ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಲಂಬ ಉದ್ಯಾನ ಸೃಷ್ಟಿಸಿದ ಪಂಜಾಬ್‌ ಮೂಲದ ಅರಣ್ಯಾಧಿಕಾರಿ

ಲುಧಿಯಾನದ ಅರಣ್ಯಾಧಿಕಾರಿ ರೋಹಿತ್‌ ಮೇಹ್ರಾ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ವಿವಿಧ ಸಾರ್ವಜಿನಿಕ ಸ್ಥಳಗಳಲ್ಲಿ 500 ಕ್ಕೂ ಅಧಿಕ ಲಂಬ ಉದ್ಯಾನವನಗಳನ್ನು ಸ್ಥಾಪಿಸಿದ್ದಾರೆ.

ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳಿಂದ ಲಂಬ ಉದ್ಯಾನ ಸೃಷ್ಟಿಸಿದ ಪಂಜಾಬ್‌ ಮೂಲದ ಅರಣ್ಯಾಧಿಕಾರಿ

Tuesday December 22, 2020,

2 min Read

ಭಾರತದ ನಗರಗಳ ವಾಯು ಗುಣಮಟ್ಟ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಸಮಯದಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಬೇಕಿರುವುದು ಅನಿವಾರ್ಯವಾಗಿದೆ. ಹಲವು ಜನರು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅವರಲ್ಲಿ ಪಂಜಾಬ್‌ನ ಆದಾಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ರೋಹಿತ್‌ ಮೇಹ್ರಾ ಕೂಡಾ ಒಬ್ಬರು.


ರೋಹಿತ್‌ ಬರೋಬ್ಬರಿ 70 ಟನ್‌ ಬಿಸಾಡಿದ ಪ್ಲಾಸ್ಟಿಕ್‌ ಬಾಟಲಿಗಳನ್ನು ಕುಂಡಗಳಾಗಿ ಬಳಸಿಕೊಂಡು ಪಂಜಾಬ್‌ನ ಲುಧಿಯಾನದಲ್ಲಿ ಲಂಬ ಉದ್ಯಾನವನ್ನು ಸ್ಥಾಪಿಸಿದ್ದಾರೆ. ಅವರು ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತಿರುವ ಜತಜತೆಗೆ ತಮ್ಮ ವಿಭಿನ್ನ ಪ್ರಯತ್ನದಿಂದ ಏಕ ಬಳಕೆಯ ಪ್ಲಾಸ್ಟಿಕ್‌ ಅನ್ನು ಮರುಬಳಕೆ ಮಾಡುತ್ತಿದ್ದಾರೆ.


ರವಿವಾರ ಎಎನ್‌ಐನೊಂದಿಗೆ ಮಾತನಾಡಿದ ರೋಹಿತ್ 70 ಟನ್‌ ಪ್ಲಾಸ್ಟಿಕ್‌ ಬಾಟಲಿಗಳನ್ನು ಗಿಡ ನೆಡಲು ಕುಂಡಗಳಾಗಿ ಬಳಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ 500 ಕ್ಕೂ ಅಧಿಕ ಲಂಬ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಎಂದರು.

ಹೇಗೆ ಈ ಯೋಚನೆ ನಿಮಗೆ ಹೊಳೆಯಿತು ಎಂದು ಕೇಳಿದಾಗ ಅವರು, “ನಾಲ್ಕು ವರ್ಷದ ಹಿಂದೆ ಹೆಚ್ಚಿದ ವಾಯು ಮಾಲಿನ್ಯದಿಂದ ಶಾಲೆಗೆ ರಜೆ ನೀಡಲಾಗಿದೆ ಎಂದು ನನ್ನ ಮಗ ಹೇಳಿದ. ಇದು ನನ್ನನ್ನು ಚಿಂತೆಗೀಡು ಮಾಡಿತು, ನಮ್ಮ ಮಕ್ಕಳಿಗೆ ಸ್ವಚ್ಛಗಾಳಿಯನ್ನು ನಾವು ನೀಡಲಾಗದೆ? ಅಲ್ಲಿಂದ ಎಲ್ಲ ಆರಂಭವಾಯಿತು,” ಎಂದರು.


ನಗರದ ಶಾಲಾ-ಕಾಲೇಜು, ಪೊಲೀಸ್‌ ಠಾಣೆ, ಸರ್ಕಾರಿ ಕಚೇರಿ, ಗುರುದ್ವಾರ ಮತ್ತು ರೈಲು ನಿಲ್ದಾಣ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿ ಉದ್ಯಾನವನ್ನು ನಿರ್ಮಿಸಿದ್ದಾರೆ. ಮರುಬಳಕೆ ಮಾಡಿ ನಿರ್ಮಿಸಿದ ಈ ಹಸಿರುಗೋಡೆ ಮಾಲಿನ್ಯವನ್ನು ತಡೆಗಟ್ಟುವುದಲ್ಲದೆ ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿದೆ.


ಉದ್ಯಾನಕ್ಕೆ ಹನಿ ನೀರಾವರಿ ತಂತ್ರವನ್ನು ಅಳವಡಿಸಲಾಗಿದ್ದು, ಗಿಡಗಳಿಗೆ ಸಮಯಕ್ಕೆ ತಕ್ಕಂತೆ ನೀರು ಸಿಗುತ್ತದೆ.


ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ಪ್ರಕಾರ ಈ ಹೊಸ ಲಂಬ ಉದ್ಯಾನಗಳು ಅಗ್ಗವಾಗಿದ್ದು, ಜತೆಗೆ ಸಣ್ಣ ಜಾಗವನ್ನಷ್ಟೆ ಆಕ್ರಮಿಸಿಕೊಳ್ಳುತ್ತವೆ. ಪ್ಲಾಸ್ಟಿಕ್‌ ಬಾಟಲಿಗಳನ್ನೆ ಗಿಡನೆಡಲು ಬಳಸಿರುವುದರಿಂದ ಪರಿಸರಕ್ಕೂ ಭಾರ ಕಡಿಮೆಯಾಗುತ್ತದೆ ಎನ್ನುತ್ತಾರೆ ರೋಹಿತ್‌.


ಉದ್ಯಾನದಲ್ಲಿ ಅಳವಡಿಸಲಾಗಿರುವ ಹನಿ ನೀರಾವರಿಯಿಂದ ಶೇ. 92 ರಷ್ಟು ನೀರು ಉಳಿತಾಯಗೊಳ್ಳುತ್ತದೆ ಎಂದು ಅವರು ತಿಳಿಸಿದರು.


ವಾಯು ಗುನಮಟ್ಟವನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ಮಾತನಾಡಿದ ರೋಹಿತ್‌, “ಪಂಜಾಬ್‌ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಯೊಬ್ಬರು ಲಂಬ ಉದ್ಯಾನಗಳಿರುವ ಪ್ರದೇಶಗಳ ಮೇಲೆ ಅಭ್ಯಾಸ ಮಾಡಿ ನಗರದ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ ಈ ಪ್ರದೇಶಗಳ ವಾಯು ಮಾಲಿನ್ಯದಲ್ಲಿ ಶೇ. 75ರಷ್ಟು ಇಳಿಕೆಯಾಗಿದೆ ಎಂದು ಕಂಡುಕೊಂಡಿದ್ದಾರೆ,” ಎಂದರು.