ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿರುವ ಉದ್ಯಮಿಗಳು

ಪ್ಲಾಸ್ಟಿಕ್ ಮತ್ತು ಇ-ತ್ಯಾಜ್ಯ ಸಮಸ್ಯೆಯನ್ನು ಎದುರಿಸಲು ಭಾರತ ಬಹಳಷ್ಟು ಪ್ರಯತ್ನಿಸುತ್ತಿದ್ದಂತೆ, ಈ ಉದ್ಯಮಿಗಳು ಮರುಬಳಕೆಯ ಅಗತ್ಯವನ್ನು ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ಹೇಗೆ ಎಂಬುದು ಇಲ್ಲಿದೆ.

ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಿರುವ ಉದ್ಯಮಿಗಳು

Thursday February 06, 2020,

4 min Read

ಕಳೆದ ಕೆಲವು ವರ್ಷಗಳಿಂದ, ಭಾರತವು ವಾಯುಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿದೆ. ಅದೇ ಸಮಯದಲ್ಲಿ, ದೇಶವು ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯ (ಇ-ತ್ಯಾಜ್ಯ) ದಂತಹ ಇತರ ರೀತಿಯ ಮಾಲಿನ್ಯದ ತೊಂದರೆಯನ್ನು ಸಹ ಎದುರಿಸುತ್ತಿದೆ.


ಅನ್-ಪ್ಲಾಸ್ಟಿಕ್ ಕಲೆಕ್ಟಿವ್ (ಯುಪಿಸಿ) ಎಂಬ ಅಧ್ಯಯನವು ಭಾರತವು ವಾರ್ಷಿಕವಾಗಿ 9.46 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ, ಅದರಲ್ಲಿ 40 ಪ್ರತಿಶತ ಸಂಗ್ರಹವಾಗದೆ ಉಳಿದಿದೆ ಎಂದು ವರದಿ ಮಾಡಿದೆ.


ಇದಲ್ಲದೆ, ಗ್ಲೋಬಲ್ ಇ-ವೇಸ್ಟ್ ಮಾನಿಟರ್ 2017 ರ ಪ್ರಕಾರ ಭಾರತವು ವಾರ್ಷಿಕವಾಗಿ ಸುಮಾರು ಎರಡು ಮಿಲಿಯನ್ ಟನ್ (ಎಂಟಿ) ಇ-ತ್ಯಾಜ್ಯವನ್ನು ಉತ್ಪಾದಿಸುತ್ತದೆ.


ಪ್ಲಾಸ್ಟಿಕ್ ಮತ್ತು ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಆದರೆ ಪ್ರತಿ ಪ್ರತಿಕೂಲತೆಯಲ್ಲೂ ಅವಕಾಶವಿದೆ, ಮತ್ತು ಕೆಲವು ಉದ್ಯಮಿಗಳು ಮರುಬಳಕೆಯ ಅಗತ್ಯವನ್ನು ತ್ವರಿತವಾಗಿ ಬಳಸಿಕೊಳ್ಳುತ್ತಿದ್ದಾರೆ.


ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವ ಮೂಲಕ ಕಸದಿಂದ ರಸ, ಅಲ್ಲ ಹಣವನ್ನು ಸಂಪಾದಿಸುತ್ತಿರುವ ಮೂವರು ಉದ್ಯಮಿಗಳು ಇಲ್ಲಿದ್ದಾರೆ:


ರಾಜ್ ಕುಮಾರ್ - ದೇಶ್ವಾಲ್ ತ್ಯಾಜ್ಯ ನಿರ್ವಹಣೆ


ರಾಜ್ ಕುಮಾರ್, ದೇಶ್ವಾಲ್ ತ್ಯಾಜ್ಯ ನಿರ್ವಹಣೆ ಕಂಪನಿಯ ಸ್ಥಾಪಕ


ಉದಯೋನ್ಮುಖ ಉದ್ಯಮಿ ರಾಜ್ ಕುಮಾರ್ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ಇ-ತ್ಯಾಜ್ಯವನ್ನು ನಿರ್ವಹಿಸುವುದು ಮತ್ತು ಮರುಬಳಕೆ ಮಾಡುವುದು ಹೆಚ್ಚು ಕಷ್ಟಕರವಾಗುತ್ತಿರುವುದನ್ನು ಅವರು ಗಮನಿಸಿದರು.


"ಭಾರತವು 2018 ರಲ್ಲಿ ಸುಮಾರು ಮೂರು ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸಿತ್ತು, ಮತ್ತು ಅದರಲ್ಲಿ ಕೇವಲ ಐದು ಪ್ರತಿಶತದಷ್ಟು ಮಾತ್ರ ಮರುಬಳಕೆ ಮಾಡುವ ಸಾಮರ್ಥ್ಯವನ್ನು ದೇಶ ಹೊಂದಿತ್ತು," ಎಂದು ದೇಶ್ವಾಲ್ ತ್ಯಾಜ್ಯ ನಿರ್ವಹಣೆಯ ಸ್ಥಾಪಕ ಮತ್ತು ಸಿಇಒ ರಾಜ್ ಕುಮಾರ್ ಹೇಳುತ್ತಾರೆ.


"ಇದನ್ನು ನೋಡುತ್ತಾ, ದೇಶ್ವಾಲ್ ಇ-ತ್ಯಾಜ್ಯ ಮರುಬಳಕೆ ಹೆಸರಿನಲ್ಲಿ ರಾಜಸ್ಥಾನದ ಖುಷ್ಖೇರಾದಲ್ಲಿ ನನ್ನ ಮೊದಲ ಇ-ತ್ಯಾಜ್ಯ ಮರುಬಳಕೆ ಘಟಕವನ್ನು ಸ್ಥಾಪಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ಮತ್ತು ಜಾಗತಿಕ ಕಲ್ಯಾಣ ಮತ್ತು ಪರಿಸರ ಸುರಕ್ಷತೆಗೆ ಕೊಡುಗೆ ನೀಡಲು ನಾನು ನಿರ್ಧರಿಸಿದೆ," ಎಂದು ಅವರು ಹೇಳುತ್ತಾರೆ.


2010 ರಲ್ಲಿ ಕೇಂದ್ರದ ಇ-ತ್ಯಾಜ್ಯ ಕರಡಿನಿಂದ ಪ್ರೇರಿತರಾದ ಕುಮಾರ್ ಅವರು ತಮ್ಮ ಸ್ವಂತ ಹಣವನ್ನು ಹೂಡಿ 2013 ರಲ್ಲಿ ದೇಶ್ವಾಲ್ ತ್ಯಾಜ್ಯ ನಿರ್ವಹಣೆಯನ್ನು ಪ್ರಾರಂಭಿಸಲು ನಿರ್ಧರಿಸಿದರು. ಅವರ ಈ ಮೊದಲ ನಡೆಯು ಮನೇಸರ್‌ನಲ್ಲಿ ಮತ್ತೊಂದು ದೊಡ್ಡ ಪ್ರಮಾಣದ ಮರುಬಳಕೆ ಸೌಲಭ್ಯವನ್ನು ಸ್ಥಾಪಿಸುವುದಕ್ಕೆ ಸಹಕಾರಿಯಾಯಿತು. ಎರಡು ಸಂಸ್ಥೆಗಳು ವಿವಿಧ ರೀತಿಯ ಇ-ತ್ಯಾಜ್ಯ, ಬಳಸಿದ ಬ್ಯಾಟರಿಗಳು, ಪ್ಲಾಸ್ಟಿಕ್ ಮತ್ತು ಬಳಸಿದ ತೈಲಗಳನ್ನು ಮರುಬಳಕೆ ಮಾಡಲು ಪ್ರಾರಂಭಿಸಿದವು.


ಐಟಿ ವಲಯದ ಕೈಗಾರಿಕಾ ದೈತ್ಯರು, ಭಾರಿ ಕೈಗಾರಿಕೆಗಳು, ವಾಹನಗಳು, ಗ್ರಾಹಕ ವಸ್ತುಗಳು, ಹಣಕಾಸು ವಲಯ, ಸಲಹಾ ವಲಯ, ಔಷಧಗಳು, ದೂರಸಂಪರ್ಕ ಮತ್ತು ಮುಂತಾದವುಗಳನ್ನು ಒಳಗೊಂಡಂತೆ 200 ಕ್ಕೂ ಹೆಚ್ಚು ಕಾರ್ಪೊರೇಟ್ ಕ್ಲೈಂಟ್ ಗಳನ್ನು ಹೊಂದಿರುವ ಈ ಕಂಪನಿಯು ವರ್ಷಕ್ಕೆ 50 ಪ್ರತಿಶತದಷ್ಟು ಬೆಳೆಯುತ್ತಿದೆ.


ಇದುವರೆಗೆ ಕುಮಾರ್, ದೇಶ್ವಾಲ್‌ ಕಂಪನಿಯಲ್ಲಿ 15 ಕೋಟಿ ರೂ. ಹೂಡಿಕೆ ಮಾಡಿದ್ದು, 2018-19ನೇ ಸಾಲಿನಲಲ್ಲಿ 23 ಕೋಟಿ ರೂ ಲಾಭವನ್ನು ಅಂದಾಜಿಸಿದ್ದಾರೆ. ಪ್ರಾರಂಭವಾದಾಗಿನಿಂದ, ದೇಶ್ವಾಲ್ 1,000 ಮೆಟ್ರಿಕ್ ಟನ್ ತ್ಯಾಜ್ಯವನ್ನು ಮರುಬಳಕೆ ಮಾಡಿದ್ದಾರೆ ಮತ್ತು 2019 ರ ನಂತರ ವರ್ಷಕ್ಕೆ 500 ಟನ್‌ಗಿಂತ ಹೆಚ್ಚು ಮರುಬಳಕೆ ಮಾಡುವ ಗುರಿಯನ್ನು ಹೊಂದಿದ್ದಾರೆ.


ಜಿಗ್ನೇಶ್ ಷಾ - ಡಿಲಕ್ಸ್ ರಿಸೈಕ್ಲಿಂಗ್

ಜಿಗ್ನೇಶ್ ಷಾ, ಡಿಲಕ್ಸ್ ರಿಸೈಕ್ಲಿಂಗ್ ಸಂಸ್ಥೆಯ ಸ್ಥಾಪಕ


ಜಿಗ್ನೇಶ್ ಷಾ ಅವರು ಕಾಗದ ತಯಾರಿಕೆ ಮತ್ತು ಮರುಬಳಕೆಯ ಹಿನ್ನೆಲೆಯಿಂದ ಬಂದವರು. 1999 ರಲ್ಲಿ, ಪ್ಯಾಕೇಜಿಂಗ್ ಕಾರ್ಖಾನೆಗಳಿಂದ ಬರುವ ತ್ಯಾಜ್ಯದ ಬಗ್ಗೆ ಏನಾದರೂ ಮಾಡುವ ಯೋಚನೆಗೆ ಸಿಕ್ಕ ಅವಕಾಶವು ಅವರ ಜೀವನದ ಹಾದಿಯನ್ನು ಬದಲಾಯಿಸಿತು.


ಮುಂಬೈ ಮೂಲದ ಡಿಲಕ್ಸ್ ರಿಸೈಕ್ಲಿಂಗ್ ಸಂಸ್ಥೆಯನ್ನು ಪ್ರಾರಂಭಿಸಿ ಅವರು ವಿವಿಧ ಸಂಸ್ಥೆಗಳು, ಕಂಪನಿಗಳು ಮತ್ತು ಕೈಗಾರಿಕೆಗಳಿಗೆ ಪರಿಸರ ಸ್ನೇಹಿ ಪರಿಹಾರಗಳನ್ನು ಒದಗಿಸುತ್ತಿದ್ದಾರೆ.


ಕುಟುಂಬ, ಸ್ನೇಹಿತರು, ಕಂತಿನ ಸಾಲಗಳು ಮತ್ತು ನಗದು ಸಾಲದ ಹೂಡಿಕೆಯೊಂದಿಗೆ ಸುಮಾರು 20 ವರ್ಷಗಳ ಹಿಂದೆ ಈ ಪ್ರಯಾಣವು ಪ್ರಾರಂಭವಾಯಿತು. ಜಿಗ್ನೇಶ್ ಅವರು ತಿಂಗಳಿಗೆ 75 ಟನ್ ಸಾಮರ್ಥ್ಯದ ಸಣ್ಣ ಕೆಲಸದಿಂದ ಪ್ರಾರಂಭಿಸಿದರು ಎಂದು ಹೇಳುತ್ತಾರೆ. ಇದು ಈಗ ವರ್ಷಕ್ಕೆ 13,000 ಮೆಟ್ರಿಕ್ ಟನ್‌ಗಳಿಗೆ ಕಾರ್ಯವು ವಿಸ್ತರಿಸಿದೆ.


ಇಂದು, ಕಂಪನಿಯು ವರ್ಷಕ್ಕೆ ಸುಮಾರು 40 ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ ಮತ್ತು ಇತ್ತೀಚೆಗೆ, ವಹಿವಾಟಿನಲ್ಲಿ ಶೇಕಡಾ 25 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿದೆ.


“ಆರಂಭದಲ್ಲಿ, ನಾವು ಟೆಟ್ರಾ ಪಾಕ್ ಉತ್ಪಾದನಾ ಮಾರ್ಗಗಳಿಂದ ಹೊರಬರುವ ಕಾರ್ಖಾನೆಯ ತ್ಯಾಜ್ಯವನ್ನು ಮಾತ್ರ ಮರುಬಳಕೆ ಮಾಡುತ್ತಿದ್ದೆವು. 2004 ರಿಂದ, ನಾವು ಈ ಚಿಪ್‌ಬೋರ್ಡ್‌ಗಳನ್ನು ಆಟೋಮೊಬೈಲ್ ಉದ್ಯಮಕ್ಕೆ ಸೀಟ್‌ಬ್ಯಾಕ್ ಮತ್ತು ತ್ರಿಚಕ್ರ ವಾಹನ ಆಟೋರಿಕ್ಷಾ ವಲಯದ ಪ್ರಯಾಣಿಕರು ಮತ್ತು ಚಾಲಕರಿಗೆ ಬ್ಯಾಕ್‌ರೆಸ್ಟ್ ರೂಪದಲ್ಲಿ ಪೂರೈಸುತ್ತಿದ್ದೇವೆ,” ಎಂದರು.


ದೇಶದ ಶೇ. 80 ರಷ್ಟು ಆಟೋರಿಕ್ಷಾಗಳು ತಾವು ಒದಗಿಸಿದ ಚಿಪ್‌ಬೋರ್ಡ್‌ಗಳನ್ನು ಬಳಸುತ್ತವೆ ಎಂದು ಜಿಗ್ನೇಶ್ ಹೇಳುತ್ತಾರೆ. ಡಿಲಕ್ಸ್ ರಿಸೈಕ್ಲಿಂಗ್ ಸಂಸ್ಥೆಯು ಬಿ 2 ಬಿ ಮಾದರಿಯನ್ನು ಹೊಂದಿದೆ ಮತ್ತು ಸರ್ಕಾರಿ ಸಂಸ್ಥೆಗಳಿಗೆ ಅದರ ಉತ್ಪನ್ನಗಳನ್ನು ಪೂರೈಸುವ ಮೂಲಕ ಸಹಕರಿಸುತ್ತಿದೆ.


ಗೌರವ್ ಜಲನ್ - ಪ್ಯಾಕ್‌ಮ್ಯಾನ್

ಗೌರವ್ ಜಲನ್, ಪ್ಯಾಕ್‌ಮ್ಯಾನ್ ಪ್ಯಾಕೇಜಿಂಗ್ ಸಂಸ್ಥೆಯ ಸಂಸ್ಥಾಪಕ.


ಭಾರತೀಯ ಉದ್ಯಮಿ ಗೌರವ್ ಜಲನ್ ಪ್ಯಾಕ್‌ಮ್ಯಾನ್, ನಿಜ ಜೀವನದ, ದೈನಂದಿನ ತೊಂದರೆಯಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ನಿಂದ ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಈ ಭಾರತೀಯ ಕಂಪನಿಯು ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್, ಸ್ಯಾಮ್‌ಸಂಗ್, ಬಾಷ್ ಮತ್ತು ಇತರ ಗ್ರಾಹಕರಿಗೆ ಪರಿಸರ ಸ್ನೇಹಿ, ಜೈವಿಕ ವಿಘಟನೀಯ ಪ್ಯಾಕೇಜಿಂಗ್ ಉತ್ಪನ್ನಗಳನ್ನು ಪೂರೈಸುತ್ತದೆ.


ಗ್ರೇಟರ್ ನೋಯ್ಡಾದಲ್ಲಿರುವ ತನ್ನ ಕಾರ್ಖಾನೆಯಲ್ಲಿ, ಪ್ಯಾಕ್‌ಮ್ಯಾನ್ ಪ್ಯಾಕೇಜಿಂಗ್ ಕಾಗದ ಆಧಾರಿತ ಪೆಟ್ಟಿಗೆಗಳನ್ನು (ಗಾಳಿಯ ಕಾಲಮ್‌ಗಳನ್ನು ಹೊಂದಿರುವ ಪೇಪರ್‌ಬೋರ್ಡ್‌ಗಳು) ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ತಯಾರಿಸುತ್ತದೆ. ಎಲೆಕ್ಟ್ರಾನಿಕ್ಸ್, ಬೂಟುಗಳು, ಆಹಾರ ವಸ್ತುಗಳು, ಬಟ್ಟೆ ಇತ್ಯಾದಿಗಳನ್ನು ಪ್ಯಾಕೇಜ್ ಮಾಡಲು ಬಳಸುವ ಪರಿಚಿತ, ಕಂದು ಬಣ್ಣದ ಹಲಗೆಯ ಪೆಟ್ಟಿಗೆಗಳು ಇವಾಗಿವೆ.


ಪ್ಯಾಕ್‌ಮ್ಯಾನ್ ರೋಲ್‌ಗಳು, ಬಬಲ್ ರೋಲ್‌ಗಳು, ಬಬಲ್ ಪೌಚ್‌ಗಳು, ಕೊರಿಯರ್ ಬ್ಯಾಗ್‌ಗಳು, ಪಿಒಡಿ ಜಾಕೆಟ್‌ಗಳು, ಡಕ್ಟ್ ಟೇಪ್‌ಗಳು, ಇಕಾಮರ್ಸ್ ಶಿಪ್ಪಿಂಗ್ ಬ್ಯಾಗ್‌ಗಳು ಮತ್ತು ಮುಂತಾದವುಗಳನ್ನು ಸಹ ತಯಾರು ಮಾಡುತ್ತದೆ. ಇವುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರ ಜೊತೆಗೆ, ಇದು ಇಕಾಮರ್ಸ್ ಅಂಗಡಿಯನ್ನು ಹೊಂದಿದ್ದು, ಅಲ್ಲಿ ಈ ಉತ್ಪನ್ನಗಳನ್ನು ಖರೀದಿಸಬಹುದು.


"ಪ್ಯಾಕೇಜಿಂಗ್ ಉತ್ಪನ್ನ ತಯಾರಿಸಲು ಬಳಸುವ ವಸ್ತುವು ಮರುಬಳಕೆ ಮಾಡಿದ ಕಾಗದ, ಆಹಾರ ಗುಣಮಟ್ಟದ ಕಾಗದ ಮತ್ತು ಜೈವಿಕ ವಿಘಟನೀಯ ಕಾಗದಗಳಾಗಿವೆ. ಇಂದು, ಪ್ಯಾಕ್‌ಮ್ಯಾನ್ ಪ್ರತಿದಿನ 1 ಲಕ್ಷ ಪೆಟ್ಟಿಗೆಗಳು ಮತ್ತು ರೋಲ್‌ಗಳನ್ನು ತಯಾರಿಸುತ್ತದೆ ಮತ್ತು 300 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ರವಾನಿಸುತ್ತದೆ,” ಎಂದು ಗೌರವ್ ಹೇಳಿಕೊಂಡಿದ್ದಾರೆ. ದೆಹಲಿಯಲ್ಲಿ ನೋಂದಾಯಿತವಾದ ಪ್ಯಾಕ್‌ಮ್ಯಾನ್ ವಾರ್ಷಿಕವಾಗಿ 20 ಕೋಟಿ ರೂ. ವಹಿವಾಟು ನಡೆಸುತ್ತದೆ ಮತ್ತು 105 ಉದ್ಯೋಗಿಗಳನ್ನು ಹೊಂದಿದೆ ಎಂದು ಅವರು ಹೇಳುತ್ತಾರೆ.


ಗೌರವ್ ಅವರ ಕಂಪನಿಯು ಜೋಳದಿಂದ ಪರಿಸರ ಸ್ನೇಹಿ ಚೀಲಗಳನ್ನು ಸಹ ತಯಾರಿಸುತ್ತದೆ. ಈ ಜೋಳದ ಚೀಲಗಳು ಜೈವಿಕ ವಿಘಟನೀಯ ಮತ್ತು ಇತರ ಸಾಮಾನ್ಯ ಪಾಲಿಮರ್‌ಗಳಂತೆ ಮರುಬಳಕೆ ಪ್ರಕ್ರಿಯೆಯನ್ನು ಕಲುಷಿತಗೊಳಿಸುವುದಿಲ್ಲ ಎಂದು ಗೌರವ್ ಹೇಳುತ್ತಾರೆ.


ಅಮೆಜಾನ್ ಇಂಡಿಯಾ, ಹೂವಿನ ಚಿಲ್ಲರೆ ವ್ಯಾಪಾರಿ ಫರ್ನ್ಸ್ ಮತ್ತು ಪೆಟಲ್ಸ್, ಹಾಲು ಉತ್ಪಾದಕ ಮತ್ತು ವಿತರಕ ಕಂಟ್ರಿ ಡಿಲೈಟ್, ಮತ್ತು ಆನ್‌ಲೈನ್ ಹೂವಿನ ಅಂಗಡಿಗಳು ಜೋಳದ ಆಧಾರಿತ ಪರಿಸರ ಸ್ನೇಹಿ ಚೀಲಗಳಿಗಾಗಿ ಪ್ಯಾಕ್‌ಮ್ಯಾನ್‌ನ ಗ್ರಾಹಕರಾಗಿದ್ದಾರೆ ಎಂದು ಗೌರವ್ ಹೇಳುತ್ತಾರೆ.