“ಮರಳಿ ಮಣ್ಣಿಗೆ”- ಇದು ಶಿವರಾಮ ಕಾರಂತರ ಕೃತಿಯಲ್ಲ, 55 ವರ್ಷ ವಯಸ್ಸಿನ ವೆಂಕಟ್ ಅಯ್ಯರ್ ಅವರ ಯಶೋಗಾಥೆ!

ಐಬಿಎಮ್ ನ ಲಾಭದಾಯಕ ಕೆಲಸವನ್ನು ತೊರೆದ ಮಹಾರಾಷ್ಟ್ರದ ವೆಂಕಟ್ ಅಯ್ಯರ್, ಸಾವಯವ ಕೃಷಿಯನ್ನು ಬಳಸುವಂತೆ 70 ಆದಿವಾಸಿ ರೈತರ ಮನವೊಲಿಸಿ, ನಂತರ ಅವರಿಗೆ ಉತ್ಪನ್ನಗಳನ್ನು ಮಾರಾಟ ಮಾಡಲೂ ಕೂಡ ಸಹಾಯ ಮಾಡಿದ್ದಾರೆ.

“ಮರಳಿ ಮಣ್ಣಿಗೆ”- ಇದು ಶಿವರಾಮ ಕಾರಂತರ ಕೃತಿಯಲ್ಲ, 55 ವರ್ಷ ವಯಸ್ಸಿನ ವೆಂಕಟ್ ಅಯ್ಯರ್ ಅವರ ಯಶೋಗಾಥೆ!

Tuesday July 23, 2019,

4 min Read

ತಿಂದು ತೇಗುವಷ್ಟು ಸಂಬಳ ಪಾವತಿ ಮಾಡುವ ಕಾರ್ಪೋರೇಟ್ ಕೆಲಸವನ್ನು ಬಿಟ್ಟು, ರೈತರ ಜೀವನದಲ್ಲಿ ಬದಲಾವಣೆಯನ್ನು ಮಾಡಬೇಕು ಎಂದು ಧೈರ್ಯ ಮಾಡುವವರು ತೀರಾ ಅಪರೂಪ.


ವೆಂಕಟೇಶ್ ಅಯ್ಯರ್ ಆ ಅಪರೂಪದ ವ್ಯಕ್ತಿಗಳಲ್ಲಿ ಒಬ್ಬರು. ಮುಂಬಯಿನ ಐಬಿಎಮ್ ನಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ವೆಂಕಟ್ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದರು.


ಯಾಕ್

ವೆಂಕಟ್ ಅಯ್ಯರ್ ತಮ್ಮ ತೋಟದಲ್ಲಿರುವ ವೀಳ್ಯದಲೆಗಳನ್ನು ಕೀಳುತ್ತಿರುವುದು.

‘ನನಗೆ ಮೊದಲಿನಿಂದಲೂ ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸಬೇಕೆಂಬ ಒಲವಿತ್ತು. ನಮ್ಮ ದೇಶ ಕೃಷಿ ಪ್ರಧಾನವಾಗಿದ್ದರೂ ಸಹ, ಅದರ ಪ್ರಸ್ತುತ ಪರಿಸ್ಥಿತಿ ಕ್ರೂರವಾಗಿದೆ. ಕಡಿಮೆ ಆದಾಯದಿಂದ ಬೇಸತ್ತ ಹಲವಾರು ರೈತರು ತಮ್ಮ ಭೂಮಿಯನ್ನು ಮಾರಿ, ದಿನಗೂಲಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಇವರ ಆದಾಯ ಹೆಚ್ಚಸಿ, ಸಿಗಬೇಕಾದ ಲಾಭ ದೊರೆಯಲು ನನ್ನಿಂದಾಷ್ಟು ಸಹಾಯ ಮಾಡಬೇಕೆಂಬ ನಿರ್ಧಾರ ಮಾಡಿದೆ’ ಎಂದು ವೆಂಕಟ್ ಯುವರ್ ಸ್ಟೋರಿ ಗೆ ತಿಳಿಸಿದರು.


ವೆಂಕಟ್ 2003ರಲ್ಲಿ ಮುಂಬಯಿ ತೊರೆದು, ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ಪೆತ್ ಎಂಬ ಹಳ್ಳಿಗೆ ಬಂದರು. ಕೃಷಿಯನ್ನು ಚೆನ್ನಾಗಿ ತಿಳಿದುಕೊಂಡು ನಂತರ ಸಹಾಯ ಮಾಡುವ ಉದ್ದೇಶದಿಂದ, ಸಾವಯವ ಕೃಷಿಯ ಬಗ್ಗೆ ಪುಸ್ತಕಗಳಿಂದಲೂ ಹಾಗೂ ಕೃಷಿ ತಂತ್ರಗಳ ಬಗ್ಗೆ ಇಂಟರ್ನೆಟ್ ಮೂಲಕ ತಿಳಿದುಕೊಂಡರು. ಪತ್ರಕರ್ತರು ಹಾಗೂ ಲೇಖಕಿಯಾಗಿರುವ ಪತ್ನಿ ಮೀನಾ ಮೆನನ್ ಅವರಿಂದ ಸಾವಯವ ಕೃಷಿಯ ಲಾಭದ ಕುರಿತು ಮಾಹಿತಿ ಪಡೆದರು.


ಕೆಲವು ತಿಂಗಳ ಬಳಿಕ, ತಮ್ಮ ಉಳಿತಾಯದ ಹಣದಿಂದ ಯೋಗ್ಯವಾದ ಭೂಮಿಯನ್ನು ಖರೀದಿಸಿದರು. ಸಾಕಷ್ಟು ಸಂಶೋಧನೆಯ ನಂತರ, ಮಣ್ಣನ್ನು ಹದಗೊಳಿಸಿ ಭತ್ತ, ಕಾಳುಗಳು, ಮಸಾಲೆ ಹಾಗೂ ತರಕಾರಿಗಳನ್ನು ನೆಟ್ಟರು. ಆರಂಭದಲ್ಲಿ ಬೆಳೆ ನಾಶದಂತಹ ಸೋಲು ಎದುರಾದರು ಸಹ ಅವರು ತಮ್ಮ ಪ್ರಯತ್ನವನ್ನು ಕೈ ಬಿಡಲಿಲ್ಲ.


q

ವೆಂಕಟ್ ಅಯ್ಯರ್ ಸಾವಯವ ಕೃಷಿಯ ವಿವಿಧ ವಿಧಾನಗಳ ಕುರಿತು ರೈತರಿಗೆ ತರಬೇತಿ ನೀಡುತ್ತಿರುವುದು

ಐದು ವರ್ಷಗಳವರೆಗೆ ಸಾವಯವ ಕೃಷಿಯನ್ನು ಮಾಡಿ ಆತ್ಮವಿಶ್ವಾಸವನ್ನು ಬಲಪಡಿಸಿಕೊಂಡ ನಂತರ, ಪಕ್ಕದ ವಿಕ್ರಮಗಡ್ ಜಿಲ್ಲೆಯ ರೈತರಿಗೆ ತರಬೇತಿ ನೀಡಿದರು. ನಾಲ್ಕು ಜನರಿಂದ ಪ್ರಾರಂಭಿಸಿ, 70 ಆದಿವಾಸಿ ರೈತರಿಗೆ ಸಾವಯವ ಕೖಷಿಯ ತಂತ್ರಗಳ ಕುರಿತು ತರಬೇತಿ ನೀಡಿದ್ದಾರೆ. ಇದಲ್ಲದೆಯೇ ಅವರಿಗೆ ಮಾರ್ಕೆಟಿಂಗ್ ಚಾನಲ್ಗಳು ಹಾಗೂ ಅವರ ಉತ್ಪನ್ನಗಳನ್ನು ಮಾರಾಟ ಮಾಡಬೇಕಾದ ಕೇಂದ್ರಗಳನ್ನು ಪರಿಚಯಿಸಿದ್ದಾರೆ. ಇದರಿಂದ ರೈತರು ಹೆಚ್ಚಿನ ಆದಾಯ ಪಡೆಯುತ್ತಿರುವುದಲ್ಲದೆ ಮಿತವಾದ ಸಂಪನ್ಮೂಲಗಳಿಂದಲೇ ಲಾಭ ಗಳಿಸುತ್ತಿದ್ದಾರೆ.


ಒಂದು ಸ್ಪೂರ್ತಿದಾಯಕ ಪಯಣ


ಪೆತ್ ಗೆ ಹಿಂದಿರುಗಿದ ನಂತರ ವೆಂಕಟ್ ತಾವೇ ಸ್ವತಃ ಬೆಳೆಯನ್ನು ಬೆಳೆಯಲು ಉತ್ಸುಕರಾಗಿದ್ದರು. ಅಲ್ಲಿನ ಹಲವಾರು ರೈತರು ಹೆಸರು ಕಾಳುಗಳನ್ನು ಬೆಳೆಯುತ್ತಿದ್ದ ಕಾರಣ ತಾವು ಅವರ ಹಾದಿಯನ್ನೇ ಹಿಡಿದರು. ನೆರೆಹೊರೆಯ ಜನರ ಸಲಹೆಯಂತೆ, ಗುಜರಾತ್ ನ ಸೂರತ್ ಗೆ ತೆರಳಿ ಉತ್ತಮ ದುಣಮಟ್ಟದ ಬೀಜಗಳನ್ನು ತಂದರು.


ನಂತರ ತಾವೇ ಬೆಳೆ ಬೆಳೆಯಲು ಪ್ರಾರಂಭಿಸಿ, ಉತ್ತನೆ -ಬಿತ್ತನೆ, ನೀರೆರೆಯುವುದು, ಕಳೆ ಕೀಳುವುದು ಇವೆಲ್ಲವನ್ನು ಮಾಡಿದರು. ಅಲ್ಪಾವಧಿಯಲ್ಲಿ ಹೆಸರು ಕಾಳಿನ ಗಿಡಗಳಿಂದ ತುಂಬಿದ ಹೊಲದ ನಡುವೆ ಅವರಿದ್ದರು.


ಕ

ಬೆಳೆಗಾರರೊಬ್ಬರು ತೊಗರಿ ಬೇಳೆಯನ್ನು ಕೊಯ್ಲು ಮಾಡುತ್ತಿರುವುದು


“ಅದೊಂದು ಅದ್ಭುತ ಅನುಭವ. ನಾನು ನನ್ನ ಕೆಲಸವನ್ನು ಬಿಟ್ಟು ಆಗಲೇ 5 ತಿಂಗಳು ಕಳೆದಿತ್ತು. ಆದರೆ ನನ್ನ ಶ್ರಮ ಫಲಕಾರಿಯಾಗಲಿದೆ ಎಂಬ ನಂಬಿಕೆ ನನಗಿತ್ತು.” ಎಂದು ವೆಂಕಟ್ ತಿಳಿಸುತ್ತಾರೆ.


ಕೊಯ್ಲಿನ ನಂತರ ವೆಂಕಟ್ ಬಳಿ 300 ಕೆಜಿಯಷ್ಟು ಹೆಸರು ಕಾಳು ಸಂಗ್ರಹವಾಗಿತ್ತು. ತಮ್ಮ ಆಪ್ತರಿಗೆಲ್ಲಾ ವಿತರಿಸಿದ ನಂತರವೂ ಸಾಕಷ್ಟು ಉಳಿದಿದ್ದ ಕಾರಣ ಅವರು ಅದನ್ನು ರಿಟೇಲ್ ಅಂಗಡಿಗಳಿಗೆ ಮಾರಾಟ ಮಾಡಲು ಮುಂದಾದರು. ಸಾವಯವ ಉತ್ಪನ್ನಗಳ ಮಾರುಕಟ್ಟೆಯು ಹೊಸದಾಗಿದ್ದ ಕಾರಣ ಮಾರಾಟಗಾರರು ಕೆಜಿಗೆ 16 ರೂಪಾಯಿಗಿಂತ ಹೆಚ್ಚು ಕೊಡಲು ಒಪ್ಪಲಿಲ್ಲ. ಆಶ್ಚರ್ಯವೆಂದರೆ ಮಾರುಕಟ್ಟೆಯಲ್ಲಿ ಇವು ಕೆಜಿಗೆ 30 ರೂಪಾಯಿಯಂತೆ ಮಾರಾಟವಾದವು.


“ರಿಟೇಲ್ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳದೆ ನನಗೆ ಬೇರೆ ಹಾದಿಯಿರಲಿಲ್ಲ. ನಂತರ ನಾನು ಹಲವಾರು ವಿಶೇಷ ಸಾವಯವ ಮಳಿಗೆಗಳಾದ, ನವಧಾನ್ಯ, ಗ್ರೀನ್ ಕರೆಂಟ್ಸ್ ಹಾಗು ಮುಂಬಯಿನ ಸ್ಥಳೀಯ ಮಾರಾಟಗಾರರಿಗೂ ಮಾರಿದೆ. ಅಯ್ಯೋ !! ನನಗೆ ಎಲ್ಲಿಯೂ ನ್ಯಾಯಯುತವಾದ ಬೆಲೆ ಸಿಗಲೇ ಇಲ್ಲ. ಆಗಲೇ ನನಗೆ ನಮ್ಮ ದೇಶದ ರೈತರ ನೋವು ಅರ್ಥವಾಗಿದ್ದು. ಕೆಲಸಗಾರರ ಕೂಲಿ ಹಾಗು ಅವಶ್ಯಕ ಉಪಕರಣಗಳಿಗೆ ರೈತರೇ ದುಡ್ಡು ಸುರಿದರೂ ಸಹ, ಬಹುಪಾಲು ಲಾಭವನ್ನು ಕಬಳಿಸುವವರು ವ್ಯಾಪಾರಿಗಳು ಹಾಗು ಮಧ್ಯವರ್ತಿಗಳು.” ಎಂದು ವೆಂಕಟ್ ವಿವರಿಸುತ್ತಾರೆ.


ರೈತರನ್ನು ಎಲ್ಲಾ ರೀತಿಯಲ್ಲೂ ಸಶಕ್ತರಾಗಿಸುವ ದಾರಿಯಲ್ಲಿ


ಕ

ರೈತರು ಶೇಕಡ ನೂರರಷ್ಟು ನೈಸರ್ಗಿಕವಾಗಿರುವ ಕೀಟನಾಶಕವಾದ- ‘ದಶಪರ್ಣಿ’ಯನ್ನು ತಯಾರಿಸುತ್ತಿರುವುದು.


ಐದು ವರ್ಷದ ಬಳಿಕ ವೆಂಕಟ್ ವಿವಿಧ ಬೆಳೆಗಳಾದ, ಭತ್ತ, ತೊಗರಿ ಬೇಳೆ, ಎಳ್ಳು, ಕಡಲೆ ಬೀಜ, ಸಾಸಿವೆ, ತುಳಸಿ, ಟೊಮೆಟೊ, ಹಾಗಲಕಾಯಿ, ಕುಂಬಳಕಾಯಿ ಮತ್ತು ಬೆಂಡೆಕಾಯಿಗಳನ್ನು ಬೆಳೆಯಲು ಆರಂಭಿಸಿದರು.


2009ರಲ್ಲಿ “ಹರಿ ಭರಿ ಟೋಕ್ರಿ”- ರೈತರು ಉತ್ಪನ್ನಗಳನ್ನು ಮಾರಾಟ ಮಾಡಲು ಬೇರೆ ಬೇರೆ ಹಾದಿಯನ್ನು ಹುಡುಕುವ ಸಾಹಸೋದ್ಯಮವನ್ನು ಮಾಡಿದರು. ಕೆಲವು ಸ್ನೇಹಿತರು ಹಾಗೂ ಡಾ. ಧಾವಲೇ ಸ್ಮಾರಕ ಸಂಘದ ಸಹಾಯದಿಂದ ಮುಂಬಯಿನಲ್ಲಿ ಸಾವಯವ ಕೃಷಿಕರ ಹಾಗು ಗ್ರಾಹಕರ ಸಂಘವನ್ನು (MOFCA) ಕಟ್ಟಿದರು. ಕೃಷಿ ವಲಯಕ್ಕೆ ದನಿ ನೀಡಿ, ಮಧ್ಯವರ್ತಿಗಳಿಂದ ರೈತರಿಗೆ ಮುಕ್ತಿ ಕೊಡಿಸಬೇಕೆನ್ನುವುದೇ ಇದರ ಉದ್ದೇಶವಾಗಿತ್ತು.


ಕ

ರೈತರಿಗೆ ಬಿತ್ತನೆಯ ಮೊದಲು ಬೀಜವನ್ನು ಉಳಿತಾಯ ಮಾಡಿಕೊಳ್ಳಲು ತರಬೇತಿ


"ಹಗಲು-ರಾತ್ರಿ ಶ್ರಮಿಸಿದ ನಂತರವೂ ಹಲವಾರು ರೈತರ ಸ್ಥಿತಿ ಇನ್ನೂ ಸುಧಾರಿಸಿರಲಿಲ್ಲ. ಅವರಿಗಾಗಿ ಏನಾದರು ಮಾಡಬೇಕೆಂಬ ನನ್ನ ಹಂಬಲ ಹೆಚ್ಚಾಗುತ್ತಲೇ ಇತ್ತು. ಆದ್ದರಿಂದಲೇ ನಾಲ್ಕು ಆದಿವಾಸಿ ರೈತರಿಗೆ ಸಾವಯವ ಕೃಷಿಯ ಬಗ್ಗೆ ವಿವರಿಸಿದೆ ಹಾಗೆಯೇ ಅವರ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಲು ಸಲಹೆಗಳನ್ನು ನೀಡಿದೆ.” ಎಂದು ವೆಂಕಟ್ ತಿಳಿಸುತ್ತಾರೆ.


ಬೆಲೆಯನ್ನು ನಿಗದಿ ಮಾಡುವ ಅವಕಾಶವನ್ನು ರೈತರಿಗೆ ನೀಡಬೇಕೆಂಬ ಶರತ್ತಿನ ಮೇಲೆ ವೆಂಕಟ್ ಮಾರಾಟಗಾರರು ಹಾಗು ಗ್ರಾಹಕೊಂದಿಗೆ ಹೊಂದಾಣಿಕೆ ಮಾಡಿಕೊಂಡರು. ಉದಾಹರಣೆಗೆ ರೈತ ಹಾಗಲಕಾಯಿಯನ್ನು 30 ರೂಪಾಯಿಗೆ ಮಾರಲು ಬಯಸಿದರೆ, ಮಾರಾಟಗಾರು ಅಷ್ಟೇ ಬೆಲೆಗೆ ಕೊಳ್ಳಬೇಕು. ಇದರೊಂದಿಗೆ ನಿರ್ವಹಣೆ, ಸಾಗಾಣಿಕೆ ಹಾಗೂ ಲಾಭದ ಹಣವನ್ನೂ ಸೇರಿಸಿ ಕೊಡಬೇಕು. ಕಟಾವಾದ ಬೆಳೆ ಮುಂಬಯಿನ ಮಾರುಕಟ್ಟೆಗೆ ಬಂದಾಗ, MOFCA ಹಾಗೂ ‘ಹರಿ ಭರಿ ಟೋಕ್ರಿ’ ಯು ನೀಡುವ ಲಾಜಿಸ್ಟಿಕ್ಸ್ ನಿಂದ ಗ್ರಾಹಕರು ಸರಿಯಾದ ವೆಚ್ಚವನ್ನು ನೀಡಬೇಕಾಗುತ್ತದೆ.


ಕ

ರೈತರು ತಮ್ಮ ಸಾವಯವ ಉತ್ಪನ್ನಗಳನ್ನು ಮುಂಬಯಿನಲ್ಲಿ ಮಾರಾಟ ಮಾಡುತ್ತಿರುವುದು.


ಇಂದು ವೆಂಕಟ್ ಅವರು 70 ರೈತರಿಗೆ ಸುಮಾರು 1000 ಕೆಜಿಯಷ್ಟು ಆಹಾರವನ್ನು ಪ್ರತೀ ತಿಂಗಳು ಉತ್ಪಾದಿಸಲು ತರಬೇತಿ ನೀಡಿ, ಸಹಾಯ ಮಾಡಿದ್ದಾರೆ. ನಂತರ ಬೆಳೆ ಮಾರಾಟಕ್ಕಾಗಿ ಶಾಲೆಗಳು ಹಾಗು ವಸತಿ ಸಂಘಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಅವರ ಪರಿಶ್ರಮ ಅಲ್ಲಿಗೇ ಕೊನೆಯಾಗದೆ ರೈತರು ಪ್ರತೀ ವಾರ ಮುಂಬಯಿಗೆ ತೆರಳಿ ತರಕಾರಿ ಹಾಗು ಧಾನ್ಯಗಳನ್ನು ಮಾರಲು ವ್ಯವಸ್ಥೆ ಮಾಡಿದರು.


“ನಾನು ವೆಂಕಟ್ ಅಯ್ಯರ್ ಹಾಗೂ MOFCA ಸಹಾಯದಿಂದ 2009 ರಿಂದ ಸಾವಯವ ಕೖಷಿ ಮಾಡುತ್ತಿದ್ದೇನೆ. ಹಲವು ವರ್ಷಗಳಿಂದ ನನ್ನ ಮಣ್ಣಿನ ಗುಣಮಟ್ಟ ಸುಧಾರಿಸಿದೆ. ಅದು ಇನ್ನಷ್ಟು ಮೃದು ಹಾಗು ತೇವಾಂಶ ಭರಿತವಾಗಿದೆ. ಮ್ರಿಶ ಬೆಳೆಗಳನ್ನು ಹಾಕಿ ಕೆಲವು ಗಿಡಗಳನ್ನು ಬೇಲಿಯಾಗಿ ಬಳಸಲು ಶುರು ಮಾಡಿದಾಗಿನಿಂದ ಕೀಟಗಳೂ ಸಾಕಷ್ಟು ಕಡಿಮೆ ಆಗಿವೆ. ನನ್ನ ಬೆಳೆಗಳಿಗೆ ಉತ್ತಮ ಬೆಲೆ ಪಡೆದು ನಿರಾಳವಾದ ಬದುಕನ್ನು ಪಡೆದಿದ್ದೇನೆ.”- ವಿಷ್ಣು ಭೋಯ್, ರೈತ, ಡಪ್ಚರಿ, ವಿಕ್ರಮ್ಗಡ್ ಜಿಲ್ಲೆ, ಮಹಾರಾಷ್ಟ್ರ.



ಕ

ವೆಂಕಟ್ ತಮ್ಮ ತೋಟದಲ್ಲಿ ಮರಗಳನ್ನು ಪರೀಕ್ಷಿಸುತ್ತಿರುವುದು


ಸಾವಯವ ಕೖಷಿಯೊಂದಿಗಿನ ತಮ್ಮ ಈ ಪಯಣವನ್ನು ವೆಂಕಟ್ ದಾಖಲಿಸಬೇಕಂದು ನಿರ್ಧರಿಸಿ, ‘ಮೂಂಗ್ ದಾಲ್ ಓವರ್ ಮೈಕ್ರೊಚಿಪ್ಸ್’ ಎಂಬ ಪುಸ್ತಕವನ್ನು ಬರೆದರು. ಸಾವಯವ ಕೃಷಿಯನ್ನು ಕಲಿತು, ಅದರ ವಿಧಾನಗಳನ್ನು ಅಳವಡಿಸಿಕೊಂಡು, ಇತರೆ ರೈತರ ಮನವೊಲಿಸಿ, ತರಬೇತಿ ನೀಡಿ ಹಾಗೆಯೇ ಅವರ ಉತ್ಪನ್ನವನ್ನು ಮಾರಾಟ ಮಾಡಲು ಸಹಾಯ ಮಾಡುವವರೆಗೆ ಎಲ್ಲವನ್ನೂ ವೆಂಕಟ್ ಮಾಡಿದ್ದಾರೆ.


“ಅಂದು ನಾನು ನನ್ನ ಕೆಲಸವನ್ನು ತೊರೆದಿದ್ದು ಸಾರ್ಥಕವಾಯಿತು ಎಂದು ಹೆಮ್ಮೆಯಿಂದ ಹೇಳಬಲ್ಲೆ”- ವೆಂಕಟ್.


ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ರೈತರ ಮನವೊಲಿಸಿ, ಸಾವಯವ ಆಹಾರ ಸೇವನೆಯ ಕುರಿತು ಜಾಗೃತಿ ಮೂಡಿಸಬೇಕೆಂಬ ಆಲೋಚನೆಯನ್ನು ಹೊಂದಿದ್ದಾರೆ.