30 ವರ್ಷದಿಂದ ಏಕಾಂಗಿಯಾಗಿ 3 ಕಿ.ಮೀ. ಉದ್ದದ ಕಾಲುವೆ ತೋಡಿದ ಲೌಂಗಿ ಭುಯಾನ್‌

ಮಳೆಗಾಲದಲ್ಲಿ ಬೆಟ್ಟದಿಂದ ಹರಿದು ಬರುತ್ತಿದ್ದ ನೀರು ನದಿ ಸೇರಿ ವ್ಯರ್ಥವಾಗುತ್ತಿರುವುದನ್ನು ಗಮನಿಸಿದ ಭುಯಾನ್‌, 3 ಕಿ.ಮೀ ಉದ್ದದ ಕಾಲುವೆ ತೋಡಿ ಅದನ್ನು ವ್ಯವಸಾಯಕ್ಕೆ ಉಪಯೋಗಿಸಿಕೊಳ್ಳುವಂತೆ ಮಾಡಿದ್ದಾರೆ.

30 ವರ್ಷದಿಂದ ಏಕಾಂಗಿಯಾಗಿ 3 ಕಿ.ಮೀ. ಉದ್ದದ ಕಾಲುವೆ ತೋಡಿದ ಲೌಂಗಿ ಭುಯಾನ್‌

Monday September 14, 2020,

1 min Read

ಮಳೆಗಾಲದಲ್ಲಿ ಬರುವ ನೀರನ್ನು ಜಾಣ್ಮೆಯಿಂದ ಸಂಗ್ರಹಿಸಿಟ್ಟರೆ ಬಾವಿ ಕೊರೆಯಿಸಿ ಅಂತರ್ಜಲವನ್ನು ಹೀರಿಕೊಳ್ಳದೆ ವರ್ಷ ಪೂರ್ತಿ ಆರಾಮಾಗಿ ಕೃಷಿ ಮಾಡಬಹುದು. ಆದರೆ ಬಹುಪಾಲು ಮಳೆ ನೀರು ನದಿಯನ್ನು ಸೇರಿ ವ್ಯರ್ಥವಾಗುವ ಸಂಭವವೇ ಹೆಚ್ಚು. ಇಂತಹ ಸಂದರ್ಭದಲ್ಲಿ ಮಳೆನೀರನ್ನು ಕೃಷಿಗೆ ಬಳಕೆಯಾಗುವಂತೆ ಮಾಡಿ ತಮ್ಮ ಅದ್ಭುತ ಕೆಲಸದಿಂದ ಸುದ್ದಿಯಲ್ಲಿದ್ದಾರೆ ಬಿಹಾರನ ಗಯಾ ಜಿಲ್ಲೆಯ ಲೌಂಗಿ ಭುಯಾನ್‌ ಎನ್ನುವ ಹಿರಿಯರು.


ಬಿಹಾರನ ಗಯಾ ಜಿಲ್ಲೆಯ ಲಹತುವಾ ಪ್ರದೇಶದ ಕೋಠಿಲವಾ ಪ್ರದೇಶದವರಾದ ಇವರು ಹತ್ತಿರದ ಗುಡ್ಡಗಳಿಂದ ಹರಿದುಬರುತ್ತಿದ್ದ ಮಳೆ ನೀರನ್ನು ಹೊಲಗಳಿಗೆ ಉಪಯೋಗಿಸಲು ಅನುಕೂಲವಾಗಲು ಮೂರು ಕಿ.ಮೀ. ಉದ್ದದ ಕಾಲುವೆಯನ್ನು ತೋಡಿದ್ದಾರೆ.

ಡ

ಚಿತ್ರಕೃಪೆ: ಎಎನ್‌ಐ

“ಈ ಕಾಲುವೆ ತೊಡಲು ನನಗೆ 30 ವರ್ಷ ಬೇಕಾಯಿತು, ಇದು ನೀರನ್ನು ಹಳ್ಳಿಯಲ್ಲಿರುವ ಕೆರೆಗಳಿಗೆ ಹರಿಸುತ್ತದೆ,” ಎಂದು ಲೌಂಗಿ ಭುಯಾನ್‌ ಎಎನ್‌ಐ ಗೆ ಹೇಳಿದರು.


3 ಕಿ. ಮೀ. ಉದ್ದದ ಈ ಕಾಲುವೆಯನ್ನು 30 ವರ್ಷಗಳಷ್ಟು ಸಮಯ ತೆಗೆದುಕೊಂಡು ಲೌಂಗಿಯವರು ಒಬ್ಬರೆ ತೋಡಿರುವುದು ಆಶ್ಚರ್ಯ ಮೂಡಿಸುತ್ತದೆ.

“30 ವರ್ಷಗಳಿಂದ ಜಾನುವಾರಗಳನ್ನು ಕಾಡಿಗೆ ಮೇಯಿಸಲು ಕರೆದುಕೊಂಡು ಹೋಗಿ ನಾನು ಕಾಲುವೆ ತೋಡುತ್ತಿದ್ದೆ. ಈ ಕೆಲಸದಲ್ಲಿ ನನಗೆ ಯಾರು ಜತೆಯಾಗಿಲ್ಲ. ಜೀವನ ನಡೆಸಲು ಹಳ್ಳಿಗರು ಪಟ್ಟಣಕ್ಕೆ ಹೋದರೆ ನಾನು ಇಲ್ಲೆ ಇರಲು ನಿರ್ಧರಿಸಿದೆ,” ಎಂದರು ಅವರು.


ಇವರ ಕೆಲಸದ ಬಗ್ಗೆ ಅಲ್ಲಿನ ಸ್ಥಳೀಯರೊಬ್ಬರು ಮಾತನಾಡುತ್ತಾ,

“30 ವರ್ಷಗಳಿಂದ ಏಕಾಂಗಿಯಾಗಿ ಅವರು ಈ ಕಾಲುವೆ ತೋಡುತ್ತಿದ್ದಾರೆ. ಇದು ಹಲವಾರು ಪ್ರಾಣಿಗಳಿಗೂ ಮತ್ತು ಹೊಲಗಳಿಗೂ ಕೃಷಿ ಮಾಡಲು ಸಹಾಯ ಮಾಡುತ್ತದೆ. ಇದನ್ನು ಅವರು ತಮ್ಮ ಸ್ವಂತ ಅನುಕೂಲಕ್ಕಾಗಿ ಮಾಡದೆ, ಇಡೀ ಪ್ರದೇಶದ ಜನರಿಗೆ ಇದರ ಪ್ರಯೋಜನ ಸಿಗಲೆಂದು ಮಾಡುತ್ತಿದ್ದಾರೆ,” ಎಂದರು, ವರದಿ, ಎನ್‌ಡಿಟಿವಿ.