ಹಿಮದಲ್ಲಿಯೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಹೊತ್ತೊಯ್ದ ಭಾರತೀಯ ಸೇನಾಧಿಕಾರಿಗಳು

ಸೇನಾ ದಿನಾಚರಣೆಯಂದು ಕಾಶ್ಮೀರದಲ್ಲಿ ಗರ್ಭಿಣಿ ಮಹಿಳೆಯನ್ನು ಭಾರೀ ಹಿಮದಲ್ಲಿ ಸೇನಾಧಿಕಾರಿಗಳು ಸ್ಟ್ರೆಚರ್ ಮೂಲಕ ಹೊತ್ತೊಯ್ದು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಭಾರತೀಯ ಸೈನ್ಯವು ಪಾತ್ರವಾಗಿದೆ.

ಹಿಮದಲ್ಲಿಯೆ ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಹೊತ್ತೊಯ್ದ ಭಾರತೀಯ ಸೇನಾಧಿಕಾರಿಗಳು

Monday January 20, 2020,

2 min Read

ಸೈನಿಕರು ಎಂದರೆ ಒಂದು ರೀತಿಯ ದೇಶಭಕ್ತಿ. ಗಡಿಯಲ್ಲಿ ಬಿಸಿಲು, ಚಳಿ-ಮಳೆಯೆನ್ನದೆ ಹಗಲು ರಾತ್ರಿ ಗಡಿ ಕಾಯುತ್ತಾ ಸದಾ ನಮ್ಮನ್ನು ರಕ್ಷಿಸುತ್ತಾರೆ. ಅಲ್ಲದೆ ದೇಶದಲ್ಲಿ ಪ್ರವಾಹ, ಭೂಕಂಪ ಏನಾದರೂ ಅಡಚಣೆಗಳು ಸಂಭವಿಸಿದರೆ ಅಲ್ಲಿಯೂ ಕೂಡ ಸೈನಿಕರು ತಮ್ಮ ಸಹಾಯ ಹಸ್ತವನ್ನು ಚಾಚಿರುತ್ತಾರೆ.


ಹೀಗೆ ಸೈನಿಕರು ಗಡಿಯನ್ನಷ್ಟೆ ಕಾಯುವುದಲ್ಲದೆ ಜನರ ಜೊತೆಯಾಗಿಯೂ ನಿಲ್ಲುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿ ಕಾಶ್ಮೀರದಲ್ಲಿ ಮೊನ್ನೆಯ ಸೇನಾ ದಿನಾಚರಣೆಯ ದಿನದಂದು ನಡೆದ ಘಟನೆಯು ಸಾಕ್ಷಿಯಾಗಿದೆ. ಕಾಶ್ಮೀರ ಮೊದಲೇ ಹೇಳಿ ಕೇಳಿ ಹಿಮ ಬೀಳುವ ಪ್ರದೇಶ. ಇಲ್ಲಿ ಯಾರಿಗಾದರೂ ಆರೋಗ್ಯ ಹದಗೆಟ್ಟರೆ ತುಂಬಾ ತ್ರಾಸದಾಯಕವಾಗುತ್ತದೆ. ಇಂಥ ಸಂದರ್ಭದಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸೈನಿಕರು ಅವರನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ.


q

ಇದೇ ತಿಂಗಳು ಹದಿನೈದರ ಸೇನಾ ದಿನಚರಣೆಯ ಸಂದರ್ಭದಲ್ಲಿ, ಭಾರತೀಯ ಸೇನಾಧಿಕಾರಿಗಳು ಗರ್ಭಿಣಿ ಮಹಿಳೆಯನ್ನು ಭಾರೀ ಹಿಮದಲ್ಲಿಯೆ ಸ್ಟ್ರೆಚರ್‌ನಲ್ಲಿ ಕರೆದೊಯ್ಯುವ ವಿಡಿಯೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಇದು ಅತ್ಯಂತ ಹೃದಯಸ್ಪರ್ಶಿಯಾಗಿದೆ.

ಸೈನಿಕರು ಗರ್ಭಿಣಿ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಕರೆದೊಯ್ಯುತ್ತಿರುವ ವಿಡಿಯೋವೊಂದನ್ನು ಭಾರತೀಯ ಸೇನೆಯ ಅಧಿಕೃತ ಖಾತೆಯಾದ ಚಿನಾರ್ ಕಾರ್ಪ್ಸ್‌ ತನ್ನ ಟ್ವಿಟರ್ ಖಾತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.


ಉತ್ತರ ಕಾಶ್ಮೀರದ ಬಾರಾಮುಲ್ಲಾದ ಟ್ಯಾಂಗ್‌ಮಾರ್ಗ್‌ ಪ್ರದೇಶದ ಡಾರ್ಡ್‌ ಪೊರಾ ಗ್ರಾಮದ ನಿವಾಸಿಯಾದ ಶಮೀಮಾ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲು ಮಾಡಬೇಕಿತ್ತು. ಅದಕ್ಕಾಗಿ ಅವರನ್ನು ಸ್ಟ್ರೆಚರ್ ಮೂಲಕ ಹೊತ್ತುಕೊಂಡು 100ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಮತ್ತು 30 ನಾಗರಿಕರು 4 ಗಂಟೆಗಳ ಕಾಲ ಭಾರೀ ಹಿಮದಲ್ಲಿ ನಡೆದಿದ್ದಾರೆ, ವರದಿ ಇಂಡಿಯಾ ಟೈಮ್ಸ್.


ಸೇನಾ ಕಾರ್ಯವನ್ನು ಶ್ಲಾಘಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವಿಡಿಯೋವನ್ನು ಶೇರ್ ಮಾಡಿ, ನಮ್ಮ ಸೈನ್ಯವು ಶೌರ್ಯ ಮತ್ತು ವೃತ್ತಿಪರತೆಗೆ ಹೆಸರುವಾಸಿಯಾಗಿದೆ. ಹಾಗೇ ಮಾನವೀಯ ಮನೋಭಾವವನ್ನು ಹೊಂದಿದೆ. ಜನರಿಗೆ ಸಹಾಯ ಬೇಕಾದಾಗಲೆಲ್ಲ ನಮ್ಮ ಸೈನ್ಯವು ಸಾಧ್ಯವಿರುವ ಎಲ್ಲವನ್ನೂ ಮಾಡಿದೆ! ಇದು ನಮ್ಮ ಸೈನ್ಯದ ಹೆಮ್ಮೆ. ಶಮಿಮಾ ಮತ್ತು ಅವರ ಮಗುವಿನ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ," ಎಂದು ಟ್ವಿಟ್ ಮಾಡಿದ್ದು,‌ ಇದು ವೈರಲ್ ಆಗಿದೆ.

ಸೇನಾಧಿಕಾರಿಗಳ ಪ್ರಕಾರ, ಶಮಿಮಾರವರಿಗೆ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.