ಆರ್ಕ್ಟಿಕ್ ಸಮುದ್ರವು 2044 ನೇ ಇಸವಿಯ ಹೊತ್ತಿಗೆ ಭಾಗಶಃ ಮಂಜುಗಡ್ಡೆ ಮುಕ್ತ ಸಮುದ್ರವಾಗಬಹುದು

ಒಂದು ಅಧ್ಯಯನದ ಪ್ರಕಾರ ಮಾನವ ನಿರ್ಮಿತ ಹವಮಾನ ಬದಲಾವಣೆಗಳಿಂದಾಗಿ ಆರ್ಕ್ಟಿಕ್ ಸಮುದ್ರವು ಭಾಗಶಃವಾಗಿ ಪ್ರಾರಂಭವಾಗಿ ಕೊನೆಗೆ ಮಂಜುಗಡ್ಡೆ ಮುಕ್ತವಾಗಬಹುದು. ಈ ಪ್ರಕ್ರಿಯು 2044 ಮತ್ತು 2067 ನಡುವೆ ಪ್ರಾರಂಭವಾಗಬಹುದು.

ಆರ್ಕ್ಟಿಕ್ ಸಮುದ್ರವು 2044 ನೇ ಇಸವಿಯ ಹೊತ್ತಿಗೆ ಭಾಗಶಃ ಮಂಜುಗಡ್ಡೆ ಮುಕ್ತ ಸಮುದ್ರವಾಗಬಹುದು

Thursday November 21, 2019,

2 min Read

ಲಾಸ್ ಏಂಜಲಿಸ್: ಭೂಮಿಯ ಮೇಲೆ ಮನುಷ್ಯರ ವಾಸ್ತವ್ಯ ಶುರುವಾದಾಗಿನಿಂದ ಇಲ್ಲಿಯವರಗೆ ಆರ್ಕ್ಟಿಕ್ ಸಮುದ್ರದ ವೃತ್ತದಲ್ಲಿ ಪ್ರತಿವರ್ಷ ಚಳಿಗಾಲದಲ್ಲಿ ವಿಸ್ತಾರಗೊಳ್ಳುವ ಮತ್ತು ಬೇಸಿಗೆಯಲ್ಲಿ ಕುಗ್ಗುವ ಭಾರೀ ಪ್ರಮಾಣದ ಮಂಜುಗಡ್ಡೆ ಇದೆಯೆಂದು ಅಮೇರಿಕಾದ ಲಾಸ್ ಏಂಜಲ್ಸ್ ನಲ್ಲಿರುವ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ದೃಢಪಡಿಸಿದ್ದಾರೆ.


ಪ್ರತಿವರ್ಷ ಕನಿಷ್ಠ ಮೊತ್ತದ ಮಂಜಗಡ್ಡೆಯಿರುವ ಸೆಪ್ಟಂಬರ್ ತಿಂಗಳಿನಿಂದ ಮುಂದಕ್ಕೆ ಘನೀಕೃತವಾಗುವ ಮಂಜುಗಡ್ಡೆಯ ಮೊತ್ತದಲ್ಲಿ ಹೆಚ್ಚಳವಾಗುತ್ತದೆ. ಆದರೆ ಭೂಮಿಯ ಮೇಲೆ ಕಣ್ಗಾವಲು ನಡೆಸುತ್ತಿರುವ ಉಪಗ್ರಹಗಳ ವರದಿಯಿಂದ 1979 ರಿಂದ ಈ ಮೊತ್ತದಲ್ಲಿ ಒಂದು ದಶಕಕ್ಕೆ ಪ್ರತಿಶತಃ 13 ರಷ್ಟು ಕಡಿಮೆಯಾಗುತ್ತಿರುವುದು ಕಂಡುಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಹಲವಾರು ದಶಕಗಳಿಂದ, ಪರಿಸರವನ್ನು ಪ್ರವೇಶಿಸುತ್ತಿರುವ ಇಂಗಾಲದ ಡೈ ಆಕ್ಸೈಡ್ ಹವಾಮಾನದ ಮೇಲೆ ಮಾಡುತ್ತಿರುವ ಪರಿಣಾಮಗಳನ್ನು ತಿಳಿಸುವ ಪ್ರಾಪಂಚಿಕ ಹವಾಮಾನ ಮಾದರಿಗಳ ಸಹಾಯದಿಂದ ಆರ್ಕ್ಟಿಕ್ ಸಮುದ್ರದಲ್ಲಿರುವ ಮಂಜುಗಡ್ಡೆಯು ಏನಾಗಬಹುದೆಂಬ ಭವಿಷ್ಯವನ್ನು ವಿಜ್ಞಾನಿಗಳು ಅರಿಯಲು ಪ್ರಯತ್ನಿಸುತಿದ್ದಾರೆ.


ಪ್ರಾಕೃತಿಕ ಹವಾಮಾನ ಬದಲಾವಣೆಯ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನದ ಪ್ರಕಾರ ಈ ಹವಾಮಾನ ಮಾದರಿಗಳು ಒಪ್ಪಲಾಗದ ವಿಭಿನ್ನ ಫಲಿತಾಂಶಗಳನ್ನು ಸೂಚಿಸುತ್ತಿವೆ ಎಂದು ತಿಳಿದುಬಂದಿದೆ


ಪ್ರಸ್ತುತ ಹವಾಮಾನ ಮಾದರಿಗಳಲ್ಲಿ ಕೆಲವೊಂದು ಆರ್ಕ್ಟಿಕ್ ಸಮುದ್ರವು 2026 ರ ಹೊತ್ತಿಗೆ ಮಂಜುಗಡ್ಡೆ ಮುಕ್ತವಾದ ಸೆಂಪ್ಟೆಂಬರ್ ತಿಂಗಳುಗಳನ್ನು ಸೂಚಿಸಿದರೆ ಮತ್ತೆ ಕೆಲವು ಈ ವಿದ್ಯಾಮಾನವು 2132 ರಿಂದ ಮಾತ್ರ ಪ್ರಾರಂಭವಾಗುತ್ತದೆ ಎಂಬುದನ್ನು ಸೂಚಿಸುತ್ತವೆ.


ಸಮುದ್ರದ ಮಂಜುಗಡ್ಡೆಯ ನಷ್ಟವನ್ನು ಅಳೆಯುತ್ತಿರುವ ಈ ಹವಾಮಾನ ಮಾದರಿಗಳಲ್ಲಿ ವಿಭಿನ್ನತೆ ಕಂಡುಬಂದಿರುವುದು ಸಮುದ್ರ ಮಂಜುಗಡ್ಡೆಯ ಆಲ್ಬೆಡೋ ಎಂಬ ಪ್ರಕ್ರಿಯೆಯ ಫಲಿತಾಂಶಗಳ ಅರಿತುಕೊಳ್ಳುವುದರಿಂದಾಗಿದೆ ಎಂಬುದನ್ನು ಅಮೇರಿಕಾದ ಲಾಸ್ ಏಂಜಲ್ಸ್ ನಲ್ಲಿರುವ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದ ಸಹಾಯಕ ಸಂಶೋಧಕ ಮತ್ತು ಈ ಅಧ್ಯಯನದ ಬರಹಗಳ ಮುಖ್ಯ ಲೇಖಕರಾದ ಚಾಡ್ ಥ್ಯಾಕರೆ ತಿಳಿಸಿದ್ದಾರೆ.


ಈ ಪ್ರಕ್ರಿಯೆಯು ಸಮುದ್ರದ ಮಂಜುಗಡ್ಡೆಯ ಒಂದು ಆವೃತ್ತಿ ಸೂರ್ಯನ ಬಿಸಿಲಿಗೆ ಸಂಪೂರ್ಣವಾಗಿ ಕರಗಿ ಸಮುದ್ರದ ನೀರಿನ ಮೇಲ್ಮೈನಿಂದ ಕಾಣೆಯಾದಾಗ ಸಂಭವಿಸುತ್ತದೆ.


ಇದರಿಂದಾಗಿ ಸಮುದ್ರದ ನೀರಿನ ಮೇಲ್ಮೈನಿಂದ ಪ್ರತಿಫಲಿಸುವ ಸೂರ್ಯನ ಬೆಳಕು ಅಥವಾ ಆಲ್ಬೆಡೋ ಪ್ರಕ್ರಿಯೆ ಸ್ಥಳೀಯ ತಾಪಮಾನದ ಏರಿಕೆಗೆ ಕಾರಣವಾಗುತ್ತದೆ. ಇದು ಮತ್ತಷ್ಟು ಮಂಜುಗಡ್ಡೆಯು ಕರಗುವಿಕೆಗೆ ಚಾಲನೆ ನೀಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.


ಸಮುದ್ರ ಮಂಜುಗಡ್ಡೆಯ ಆಲ್ಬೆಡೋ ಪ್ರಕ್ರಿಯೆಯು ಹವಾಮಾನ ಬದಲಾವಣೆಯಿಂದಾಗಿ ದೀರ್ಘಕಾಲದವರಗೆ ಸಂಭವಿಸುತ್ತವೆ ಮತ್ತು ಪ್ರತಿ ಬೇಸಿಗೆಯಲ್ಲಿ ಸಮುದ್ರದ ಮಂಜುಗಡ್ಡೆಯು ಕರಗುವ ಅವಧಿಯಲ್ಲೂ ಸಂಭವಿಸುತ್ತದೆ ಎಂದು ಥ್ಯಾಕರೆ ಮತ್ತು ಸಹ-ಲೇಖಕ ಅಲೆಕ್ಸ್ ಹಾಲ್ ತಿಳಿಸಿದ್ದಾರೆ.


ಕಳೆದ ಹಲವಾರು ದಶಕಗಳಿಂದ ಉಪಗ್ರಹಗಳು ವಿವಿಧ ಕಾಲಗಳ ಮಂಜುಗಡ್ಡೆ ಕರಗುವಿಕೆಯ ಮೇಲೆ ಮತ್ತು ಅದರಿಂದಾಗುವ ಆಲ್ಬೆಡೋ ಪ್ರಕ್ರಿಯೆಗಳ ಮೇಲೆ ನಿಗಾ ವಹಿಸಿವೆ.


ಥ್ಯಾಕರೆ ಮತ್ತು ಹಾಲ್ 1980 ರಿಂದ 2015 ರವರೆಗಿನ ಮಂಜುಗಡ್ಡೆ ಕರಗುವಿಕೆಯ ವಿವಿಧ ಮಾದರಿಗಳನ್ನು ಅಧ್ಯಯನ ಮಾಡಿ ಅವುಗಳನ್ನು ಉಪಗ್ರಹಗಳು ನೀಡಿದ ಫಲಿತಾಂಶಗಳೊಂದಿಗೆ ಹೋಲಿಕೆ ಮಾಡಿದ್ದಾರೆ.


ಅವರು ಐತಿಹಾಸಿಕ ಫಲಿತಾಂಶಗಳೊಂದಿಗೆ ತಾಳೆಯಾದ ಉತ್ತಮ ಆರು ಮಾದರಿಗಳನ್ನು ಉಳಿಸಿಕೊಂಡು ಇನ್ನುಳಿದವುಗಳನ್ನು ತ್ಯಜಿಸಿದರು. ಇದರಿಂದಾಗಿ ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆ ಮುಕ್ತ ಸೆಪ್ಟೆಂಬರ್ ತಿಂಗಳುಗಳ ಒಂದು ವ್ಯಾಪ್ತಿಯನ್ನು ಸರಿಯಾಗಿ ನಿರ್ಧರಿಸುವುದು ಸಾಧ್ಯವಾಯಿತು.


ಸೂರ್ಯನ ಬೆಳಕನ್ನು ಅತಿ ಹೆಚ್ಚು ಪ್ರತಿಫಲಿಸುವ ಕಾರಣದಿಂದಾಗಿ ಪ್ರಪಂಚದ ಹವಾಮಾನವನ್ನು ತಂಪಾಗಿಡುವಲ್ಲಿ ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಥ್ಯಾಕರೆ ಹೇಳುತ್ತಾರೆ.


ಈ ಮಂಜುಗಡ್ಡೆಯ ನಷ್ಟದಿಂದಾಗಿ ಪರಿಸರದ ಮೇಲೆ ಮತ್ತು ವಿಶ್ವದ ಆರ್ಥಿಕತೆಯ ಮೇಲೆ ಬಹಳಷ್ಟು ಪರಿಣಾಮಗಳಾಗುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.


ಸಮುದ್ರದ ಮಂಜುಗಡ್ಡೆಯು ಆರ್ಕ್ಟಿಕ್ ಪರಿಸರಕ್ಕೆ ಮತ್ತು ಅಲ್ಲಿನ ಮೀನು ಕೈಗಾರಿಕೆಗೆ ಮತ್ತು ಅಲ್ಲಿ ಸುತ್ತಮುತ್ತ ನೆಲೆಸಿರುವ ಜನರಿಗೆ ಅತ್ಯಂತ ನಿರ್ಣಾಯಕವಾದ ಅಂಶವಾಗಿದೆ.


ಆರ್ಕ್ಟಿಕ್ ಸಮುದ್ರದ ಮಂಜುಗಡ್ಡೆಯ ಕರಗುವಿಕೆಯಿಂದಾಗಿ ವಾಣಿಜ್ಯ ಹಡಗುಗಳು ಪ್ರಯಾಣಿಸಲು ಹೆಚ್ಚಿನ ನೀರು ದೊರೆಯುತ್ತದೆ ಮತ್ತು ಪೆಟ್ರೋಲಿಯಂ ಎಣ್ಣೆ, ಅನಿಲಗಳನ್ನು ಪರಿಶೋಧಿಸಲು ಸಾಧ್ಯವಾಗುತ್ತದೆ. ಇದು ಹಲವಾರು ದೇಶಗಳಿಗೆ ಆರ್ಥಿಕ ಅವಕಾಶಗಳನ್ನು ಒದಗಿಸುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.


ಆದರೂ ಮಂಜುಗಡ್ಡೆಯ ಕರಗುವಿಕೆಯು ಮತ್ತಷ್ಟು ಹಸಿರುಮನೆ ಅನಿಲಗಳು ಹೊರಹೊಮ್ಮಲು ಮತ್ತು ಹವಾಮಾನ ಹದಗೆಡಲು ಕಾರಣವಾಗುತ್ತದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.