ಆ್ಯಸಿಡ್ ದಾಳಿಗೊಳಗಾದವರಿಗೆ ಪಿಂಚಣಿ ನೀಡಲು ಮುಂದಾದ ಉತ್ತರಾಖಂಡ ಸರ್ಕಾರ

ಉತ್ತರಾಖಂಡ ರಾಜ್ಯದಲ್ಲಿ ಆ್ಯಸಿಡ್ ದಾಳಿಗೊಳಗಾದವರಿಗೆ ಪ್ರತಿ ತಿಂಗಳು 5,000-6,000 ರೂ.ಗಳನ್ನು ನೀಡುವ ಯೋಜನೆ ಬರಲಿದೆ.

ಆ್ಯಸಿಡ್ ದಾಳಿಗೊಳಗಾದವರಿಗೆ ಪಿಂಚಣಿ ನೀಡಲು ಮುಂದಾದ ಉತ್ತರಾಖಂಡ ಸರ್ಕಾರ

Friday January 17, 2020,

2 min Read

ಕಳೆದ ವರ್ಷ ಮಲಯಾಳಂ ಭಾಷೆಯ ಉಯಾರೆ ಎಂಬ ಚಲನಚಿತ್ರವೊಂದು ತೆರೆಗೆ ಬಂದಿತ್ತು. ಅದರಲ್ಲಿ ಪ್ರೀತಿ ಮಾಡಲು ನಿರಾಕರಿಸಿದ್ದಾಕ್ಕಾಗಿ ಆಕೆಯ ಮೇಲೆ ಆ್ಯಸಿಡ್‌ ಎರಚಲಾಗುತ್ತದೆ. ಅವಳು ಎದೆಗುಂದದೇ ತನ್ನ ಕನಸಿನಂತೆ ಮುನ್ನೆಡದು ವಿಮಾನ ಚಾಲಕಿಯಾಗುವಂತಹ ಕಥಾಸಾರವನ್ನು ಹೊಂದಿತ್ತು.


ಇಂದು ಹೆಣ್ಣುಮಕ್ಕಳು ಒಂದಿಲ್ಲೊಂದು ರೀತಿಯಲ್ಲಿ ಶೋಷಣೆಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕ್ಷುಲ್ಲಕ‌ ಕಾರಣಗಳಿಗಾಗಿ ಅವರ ಮೇಲೆ ಆ್ಯಸಿಡ್ ದಾಳಿಯಾಗುತ್ತದೆ. ತಮ್ಮದಲ್ಲದ ತಪ್ಪಿಗೆ ಅವರು ಜೀವನಪೂರ್ತಿ ಒದ್ದಾಡಬೇಕಾಗುತ್ತದೆ. ಆ್ಯಸಿಡ್‌ ಸಂತ್ರಸ್ತೆಯರಿಗೆ ಸರಿಯಾದ ನ್ಯಾಯ ದೊರಕಬೇಕಾಗಿದೆ. ಆ್ಯಸಿಡ್‌ನ್ನು ಮುಕ್ತವಾಗಿ‌ ಮಾರಾಟ ಮಾಡುವುದನ್ನು ನಿಷೇಧಿಸಬೇಕಾಗಿದೆ.


ಲಕ್ಷ್ಮೀ ಅಗರ್ವಾಲ್‌


ಆ್ಯಸಿಡ್ ದಾಳಿಗೆ ಒಳಗಾಗಿದ್ದ ಲಕ್ಷ್ಮೀ ಅಗರ್ವಾಲ್‌ ಎಂಬ ಮಹಿಳೆಯು ಆ್ಯಸಿಡ್‌ ಮಾರಾಟದ ವಿರುದ್ದ ತಮ್ಮ ಹೋರಾಟವನ್ನು ನಡೆಸಿದರು. ಈಗ ಇವರ ಜೀವನಾಧಾರಿತ ಕಥೆಯು ಚಪಾಕ್ ಎಂಬ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಬಂದಿದೆ. ದೀಪಿಕಾ‌ ಪಡುಕೋಣೆಯವರು ಇದರಲ್ಲಿ ಅಭಿನಯಿಸಿದ್ದಾರೆ.


ಈಗ ಇಷ್ಟೆಲ್ಲ ಪೀಠಿಕೆ ಏನಕ್ಕೆ ಎಂದರೆ ಚಪಾಕ್ ಸಿನಿಮಾ‌ ಬಿಡುಗಡೆಯ ನಂತರ ಉತ್ತರಾಖಂಡ್ ರಾಜ್ಯದಲ್ಲಿ ಆ್ಯಸಿಡ್ ದಾಳಿಗೊಳದಾವರಿಗೆ ಪಿಂಚಣಿ ನೀಡುವುದಕ್ಕೆ ಸರ್ಕಾರ ಮುಂದಾಗಿದೆ.


ಉತ್ತರಾಖಂಡ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಖಾ ಆರ್ಯರವರು, "ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲು ಸರ್ಕಾರ ಯೋಜಿಸುತ್ತಿದ್ದು, ಅದರಡಿಯಲ್ಲಿ ಆ್ಯಸಿಡ್ ದಾಳಿಗೆ ಒಳಗಾದವರಿಗೆ ಪ್ರತಿ ತಿಂಗಳು 5,000-6,000 ರೂ.ಗಳನ್ನು ನೀಡಲಾಗುವುದು. ಇದರಿಂದ ಅವರು ಘನತೆಯಿಂದ ಜೀವನ ನಡೆಸಬಹುದು," ಎಂದಿದ್ದಾರೆ, ವರದಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌.


ಪ್ರಸ್ತುತ, ಉತ್ತರಾಖಂಡ ರಾಜ್ಯದಲ್ಲಿ 10-11 ಜನ ಆ್ಯಸಿಡ್ ದಾಳಿಗೊಳಗಾದವರು ವಾಸಿಸುತ್ತಿದ್ದಾರೆ.


"ಯೋಜನೆಯನ್ನು ಮತ್ತಷ್ಟು ಅನುಷ್ಠಾನಗೊಳಿಸಲು ಅನುಮೋದನೆ ಪಡೆಯಲು ಈ ಪ್ರಸ್ತಾವನೆಯನ್ನು ಸಂಪುಟದಲ್ಲಿ ತರಲಿದ್ದೇವೆ. ಧೈರ್ಯಶಾಲಿ ಮಹಿಳೆಯರಿಗೆ ತಮ್ಮ ಕನಸುಗಳನ್ನು ಸಾಧಿಸುವುವಲ್ಲಿ ಬೆಂಬಲ ನೀಡುವುದು ಇದರ ಉದ್ದೇಶವಾಗಿದೆ," ಎಂದು ರೇಖಾ ಆರ್ಯ ಹೇಳುತ್ತಾರೆ, ವರದಿ ದಿ ಲಾಜಿಕಲ್ ಇಂಡಿಯನ್.


ರೇಖಾ ಆರ್ಯರವರು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಾ, ಮಹಿಳೆಯರೊಂದಿಗೆ ಗೌರವಯುತವಾಗಿ ವರ್ತಿಸಲು ಹುಡುಗರಿಗೆ ಸರಿಯಾದ ಶಿಕ್ಷಣ ನೀಡಬೇಕೆಂದಿದ್ದಾರೆ. ಆ್ಯಸಿಡ್ ದಾಳಿಗೊಳಗಾದವರ ಮೇಲೆ ಕಾಳಜಿಯನ್ನು ವ್ಯಕ್ತಪಡಿಸುತ್ತಾ, ಅಸಹಾಯಕ ಮಹಿಳೆಯರ ಮೇಲೆ ಆ್ಯಸಿಡ್ ಎಸೆಯುವ/ ಆ್ಯಸಿಡ್ ದಾಳಿಯನ್ನು ತಡೆಯಲು ಅಸ್ತಿತ್ವದಲ್ಲಿರುವ ನಿಬಂಧನೆಗಳು ವಿಫಲವಾಗಿವೆ ಎಂದಿದ್ದಾರೆ.


ಇತ್ತೀಚೆಗೆ ಜೆಎನ್‌ಯು ಕ್ಯಾಂಪಸ್‌ನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ ದೀಪಿಕಾ ಪಡುಕೋಣೆ ಭೇಟಿ ನೀಡಿದ್ದರಿಂದ ಅನೇಕರು ಚಪಾಕ್ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಿದ್ದು, ಸಾಕಷ್ಟು ವಿವಾದಗಳನ್ನು ಹುಟ್ಟು ಹಾಕಿತ್ತು.


ಇನ್ಮುಂದೆಯಾದರೂ ಕಾನೂನು ಕ್ರಮಗಳು ಮತ್ತಷ್ಟು‌ ಬಿಗಿಯಾಗಬೇಕು. ಮಹಿಳೆಯರ ಮೇಲೆ ಶೋಷಣೆ ಮಾಡುವವರಿಗೆ ಸರಿಯಾದ ಶಿಕ್ಷೆಯಾಗಬೇಕು. ಉತ್ತರಾಖಂಡ ರಾಜ್ಯದ ಈ ನಿರ್ಣಯ ಇತರೆ ರಾಜ್ಯಗಳಲ್ಲಿಯೂ ಜಾರಿಗೆ ಬಂದರೆ ಮತ್ತಷ್ಟು ಚೆನ್ನ.