ಬಡ ಮಕ್ಕಳಿಗಾಗಿ ಶಿಕ್ಷಕನಾದ ರೈಲ್ವೆ ಪೊಲೀಸ್‌ ಪೇದೆ

ತಮ್ಮ ತಂದೆಯಿಂದ ಪ್ರೇರಣೆ ಪಡೆದ ಸರ್ಕಾರಿ ರೈಲ್ವೆ ಪೊಲೀಸ್‌ ಪೇದೆ ಮಧ್ಯ ಪ್ರದೇಶದ ಸೌಲಭ್ಯ ವಂಚಿತ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಶಾಲೆಯೊಂದನ್ನು ತೆರೆದಿದ್ದಾರೆ.

ಬಡ ಮಕ್ಕಳಿಗಾಗಿ ಶಿಕ್ಷಕನಾದ ರೈಲ್ವೆ ಪೊಲೀಸ್‌ ಪೇದೆ

Monday December 14, 2020,

2 min Read

ಉನ್ನಾವೋನಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ರೈಲ್ವೆ ಪೊಲೀಸ್(ಜಿಪಿಆರ್‌) ಅಧಿಕಾರಿ ರೋಹಿತ್‌ ಯಾದವ್‌ ಸೌಲಭ್ಯವಂಚಿತ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ತಮ್ಮ ತಂದೆಯ ಆಸೆಯನ್ನು ಈಡೇರಿಸುತ್ತಿದ್ದಾರೆ.


ಭಾರತೀಯ ವಾಯು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರ ತಂದೆ ನಿವೃತ್ತಿ ಹೊಂದುವವರೆಗೂ ಉತ್ತರ ಪ್ರದೇಶದ ಈತ್ವಾಹ್‌ ಜಿಲ್ಲೆಯಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದರು, ಆದರೆ ಕುಟುಂಬದ ಅಡೆತಡೆಗಳಿಂದ ಅದನ್ನು ಮುಚ್ಚಬೇಕಾಯಿತು.


ಉನ್ನಾವೋನಿಂದ ರೇ ಬರೇಲಿಗೆ ಪ್ರಯಾಣ ಮಾಡುವಾಗ ಬಡ ಮಕ್ಕಳ ಕಷ್ಟವನ್ನು ನೋಡಿದ್ದು, ಅದರ ಜತೆಗೆ ತಮ್ಮ ತಂದೆಯ ಪ್ರೇರಣೆ ಸೇರಿ ರೋಹಿತ್‌ ಅವರಿಗೆ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಕನಸನ್ನು ಸಾಕಾರಗೊಳಿಸುವಂತೆ ಮಾಡಿದೆ.


ಪುಸ್ತಕ ಹಿಡಿದುಕೊಂಡು ಓದುವುದರ ಬದಲು ಮಕ್ಕಳು ಬಿಕ್ಷೆ ಬೇಡುವ ದೃಷ್ಯ ರೋಹಿತ್‌ ಅವರಲ್ಲಿ ಆಳವಾಗಿ ಉಳಿಯಿತು. ತುಂಬಾ ಸಮಯ ವ್ಯರ್ಥ ಮಾಡದೆ ಅವರು ಆ ಮಕ್ಕಳ ಪೋಷಕರನ್ನು ಭೇಟಿಯಾದರು.


“ರೈಲ್ವೆ ಹಳಿಗಳ ಬಳಿ ವಾಸವಿರುವ ಜಿಪ್ಸಿಗಳ ಕುಟುಂಬಗಳನ್ನು ಮತ್ತು ಸ್ಲಂ ನಿವಾಸಿಗಳನ್ನು ಪ್ರತಿದಿನ ಒಂದು ತಿಂಗಳವರೆಗೆ ಭೇಟಿಯಾಗಿ ಅವರ ಮಕ್ಕಳನ್ನು ಶಾಲೆಗೆ ಕಳಿಸುವಂತೆ ಹೇಳಿದೆ, ಆದರೆ ತುಂಬಾ ಜನರಿಗೆ ಅದು ಇಷ್ಟವಿರಲಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಅವರಿಂದಾಗುವ ದುಡಿಮೆ ಹಾಳಾಗುತ್ತಿತ್ತು ಎನ್ನುವುದು ಅವರ ಚಿಂತೆ. ಮತ್ತೆ ತುಂಬಾ ಜನರು ಶಾಲೆ ಪ್ರವೇಶಾತಿ ಪರೀಕ್ಷೆಗೆ ತಯಾರೆ ಇರಲಿಲ್ಲ,” ಎಂದು ರೋಹಿತ್‌ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.

ಜಿಆರ್‌ಪಿ ಅಧಿಕಾರಿ ರೋಹಿತ್‌ ಕುಮಾರ್‌ ಯಾದವ್ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)

ಆಗ ಅವರು ಉನ್ನಾವೋ ನಿಲ್ದಾಣದ ಬಳಿ ‘ಹರ್‌ ಹಾಥ್‌ ಮೇ ಕಲಂ(ಪ್ರತಿಯೊಂದು ಕೈಯಲ್ಲೂ ಲೇಖನಿ)‌ʼ ಎಂಬ ಮಂತ್ರದೊಂದಿಗೆ ಬಯಲು ಶಾಲೆಯನ್ನು ತೆರೆಯಲು ನಿರ್ಧರಿಸಿದರು. ಪ್ರಾರಂಭದಲ್ಲಿ ಕೇವಲ ಐದು ವಿದ್ಯಾರ್ಥಿಗಳಿದ್ದರೆ ತಿಂಗಳ ಕೊನೆಯಲ್ಲಿ 15 ವಿದ್ಯಾರ್ಥಿಗಳು ಶಾಲೆಗೆ ಸೇರಿದರು. ಇಷ್ಟೆಲ್ಲ ಮಕ್ಕಳಿಗೂ ರೋಹಿತ್‌ ಒಬ್ಬರೆ ಶಿಕ್ಷಕ.


ತಮ್ಮ ಕೆಲಸ ಮುಗಿದ ನಂತರ ಇವರೆ ಪಾಠ ಮಾಡುತ್ತಿದ್ದರು, ಮತ್ತು ವಿದ್ಯಾರ್ಥಿಗಳಿಗೆ ಪುಸ್ತಕ ಇತ್ಯಾದಿಗಳ ವೆಚ್ಚವನ್ನು ಇವರೆ ಭರಿಸುತ್ತಿದ್ದರು. ಇವರ ಈ ಕಾರ್ಯವನ್ನು ಗಮನಿಸಿ ಕೆಲವು ಎನ್‌ಜಿಒಗಳು ಸಹಾಯ ಮಾಡಲು ಮುಂದಾದವು. ಅವರು ಹತ್ತಿರದ ಜಾಗವನ್ನು ಬಾಡಿಗೆಗೆ ಪಡೆದು ತಾತ್ಕಾಲಿಕ ಶಾಲಾ ಕೊಠಡಿಗಳನ್ನು ತಯಾರಿಸಿಕೊಟ್ಟರು.


ತಿಂಗಳುಗಳ ನಂತರ ಜಿಲ್ಲಾ ಪಂಚಾಯತಿ ರಾಜ್‌ ಅಧಿಕಾರಿ ಕೋರಾರಿ ಪಂಚಾಯತ್‌ ಬಹ್ವಾನ್‌ ಕಟ್ಟಡದಲ್ಲಿ ತರಗತಿಗಳನ್ನು ವರ್ಗಾಯಿಸುವಂತೆ ಮಾಡಿದರು.


“ಪ್ರಸ್ತುತ ರೋಹಿತ್‌ ಅವರನ್ನು ಹೊರತುಪಡಿಸಿ ಶಾಲೆಯಲ್ಲಿ ಇನ್ನರು ಶಿಕ್ಷಕರಿದ್ದಾರೆ ಮತ್ತು ಮಕ್ಕಳ ಸಂಖ್ಯೆ 90ಕ್ಕೇರಿದೆ. ಜಿಆರ್‌ಪಿ ಕೂಡಾ ಶಾಲೆ ನಡೆಸಲು ಸಹಾಯಮಾಡಿದೆ. ಎಲ್ಲರ ಸಹಕಾರದೊಂದಿಗೆ ರೋಹಿತ್‌ ಅವರ ಹಳ್ಳಿಯ ಮಕ್ಕಳಿಗೆ ಶಿಕ್ಷಣ ಲಭಿಸುತ್ತಿದೆ,” ಎಂದು ದಿ ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ.


“ಶಾಲೆ ನಡೆಸಬೇಕು ಎಂಬ ಆಸೆ ಕೆಲಸದ ನಂತರ ಬರುತ್ತಿದ್ದ ಆಯಾಸ ಒತ್ತಡಕ್ಕಿಂತ ದೊಡ್ಡದು. ನನ್ನ ತಂದೆಯ ಆಸೆಯನ್ನು ಈಡೇರಿಸುತ್ತಿದ್ದೇನೆಂಬುದೆ ನನ್ನ ಜೀವನದ ಧ್ಯೇಯವಾಗಿದೆ,” ಎನ್ನುತ್ತಾರವರು.