527 ಸೈನಿಕರಿರುವ ಕಾರ್ಗಿಲ್‌ ವನ: ಸ್ವಾತಂತ್ರ್ಯೋತ್ಸವದ ವಿಶೇಷ

ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯಲ್ಲಿ 5-6 ಎಕರೆ ಪ್ರದೇಶದಲ್ಲಿ ಹರಡಿರುವ ಕಾರ್ಗಿಲ್‌ ವನ ಕಾರ್ಗಿಲ್‌ ಯುದ್ಧದಲ್ಲಿ ಅಮರರಾದ ಸೈನಿಕರ ನೆನಪಿನಲ್ಲಿ ನಿರ್ಮಾಣಗೊಂಡಿದೆ.

527 ಸೈನಿಕರಿರುವ ಕಾರ್ಗಿಲ್‌ ವನ: ಸ್ವಾತಂತ್ರ್ಯೋತ್ಸವದ ವಿಶೇಷ

Saturday August 15, 2020,

2 min Read

ದೇಶಕ್ಕಾಗಿ ಪ್ರಾಣ ನೀಡಿದ ಅದೆಷ್ಟೊ ಜೀವಗಳು ಇತಿಹಾಸದ ಪುಟಗಳನ್ನು ಸೇರಿವೆ. ಅವರ ತ್ಯಾಗ ಬಲಿದಾನ ಇಂದಿಗೂ ಅವಿಸ್ಮರಣೀಯ. ಅವರು ಒಂದಲ್ಲ ಒಂದು ರೀತಿಯಲ್ಲಿ ನಮ್ಮೊಂದಿಗಿದ್ದಾರೆ. ಇಂದು ಆ ಜೀವಗಳನ್ನು ನೆನಪು ಮಾಡಿಕೊಂಡು ನಮಗೆ ದಕ್ಕಿರುವ ಸ್ವಾತಂತ್ರ್ಯವನ್ನು ಸಂಭ್ರಮಿಸಬೇಕಾದ ದಿನ. ಈ ಸ್ವಾತಂತ್ರೋತ್ಸವದಂದು ಒಂದು ವಿಶೇಷವಾದ ಕಥೆಯನ್ನು ನಿಮಗೆ ಹೇಳಬಯಸುತ್ತೇನೆ.


1999 ರಲ್ಲಿ ನಡೆದ ಕಾರ್ಗಿಲ್‌ ಯುಧ್ಧದಲ್ಲಿ 527 ಸೈನಿಕರು ಅಮರರಾಗಿದ್ದಾರೆ. ಆ ಯೋಧರನ್ನು ಗಿಡಗಳ ರೂಪದಲ್ಲಿ ಕಾಣುವ ಒಂದು ಪ್ರಯತ್ನವೇ ಈ ಕಾರ್ಗಿಲ್‌ ವನ.


ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದಲ್ಲಿ 5-6 ಎಕರೆ ಪ್ರದೇಶದಲ್ಲಿರುವ ಈ ವನ ಮುಖ್ಯವಾಗಿ ಕಾರ್ಗಿಲ್‌ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ನೆನಪಿನಲ್ಲಿ ಚಿಗುರೊಡೆದದ್ದು. ಸೈನಿಕರ ನೆನಪನ್ನು ಪಶ್ಚಿಮ ಘಟ್ಟಗಳ ಸ್ಥಳೀಯ ಗಿಡಗಳ ರೂಪದಲ್ಲಿ ಬೆಳೆಸಲು ಮುಂದಾಗಿದ್ದಾರೆ ರೈತರಾದ ಸಚಿನ್‌ ಭಿಡೆ.


ಕಾರ್ಗಿಲ್‌ ವನದಲ್ಲಿ ತಮ್ಮ ತಾಯಿಯೊಂದಿಗೆ ಸಚಿನ್‌ ಭಿಡೆ



ಈ ವನದಲ್ಲಿ ವಿಶೇಷವಾಗಿ 527 ಗಿಡಗಳನ್ನು ಹುತಾತ್ಮ ಸೈನಿಕರ ನೆನಪಿನಲ್ಲಿ ನೆಟ್ಟಿದ್ದಾರೆ ಸಚಿನ್‌. ನೆಡುವ ಗಿಡಗಳು ಬರೀ ನೆರಳಿಗಾಗದೆ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗುತ್ತಾ ಸೈನಿಕರು ಗಿಡಗಳ ರೂಪದಲ್ಲಿ ನಮ್ಮೊಂದಿಗಿರಲಿ ಎನ್ನುವ ಆಸೆ ಅವರದು.


“ನಾನೊಮ್ಮೆ ಅಮರನಾಥ್‌ ಯಾತ್ರೆಗೆ ಹೋಗಿದ್ದೆ, ಅಲ್ಲಿ ಸೈನಿಕರು ಕೈಯಲ್ಲಿ ಎಕೆ 47 ಹಿಡಿದು ಯಾತ್ರಿಗಳನ್ನು ತಮ್ಮ ಮಕ್ಕಳಂತೆ ಜೋಪಾನ ಮಾಡುತ್ತಿದ್ದರು. ಇದೆಲ್ಲ ಯಾರಿಗಾಗಿ, ಸೈನಿಕರನ್ನು ಖುಷಿಯ ಸಮಯದಲ್ಲಿ ನಾವ್ಯಾರೂ ನೆನಯುವುದಿಲ್ಲ. ಕಷ್ಟ ಬಂದಾಗ ಅವರ ಬಳಿ ಓಡುತ್ತೇವೆ. ಹಾಗಾಗಿ ಸೈನಿಕರಿಗಾಗಿ ಏನಾದರೂ ಮಾಡಬೇಕೆಂದು ಈ ವನ ನಿರ್ಮಿಸಿದ್ದೇನೆ,” ಎಂದು ಸೈನಿಕರ ಮೇಲಿನ ತಮ್ಮ ಅಭಿಮಾನವನ್ನು ತೆರೆದಿಡುತ್ತಾರೆ ಸಚಿನ್‌.


ಕಾರ್ಗಿಲ್‌ ಯುದ್ಧದ ಸಮಯದಲ್ಲಿ ಸಚಿನ್‌ ಅವರ ತಂದೆ ಪ್ರಧಾನ ಮಂತ್ರಿಗಳ ಕಾರ್ಗಿಲ್‌ ಫಂಡ್‌ಗೆ ಹಣ ಕಳುಹಿಸು, ಸೈನಿಕರು ನಮಗಾಗಿ ಗಡಿಯಲ್ಲಿ ಹೋರಾಡುತ್ತಿದ್ದಾರೆ ಎಂದಿದ್ದರು. ಸಚಿನ್‌ ಅವರು ಆಗ ಸೇನೆಯನ್ನು ಸೇರಲೂ ಪ್ರಯತ್ನಿದ್ದರು, ಆದರೆ ಅದು ಕೈಗೂಡಲಿಲ್ಲ. ಆದರೂ ಸೈನಿಕರ ತ್ಯಾಗ ಅವರ ಮನದಲ್ಲಿ ಅಚ್ಚಳಿಯದೆ ಉಳಿದು, ವನದ ರೂಪದಲ್ಲಿ ಈಗ ಜನ್ಮ ಪಡೆದಿದೆ.


15 ರಿಂದ 18 ಲಕ್ಷ ರೂ ಆದಾಯ ಬರುವ ಹಿರಿಯರ ನೆಲದಲ್ಲಿ ಕಾರ್ಗಿಲ್‌ ವನ ಮಾಡುತ್ತೇನೆ ಅಂತಿಯಾ ಎಂಬ ಮಾತುಗಳ ನಡುವೆಯೂ ಮನೆಯವರ ಸಹಮತಿಯಿಂದ ಸಚಿನ್‌ ಕಾರ್ಗಿಲ್‌ ದಿನದಂದು ವನವನ್ನು ಮಾಜಿ ಸೈನಿಕರ ಹಸ್ತದಿಂದ ಲೋಕಾರ್ಪಣೆಗೊಳಿಸದರು.


ಈ ಮೊದಲು ಆ ಪ್ರದೇಶದಲ್ಲಿ ರಬ್ಬರ್‌ ಗಿಡಗಳಿದ್ದವು, ಅವುಗಳನ್ನು ತೆರವುಗೊಳಿಸಿ ಹಲಸು, ಹೆಬ್ಬಲಸು, ಸಾಗವಾಣಿ, ಮಹಾಗಣಿ, ನೇರಳೆ, ನೆಲ್ಲಿ, ಕಹಿಬೇವು, ಹೆನ್ನರಳೆ ಯಂತಯ ಪಶ್ಚಿಮ ಘಟ್ಟದ ಸ್ಥಳೀಯ ತಳಿಗಳನ್ನು ವನದಲ್ಲಿ ನೆಟ್ಟಿದ್ದಾರೆ. ಇಷ್ಟು ವಿಶಾಲವಾದ ಪ್ರದೇಶವನ್ನು ಯಾವುದೇ ತರಹದ ವಾಣಿಜ್ಯ ಕೆಲಸಗಳಿಗೆ ಬಳಸದೆ ಕಾರ್ಗಿಲ್‌ ಯೋಧರಿಗಾಗಿ ನೆನಪಿಗಾಗಿ ಮೀಸಲಿಟ್ಟಿರುವುದು ವಿಶೇಷ. ರಕ್ಷಾ ಬಂಧನದಂದು ಕೋವಿಡ್‌-19 ನಿಯಂತ್ರಣೆಗೆ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಕರೆಸಿ ವೃಕ್ಷಗಳಿಗೆ ರಾಖಿ ಕಟ್ಟಿಸಿ ‘ವೃಕ್ಷಾ ಬಂಧನʼ ಎಂಬ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.