ಭಾರತದ ಮೊದಲ ಹಸಿವುಮುಕ್ತ ಜಿಲ್ಲೆಯಾಗುತ್ತಿರುವ ಕೊಟ್ಟಾಯಮ್

ಕೊಟ್ಟಾಯಮ್ ನ ಸ್ವಯಂ ಸೇವಾ ಸಂಸ್ಥೆಗಳು ಪ್ರತಿದಿನ ಸುಮಾರು 8,000 ಜನರಿಗೆ ಊಟವನ್ನು ಒದಗಿಸುತ್ತವೆ. ಈ ಜಿಲ್ಲೆ ಸದ್ಯದಲ್ಲಿಯೇ ಭಾರತದ ಮೊದಲ ಹಸಿವುಮುಕ್ತ ಜಿಲ್ಲೆಯಾಗಲಿದೆ.

ಭಾರತದ ಮೊದಲ ಹಸಿವುಮುಕ್ತ ಜಿಲ್ಲೆಯಾಗುತ್ತಿರುವ ಕೊಟ್ಟಾಯಮ್

Tuesday September 10, 2019,

2 min Read

20 ಸ್ವಯಂ ಸೇವಕ ತಂಡಗಳು ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು ಮತ್ತು ಇತರ ಸರ್ಕಾರಿ ಆಸ್ಪತ್ರೆಗಳ ರೋಗಿಗಳಿಗೆ ಊಟವನ್ನು ನೀಡುತ್ತವೆ.


ನವಜೀವನ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆ, ವೈದ್ಯಕೀಯ ಕಾಲೇಜು ಆಸ್ಪತ್ರೆ, ಮಕ್ಕಳ ಆಸ್ಪತ್ರೆ, ಕೊಟ್ಟಾಯಮ್ ಸಾರ್ವಜನಿಕ ಆಸ್ಪತ್ರೆ, ಸರ್ಕಾರಿ ಆಯುರ್ವೇದ ಆಸ್ಪತ್ರೆ ಮತ್ತು ಹೋಮಿಯೋಪತಿ ಆಸ್ಪತ್ರೆಗಳ ಸುಮಾರು 5,000 ರೋಗಿಗಳಿಗೆ ಪ್ರತಿದಿನ ಊಟವನ್ನು ನೀಡುತ್ತಿದೆ.


ರೆಡ್ ಕ್ರಾಸ್ ಸಂಸ್ಥೆಯ ಸ್ವಯಂ ಸೇವಕರು ಹಸಿದ ನಿರಾಶ್ರಿತರಿಗೆ ಊಟ ಬಡಿಸುತ್ತಿರುವುದು. (ಚಿತ್ರಕೃಪೆ: ಫೇಸ್ ಬುಕ್)


ಸ್ವಯಂ ಸೇವಕ ತಂಡಗಳೇ ಅಲ್ಲದೆ ನಿರಾಶ್ರಿತರಿಗೆ ಊಟ ಒದಗಿಸುವ ಇತರ ಹಲವಾರು ಸಂಸ್ಥೆಗಳಿವೆ. ಇದಕ್ಕೆ ನಿದರ್ಶನವಾಗಿ ಸ್ಥಳೀಯ ರೆಡ್ ಕ್ರಾಸ್ ಸಂಸ್ಥೆ ಮಧ್ಯಾಹ್ನ 1 ರಿಂದ 2 ಗಂಟೆಯ ಅವಧಿಯಲ್ಲಿ ಉಚಿತವಾಗಿ ಊಟವನ್ನು ನೀಡುತ್ತದೆ. ವಾಯಸುಕರಕುಣ್ಣುವಿನ ಪಾಕಲವೀಡು (ದೈನಂದಿನ ಆರೈಕೆ ಕೇಂದ್ರ) ನಲ್ಲಿ ಪ್ರತಿದಿನ ಸುಮಾರು 100 ಜನರಿಗೆ ಉಚಿತವಾಗಿ ಊಟವನ್ನು ಒದಗಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.


ಈ ಎಲ್ಲಾ ಸ್ಥಳಗಳಲ್ಲಿನ ಸ್ವಯಂ ಸೇವಾ ಕೆಲಸಗಳ ಜೊತೆಯಲ್ಲಿ ಕೊಟ್ಟಾಯಮ್ ನಿಂದ 20 ಕಿಲೋ ಮೀಟರ್ ದೂರದಲ್ಲಿರುವ ಪಾಲ ಎಂಬ ಸ್ಥಳದಲ್ಲಿ ಅಲ್ಲಿನ ಜನರಿಗಾಗಿ ಹಸಿವುಮುಕ್ತ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.


ಸ್ಥಳಿಯ ಜನರೂ ಕೂಡ ಒಂದು ಫೇಸ್ ಬುಕ್ ತಂಡವನ್ನು ರಚಿಸಿಕೊಂಡು ಈ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸುತಿದ್ದಾರೆ. ಈ ತಂಡವು ಚಂಗನಚೆರ್ರಿ ನಗರದಲ್ಲಿ ಸುಮಾರು 15 ಜನ ಹಸಿದ ನಿರಾಶ್ರಿತರಿಗೆ ಊಟವನ್ನು ಒದಗಿಸುತ್ತಿದೆ. ಅಲ್ಲದೆ ಹಸಿದ ನಿರಾಶ್ರಿತರಿಗಾಗಿ ಮೀಸಲಾಗಿರುವ ಊಟದ ಡಬ್ಬಿಗಳಲ್ಲಿ ಊಟವನ್ನು ತುಂಬಿಸಿಡಲಾಗುತ್ತದೆ ಎಂದು ದಿ ಬೆಟರ್ ಇಂಡಿಯಾ ವರದಿ ಮಾಡಿದೆ.


ನಗರದಲ್ಲಿರುವ ಪಡಿತರ ಅಂಗಡಿಗಳು, ಸರ್ಕಾರವು ನಿಗದಿಪಡಿಸಿರುವ ಆಹಾರ ಧಾನ್ಯಗಳನ್ನು ಆದಿವಾಸಿ ಸಮುದಾಯಗಳಿಗೆ ನಿಯಮಿತವಾಗಿ ತಲುಪಿಸುತ್ತವೆ. ಕೊಟ್ಟಾಯಮ್ಮಿನ 241 ನಿವಾಸಿಗಳಿಗೆ ಪ್ರತಿದಿನ ಆಹಾರ ನೀಡಲಾಗುತ್ತಿದೆ.


ಇದಲ್ಲದೆ ಕೊಟ್ಟಾಯಮ್ ಮತ್ತು ಚಂಗನಚೆರ್ರಿ ಪಟ್ಟಣಗಳಲ್ಲಿರುವ ಅಂಜಪ್ಪಮ್ ಭೋಜನಶಾಲೆಗಳಲ್ಲಿ ಜನರು ಮೊದಲು ಊಟ ಮಾಡಿ ನಂತರ ತಮ್ಮ ಕೈಲಾದಷ್ಟು ಹಣವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಸೋಷಿಯಲ್ ಆಕ್ಟೀವ್ ಫ್ರೆಂಡ್ಸ್ (ಎಸ್ ಎ ಎಫ್) ಎಂಬ ಲಾಭರಹಿತ ಸ್ಥಳೀಯ ಸಂಘವೂ ಕೂಡ ಬಡವರಿಗೆ ಉಚಿತ ಊಟವನ್ನು ಪೂರೈಸುತ್ತದೆ.


ಜನರು ಒಟ್ಟುಗೂಡಿದರೆ ಒಂದು ಸಾಮಾಜಿಕ ಸಮಸ್ಯೆಯನ್ನು ಹೇಗೆ ಪರಿಹರಿಸಬಹುದು ಎಂಬುದಕ್ಕೆ ಕೊಟ್ಟಾಯಮ್ ನಗರವು ಅನುಕರಣೀಯ ಉದಾಹರಣೆಯಾಗಿದೆ.