15 ನೇ ವಯಸ್ಸಿನಲ್ಲಿ ಮದುವೆಯಾಗಿ 20 ನೇ ವಯಸ್ಸಿನಲ್ಲಿ ವಿಧವೆಯಾದ ಈ ತಾಯಿ ಕೇರಳದ 200 ಕುಟುಂಬಗಳ ಜೀವನಕ್ಕೆ ಬೆಳಕಾಗುತ್ತಿದ್ದಾರೆ

ಇಬ್ಬರು ಮಕ್ಕಳೊಂದಿಗೆ ಸಿಫಿಯಾ ಹನೀಫ್ 20 ನೇ ವಯಸ್ಸಿನಲ್ಲಿ ವಿಧವೆಯಾಗಿದ್ದರು. ಆದರೆ ಇದು ಅವರು ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ತನ್ನ ಸುತ್ತಲಿನ ಜನರ ಜೀವನವನ್ನು ಉನ್ನತಿಗೇರಿಸುವಲ್ಲಿ ಅವರಿಗೆ ಅಡ್ಡಿಯಾಗಲಿಲ್ಲ.

15 ನೇ ವಯಸ್ಸಿನಲ್ಲಿ ಮದುವೆಯಾಗಿ 20 ನೇ ವಯಸ್ಸಿನಲ್ಲಿ ವಿಧವೆಯಾದ ಈ ತಾಯಿ ಕೇರಳದ 200 ಕುಟುಂಬಗಳ ಜೀವನಕ್ಕೆ ಬೆಳಕಾಗುತ್ತಿದ್ದಾರೆ

Monday January 06, 2020,

3 min Read

ತಮ್ಮ ವಯಸ್ಸಿನ ಹೆಚ್ಚಿನ ಹುಡುಗಿಯರೆಲ್ಲ ವೃತ್ತಿಜೀವನದ ಆಯ್ಕೆಗಳನ್ನು ಮಾಡುತ್ತಾ ವಿನೋದ ಮತ್ತು ಆಟಗಳಲ್ಲಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ಸಿಫಿಯಾ ಹನೀಫ್ಗೆ ವಿವಾಹವಾಯಿತು. ಆಗ ಅವರ ವಯಸ್ಸು 15. ಮನೆಯೊಂದನ್ನು ಮತ್ತು ಹೊಸ ಜೀವನವನ್ನು ನಿರ್ವಹಿಸುವ ಜವಾಬ್ದಾರಿಗಳಿಗೆ ಅವರಿನ್ನು ಒಗ್ಗಿಕೊಳ್ಳುತ್ತಿದ್ದರು, ಆದರೆ ದುರ್ವಿಧಿ, ಅವರು ಒಂದು ಅಪಘಾತದಲ್ಲಿ ತನ್ನ ಗಂಡನನ್ನು ಕಳೆದುಕೊಂಡರು.


“ನನ್ನ ಗಂಡನ ಸಾವನ್ನು ಹೇಗೆ ಎದುರಿಸಬೇಕೆಂದು ನನಗೆ ತೋಚಲಿಲ್ಲ. ಇಡೀ ನನ್ನ ಸುತ್ತಲಿನ ಜಗತ್ತು ಕುಸಿಯುತ್ತಿದೆ ಎಂದು ಭಾಸವಾಗುತ್ತಿತ್ತು. ಹಣದ ಚಿಂತೆಯಿಂದ ಹಿಡಿದು ನಿರ್ಧಾರಗಳನ್ನು ತೆಗೆದುಕೊಳ್ಳುವ ಒತ್ತಡದವರೆಗೆ, ನಾನು ಎಲ್ಲವನ್ನೂ ಅನುಭವಿಸಿದೆ. ನನ್ನ ಮಕ್ಕಳನ್ನು ಒಂಟಿಯಾಗಿ ಹೇಗೆ ಬೆಳೆಸುವುದು ಎಂದು ನಾನು ಯೋಚಿಸುತ್ತಿದ್ದೆ,” ಎಂದು ಈಗ 31 ವರ್ಷದ ಸಿಫಿಯಾ ಹನೀಫ್ ಸೋಶಿಯಲ್ ಸ್ಟೋರಿಗೆ ಹೇಳುತ್ತಾರೆ.


ಸಾಮಾಜಿಕ ಬದಲಾವಣೆಯನ್ನು ತರಲು ಪ್ರಯತ್ನಿಸುತ್ತಿರುವ ಸಿಫಿಯಾ ಹನೀಫ್  


ಎಲ್ಲಾ ಪ್ರತಿಕೂಲಗಳ ಪರಿಸ್ಥಿತಿಗಳ ಮಧ್ಯೆ, ಸಿಫಿಯಾ ಅವರ ಕೈ ಹಿಡಿದ ಒಂದೇ ಒಂದು ವಿಷಯವೆಂದರೆ ಅದು ಅವರ ಧೈರ್ಯ. ಪೋಷಕರು ಅವರೊಂದಿಗೆ ವಾಸಿಸಲು ಅಥವಾ ಪುನರ್ವಿವಾಹವಾಗಲು ಒತ್ತಾಯಿಸುತ್ತಿರುವಾಗ, ವಿಧವೆಯರ ಜೀವನಕ್ಕೆ ಸಂಬಂಧಿಸಿದ ನೀತಿ ನಿಯಮಗಳನ್ನು ಮುರಿಯುವ ಮತ್ತು ಉತ್ತಮ ಭವಿಷ್ಯ ಹೊಂದುವ ಉದ್ದೇಶದಿಂದ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದರು.


ಸಿಫಿಯಾ ತನಗೂ ತನ್ನ ಕುಟುಂಬಕ್ಕೂ ಸಹಾಯ ಮಾಡುವುದಲ್ಲದೆ, ಕಷ್ಟದಲ್ಲಿರುವ ಮತ್ತು ದೀನದಲಿತರ ಹೊರೆಯನ್ನು ಕಡಿಮೆಗೊಳಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ.


2015 ರಲ್ಲಿ, ಅವರು ಅನಾರೋಗ್ಯದಿಂದ ಬಳಲುತ್ತಿರುವ ತಾಯಂದಿರಿಗೆ, ಹಿರಿಯರಿಗೆ, ತೊಂದರೆ ಅನುಭವಿಸುತ್ತಿರುವ ವಿಧವೆಯರು ಮತ್ತು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲು ಚಿತಾಲ್ ಎಂಬ ಚಾರಿಟಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಕಳೆದ ಆರು ವರ್ಷಗಳಲ್ಲಿ, ಅವರು 200 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ, ಬಟ್ಟೆ ಮತ್ತು ಔಷಧಿಗಳನ್ನು ಒದಗಿಸುವ ಮೂಲಕ ಸಹಾಯ ಮಾಡಿದ್ದಾರೆ.


ಇತ್ತೀಚೆಗೆ, ಸಿಫಿಯಾ ಅವರ ಉದಾತ್ತ ಸೇವೆಗಾಗಿ ಪ್ರತಿಷ್ಠಿತ ನೀರ್ಜಾ ಭಾನೋತ್ ಪ್ರಶಸ್ತಿಯನ್ನು ನೀಡಲಾಯಿತು.


ಮಹತ್ವದ ಘಟ್ಟ

ಸಿಫಿಯಾ ಪಾಲಕ್ಕಾಡ್‌ನ ವಡಕ್ಕನ್‌ಚೇರಿ ಎಂಬ ಪ್ರದೇಶಕ್ಕೆ ಸೇರಿದವರಾಗಿದ್ದಾರೆ, ಈ ಸ್ಥಳವು ಹೇರಳವಾದ ತಾಳೆ ಮರಗಳು, ಹಸಿರು ಕಾರ್ಪೆಟ್ ಭೂ ಪ್ರದೇಶ ಮತ್ತು ಬೆಟ್ಟಗಳಿಂದ ಕೂಡಿದೆ. ಅವರ ತಂದೆ ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಮತ್ತು ವಿರಳವಾಗಿ ಮನೆಗೆ ಭೇಟಿ ನೀಡುತ್ತಿದ್ದರು.


ಸಿಫಿಯಾ ಚೆರುಪುಷ್ಪಂ ಬಾಲಕಿಯರ ಪ್ರೌಢ ಶಾಲೆಯಲ್ಲಿ 10 ನೇ ತರಗತಿ ಮುಗಿಸಿದಾಗ, ಅವರು ಸಿದ್ಧವಾಗಿಲ್ಲದಿದ್ದರೂ ಮದುವೆಯಾಗಬೇಕಾಯಿತು. "ನನ್ನ ಹಳ್ಳಿಯ ಹೆಚ್ಚಿನ ಹುಡುಗಿಯರು ಮೊದಲೇ ವೈವಾಹಿಕ ಬದುಕಿಗೆ ಪ್ರವೇಶಿಸುತ್ತಿದ್ದರು. ಆದರೆ ನನಗೆ ಅದು ಇಷ್ಟದ ವಿಷಯವಾಗಿರಲಿಲ್ಲ. ಆದರೆ ಅದನ್ನೇ ಒಪ್ಪಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ,” ಎನ್ನುತ್ತಾರೆ ಸಿಫಿಯಾ. 


ದುರದೃಷ್ಟವಶಾತ್, ಐದು ವರ್ಷಗಳ ನಂತರ, ಸಿಫಿಯಾ ತನ್ನ ಗಂಡನನ್ನು ಅಪಘಾತದಲ್ಲಿ ಕಳೆದುಕೊಂಡರು. ಜೊತೆಯಲ್ಲಿ ಇಬ್ಬರು ಮಕ್ಕಳು ಮತ್ತು ಕೈಯಲ್ಲಿ ಯಾವುದೇ ಕೆಲಸವಿಲ್ಲರಲಿಲ್ಲ, ಆಗ ಬದುಕನ್ನು ಮರಳಿ ಪಡೆಯಲು ಇರುವ ಏಕೈಕ ಮಾರ್ಗವೆಂದರೆ ಶಿಕ್ಷಣವನ್ನು ಮುಗಿಸುವುದು ಮತ್ತು ತನ್ನ ಮಕ್ಕಳನ್ನು ಬೆಳೆಸಲು ಕೆಲಸವನ್ನು ಪಡೆಯುವುದಾಗಿತ್ತು.


“ಬೆಂಗಳೂರಿನಲ್ಲಿರುವ ನನ್ನ ಕೆಲವು ಸ್ನೇಹಿತರು ನನಗೆ ಉದ್ಯೋಗ ಹುಡುಕಲು ಸಹಾಯ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ನಾನು ನಗರಕ್ಕೆ ಬಂದಾಗ, ಅವರಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಏನು ಮಾಡಬೇಕೆಂದು ತಿಳಿಯದೆ ನಾನು ಸುಮಾರು ಎರಡು ರಾತ್ರಿಗಳನ್ನು ರೈಲ್ವೆ ನಿಲ್ದಾಣದಲ್ಲಿ ಕಳೆದಿದ್ದೇನೆ. ಆಗ ಕೇವಲ ಒಂದು ವರ್ಷ ವಯಸ್ಸಿನ ನನ್ನ ಕಿರಿಯ ಮಗ ಜ್ವರದಿಂದ ಬಳಲುತ್ತಿದ್ದ. ನಾನು ಎಲ್ಲಾ ಭರವಸೆಯನ್ನು ಕಳೆದುಕೊಳ್ಳಲು ಪ್ರಾರಂಭಿಸಿದ್ದೆ, ಅಲ್ಲೇ ಹಾದುಹೋಗುತ್ತಿದ್ದ ಓರ್ವ ಮಹಿಳೆ ನನ್ನ ಪರಿಸ್ಥಿತಿಯನ್ನು ಗಮನಿಸಿ ಸ್ವಲ್ಪ ಸಹಾಯವನ್ನು ನೀಡಿದರು. ಅವರು ನನ್ನನ್ನು ಮನೆಗೆ ಕರೆದೊಯ್ದರು. ನನಗೆ ಮತ್ತು ನನ್ನ ಮಕ್ಕಳಿಗೆ ಆಹಾರವನ್ನು ಕೊಟ್ಟರು ಮತ್ತು ಕೆಲವು ದಿನಗಳವರೆಗೆ ನಮಗೆ ಆಶ್ರಯವನ್ನು ನೀಡಿದರು. ಅಂದು ಅವರು ಸಹಾಯ ಮಾಡದೇ ಇದ್ದಿದ್ದರೇ, ನನಗೆ ಏನಾಗುತ್ತಿತ್ತೊ ಎಂದು ನನಗೆ ಊಹಿಸಲು ಸಾಧ್ಯವಿಲ್ಲ," ಎಂದು ಸಿಫಿಯಾ ನೆನಪಿಸಿಕೊಳ್ಳುತ್ತಾರೆ.


ಅನಾರೋಗ್ಯದಿಂದ ಬಳಲುತ್ತಿರುವ ತಾಯಂದಿರಿಗೆ, ತೊಂದರೆ ಅನುಭವಿಸುತ್ತಿರುವ ವಿಧವೆಯರು ಮತ್ತು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡಲು ಸಿಫಿಯಾ ಹನೀಫ್ ಚಾರಿಟಬಲ್ ಟ್ರಸ್ಟ್ ಅನ್ನು ನಡೆಸುತ್ತಿದ್ದಾರೆ.




ಆ ಸಮಯದಲ್ಲಿ, ಅವರು ಕೇರಳದ ಕಾಲ್ ಸೆಂಟರ್‌ನಲ್ಲಿ ಕೆಲಸ ಪಡೆಯುವಲ್ಲಿ ಯಶಸ್ವಿಯಾದರು. ಅವರು ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಏಕಕಾಲದಲ್ಲಿ ತನ್ನ 11 ಮತ್ತು 12 ನೇ ತರಗತಿಗಳನ್ನು ದೂರಶಿಕ್ಷಣದ ಮೂಲಕ ಪ್ರಾರಂಭಿಸಿದರು. ಹಾಗೆಯೇ ಸಿಫಿಯಾ ಅವರು ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಎಜುಥಾಚನ್ ತರಬೇತಿ ಕಾಲೇಜಿನಿಂದ ಬಿಎಡ್ ಮತ್ತು ಎಂಎಸ್ಡಬ್ಲ್ಯೂ ಮತ್ತು ದೂರ ಶಿಕ್ಷಣದ ಮೂಲಕ ಸಾರ್ವಜನಿಕ ಆಡಳಿತದಲ್ಲಿ ಡಿಪ್ಲೊಮಾ ಸೇರಿದಂತೆ ಅನೇಕ ಪದವಿಗಳನ್ನು ಪಡೆದರು.


ಈ ಎಲ್ಲದರ ಮೂಲಕ ಸಿಫಿಯಾ ತನ್ನ ಶಿಕ್ಷಣಕ್ಕಾಗಿ ಮಾತ್ರವಲ್ಲದೆ, ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿಯೂ ಕೂಡಾ ಅನೇಕ ಉದ್ಯೋಗಗಳನ್ನು ಮಾಡುತ್ತಾ ಹಣ ಹೊಂದಿಸಿದರು. ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವುದರಿಂದ ಹಿಡಿದು ಮಕ್ಕಳಿಗೆ ಪಾಠ ಮಾಡುತ್ತ ಹಣಗಳಿಸುವುದರಲ್ಲಿ ಯಶಸ್ವಿಯಾದರು. ಪ್ರಸ್ತುತ ಅವರು ಪ್ರಾಥಮಿಕ ಶಾಲೆಯಲ್ಲಿ ಪೂರ್ಣ ಸಮಯದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೇಗಾದರೂ, ಅವರು ತನ್ನ ಗುರಿಗಳನ್ನು ಸಾಧಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಮತ್ತು ಇತರರಿಗೆ ಸಹಾಯ ಹಸ್ತ ನೀಡಲು ಯಾವಾಗಲೂ ಸಿದ್ಧರಾಗಿದ್ದಾರೆ ಎನ್ನುತ್ತಾರೆ.


ನೂರಾರು ಜೀವಗಳಿಗೆ ಆಸರೆ

2013 ರ ಕೊನೆಯಲ್ಲಿ ಸಿಫಿಯಾ ಹಲವಾರು ವಿಧವೆಯರನ್ನು ತಮ್ಮ ಹಳ್ಳಿಯಲ್ಲಿ ಭೇಟಿಯಾದರು. ಅದು ಅವರಿಗೆ ತಾವು ಪಟ್ಟ ಕಷ್ಟವನ್ನೆಲ್ಲ ನೆನಪಿಸಿತು ಮತ್ತು ಅವರಿಗಾಗಿ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ತನ್ನ ವೇತನದ ಸ್ವಲ್ಪ ದುಡ್ಡನ್ನು ಅಗತ್ಯವಿರುವ ೫ ಕುಟುಂಬಗಳಿಗೆ ನೀಡುತ್ತ ತಮ್ಮ ಸೇವೆಯನ್ನು ಪ್ರಾರಂಭಿಸಿದರು.


ಮುಂದೆ ತಮ್ಮ ಈ ಸಹಾಯವನ್ನು ಅನಾರೋಗ್ಯದಿಂದ ಬಳಲುತ್ತಿರುವ ತಾಯಂದಿರು, ಮಕ್ಕಳು, ಹಿರಿಯರು ಮತ್ತು ಕ್ಯಾನ್ಸರ್‌ ರೋಗಿಗಳಿಗೂ ಮಾಡಲು ಪ್ರಾರಂಭಿಸಿದರು. ೨ ವರ್ಷಗಳ ನಂತರ ತಮ್ಮ ಈ ಕೆಲಸವನ್ನು ಮುಂದುವರೆಸುವುದಕ್ಕಾಗಿ ಚಾರಿಟೇಬಲ್‌ ಟ್ರಸ್ಟ್‌ ಒಂದನ್ನು ತೆರೆಯಲು ನಿರ್ಧರಿಸಿದರು.


ಸಿಫಿಯಾ ಹನೀಫ್ ವಯಸ್ಸಾದ ಮಹಿಳೆಯ ಕಷ್ಟವನ್ನು ಕೇಳುತ್ತಿರುವುದು.


“ಚಿಥಾಲ್ ಎಂದರೆ ಮಲಯಾಳಂನಲ್ಲಿ ‘ಗೆದ್ದಲುಗಳು’. ಈ ಪದವು ನಕಾರಾತ್ಮಕ ಅರ್ಥವನ್ನು ನೀಡುವಂತೆ ಭಾಸವಾಗುತ್ತದೆ, ಆದರೆ ಅದು ನಿಜವಲ್ಲ. ಅದೇನು ಮಾಡುತ್ತೆ ಎಂದು ನಾವು ಅಸಡ್ಡೆ ತೋರಿಸುತ್ತಿರುವಾಗ ಗೆದ್ದಲು ಸದ್ದಿಲ್ಲದೆ ತನ್ನ ಕೆಲಸ ಮುಗಿಸಿಕೊಂಡಿರುತ್ತದೆ, ನಾನು ಜನರಿಗಾಗಿ ಇದ್ದು, ಅವರ ಎಲ್ಲ ಚಿಂತೆಗಳನ್ನು ತಿನ್ನಲು ಬಯಸುತ್ತೇನೆ ಅವರ ಕಷ್ಟಗಳನ್ನು ಅವರಿಂದ ದೂರ ಮಾಡಲು ಬಯಸುತ್ತೇನೆ,” ಎಂದು ಸಿಫಿಯಾ ವಿವರಿಸುತ್ತಾರೆ.


ಇಂದು, ಅವರು ಅಗತ್ಯವಿರುವವರಿಗೆ ಆಹಾರ, ಬಟ್ಟೆ ಮತ್ತು ಔಷಧಿಗಳನ್ನು ಖರೀದಿಸಲು ಜನರಿಂದ ಹಣವನ್ನು ಸಂಗ್ರಹಿಸಲು ಸಾಮಾಜಿಕ ಮಾಧ್ಯಮ ಮತ್ತು ಕ್ರೌಡ್‌ಸೋರ್ಸಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುತ್ತಿದ್ದಾರೆ. ಇಲ್ಲಿಯವರೆಗೆ, ಅವರು 200 ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ.