ರಸ್ತೆ ಸುರಕ್ಷತೆಯನ್ನು ಉತ್ತಮಪಡಿಸುವ ಸಲುವಾಗಿ ಆಲ್ಕೋಹಾಲ್ ಪ್ರಮಾಣ ಪತ್ತೆ ಹಚ್ಚುವ ಉತ್ಕೃಷ್ಟ ಮಾದರಿಯ ಸಾಧನವನ್ನು ಸಂಶೋಧಿಸಿರುವ ಹೈದರಾಬಾದಿನ 22 ರ ಹರೆಯದ ಯುವಕ

ಹೈದರಾಬಾದ್ ನಿವಾಸಿ ಸಾಯಿ ತೇಜ ರಸ್ತೆ ಸುರಕ್ಷತೆಯನ್ನು ಉತ್ತಮಪಡಿಸುವ ಸಲುವಾಗಿ ಉತ್ಕೃಷ್ಟ ಮಾದರಿಯ ಆಲ್ಕೋಹಾಲ್ ಪ್ರಮಾಣ ಪತ್ತೆ ಹಚ್ಚುವ ಸಾಧನವೊಂದನ್ನು ಸಂಶೋಧಿಸಿ ಅಭಿವೃದ್ಧಿಪಡಿಸಿದ್ದಾರೆ. ಅದು ಮದ್ಯಪಾನ ಮಾಡಿರುವ ವಾಹನ ಚಾಲಕನ ದೇಹದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಗ್ರಹಿಸಿ ಆತ ಚಾಲನೆ ಮಾಡುತ್ತಿರುವ ವಾಹನವನ್ನು ತಕ್ಷಣ ನಿಲ್ಲುವಂತೆ ಮಾಡುತ್ತದೆ.

ರಸ್ತೆ ಸುರಕ್ಷತೆಯನ್ನು ಉತ್ತಮಪಡಿಸುವ ಸಲುವಾಗಿ ಆಲ್ಕೋಹಾಲ್ ಪ್ರಮಾಣ ಪತ್ತೆ ಹಚ್ಚುವ ಉತ್ಕೃಷ್ಟ ಮಾದರಿಯ ಸಾಧನವನ್ನು ಸಂಶೋಧಿಸಿರುವ ಹೈದರಾಬಾದಿನ 22 ರ ಹರೆಯದ ಯುವಕ

Friday August 16, 2019,

2 min Read

ಕಾನೂನಿನ ಅನ್ವಯ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಭಾರತ ಮತ್ತು ಇತರ ದೇಶಗಳಲ್ಲಿಯೂ ಸಹ ಅಪರಾಧವೆಂದು ಪರಿಗಣಿಸಲ್ಪಟ್ಟಿದೆ. ಆದರೂ ಜನರು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ನಿಂತಿರುವುದಿಲ್ಲ. ಬಹಳಷ್ಟು ಜನರು ಅದು ಅಂತಹ ಅಪರಾಧವಲ್ಲವೆಂದು ವಾದ ಮಾಡುತ್ತಾರೆ. ಆದರೆ ನಾವು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವಾಗ ನಮ್ಮ ಜೀವಕ್ಕೆ ಮಾತ್ರವಲ್ಲದೇ ರಸ್ತೆಯಲ್ಲಿ ಸಂಚರಿಸುವ ಇತರರ ಜೀವಕ್ಕೂ ಅಪಾಯ ತರುವ ಸಂಭವವಿದೆ ಎಂಬುದನ್ನು ಮರೆಯಬಾರದು.


ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ತಪ್ಪಿಸುವುದು ಮತ್ತು ರಸ್ತೆ ಸುರಕ್ಷತೆಯನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಕೇವಲ ಹತ್ತನೆಯ ತರಗತಿಯವರಗೆ ಓದಿರುವ ಹೈದರಾಬಾದಿನ ನಿವಾಸಿ 22 ವರ್ಷದ ಸಾಯಿ ತೇಜ ಒಂದು ಉತ್ಕೃಷ್ಟ ಮಾದರಿಯ ಯಂತ್ರವನ್ನು ಸಂಶೋಧಿಸಿದ್ದಾರೆ. ಈ ಸಾಧನವು ಚಾಲಕನು ಮದ್ಯಪಾನ ಮಾಡಿದ್ದರೆ, ಅದನ್ನು ಗುರುತಿಸಿ ತಕ್ಷಣವೇ ವಾಹನದ ಎಂಜಿನ್ನನ್ನು ಸ್ಥಬ್ಧಗೊಳಿಸುತ್ತದೆ.


ಟ

ಚಿತ್ರ:ಆಲ್ಕೋಹಾಲ್ ಪ್ರಮಾಣವನ್ನು ಪತ್ತೆ ಹಚ್ಚುವ ಸಾಧನ ಮತ್ತು ಅದರ ಸಂಶೋಧಕ ತೇಜ ತಮ್ಮ ಕಾರ್ಯದಲ್ಲಿ ನಿರತರಾಗಿರುವುದು |ಮೂಲ:ಎಎನ್‌ಐ

ಈ ಸಾಧನವನ್ನು ವಾಹನದ ಡ್ಯಾಶ್ ಬೋರ್ಡಿನ ಮೇಲೆ ಇಡಬಹುದಾಗಿದೆ. ಅದು ವಾಹನ ಚಾಲಕನು ಮದ್ಯಪಾನ ಮಾಡಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ಒಂದು ವೇಳೆ ಚಾಲಕನು ಮದ್ಯಪಾನ ಮಾಡಿದ್ದರೆ ವಾಹನದ ಎಂಜಿನ್ನನ್ನು ತಕ್ಷಣವೇ ಸ್ಥಬ್ಧಗೊಳಿಸುವುದೇ ಅಲ್ಲದೇ ಸಂಗ್ರಹಿಸಲ್ಪಟ್ಟಿರುವ ಮೊಬೈಲ್ ನಂಬರುಗಳಿಗೆ ಸಂದೇಶವೊಂದನ್ನು ರವಾನಿಸುತ್ತದೆ ಎಂದು ದಿ ಕ್ವಿಂಟ್ ವರದಿ ಹೇಳುತ್ತದೆ.


ತಾವು ಸಂಶೋಧಿಸಿರುವ ಸಾಧನದ ಬಗ್ಗೆ ವಿವರಿಸುತ್ತಾ ತೇಜ ಎ ಎನ್ ಐ ಗೆ ಹೀಗೆ ಹೇಳುತ್ತಾರೆ


“ನಾನು ಕೆಲವು ಕಾರಣಗಳಿಂದ ಹತ್ತನೆಯ ತರಗತಿಗೆ ನನ್ನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದೆ. ಆದರೆ ನಾನು ಎಲೆಕ್ಟ್ರಾನಿಕ್ಸಿನಲ್ಲಿ ಆಸಕ್ತನಾಗಿದ್ದು ಅಂತರ್ಜಾಲದಿಂದ ಜ್ಞಾನವನ್ನು ಸಂಪಾದಿಸಿದೆ. ಕೋಡಿಂಗ್ ಮಾಡುವುದನ್ನು ಅಂತರ್ಜಾಲದಿಂದ ಕಲಿತು ನಾನು ಆಲ್ಕೋಹಾಲ್ ಪ್ರಮಾಣವನ್ನು ಪತ್ತೆ ಹಚ್ಚುವ ಸಾಧನವನ್ನು ಸಂಶೋಧಿಸಿದೆ. ಇದು ವಾಹನ ಚಾಲಕನ ದೇಹದಲ್ಲಿ ಪ್ರತಿಶತಃ 30 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಇದ್ದರೆ, ವಾಹನದ ಎಂಜಿನ್ನು ಕಾರ್ಯನಿರ್ವಹಿಸದಂತೆ ತಡೆಯುತ್ತದೆ.


ಉತ್ತಮ ರಸ್ತೆ ಸುರಕ್ಷತೆ


“ಈ ಸಾಧನಕ್ಕೆ ಅಳವಡಿಸಿರುವ ಮೈಕ್ರೋಕಂಟ್ರೋಲಿನಲ್ಲಿ ಸಂಗ್ರಹಿಸಿರುವ ಮೊಬೈಲ್ ಸಂಖ್ಯೆಗಳಿಗೆ ವಾಹನದ ನೋಂದಣಿ ಸಂಖ್ಯೆಯ ಸಮೇತ ಸಂದೇಶ ರವಾನೆಯಾಗುತ್ತದೆ. ಈ ಸಾಧನವನ್ನು ತಯಾರಿಸಲು ನನಗೆ 15 ದಿನಗಳ ಸಮಯ ಹಿಡಿಯಿತು ಮತ್ತು ಇದರ ಬೆಲೆ 2500 ರೂಪಾಯಿಗಳಾಗಿದೆ.” ಎಂದು ಸಾಯಿ ತೇಜ ಸ್ಪಷ್ಟಪಡಿಸುತ್ತಾರೆ.


ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ರಸ್ತೆ ಸುರಕ್ಷತೆಯು ಬಹಳಷ್ಟು ಚಿಂತಾಜನಕ ಸ್ಥಿತಿಯಲ್ಲಿದೆ. ಆಲ್ಕೋಹಾಲ್ ಅಥವಾ ಡ್ರಗ್ ಸೇವನೆಯಿಂದ 2016 ರಲ್ಲಿ ಸಂಭವಿಸಿರುವ 14,894 ರಸ್ತೆ ಅಪಘಾತಗಳಲ್ಲಿ 6,131 ಜನ ಪ್ರಾಣ ಕಳೆದುಕೊಂಡಿದ್ದಾರೆ.


ತೇಜ ಸಂಶೋಧಿಸಿರುವ ಸಾಧನಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಬಂದರೆ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದ ಸಂಭವಿಸುವ ರಸ್ತೆ ಅಪಘಾತಗಳು ನಮ್ಮ ದೇಶದಲ್ಲಿ ಕಡಿಮೆಯಾಗಿ ಜನರ ಅಮೂಲ್ಯವಾದ ಪ್ರಾಣವನ್ನು ರಕ್ಷಿಸಬಹುದಾಗಿದೆ.