ಕ್ವಾರೆಂಟೈನ್‌ ಗೆ ಒಳಪಟ್ಟವರನ್ನು ಆ್ಯಪ್‌ ಮೂಲಕ ನಿಯಂತ್ರಿಸಲು ಮುಂದಾದ ಕರ್ನಾಟಕ ಸರ್ಕಾರ

ಕರ್ನಾಟಕ ಸರ್ಕಾರವು ಕ್ವಾರೆಂಟೈನ್‌ನಲ್ಲಿರುವ ಜನರ ಮೇಲ್ವಿಚಾರಣೆಗಾಗಿ ಹಾಗೂ ಕೊರೊನಾ ವೈರಸ್ ಹರಡುವಿಕೆಯ ಕುರಿತಾಗಿ ತಿಳಿಸಲು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.

ಕ್ವಾರೆಂಟೈನ್‌ ಗೆ ಒಳಪಟ್ಟವರನ್ನು ಆ್ಯಪ್‌ ಮೂಲಕ ನಿಯಂತ್ರಿಸಲು ಮುಂದಾದ ಕರ್ನಾಟಕ ಸರ್ಕಾರ

Monday March 30, 2020,

2 min Read

ಕರ್ನಾಟಕ ಮತ್ತು ತಮಿಳುನಾಡು‌ ರಾಜ್ಯ ಸರ್ಕಾರಗಳು ಕ್ವಾರೆಂಟೈನ್‌ಗೆ ಒಳಪಟ್ಟಿರುವ ಜನರ ಮೇಲ್ವಿಚಾರಣೆಗಾಗಿ ಹಾಗೂ ಅವರ ಸಂಪರ್ಕದಲ್ಲಿರುವವರಿಗೆ ಕೊರೊನ ವೈರಸ್ ಹರಡುವಿಕೆಯ ಕುರಿತಾಗಿ ತಿಳಿಸಲು ಮೊಬೈಲ್ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿವೆ.


ಈ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಗಳು‌ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುತ್ತಿವೆ.


"ನಾವು ಅಪ್ಲಿಕೇಶನ್ ಒಂದನ್ನು ಅಭಿವೃದ್ದಿಪಡಿಸಿದ್ದು, ಅದು‌ ಇನ್ನೆರಡು‌ ದಿನಗಳಲ್ಲಿ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಜನರಿಗೆ ಲಭ್ಯವಾಗಲಿದೆ. ಹೋಮ್ ಕ್ವಾರೆಂಟೈನ್‌ನಲ್ಲಿರುವವರು ಮುಖ್ಯವಾಗಿ ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು, ಅದನ್ನು ಸಾರ್ವಕಾಲಿಕವಾಗಿ ಸಕ್ರಿಯವಾಗಿರಿಸಿಕೊಳ್ಳುವುದು ಅತ್ಯಗತ್ಯವಾಗಿದೆ.‌ ಅದನ್ನು ಅವರು ಅನುಸರಿಸದೇ ಇದ್ದಲ್ಲಿ ಸಾಮೂಹಿಕ ಕ್ವಾರಂಟೈನ್‌ ಅನ್ನು ಜಾರಿಗೆ ತರಲಾಗುತ್ತದೆ," ಎಂದು ಕರ್ನಾಟಕದ ಕೋವಿಡ್-19 ವಾರ್‌ ರೂಂ‌ಮ್ ಕಾರ್ಯದರ್ಶಿ ಮುನೀಶ್ ಮೌಡ್ಗಿಲ್ ಪಿಟಿಐಗೆ ತಿಳಿಸಿದರು.




ಗೂಗಲ್ ಪ್ಲೇ ಸ್ಟೋರಿನಲ್ಲಿರುವ ಕೊರೊನ ವಾಚ್ ಆ್ಯಪ್‌ ಪ್ರಕಾರ, 14 ದಿನಗಳವರೆಗೆ ಕೊರೊನ ವೈರಸ್ ಪೀಡಿತ ರೋಗಿಗಳ ಸ್ಥಳ ಹಾಗೂ ಅವರ ಚಲನೆಯ ಇತಿಹಾಸವನ್ನು ತೋರಿಸುತ್ತದೆ. ಇದನ್ನು ಸಾರ್ವಜನಿಕರು ಪರಿಶೀಲಿಸಬಹುದಾಗಿದೆ.


ಅಪ್ಲಿಕೇಶನ್‌ನಲ್ಲಿರುವ ಇತರ ವ್ಯಕ್ತಿಗಳಿಗೆ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿ‌ ನಿಯಮ ಉಲ್ಲಂಘನೆ ಮಾಡಿದ್ದು ತಿಳಿದರೆ, ಅವರು ಕ್ರಮ ಕೈಗೊಳ್ಳುವಿಕೆಗಾಗಿ ರಾಜ್ಯ ಸರ್ಕಾರವು ಒದಗಿಸಿದ ಸಂಖ್ಯೆಗಳಿಗೆ ಕರೆ‌ ಮಾಡಬಹುದು.


ಕ್ವಾರೆಂಟೈನ್ ಅವಧಿಯಲ್ಲಿರುವ ವ್ಯಕ್ತಿಯು ಅಪ್ಲಿಕೇಶನ್ ಅನ್ನು ಅಳಿಸಿ ಹಾಕಲು ಅಥವಾ ಕುಶಲತೆಯಿಂದ ನಿರ್ವಹಿಸಲು ಸಾಧ್ಯವಿಲ್ಲ‌. ಏಕೆಂದರೆ ರಾಜ್ಯ ಸರ್ಕಾರವು ಅದರ ಮೇಲೆ ನಿರಂತರವಾಗಿ ನಿಗಾ ಇಟ್ಟಿದೆ ಎಂದು ಮೌಡ್ಗಿಲ್ ಹೇಳಿದರು.


"ಕ್ವಾರೆಂಟೈನ್‌ನಲ್ಲಿರುವ ಎಲ್ಲ ಜನರ ವಿವರಗಳನ್ನು ನಾವು ಹೊಂದಿದ್ದೇವೆ. ಇಲ್ಲಿ ವ್ಯಕ್ತಿಯು ಪ್ರತಿದಿನವು ತನ್ನ ಫೋಟೋವನ್ನು ತೆಗದು ಸಲ್ಲಿಸಬೇಕು. ಅಪ್ಲಿಕೇಶನ್ ಡೌನಲೋಡ್ ಆದ ನಂತರ ಅವರಿಗೆ ಸಂದೇಶವೊಂದನ್ನು ಕಳುಹಿಸಲಾಗುತ್ತದೆ. ಇಲ್ಲಿ‌ ಸಲ್ಲಿಸುವ ಫೋಟೋಗಳನ್ನು ಪರಿಶೀಲಿಸಲು ಸಮರ್ಥ ತಂಡವಿದೆ," ಎಂದು ಅವರು ಹೇಳುತ್ತಾರೆ.


ಕರ್ನಾಟಕ ಸರ್ಕಾರವು ಸೋಂಕು ದೃಢಪಟ್ಟಿರುವ ವ್ಯಕ್ತಿಯ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕಕ್ಕೆ ಬಂದ ವ್ಯಕ್ತಿಗಳನ್ನು ಕ್ವಾರಂಟೈನ್‌ಗೆ ಒಳಪಡಿಸಲು ವಿವರಗಳನ್ನು ಸಂಗ್ರಹಿಸುತ್ತಿದೆ.


"ಈ ಸಂಖ್ಯೆ ಪ್ರತಿದಿನವೂ ಬದಲಾಗುತ್ತಲೇ ಇರುತ್ತದೆ. ಈ ದಿನದವರೆಗೂ, ರಾಜ್ಯದಾದ್ಯಂತ ಸುಮಾರು 20,000 ಜನರು ಹೋಂ ಕ್ವಾರೆಂಟೈನ್‌ನಲ್ಲಿದ್ದಾರೆ," ಎಂದು ಮೌಡ್ಗಿಲ್ ಹೇಳಿದರು.


ತಮಿಳುನಾಡು ಸರ್ಕಾರವು ಕೂಡ ಇದೇ ಮಾದರಿಯಲ್ಲಿಯೇ ಕೋವಿಡ್-19 ಕ್ವಾರಂಟೈನ್ ಮಾನಿಟರ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ.


ಜನವರಿ 18 ರಿಂದ ಮಾರ್ಚ್ 23ರವರೆಗೆ ಆಗಮಿಸಿದ 15 ಲಕ್ಷ ಅಂತರ ರಾಷ್ಟೀಯ ವಿಮಾನ ಪ್ರಯಾಣಿಕರನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುವಂತೆ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಶುಕ್ರವಾರ ಎಲ್ಲಾ ರಾಜ್ಯಗಳಿಗೂ ಕೋರಿದ್ದಾರೆ. ಕೋವಿಡ್-19ನ ನಿಜವಾದ ಮೇಲ್ವಿಚಾರಣೆ ಮತ್ತು ಒಟ್ಟು ಆಗಮನದ ನಡುವೆ ಅಂತರವಿದೆ ಎಂದು ಅವರು ಹೇಳುತ್ತಾರೆ.


ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಗೌಬಾ, ಅಂತರರಾಷ್ಟ್ರೀಯ ಪ್ರಯಾಣಿಕರ ಮೇಲ್ವಿಚಾರಣೆಯಲ್ಲಿನ ಇಂತಹ ಅಂತರವು ನೊವೆಲ್ ಕೊರೊನ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನವನ್ನು ಗಂಭೀರ ಅಪಾಯಕ್ಕೆ ತಳ್ಳಬಹುದು. ಈವರೆಗೆ ಸೋಂಕು ದೃಢಪಟ್ಟ ಅನೇಕರು ಭಾರತಕ್ಕೆ ಪ್ರಯಾಣಿಸಿದ ಅಂತರರಾಷ್ಟ್ರೀಯ ಪ್ರಯಾಣದ ಇತಿಹಾಸವಿದೆ," ಎಂದಿದ್ದಾರೆ.


ಕೇರಳ ಮತ್ತು ಪಂಜಾಬ್‌ನಂತಹ ಇತರೆ ಕೆಲವು ರಾಜ್ಯ ಸರ್ಕಾರಗಳು ಕೊರೊನ ವೈರಸ್ ಸಂತ್ರಸ್ತರಿಗೆ, ಸಲಹೆ ನೀಡಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ನೀಡುವುದಕ್ಕಾಗಿ ಒದಗಿಸುವ ಸೇವೆಗಳಿಗಾಗಿ ಜನರಿಗೆ ತಿಳಿಸಲು ಅಪ್ಲಿಕೇಶನ್ ಅನ್ನು ಅಭಿವೃದ್ಧಿ ಪಡಿಸಿವೆ.


ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಕೊರೊನ ವೈರಸ್ ರೋಗಿಗಳನ್ನು ಮೇಲ್ವಿಚಾರಣೆ ಮಾಡಲು ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದು ಅವರ ಚಿಕಿತ್ಸೆಯ ಮತ್ತು‌ ನಂತರದ ಸ್ಥಿತಿಯ ಬಗ್ಗೆ ಪ್ರತಿಕ್ರಿಯೆ ನೀಡುವ ಕುರಿತಾಗಿದೆ. ಈ ಅಪ್ಲಿಕೇಶನ್‌ನ ಔಪಚಾರಿಕ ಬಿಡುಗಡೆಯ ನಂತರ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.


ಮೈಟಿಯ ಮೈಗವರ್ನಮೆಂಟ್ ವಿಭಾಗವು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ನಲ್ಲಿ ಮಾಹಿತಿಯನ್ನು ಹಂಚುತ್ತಿದೆ. ಪ್ರಸ್ತುತ ತ್ವರಿತ ಮೇಸೆಜಿಂಗ್ ಆ್ಯಪ್ ಆದ ಟೆಲಿಗ್ರಾಂನಲ್ಲಿ ಚಾನಲ್ ಅನ್ನು ಪ್ರಾರಂಭಿಸಿದದ್ದು ಅಲ್ಲಿ ಎಷ್ಟು ಜನರು ಬೇಕಾದರು ಸೇರಬಹುದಾಗಿದೆ.