ಹಳೆ ಟಿವಿಯಿಂದ ನಾಯಿಗಾಗಿ ಮನೆ ನಿರ್ಮಿಸಿದ ಅಸ್ಸಾಂನ ಯುವಕ

ಸ್ಥಳೀಯರಲ್ಲಿ ಕ್ರಿಯಾಶೀಲ ಯುವಕರೆಂದೆ ಪ್ರಖ್ಯಾತಿ ಹೊಂದಿರುವ ಅಭಿಜಿತ್‌ ದೊವಾರಾಹ್‌ ಚಳಿಯಿಂದ ತಪ್ಪಿಸಿಕೊಳ್ಳಲು ನಾಯಿಗಳಿಗಾಗಿ ಮನೆಯೊಂದನ್ನು ನಿರ್ಮಿಸಿದ್ದಾರೆ.

ಹಳೆ ಟಿವಿಯಿಂದ ನಾಯಿಗಾಗಿ ಮನೆ ನಿರ್ಮಿಸಿದ ಅಸ್ಸಾಂನ ಯುವಕ

Tuesday December 15, 2020,

2 min Read

ಭಾರತದ ರಸ್ತೆಗಳಲ್ಲಿ ಬೀದಿ ನಾಯಿಗಳು ಕಾಣಸಿಗುವುದು ಸಾಮಾನ್ಯದ ಸಂಗತಿ. ನೀರು, ಆಹಾರ ಹುಡುಕುವುದು ಮತ್ತು ಕಠಿಣ ಹವಾಮಾನದಿಂದ ರಕ್ಷಣೆ ಪಡೆಯುವುದರಲ್ಲಿಯೆ ಅವುಗಳು ದಿನಗಳೆಯುತ್ತವೆ.


ಈ ಪ್ರಾಣಿಗಳಿಗೂ ಹಲವು ಜೀವಗಳು ಮಿಡಿದು ಆಹಾರ, ನೀರು ನೀಡುವುದು ಒಳ್ಳೆಯ ಬೆಳವಣಿಗೆಯಾದರೆ ಅಸ್ಸಾಂನ ಶಿವಸಾಗರದ ನಿವಾಸಿ ಮಾಡಿರುವ ಕಾರ್ಯ ಶ್ಲಾಘನೀಯ. ಚಳಿಗಾಲವಿರುವುದರಿಂದ 32 ರ ಅಭಿಜಿತ್‌ ದೊವಾರಾಹ್‌ ಹಳೆ ಟಿವಿಗಳನ್ನು ಬಳಸಿಕೊಂಡು ನಾಯಿಗಳಿಗಾಗಿ ಸಣ್ಣ ಮನೆ ನಿರ್ಮಿಸುತ್ತಿದ್ದಾರೆ.


“ಸಾಕುನಾಯಿಗಳಿಗೆ ಎಲ್ಲ ಸವಲತ್ತುಗಳು ಸಿಗುತ್ತವೆ ಆದರೆ ಬೀದಿ ನಾಯಿಗಳಿಗೆ ಆಹಾರ, ಮನೆಯು ಇರುವುದಿಲ್ಲ. ಅವುಗಳಿಗಾಗಿ ನನ್ನ ಕೈಲಾದ ಸಹಾಯ ಮಾಡಲು ಬಯಸಿದೆ. ಹಾಗೆ ನಾಯಿಗಳಿಗೆ ಮನೆ ನಿರ್ಮಿಸಿದೆ,” ಎಂದು ನಾಯಿ ಮನೆಯ ನಿರ್ಮಾತೃ ಅಭಿಜಿತ್‌ ದೊವಾರಾಹ್‌ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಈ ಮನೆಯ ಹೆಸರು ‘ಬಾತೋರ್‌ ಘರ್‌ʼ(ಬೀದಿ ಮನೆ), ಇದನ್ನು ಉಪ ಆಯುಕ್ತ ಅಲ್‌ ಅಝರ್‌ ಅಲಿ ಉದ್ಘಾಟಿಸಿದ್ದಾರೆ. ಅವರು ಇದೊಂದು ಒಳ್ಳೆಯ ಕೆಲಸ ಎಂದಿದ್ದಾರೆ. “ನಾವು ನಿಸರ್ಗವನ್ನು ಪ್ರೀತಿಸಿದರೆ ದೇವರು ನಮ್ಮನ್ನು ಪ್ರೀತಿಸುತ್ತಾನೆಂದು ಹೇಳಿದ್ದಾರೆ. ಇದೊಂದು ಅದ್ಭುತ ಅನುಭವ, ನಾವೆಲ್ಲರು ಇಂತಹವನ್ನು ಪ್ರಚಾರ ಮಾಡಬೇಕು,” ಎಂದು ಅಲ್‌ ಅಝರ್‌ ಅಲಿ ಈಸ್ಟ್‌ಮೋಜೊಗೆ ಹೇಳಿದರು.


ನಾಯಿಗಳು ಹೇಗೆ ಬದುಕುತ್ತವೆ ಎಂದು ಹಲವು ರಾತ್ರಿ ಗಮನಿಸಿದ ನಂತರ ಸೃಷ್ಟಿಯಾಗಿದ್ದೆ ನಾಯಿ ಮನೆ. ಅಭಿಜಿತ್‌ ಅವರ ಈ ಕೆಲಸವನ್ನು ನೋಡಿದ ನಂತರ ಹಲವರು ಸಹಾಯಕ್ಕೆ ಮುಂದಾಗಿದ್ದಾರೆ. ಈ ಮನೆಗಳಿಗೆ ಹಸಿರು ಮತ್ತು ಹಳದಿ ಬಣ್ಣ ಬಳೆಯಲಾಗಿದೆ, ಅವರ ಪ್ರಕಾರ ಹಸಿರು ನಿಸರ್ಗವನ್ನು ಬಿಂಬಿಸಿದರೆ, ಹಳದಿ ವಾಹನಗಳು ಸುಲಭವಾಗಿ ಗಮನಿಸಲು ಸಹಾಯಮಾಡುತ್ತದೆ.

ಅಭಿಜಿತ್‌ ದೊವಾರಾಹ್‌ ಮತ್ತು ಅವರು ನಿರ್ಮಿಸಿದ ನಾಯಿ ಮನೆ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಕೆಟ್ಟುಹೋದ ಹಳೆಯ ವಸ್ತುಗಳನ್ನು ಉಪಯೋಗಿ ವಸ್ತುಗಳನ್ನಾಗಿಸುವ ಅಭಿಜಿತ್‌ ಸ್ಥಳೀಯರಲ್ಲಿ ಕ್ರಿಯಾಶೀಲರೆಂದೆ ಪ್ರಸಿದ್ಧಿಯಾಗಿದ್ದಾರೆ.


ಈ ಮೊದಲು ಅವರು ಮಹಿಳೆಯರ ಸುರಕ್ಷತೆಗಾಗಿ ಟಾರ್ಚ್‌ ಮತ್ತು ಕೊರೊನಾ ಸಮಯದಲ್ಲಿ ಸ್ಯಾನಿಟೈಷನ್‌ಗಾಗಿ ಸಾಧನವೊಂದನ್ನು ತಯಾರಿಸಿದ್ದರು.

“ಕಳೆದ ಐದು ವರ್ಷಗಳಲ್ಲಿ ಹಳೆ ವಸ್ತುಗಳಿಂದ ನಾನು 50 ಸಾಧನಗಳನ್ನು ತಯಾರಿಸಿದ್ದೇನೆ. ಹಾಗಾಗಿ ಜನ ಬಳಸದ ಹಳೆ ವಸ್ತುಗಳನ್ನು ಎಸೆಯದೆ ನನಗೆ ನೀಡುತ್ತಾರೆ. ಶಿವಸಾಗರದ ಫುಕಾನ ನಗರದ ನನ್ನ ಎರಡು ಕೋಣೆಯ ಮನೆಯಲ್ಲಿ 7 ಟಿವಿ ಸೆಟ್‌ಗಳಿದ್ದವು. ನಾಯಿಗಳಿಗೆ ಚಳಿಯಿಂದ ರಕ್ಷಣೆ ಪಡೆಯಲು ಇವುಗಳನ್ನು ಬಳಸಿಕೊಳ್ಳಬಹುದೆ ಎಂದು ಯೋಚಿಸಿದೆ,” ಎನ್ನುತ್ತಾರವರು.