದ್ಯಂತ ಕೆಲಸ ನಿರ್ವಹಿಸುತ್ತಿದೆ.

ಮುಂಬೈ ಮೂಲದ ಸಲಾಮ್ ಬಾಂಬೆ ಫೌಂಡೇಶನ್ ಭಾರತದಾದ್ಯಂತ ಸೌಲಭ್ಯವಂಚಿತ ಮಕ್ಕಳಿಗೆ ರೊಬೊಟಿಕ್ಸ್ ಅನ್ನು ಪರಿಚಯಿಸುತ್ತಿದೆ

Saturday January 25, 2020,

4 min Read

ನಮ್ಮಲ್ಲಿ ಅನೇಕರು ವೈಜ್ಞಾನಿಕ ಕಾದಂಬರಿಗಳಿಂದ ಪಾಪ್-ಸಂಸ್ಕೃತಿಯಿಂದ ಆಕರ್ಷಿತರಾಗಿದ್ದೇವೆ. ಸ್ಟಾರ್ ವಾರ್ಸ್ ಮತ್ತು ಸ್ಟಾರ್ ಟ್ರೆಕ್ ಅಥವಾ ಮಾರ್ವೆಲ್ ಮತ್ತು ಡಿಸಿ ಪಾತ್ರಗಳಂತಹ ಚಲನಚಿತ್ರಗಳನ್ನು, ನಾವೆಲ್ಲರೂ ನೋಡುತ್ತಾ ಬೆಳೆದಿದ್ದೇವೆ. ಇನ್ನು ಅವುಗಳಲ್ಲಿನ ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಆಟೊಮೇಷನ್, ಕ್ವಾಂಟಮ್ ಮತ್ತು ಇನ್ನಿತರ ವಿಷಯಗಳೊಂದಿಗಿನ ಭವಿಷ್ಯದ ಕಥಾವಸ್ತುವಿನ ಸಾಲುಗಳನ್ನು ನಾವು ಇಷ್ಟಪಟ್ಟಿದ್ದೇವೆ, ಅಲ್ಲದೇ ಅದು ಬ್ರಹ್ಮಾಂಡದ ಅಸ್ತಿತ್ವವನ್ನು ವಿವರಿಸುತ್ತದೆ.


ನಿಜ ಜೀವನದಲ್ಲಿ ಇಂತಹ ತಾಂತ್ರಿಕ ವಿಷಯಗಳನ್ನು ಕಲಿಯಲು ಅನೇಕರು ಅದೃಷ್ಟವಂತರಾಗಿದ್ದರೂ, ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಮಕ್ಕಳಿಗೆ ಇದು ದೂರದ ಕನಸಾಗಿ ಉಳಿದಿದೆ. ಪುಣೆಯ ಹದಿನಾಲ್ಕು ವರ್ಷದ ರವಿ ಪಟೇಲ್ ಕೂಡ ಅವರಲ್ಲಿ ಒಬ್ಬರು, ಅವರ ತಂದೆಗೆ ಉತ್ತಮ ಶಿಕ್ಷಣವನ್ನು ನೀಡಲು ಮತ್ತು ಅವರ ಕನಸುಗಳನ್ನು ಬೆಂಬಲಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅವರು ತಮ್ಮ ಇಡೀ ಕುಟುಂಬವನ್ನು ನೋಡಿಕೊಳ್ಳಲು 15,000 ರೂ. ಸಂಪಾದಿಸುತ್ತಿದ್ದರು.


ರವಿ ತಾನು ತಯಾರಿಸಿದ ಯೋಜನೆಯೊಂದಿಗೆ


ಆದಾಗ್ಯೂ, 2014 ರಿಂದ 20,000 ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿದ ಸಲಾಮ್ ಬಾಂಬೆಯ ಸ್ಕಿಲ್ಸ್‌@ ಸ್ಕೂಲ್ ಕಾರ್ಯಕ್ರಮದಿಂದ ರವಿಗೆ ಬೆಂಬಲ ದೊರೆತಾಗ ಅವನ ಜೀವನದಲ್ಲಿ ಬದಲಾವಣಿಯಾಗತೊಡಗಿದವು. ಅದೇ ಕಾರ್ಯಕ್ರಮವು ರವಿಯ ಶಾಲೆಯೊಂದಿಗೆ ಕೆಲಸ ಮಾಡುತ್ತಿದ್ದು, ಅದು ವಿದ್ಯಾರ್ಥಿಗಳಿಗೆ ರೊಬೊಟಿಕ್ಸ್ ಅನ್ನು ಕಲಿಸುತ್ತದೆ. ಶೀಘ್ರದಲ್ಲೇ, ಅವರು ತರಬೇತಿಯನ್ನು ಪ್ರಾರಂಭಿಸಿದರು ಮತ್ತು ಅವನು ತ್ವರಿತವಾಗಿ ಕಲಿತು ಯಾಂತ್ರಿಕ ರೋಬೋಟ್‌ಗಳನ್ನು ತಯಾರಿಸಿದನು.


ಯಶಸ್ಸು

ಮೊದಲ ಹಂತದ ಕೋರ್ಸ್‌ನ ಮೌಲ್ಯಮಾಪನದ ನಂತರ, ರವಿ ಉನ್ನತ ಮಟ್ಟದ ತರಬೇತಿಗೆ ಅರ್ಹತೆ ಪಡೆದನು, ಅಲ್ಲಿ ಅವನು ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಕೃತಕ ಬುದ್ಧಿಮತ್ತೆ (ಎಐ)ಯನ್ನು ಕಲಿತನು. ಇದಲ್ಲದೆ, ಅವನು ತಜ್ಞರ ಮಾರ್ಗದರ್ಶನದಲ್ಲಿ ಒಂದು ತಿಂಗಳು ತರಬೇತಿ ಪಡೆದನು. ನಂತರ ರವಿ 15 ಭಾಷೆಗಳಿಗೆ (ಐದು ಅಂತರರಾಷ್ಟ್ರೀಯ ಮತ್ತು 10 ರಾಷ್ಟ್ರೀಯ ಭಾಷೆಗಳು) ಪ್ರೋಗ್ರಾಮ್ ಮಾಡಿದ ಭಾಷಾ ಅನುವಾದಕ ರೋಬೋಟ್ ಟೋರೊ ವನ್ನು ತಯಾರಿಸಿದನು.


ರವಿಗೆ ಇದು ಕೇವಲ ಒಂದು ಆರಂಭವಾಗಿತ್ತು. ಶೀಘ್ರದಲ್ಲೇ, ಅವನು ತನ್ನ ತಾಂತ್ರಿಕ ಜ್ಞಾನವನ್ನು ತನ್ನ ಸ್ವತಂತ್ರ ಯೋಜನೆಗಳಲ್ಲಿ ಕಾರ್ಯಗತಗೊಳಿಸಲು ಪ್ರಾರಂಭಿಸಿದನು. ಐಒಟಿ ಆಧಾರಿತ ಯಾಂತ್ರೀಕೃತಗೊಂಡ ಮನೆ, ಮೈಕ್ರೊಕಂಟ್ರೋಲರ್ ಆರ್ಡುನೊ ಯುನೊ ಮತ್ತು ಮನೆಯಲ್ಲಿನ ವಿದ್ಯುತ್ ಗೃಹೋಪಯೋಗಿ ಉಪಕರಣಗಳನ್ನು ನಿಯಂತ್ರಿಸಲು ಇಂಟರ್ನೆಟ್ ಅಪ್ಲಿಕೇಶನ್ಗಳನ್ನು ತಯಾರಿಸಿದನು. ಮೊಬೈಲ್ ಅಪ್ಲಿಕೇಶನ್‌ನಲ್ಲಿ ಧ್ವನಿ ಆಜ್ಞೆಯನ್ನು ನೀಡಿ ವಿದ್ಯುತ್ ಉಪಕರಣಗಳು, ದೀಪಗಳು ಮತ್ತು ಮನೆಯ ಫ್ಯಾನ್‌ಗಳನ್ನು ಆನ್ ಮತ್ತು ಆಫ್ ಮಾಡುವಂತೆ ಸಿಸ್ಟಮ್‌ ರೂಪಿಸಿದನು.


ಮುಂಬೈ ಮ್ಯಾರಥಾನ್‌ಗಾಗಿ ವಿದ್ಯಾರ್ಥಿಗಳು ತಯಾರಿಸಿದ ರೋಬೋಟ್




ರವಿಯಂತಹ ಅನೇಕ ಯುವ ವಿದ್ಯಾರ್ಥಿಗಳು ಸಲಾಮ್ ಬಾಂಬೆ ಫೌಂಡೇಶನ್‌ನ ಸ್ಕಿಲ್ಸ್‌@ಸ್ಕೂಲ್ ಕಾರ್ಯಕ್ರಮದಿಂದ ರೊಬೊಟಿಕ್ಸ್ ಅಥವಾ ಐಒಟಿಯಂತಹ ಸುಧಾರಿತ ವಿಷಯವನ್ನು ಸಹ ಕಲಿತಿದ್ದಾರೆ. ಈ ಕಾರ್ಯಕ್ರಮವು ಪುಣೆಯ ಪುರಸಭೆ ಮತ್ತು ಸರ್ಕಾರಿ ಶಾಲೆಗಳಲ್ಲಿ ಅನೇಕ ವಿದ್ಯಾರ್ಥಿಗಳಿಗೆ ರೊಬೊಟಿಕ್ ಕೋರ್ಸ್ ಅನ್ನು ಒದಗಿಸುತ್ತಿದೆ.


ಯುವರ್ ಸ್ಟೋರಿಯೊಂದಿಗೆ ಮಾತನಾಡಿದ, ಸ್ಕಿಲ್ಸ್‌ @ಸ್ಕೂಲ್ ಕಾರ್ಯಕ್ರಮದ ಉಪಾಧ್ಯಕ್ಷ ಗೌರವ್ ಅರೋರಾ,


“ಈಗ, ಪುಣೆ ಸೇರಿದಂತೆ ಮುಂಬೈ, ಕೋಲ್ಕತಾ, ಮತ್ತು ಬೆಂಗಳೂರಿನಲ್ಲಿ ಸಲಾಮ್ ಬಾಂಬೆ ಫೌಂಡೇಶನ್ ರೊಬೊಟಿಕ್ಸ್ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಕೇವಲ 32 ವಿದ್ಯಾರ್ಥಿಗಳಿಂದ ಪ್ರಾರಂಭವಾಗಿದ್ದ ಇದು, ಈಗ 188 ಹುಡುಗರು ಮತ್ತು 189 ಬಾಲಕಿಯರನ್ನು ಹೊಂದಿದೆ. ಭಾರತದಲ್ಲಿ ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (ಎಸ್‌ಟಿಇಎಂ) ಶಿಕ್ಷಣದಲ್ಲಿನ ಲಿಂಗ ತಾರತಮ್ಯವನ್ನು ನಿವಾರಿಸಲು ಕೋರ್ಸ್ ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ,” ಎಂದರು.


ಭವಿಷ್ಯಕ್ಕಾಗಿ ಮಕ್ಕಳನ್ನು ತಯಾರಿಗೊಳಿಸುವುದು

ಸ್ಕಿಲ್ಸ್@ಸ್ಕೂಲ್ ಕಾರ್ಯಕ್ರಮವು 11–17 ವರ್ಷದೊಳಗಿನ ಮಕ್ಕಳಿಗೆ ತರಬೇತಿಯನ್ನು ನೀಡುತ್ತದೆ. ಸಲಾಮ್ ಬಾಂಬೆ ಫೌಂಡೇಶನ್‌ನ ಶಾಲೆಯ ನಂತರದ ಕಾರ್ಯಕ್ರಮಗಳನ್ನು ಆಯಾ ಪ್ರದೇಶಗಳ ತಾಂತ್ರಿಕ ತಜ್ಞರು ವಿನ್ಯಾಸಗೊಳಿಸಿದ್ದಾರೆ. ರೊಬೊಟಿಕ್ಸ್ ತರಗತಿಗೆ, ಪುರಸಭೆಯ ಶಾಲೆಗಳ ವಿದ್ಯಾರ್ಥಿಗಳಿಗೆ 9 ನೇ ತರಗತಿಯಿಂದ ದಾಖಲಾತಿ ಪ್ರಾರಂಭಿಸುತ್ತಾರೆ.


ವಿದ್ಯಾರ್ಥಿಗಳು ವಿಭಿನ್ನ ಕಲಿಕೆಯ ಪ್ರಕಾರವನ್ನು ಹೊಂದಿದ್ದರೂ, ತರಬೇತಿ ಪಾಲುದಾರರು ವಯಸ್ಸಿಗೆ ಸೂಕ್ತವಾದ ಪಠ್ಯಕ್ರಮ ಮತ್ತು ಬೋಧನಾ ವಿಧಾನಗಳನ್ನು ಬಳಸುತ್ತಾರೆ, ಅದು ಕೋರ್ಸ್ ವಿಷಯವನ್ನು ಯಾವುದೇ ತೊಂದರೆಯಿಲ್ಲದೆ ಕೌಶಲ್ಯಗಳನ್ನು ಗ್ರಹಿಸಲು ಮತ್ತು ಕಲಿಯಲು ಅನುವು ಮಾಡಿಕೊಡುತ್ತದೆ.


ತಮ್ಮ ಮಿನಿ ಬ್ಲೂಟೂತ್ ಸ್ಪೀಕರ್‌ನೊಂದಿಗೆ ವಿದ್ಯಾರ್ಥಿಗಳು


“ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಕಡಿಮೆ ಸೈದ್ಧಾಂತಿಕ ರೀತಿಯ ಪಾಠಗಳನ್ನು ಮಾಡುತ್ತದೆ ಮತ್ತು ಹೆಚ್ಚು ಅನುಭವ ಹಾಗೂ ಪ್ರಾಯೋಗಿಕ ತರಬೇತಿಯನ್ನು ನೀಡುವುದರ ಮೇಲೆ ಕೇಂದ್ರೀಕರಿಸುತ್ತವೆ. ಅಲ್ಲದೆ, ಅವರ ದೈನಂದಿನ ಜೀವನ ಅಥವಾ ಸಮುದಾಯಗಳಿಂದಲೇ ಸವಾಲುಗಳನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ ಮತ್ತು ಅವರೇ ಸುತ್ತಲಿನಿಂದ ಪರಿಹಾರಗಳನ್ನು ರೂಪಿಸುವುದು ಪ್ರೋಗ್ರಾಮಿಕ್ ವಿಧಾನಗಳಲ್ಲಿ ಒಂದಾಗಿದೆ,” ಎಂದು ಗೌರವ್ ಹೇಳುತ್ತಾರೆ.


ಕಳೆದ ವರ್ಷ ನವೆಂಬರ್‌ನಲ್ಲಿ, ಸ್ಕಿಲ್ಸ್@ ಸ್ಕೂಲ್ ನ ತರಬೇತಿ ಪಾಲುದಾರರಲ್ಲಿ ಒಬ್ಬರಾದ ಇಂಡಿಯಾ ಫಸ್ಟ್ ರೊಬೊಟಿಕ್ಸ್ ಸಂಸ್ಥೆಯು ಸಲಾಮ್ ಬಾಂಬೆ ಫೌಂಡೇಶನ್‌ನ 30 ವಿದ್ಯಾರ್ಥಿಗಳ ಬ್ಯಾಚ್ ಅನ್ನು ರೊಬೊಟಿಕ್ಸ್, ಎಐ ಮತ್ತು ಐಒಟಿ ತರಬೇತಿಗಾಗಿ ಸೇರಿಸಿತ್ತು.


ತರಬೇತಿಯ ಜೊತೆಗೆ, ಈ 30 ವಿದ್ಯಾರ್ಥಿಗಳನ್ನು ಸಹ ನಿಯಮಿತವಾಗಿ ಮೌಲ್ಯಮಾಪನ ಮಾಡಲಾಗಿದೆ. ಕಾರ್ಯಕ್ರಮ ಪೂರ್ಣಗೊಂಡ ನಂತರ, ಆಯ್ದ ವಿದ್ಯಾರ್ಥಿಗಳನ್ನು ಮತ್ತೆ ಈ ಉಪಕ್ರಮದ ಒಂದು ಭಾಗವೆಂದು ನಿರ್ಣಯಿಸಲಾಯಿತು. ವಿದ್ಯಾರ್ಥಿಗಳನ್ನು ಅವರ ತಾಂತ್ರಿಕ, ಸಂವಹನ ಮತ್ತು ಪ್ರಸ್ತುತ ಪಡಿಸುವ ಕೌಶಲ್ಯಗಳ ಮೇಲೆ ಮೌಲ್ಯಮಾಪನ ಮಾಡಲಾಯಿತು.


ಇದಲ್ಲದೆ, ಈ ವಿದ್ಯಾರ್ಥಿಗಳು ಹುಮನಾಯ್ಡ್ ಸೇವೆ ಮತ್ತು ಇನ್ಫೋಟೈನ್‌ಮೆಂಟ್‌ ತರಬೇತಿಯನ್ನು ಪಡೆದರು. ಅಲ್ಲಿ ರೋಬೋಟ್ ಮತ್ತು ಅದರ ತಾಂತ್ರಿಕ ಭಾಗಗಳನ್ನು ಒಟ್ಟುಗೂಡಿಸಲು ಮತ್ತು ಪ್ರೋಗ್ರಾಂ ಮಾಡಲು ಅವರಿಗೆ ಅವಕಾಶ ಸಿಕ್ಕಿತು. ವಿದ್ಯಾರ್ಥಿಗಳು ಮೊದಲು ಆರ್ಡುನೊ ಎಂಬ ಮೈಕ್ರೊಕಂಟ್ರೋಲ್ ನಲ್ಲಿ ಬೇಸಿಕ್ ಪ್ರೋಗ್ರಾಮಿಂಗ್‌ಗಾಗಿ, ಮತ್ತು ನಂತರ ಬಯೋನಿಕ್ ಆರ್ಮ್‌ನಲ್ಲಿ ತರಬೇತಿ ಪಡೆದರು.


ಶಿಕ್ಷಣದಲ್ಲಿ ಪರಿವರ್ತನೆ

ಭಾರತದಲ್ಲಿ, 36.37 ಪ್ರತಿಶತದಷ್ಟು ಹದಿಹರೆಯದವರು 8 ನೇ ತರಗತಿಯ ಹೊತ್ತಿಗೆ ಶಾಲೆಯಿಂದ ಹೊರಗುಳಿಯುತ್ತಾರೆ. ಯಾಕೆಂದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಇರಬಹುದು, ಕಳಪೆ ಪೌಷ್ಠಿಕಾಂಶದ ಪರಿಣಾಮ ಮೆದುಳಿನ ಬೆಳವಣಿಗೆಗೆ ಕಾರಣವಾಗುತ್ತದೆ, ಅಲ್ಲದೇ ಭವಿಷ್ಯದಲ್ಲಿ ವೃತ್ತಿ ಆಯ್ಕೆಗಳಿಗೆ ಕಡಿಮೆ ಅಥವಾ ಸರಿಹೊಂದದೆ ಇರಬಹುದು ಮತ್ತು ಶಾಲಾ ಪಠ್ಯಕ್ರಮವನ್ನು ಉತ್ತೇಜಿಸದೆ ಇರುವುದರಿಂದ ವಿದ್ಯಾರ್ಥಿಗಳಿಗೆ ಬೇಸರವಾಗುತ್ತದೆ ಮತ್ತು ಆಸಕ್ತಿ ಇರುವುದಿಲ್ಲ.


“ಸಲಾಮ್ ಬಾಂಬೆ ಫೌಂಡೇಶನ್‌ನಲ್ಲಿ, ನಾವು ಇದನ್ನು ನಮ್ಮ ಸ್ಕಿಲ್ಸ್‌@ಸ್ಕೂಲ್ ಕಾರ್ಯಕ್ರಮದಿಂದ ಪರಿಹರಿಸಲು ಪ್ರಯತ್ನಿಸುತ್ತೇವೆ. ಅಲ್ಲಿ ವಿದ್ಯಾರ್ಥಿಗಳು ರೊಬೊಟಿಕ್ಸ್, ಕಂಪ್ಯೂಟರ್ ಹಾರ್ಡ್‌ವೇರ್, ಮೊಬೈಲ್ ರಿಪೇರಿ, ಗೃಹೋಪಯೋಗಿ ಉಪಕರಣಗಳ ದುರಸ್ತಿ, ಬೇಕರಿ ಮತ್ತು ಮಿಠಾಯಿ, ಚಿಲ್ಲರೆ ನಿರ್ವಹಣೆ, ಸೌಂದರ್ಯ ಮತ್ತು ಆರೋಗ್ಯ, ಫ್ಯಾಷನ್ ಮತ್ತು ಆಭರಣ ವಿನ್ಯಾಸ, ವೆಬ್ ವಿನ್ಯಾಸ ಮತ್ತು ಗ್ರಾಫಿಕ್ ವಿನ್ಯಾಸಗಳನ್ನು ಕಲಿಯುತ್ತಾರೆ. ಈ ಎಲ್ಲಾ ಕೋರ್ಸ್‌ಗಳನ್ನು ವೃತ್ತಿಪರ ತರಬೇತಿ ಸಂಸ್ಥೆಗಳಿಂದ ಶಾಲೆಗಳಲ್ಲಿ ಕಲಿಸಲಾಗುತ್ತದೆ ಎಂದು ಗೌರವ್ ಹೇಳುತ್ತಾರೆ.


ಈ ಕೋರ್ಸ್‌ಗಳೊಂದಿಗೆ, ಸ್ಕಿಲ್ಸ್‌ @ ಸ್ಕೂಲ್ ಕಾರ್ಯಕ್ರಮವು ತಮ್ಮ ಶಿಕ್ಷಣವನ್ನು ಮುಂದುವರೆಸಲು ಸುಮಾರು 90 ಪ್ರತಿಶತ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದೆ.


ಸ್ಮಾರ್ಟ್ ಡಸ್ಟ್ಬಿನ್


ವಿದ್ಯಾರ್ಥಿಗಳು ತೋರಿಸಿದ ಆಸಕ್ತಿಯ ಅನುಸಾರ, ಕೋರ್ಸ್‌ನ ಸರಾಸರಿ ಹಾಜರಾತಿ ಶೇಕಡಾ 84 ರಷ್ಟಿದೆ. ಈ ವಿದ್ಯಾರ್ಥಿಗಳು, ಮತ್ತೊಂದೆಡೆ, ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಕೋರ್ಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ತರಗತಿಯಲ್ಲಿ ಮಾತ್ರವಲ್ಲದೆ ತಮ್ಮ ಮನೆಯಲ್ಲೂ ತಮ್ಮ ಅನುಭವವನ್ನು ಬಳಸಿ ಹೊಸ ಯೋಜನೆಗಳನ್ನು ಮಾಡುತ್ತಿದ್ದಾರೆ.


ವಿದ್ಯಾರ್ಥಿಗಳು ಸ್ವಯಂಚಾಲಿತ ಇ-ತ್ಯಾಜ್ಯ ಕಾಗದದ ತೊಟ್ಟಿಗಳು, ಮೊಬೈಲ್ ಚಾರ್ಜರ್‌ಗಳು, ಸ್ಟಡಿ ಲ್ಯಾಂಪ್‌ಗಳು ಮತ್ತು ತ್ಯಾಜ್ಯ ವಸ್ತುಗಳಿಂದ ಬ್ಲೂಟೂತ್ ಸ್ಪೀಕರ್‌ಗಳಂತಹ ಗ್ಯಾಜೆಟ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ. ಅವರು ವೈರ್‌ಲೆಸ್ ಡಿಸ್ಪ್ಲೇ ಬೋರ್ಡ್‌ಗಳು, ಕುರುಡರಿಗೆ ಅಲ್ಟ್ರಾಸಾನಿಕ್ ಸೆನ್ಸರ್ ಗ್ಲೌಸ್, ಬ್ಯಾಟರಿ ಚಾಲಿತ ಸೋಡಾ ಯಂತ್ರಗಳು, ಸ್ವಯಂಚಾಲಿತ ಸ್ಟ್ರೀಟ್ ಲೈಟ್ ಇತ್ಯಾದಿಗಳನ್ನು ಸಹ ಮಾಡಿದ್ದಾರೆ.


ತಮ್ಮ ಇಷ್ಟದ ಕ್ಷೇತ್ರದಲ್ಲಿ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ಸ್ವಂತ ಉದ್ಯಮಗಳನ್ನು ಪ್ರಾರಂಭಿಸುತ್ತಾರೆ ಅಥವಾ ಅರೆಕಾಲಿಕ ಉದ್ಯೋಗವನ್ನು ಮಾಡುತ್ತಾರೆ. ತಮ್ಮ ಉನ್ನತ ಶಿಕ್ಷಣವನ್ನು ಮುಂದುವರೆಸುವಾಗ, ತಮ್ಮ ಹೆತ್ತವರಿಗೆ ವೆಚ್ಚವನ್ನು ಭರಿಸಲು ಸಹಕರಿಸುತ್ತಾರೆ. ಆ ಮೂಲಕ ಅವರು ಕುಟುಂಬದ ಆದಾಯಕ್ಕೆ ಸಹಕರಿಸುತ್ತಾರೆ. ಶಾಲೆಯಿಂದ ಹೊರಗುಳಿಯುವ ಒತ್ತಡವನ್ನು ಕಡಿಮೆ ಮಾಡುತ್ತಾರೆ. ಸ್ಕಿಲ್ಸ್‌@ಸ್ಕೂಲ್ ಕಾರ್ಯಕ್ರಮವು ಶಾಲೆಯಿಂದ ಹೊರಗುಳಿಯುವವರ ದರವನ್ನು ಕಡಿಮೆ ಮಾಡಲು ಮತ್ತು ಹದಿಹರೆಯದವರಿಗೆ ಭವಿಷ್ಯವನ್ನು ಆತ್ಮವಿಶ್ವಾಸದಿಂದ ಎದುರಿಸಲು ಕೌಶಲ್ಯಗಳನ್ನು ಹೊಂದಿದೆಯೆ ಎಂದು ಖಚಿತಪಡಿಸಿಕೊಳ್ಳಲು ಒಂದು ಪ್ರಮುಖ ಮಾರ್ಗವಾಗಿದೆ,” ಎಂದು ಗೌರವ್ ಹೇಳುತ್ತಾರೆ.


ಇದಲ್ಲದೆ, ಮುಂದಿನ ದಿನಗಳಲ್ಲಿ ಸಂಸ್ಥೆಯು ಭಾರತದಾದ್ಯಂತ ತನ್ನ ಅಸ್ತಿತ್ವವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. 2020-2021ರಲ್ಲಿ ಸ್ಕಿಲ್ಸ್‌@ಸ್ಕೂಲ್ ಕಾರ್ಯಕ್ರಮವು 10,000 ಕ್ಕೂ ಹೆಚ್ಚು ಮಕ್ಕಳಿಗೆ ತಂತ್ರಜ್ಞಾನಗಳನ್ನು ಕಲಿಸುವ ಗುರಿಯನ್ನು ಹೊಂದಿದೆ.