ಸುಧಾರಿತ ಗಾಲಿಕುರ್ಚಿಗಳಿಂದ ವಿಶೇಷ ಚೇತನರಿಗೆ ಸಹಾಯಮಾಡುತ್ತಿದೆ ಡೆಸಿಂಟಾಕ್ಸ್‌

ತ್ರಿಸ್ಸೂರಿನ ಡಾನ್ ಪಾಲ್ ಮತ್ತು ಸೂರಜ್ ಚಂದ್ರನ್ ಅವರು ಅಂಗವಿಕಲರ ಜೀವನವನ್ನು ಸುಲಭಗೊಳಿಸುವ ಉದ್ದೇಶದಿಂದ ಸುಧಾರಿತ ಗಾಲಿಕುರ್ಚಿಗಳನ್ನು ತಯಾರಿಸುತ್ತಿದ್ದಾರೆ.

ಸುಧಾರಿತ ಗಾಲಿಕುರ್ಚಿಗಳಿಂದ ವಿಶೇಷ ಚೇತನರಿಗೆ ಸಹಾಯಮಾಡುತ್ತಿದೆ ಡೆಸಿಂಟಾಕ್ಸ್‌

Tuesday February 25, 2020,

4 min Read

ವಿಶ್ವಪ್ರಸಿದ್ಧ ಸೈದ್ಧಾಂತಿಕ ಭೌತಶಾಸ್ತ್ರಜ್ಞ ಸ್ಟೀಫನ್ ಹಾಕಿಂಗ್ ಅವರು ವರ್ಧಿತ ಮತ್ತು ಪರ್ಯಾಯ ಸಂವಹನಕ್ಕೆ ಒಳಪಟ್ಟವರಲ್ಲಿ ಮೊದಲಿಗರಾಗಿದ್ದರು. ಈ ವಿಜ್ಞಾನಿಯಿಂದ ಪ್ರೇರಿತರಾಗಿ ಕೇರಳದ ಇಬ್ಬರು ಉದ್ಯಮಿಗಳು ಭಾರತೀಯ ಅಂಗವಿಕಲರು ಎಲ್ಲರಂತೆ ಸಾಮಾನ್ಯ ಜೀವನವನ್ನು ನಡೆಸಲು ಸಹಾಯ ಮಾಡಲು ಡೆಸಿಂಟಾಕ್ಸ್ ಟೆಕ್ನಾಲಜೀಸ್ ಅನ್ನು ಸ್ಥಾಪಿಸಿದರು.


ತ್ರಿಸ್ಸೂರು ಮೂಲದ ಸ್ಟಾರ್ಟ್ಅಪ್ ಅನ್ನು 24 ವರ್ಷದ ಡಾನ್ ಪಾಲ್ ಮತ್ತು ಸೂರಜ್ ಚಂದ್ರನ್ ಅವರು "ವಿಶೇಷ ಸಾಮರ್ಥ್ಯದ ಜನರಿಗೆ ಉತ್ತಮ ಮತ್ತು ಸ್ವಾವಲಂಬಿ ಜೀವನವನ್ನು ನಡೆಸಲು ಅನುವು ಮಾಡಿಕೊಡಲು" ಸ್ಥಾಪಿಸಿದರು. ಅವರ ಸ್ನೇಹಿತರಾದ ವಿಷ್ಣು ಕೆ.ಎಸ್ ಮತ್ತು ರುಬೆನ್ ರೆಗಿ ಸಹ ಸಂಸ್ಥಾಪಕ ತಂಡದ ಭಾಗವಾಗಿದ್ದರು ಆದರೆ, ಮೊದಲ ಆರು ತಿಂಗಳ ನಂತರ ಅವರು ಸಂಸ್ಥೆಯನ್ನು ತ್ಯಜಿಸಿದರು.


ನಿಂತಿರುವ ಗಾಲಿಕುರ್ಚಿಯ ಸ್ಮಾರ್ಟ್‌ಮೋಟಿವ್‌ನೊಂದಿಗೆ ಡಾನ್ ಪಾಲ್ ಮತ್ತು ಸೂರಜ್ ಚಂದ್ರನ್


ಪುಟ್ಟನಗರದಲ್ಲಿ ದೊಡ್ಡ ಕನಸುಕಾಣುವ ಕಂಗಳು

ತ್ರಿಸ್ಸೂರಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಮ್ಮ ಬಿಟೆಕ್ ವ್ಯಾಸಂಗ ಮಾಡುತ್ತಿರುವಾಗ, ಇವರಿಬ್ಬರು ತಮ್ಮ ಕಾಲೇಜಿನ ಪ್ರೊಜೆಕ್ಟ್ನ ಭಾಗವಾಗಿ ಸೆರೆಬ್ರಲ್ ಪಾಲ್ಸಿ ಪೀಡಿತ ಮಕ್ಕಳಿಗೆ ನಡೆಯಲು ನೆರವಾಗುವ ಸಾಧನವನ್ನು ಅಭಿವೃದ್ಧಿಪಡಿಸಿದರು.


"ನಾವು ತ್ರಿಸ್ಸೂರಿನಲ್ಲಿರುವ ಮಗುವಿಗೆ ಸಹಾಯ ಮಾಡಲು ಈ ಸಾಧನವನ್ನು ಉಡುಗೊರೆಯಾಗಿ ನೀಡಿದ್ದೇವೆ. ಅವರ ಮಗು ನಮ್ಮ ಸಾಧನವನ್ನು ಮೊದಲ ಬಾರಿಗೆ ಬಳಸುವುದನ್ನು ನೋಡಿದಾಗ ತಾಯಿಯ ಕಣ್ಣಿನಲ್ಲಿ ಕಂಡ ಕಣ್ಣೀರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ," ಎಂದು ಡಾನ್ ಹೇಳುತ್ತಾರೆ.


ಪದವಿ ಪಡೆದ ನಂತರ, ಡಾನ್ ತನ್ನ ಹೆತ್ತವರ ಸೂಚನೆಗಳನ್ನು ಅನುಸರಿಸಿ ನಾಗರಿಕ ಸೇವಾ ಪರೀಕ್ಷೆಗಾಗಿ ತಯಾರಿ ಆರಂಭಿಸಿದರು. ಮತ್ತೊಂದೆಡೆ, ಸೂರಜ್ ಕ್ರಾಬ್ರಿಸ್ಟ್ ಟೆಕ್ನಾಲಜೀಸ್ನಲ್ಲಿ ವಿನ್ಯಾಸ ಎಂಜಿನಿಯರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.


ಅವರ ಸ್ನೇಹಿತರಲ್ಲೊಬ್ಬರು ಅಪಘಾತಕ್ಕೀಡಾದಾಗಲೇ ಪ್ಯಾರಾಪ್ಲೆಜಿಕ್ ರೋಗಿಗಳಿಗೆ ಈ ರೀತಿಯ ಪೋಷಕ ಯಂತ್ರಗಳ ಅಗತ್ಯವಿರುತ್ತದೆ ಎಂದು ಇಬ್ಬರೂ ಅರಿತುಕೊಂಡರು.


ಮೇ 2017 ರಲ್ಲಿ ಸ್ಥಾಪನೆಯಾದ ಡೆಸಿಂಟಾಕ್ಸ್ ಟೆಕ್ನಾಲಜೀಸ್‌ಗೆ ಜುಲೈ 2017 ರಲ್ಲಿ ಕೊಚ್ಚಿಯ ಮೇಕರ್ ವಿಲೇಜ್‌ನಲ್ಲಿ ಸರಿಯಾದ ರೂಪುರೇಷೆ ನೀಡಲಾಯಿತು. ತಮ್ಮ ಕಾಲೇಜು ಯೋಜನೆಯನ್ನು ಮುಂದುವರೆಸುತ್ತಾ, ಸಂಸ್ಥಾಪಕರು ಇದೇ ರೀತಿಯ ಸೆರೆಬ್ರಲ್ ಪಾಲ್ಸಿ ವಾಕಿಂಗ್ ಸಾಧನವನ್ನು ಅಭಿವೃದ್ಧಿಪಡಿಸಿದರು, ಇದನ್ನು ಈಸಿಮೂವರ್‌ ಎಂದು ಕರೆಯಲಾಗುತ್ತದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಾದ ಆಲ್ಫಾ ಪ್ಯಾಲಿಯೇಟಿವ್ ಕೇರ್‌ಗೆ ಇವರಿಬ್ಬರು ನಾಲ್ಕು ಘಟಕಗಳನ್ನು ದಾನ ಮಾಡಿದ್ದಾರೆ. ಪ್ರಸ್ತುತ, ಕಂಪನಿಯು ಐದು ಸದಸ್ಯರನ್ನು ಹೊಂದಿದೆ.


ಈಸಿಮೂವರ್


ಡೆಸಿಂಟಾಕ್ಸ್ ಟೆಕ್ನಾಲಜೀಸ್‌ನ ಉತ್ಪನ್ನಗಳು

ಡೆಸಿಂಟಾಕ್ಸ್ ಟೆಕ್ನಾಲಜೀಸ್ ಪ್ರಸ್ತುತ ನಾಲ್ಕು ಉತ್ಪನ್ನಗಳನ್ನು ಹೊಂದಿದೆ - ಈಸಿಮೂವರ್‌, ಹಾಯ್ಸ್ಟ್, ಸ್ಮಾರ್ಟ್ಮೋಟಿವ್ ಮತ್ತು ಎಲೆಕ್ಟ್ರಿಕ್ ಗಾಲಿಕುರ್ಚಿ.


75,000 ಮತ್ತು 88,000 ರೂಪಾಯಿಗಳ ಬೆಲೆಯ ಹಾಯ್ಸ್ಟ್, ನಿಯಂತ್ರಕ ಮತ್ತು ಸುರಕ್ಷತಾ ಸ್ವಿಚ್ ಹೊಂದಿರುವ ರೋಗಿಗಳ ವರ್ಗಾವಣೆ ಮಾಡುವ ಸಾಧನವಾಗಿದೆ. "ಇದನ್ನು ಹೆಚ್ಚಾಗಿ ರೋಗಿಯನ್ನು ಹಾಸಿಗೆ, ಕುರ್ಚಿ ಮತ್ತು ಶೌಚಾಲಯಗಳಿಗೆ ವರ್ಗಾಯಿಸಲು ಬಳಸಲಾಗುತ್ತದೆ," ಎಂದು ಡಾನ್ ಹೇಳುತ್ತಾರೆ.


75,000 ರಿಂದ 1.3 ಲಕ್ಷ ರೂ.ಗಳ ಬೆಲೆಯ ಸ್ಮಾರ್ಟ್‌ಮೋಟಿವ್, ಬೇರೆ ಗಾಲಿಕುರ್ಚಿಯಿಂದ ವಿಭಿನ್ನವಾಗಿದ್ದು, ರೋಗಿಗೆ ಸಹಾಯ ಮಾಡುವ ಸಲುವಾಗಿ ನಿಲ್ಲಬಲ್ಲ ಗಾಲಿಕುರ್ಚಿಯಾಗಿದೆ. "ಇದು ಪ್ಯಾರಾಪ್ಲೆಜಿಕ್ ರೋಗಿಗೆ ನಿಲ್ಲಲು ಸಹಾಯ ಮಾಡುತ್ತದೆ, ಮನೆಯಲ್ಲಿ ಗಾಲಿಕುರ್ಚಿ ಮತ್ತು ಟಿಲ್ಟಿಂಗ್ ಟೇಬಲ್‌ನ ಪ್ರಯೋಜನಗಳನ್ನು ಒದಗಿಸುತ್ತದೆ," ಎಂದು ಡಾನ್ ಹೇಳುತ್ತಾರೆ. ಸಾಧನವನ್ನು ವಿನ್ಯಾಸಗೊಳಿಸಿರುವ ರೀತಿಯಿಂದ ರೋಗಿಯು ಯಾರ ಸಹಾಯವಿಲ್ಲದೆ ನಿಂತು, ಕೆಲಸ ಮಾಡಬಹುದಾಗಿದೆ.


ಎಲೆಕ್ಟ್ರಿಕ್ ಗಾಲಿಕುರ್ಚಿ ಬ್ಯಾಟರಿಯೊಂದಿಗೆ ಬರುತ್ತದೆ ಮತ್ತು ಪ್ಯಾರಾಪ್ಲೆಜಿಕ್ ರೋಗಿಗಳು ಒಂದೇ ಚಾರ್ಜ್‌ನಲ್ಲಿ 20 ಕಿ.ಮೀ.ವರೆಗೆ ಪ್ರಯಾಣಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಜಾಯ್‌ಸ್ಟಿಕ್ ಸ್ವಿಚ್ ಇದೆ, ಇದರಿಂದ ಬಳಕೆದಾರರು ತಮಗೆ ಬೇಕಾದ ಸ್ಪೀಡ್‌, ಒರಗುವುದು ಮತ್ತು ಎತ್ತರ ಹೊಂದಾಣಿಕೆಯನ್ನು ಸೆಟ್‌ ಮಾಡಬಹುದು.


"ಈ ಗಾಲಿಕುರ್ಚಿಯನ್ನು ಕೈಯಿಂದ ಮತ್ತು ವಿದ್ಯುತ್ ಚಾಲನೆ ಸೌಲಭ್ಯಗಳೊಂದಿಗೆ ನಿಯಂತ್ರಿಸಬಹುದು ಅಲ್ಲದೆ ಮಲಗಲು ಸಹಾಯವಾಗುವಂತೆ ವೈಶಿಷ್ಟ್ಯಪೂರ್ಣ ಸೌಲಭ್ಯವನ್ನು ಇದು ಹೊಂದಿದೆ. ಇದನ್ನು ಅವಷ್ಯಕತೆಗೆ ತಕ್ಕಂತೆ ಕಸ್ಟಮೈಸ್ ಕೂಡಾ ಮಾಡಬಹುದು," ಎಂದು ಡಾನ್ ಹೇಳುತ್ತಾರೆ


ಮೋಟಾರುಗಳನ್ನು ಹಾಂಗ್ ಕಾಂಗ್, ಜಪಾನ್ ಮತ್ತು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾಗಿದ್ದರೆ, ಸಾಧನಗಳ ಯಾಂತ್ರಿಕ ಚೌಕಟ್ಟನ್ನು ತ್ರಿಸ್ಸೂರಿನಲ್ಲಿಯೇ ತಯಾರಿಸಲಾಗುತ್ತದೆ. "ನಾವು ತ್ರಿಸ್ಸೂರಿನಲ್ಲಿ ಅಗತ್ಯವಿರುವ ಸೌಲಭ್ಯವನ್ನು ಹೊಂದಿದ್ದೇವೆ," ಎಂದು ಅವರು ಹೇಳುತ್ತಾರೆ. ಮೂಲ ಗಾಲಿಕುರ್ಚಿಯ ಬೆಲೆ 68,000 ರೂ, ಮತ್ತು ಎಲೆಕ್ಟ್ರಿಕ್ ಸ್ಟ್ಯಾಂಡಿಂಗ್ ಗಾಲಿಕುರ್ಚಿಯ ಬೆಲೆ 1.85 ಲಕ್ಷ ರೂ, ಈಸಿಮೂವರ್‌ನ ಬೆಲೆ 14,990 ರೂ. ಆಗಿದೆ.


ಮುಂದಿರುವ ಸವಾಲುಗಳು

ಕಂಪನಿಯನ್ನು ಸ್ಥಾಪಿಸುವಾಗ ಡಾನ್ ಮತ್ತು ಸೂರಜ್ ಎದುರಿಸಿದ ಮೊದಲ ಸವಾಲು ಎಂದರೆ, ಸ್ನೇಹಿತರು ಮತ್ತು ಕುಟುಂಬದ ಬೆಂಬಲದ ಕೊರತೆ. ಆರಂಭದಲ್ಲಿ ತಮ್ಮ ಕೈಯಿಂದ 3 ಲಕ್ಷ ರೂ. ಮಾತ್ರ ಹೂಡಿಕೆ ಮಾಡಿದ ಈ ಜೋಡಿ ಶೀಘ್ರದಲ್ಲೇ ಮೊದಲ ಕೆಲವು ತಿಂಗಳ ನಂತರ ಹಣದ ಕೊರತೆಯನ್ನು ಎದುರಿಸಿತು. "ನಾವು ಲಾಭ-ಪ್ರೇರಿತ ಸ್ಟಾರ್ಟ್ ಅಪ್ ಆಗಲು ಬಯಸುವುದಿಲ್ಲ, ಮತ್ತು ಆರಂಭದಲ್ಲಿ ಯಾವುದೇ ಹೂಡಿಕೆದಾರರನ್ನು ಒಳಗೊಂಡಿರಲಿಲ್ಲ," ಎಂದು ಡಾನ್ ಹೇಳುತ್ತಾರೆ.


ಅವರು ಕೇರಳ ಸ್ಟಾರ್ಟ್ಅಪ್ ಮಿಷನ್‌ನಿಂದ 10 ಲಕ್ಷ ರೂ.ಗಳ ಅನುದಾನ ಪಡೆದಾಗ ಅವರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿತು, ಡೆಸಿಂಟಾಕ್ಸ್ ಟೆಕ್ನಾಲಜೀಸ್ ಅಖಿಲ ಭಾರತ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಫಾರ್ ನ್ಯಾಷನಲ್ ಸ್ಟಾರ್ಟ್ಅಪ್ ಸಮ್ಮಿಂಗ್ (ಐಐಎಸ್ಎಫ್ 2017) ಆಯ್ಕೆ ಮಾಡಿದ 10 ಸ್ಟಾರ್ಟಪ್‌ಗಳಲ್ಲಿ ಒಂದಾಗಿದೆ.


ಇದು 2017 ರಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ವ್ಯಾಪಾರ ಮೇಳದಲ್ಲಿ ಕೇರಳ ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗವನ್ನು ಪ್ರತಿನಿಧಿಸಿತು. ಈ ಪ್ರಾರಂಭವು ಕೇರಳ ಸರ್ಕಾರದ ಕೈಗಾರಿಕಾ ಮತ್ತು ವಾಣಿಜ್ಯ ನಿರ್ದೇಶನಾಲಯದಿಂದ ಶ್ರೇಷ್ಠತೆಗಾಗಿ ಪ್ರಶಸ್ತಿಯನ್ನು ಗೆದ್ದಿದೆ ಮತ್ತು ಎಂಎಸ್‌ಎಂಇ ಸಚಿವಾಲಯದ ಧನಸಹಾಯಕ್ಕಾಗಿ ಆಯ್ಕೆಯಾಗಿದೆ.


ವೈದ್ಯಕೀಯ ವಸ್ತುಗಳ ಮಾರುಕಟ್ಟೆ

ಇನ್ವೆಸ್ಟ್ ಇಂಡಿಯಾದ ವೆಬ್‌ಸೈಟ್ ಪ್ರಕಾರ, ಭಾರತವು ವಿಶ್ವದ ವೈದ್ಯಕೀಯ ಸಾಧನಗಳ ಅಗ್ರ 30 ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು 2025 ರ ವೇಳೆಗೆ ಮಾರುಕಟ್ಟೆಯ ಗಾತ್ರವು 50 ಶತಕೋಟಿಯನ್ನು ತಲುಪುವ ನಿರೀಕ್ಷೆಯಿದೆ.


ನಿಯೋಮೋಷನ್‌ನಂತಹ ಸ್ಟಾರ್ಟ್ಅಪ್‌ಗಳು ಗಾಲಿಕುರ್ಚಿಗಳನ್ನು ದಟ್ಟ ಕಾಡಿನಲ್ಲಿ ಇರುವ ಪ್ರದೇಶಗಳಿಗೆ ಸೇರಿದಂತೆ ದೂರದವರೆಗೆ ಪ್ರಯಾಣಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿವೆ. ಸೆರೆಬ್ರಲ್ ಪಾಲ್ಸಿ ಪೀಡಿತ ಮಕ್ಕಳಿಗೆ ಸರಿಯಾದ ಭಂಗಿಯಲ್ಲಿ ಉಪಯೋಗಿಸಲು ಸಹಾಯ ಮಾಡಲು ಬೆಂಗಳೂರು ಮೂಲದ ಮೊಬಿಲಿಟಿ ಇಂಡಿಯಾ ಸಾಧನವನ್ನು ವಿನ್ಯಾಸಗೊಳಿಸಿದೆ.


ಡೆಸಿಂಟಾಕ್ಸ್ ಟೆಕ್ನಾಲಜೀಸ್ ಅನ್ನು ಪ್ರತ್ಯೇಕವಾಗಿರಿಸುವುದು ಅದರ ಉತ್ಪನ್ನ ಮತ್ತು ಕೈಗೆಟುಕುವ ಬೆಲೆ. "ನಮ್ಮ ಸ್ಮಾರ್ಟ್ಮೋಟಿವ್ ಉತ್ಪನ್ನವು ಭಾರತದ ಹೊರಗೆ ಸ್ಪರ್ಧೆಯನ್ನು ಹೊಂದಿದೆ ಆದರೆ ಇಲ್ಲಿ ಯಾವುದೂ ಇಲ್ಲ," ಎಂದು ಡಾನ್ ಹೇಳುತ್ತಾರೆ. ಇಲ್ಲಿಯವರೆಗೆ, ಸ್ಟಾರ್ಟ್ಅಪ್ 30 ಈಸಿಮೂವರ್‌ಗಳನ್ನು ಒಳಗೊಂಡಂತೆ ಸುಮಾರು 50 ಉತ್ಪನ್ನಗಳನ್ನು ಮಾರಾಟ ಮಾಡಿದೆ.


ಭವಿಷ್ಯದ ಯೋಜನೆಗಳು

ಡೆಸಿಂಟಾಕ್ಸ್ ಟೆಕ್ನಾಲಜೀಸ್ ಈಗ ಸ್ವಾಯತ್ತ ಗಾಲಿಕುರ್ಚಿಯ ನಿರ್ಮಾಣದೆಡೆಗೆ ಕಾರ್ಯನಿರ್ವಹಿಸುತ್ತಿದೆ, ಇದನ್ನು ತಂಡವು 2020 ರ ವೇಳೆಗೆ ಬಿಡುಗಡೆಗೊಳಿಸಲು ಯೋಜಿಸಿದೆ.


"ಇದನ್ನು ರೋಗಿಯ ಆಲೋಚನೆಗಳಿಂದಲೇ ನಿಯಂತ್ರಿಸಬಹುದು. ಮತ್ತು ಈ ಗಾಲಿಕುರ್ಚಿ ಸ್ಟೀಫನ್ ಹಾಕಿಂಗ್ ಅವರ ಕುರ್ಚಿಗಿಂತ ಉತ್ತಮವಾಗಿರುತ್ತದೆ," ಎಂದು ಡಾನ್ ಹೇಳುತ್ತಾರೆ.


ಕಂಪನಿಯು ಬಿ 2 ಬಿ ಕ್ಲೈಂಟ್‌ಗಳತ್ತ ಗಮನ ಹರಿಸಿ ರಿಟೈಲ್ ವ್ಯಾಪಾರಿಗಳು ಮತ್ತು ಆಸ್ಪತ್ರೆಗಳೊಂದಿಗೆ ಮಾತುಕತೆ ಹಂತದಲ್ಲಿದೆ. ಕೇರಳ ಸ್ಟಾರ್ಟ್ಅಪ್ ಮಿಷನ್ ಮತ್ತು ಮೇಕರ್ ವಿಲೇಜ್ ಅಧಿಕಾರಿಗಳು ಶೀಘ್ರದಲ್ಲೇ ಹಲವಾರು ಕೇರಳ ಆಸ್ಪತ್ರೆಗಳಿಗೆ ಸಂಪರ್ಕ ಕಲ್ಪಿಸಲು ಮುಂದಾಗಿದ್ದಾರೆ. "ಪ್ರಯಾಣವು ಕಠಿಣವಾಗಿದೆ, ಆದರೆ ನನ್ನ ಉತ್ಸಾಹ ಫಲಪ್ರದವಾದಾಗ ನನಗೆ ದೊರೆತ ಸಂತೋಷವನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ," ಎಂದು ಡಾನ್ ಹೇಳುತ್ತಾರೆ