21 ದಿನಗಳ ಕೊರೊನಾವೈರಸ್ ಲಾಕ್‌ಡೌನ್ ವಿಸ್ತರಿಸುವ ಯೋಜನೆಯನ್ನು ನಿರಾಕರಿಸಿದ ಸರ್ಕಾರ

ಲಾಕ್‌ಡೌನ್ ಮುಂದುವರೆಸುವ ಸಾಧ್ಯತೆಯಿದೆ ಎಂಬ ವರದಿಗಳು ಮತ್ತು ವದಂತಿಗಳ ಮಧ್ಯೆ 21 ದಿನಗಳ ಕೊರೊನಾವೈರಸ್ ಲಾಕ್‌ಡೌನ್ ವಿಸ್ತರಣೆಯಾಗುವುದಿಲ್ಲ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಟ್ವೀಟ್ ಮಾಡಿದ್ದಾರೆ.

21 ದಿನಗಳ ಕೊರೊನಾವೈರಸ್ ಲಾಕ್‌ಡೌನ್ ವಿಸ್ತರಿಸುವ ಯೋಜನೆಯನ್ನು ನಿರಾಕರಿಸಿದ ಸರ್ಕಾರ

Monday March 30, 2020,

2 min Read

ಮಂಗಳವಾರ ಮಧ್ಯರಾತ್ರಿ ಜಾರಿಗೆ ಬಂದ 21 ದಿನಗಳ ಲಾಕ್‌ಡೌನ್ ಅನ್ನು ವಿಸ್ತರಿಸುವ ಯಾವುದೇ ಯೋಚನೆಯಿಲ್ಲ ಎಂದು ಸರ್ಕಾರ ಸೋಮವಾರ ಹೇಳಿದೆ.


ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಟ್ವೀಟ್ ಮಾಡಿ, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಸರ್ಕಾರವು ಲಾಕ್ ಡೌನ್ ವಿಸ್ತರಿಸುವುದಾಗಿ ಬಿತ್ತರಿಸುತ್ತಿರುವ ಮಾಧ್ಯಮ ವರದಿಗಳನ್ನು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ.



"#ಲಾಕ್‌ಡೌನ್21 ಅವಧಿ ಮುಗಿದಾಗ ಅದನ್ನು ವಿಸ್ತರಿಸಲಾಗುತ್ತದೆ ಎಂಬ ವದಂತಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕ್ಯಾಬಿನೆಟ್ ಕಾರ್ಯದರ್ಶಿ ಈ ವರದಿಗಳನ್ನು ನಿರಾಕರಿಸಿದ್ದಾರೆ ಮತ್ತು ಅವು ಆಧಾರರಹಿತವಾಗಿವೆ," ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.


21 ದಿನಗಳ ಲಾಕ್‌ಡೌನ್ ಕರೋನವೈರಸ್‌ನ ಹರಡುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.


ಲಾಕ್ ಡೌನ್ ನಿಂದ, ದೊಡ್ಡ ನಗರಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರು ನಿರುದ್ಯೋಗಿಗಳಾಗಿ ದಿನಸಿ ಮತ್ತು ವಸತಿಗೃಹಗಳನ್ನು ಪಡೆಯಲು ಸಾಧ್ಯವಾಗದೆ, ಭಾರಿ ಪ್ರಮಾಣದಲ್ಲಿ ದೂರದಲ್ಲಿರುವ ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ.


ಅಂತರರಾಜ್ಯ ಬಸ್ಸುಗಳು ಮತ್ತು ರೈಲ್ವೆಗಳು ಸೇರಿದಂತೆ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆಯನ್ನು ಮುಚ್ಚಿದ ಕಾರಣ, ಅನೇಕರು ಈ ಸುದೀರ್ಘ ಪ್ರಯಾಣವನ್ನು ಕಾಲ್ನಡಿಗೆಯಲ್ಲಿ ಮಾಡುತ್ತಿದ್ದಾರೆ.


ಉತ್ತರಾಖಂಡದಿಂದ ಉತ್ತರ ಪ್ರದೇಶದ ಸಹರಾನ್‌ಪುರದ ತಮ್ಮ ಹಳ್ಳಿಗಳಿಗೆ ನಾಲ್ಕು ದಿನಗಳವರೆಗೆ ಕನಿಷ್ಠ 12 ಪುರುಷರು 200 ಕಿ.ಮೀ.ಗಿಂತ ಹೆಚ್ಚು ದೂರ ಕೆಲವು ಬಿಸ್ಕತ್ತು ಮತ್ತು ಒಂದು ಹೊತ್ತಿನ ಊಟ ಮಾಡುವ ಮೂಲಕ ನಡೆದು ಕ್ರಮಿಸಿದ್ದಾರೆ ಎಂದು ವರದಿಯಾಗಿದೆ.


ಲಾಕ್‌ಡೌನ್‌ನಿಂದುಂಟಾದ ಭೀತಿ ಮತ್ತು ಗೊಂದಲಗಳ ನಡುವೆ ತೆಲಂಗಾಣ ಮತ್ತು ಆಂಧ್ರಪ್ರದೇಶದ ವಲಸೆ ಕಾರ್ಮಿಕರು ತಮ್ಮ ಕುಟುಂಬ ಸದಸ್ಯರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾರೆ. ಚೆನ್ನೈನಲ್ಲಿ ಸುಮಾರು 4,500 ಕಾರ್ಮಿಕರು ಮನೆಗೆ ಮರಳುವ ಪ್ರಯತ್ನದಲ್ಲಿ ರೈಲ್ವೆ ನಿಲ್ದಾಣದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.


ಲಾಕ್‌ಡೌನ್‌ನಿಂದುಂಟಾದ ನಿರುದ್ಯೋಗ ಮತ್ತು ನಗರಗಳಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಭಯವು ಅನೇಕ ಕಾರ್ಮಿಕರನ್ನು ತಮ್ಮ ಹಳ್ಳಿಗಳಿಗೆ ಮರಳಲು ಹತಾಶ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮಾಡಿದೆ.


ಮಾರ್ಚ್ 26 ರಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ವಲಸೆ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರಿಗೆ 1.7 ಲಕ್ಷ ಕೋಟಿ ರೂ.ಗಳ ಆರ್ಥಿಕ ಪರಿಹಾರ ಪ್ಯಾಕೇಜ್ ಘೋಷಿಸಿದರು. ಇದು ಆಹಾರ ಭದ್ರತಾ ಕ್ರಮಗಳು ಮತ್ತು ಮುಂದಿನ ಮೂರು ತಿಂಗಳುಗಳಲ್ಲಿ ಬಡವರಿಗೆ ಇಂತಹ ಸಮಯದಲ್ಲಿ ನೆರವಾಗಲು ನೇರ ನಗದು ವರ್ಗಾವಣೆಯನ್ನು ಒಳಗೊಂಡಿದೆ.


(ವಿಶೇಷ ಸೂಚನೆ: ಪಿಟಿಐ ವರದಿಗೆ ಅಗತ್ಯ ವಿವರಗಳನ್ನು ಸೇರಿಸಲಾಗಿದೆ)