3 ತಿಂಗಳಲ್ಲಿ 76 ಮಕ್ಕಳನ್ನು ರಕ್ಷಿಸಿ ವಿಶೇಷ ಬಡ್ತಿ ಪಡೆದ ಹೆಡ್‌ ಕಾನ್ಸ್ಟೇಬಲ್‌ ಸೀಮಾ ಧಾಕಾ

ದೆಹಲಿಯ ಪೊಲೀಸ್‌ ಕಾನ್ಸ್ಟೇಬಲ್‌ ಸೀಮಾ ಧಾಕಾ ದೆಹಲಿ, ಪಂಜಾಬ್‌ ಮತ್ತು ಪಶ್ಚಿಮ ಬಂಗಾಳದ 76 ಮಕ್ಕಳನ್ನು ರಕ್ಷಿಸಿ ಅಸ್ಸಿಸ್ಟಂಟ್‌ ಸಬ್‌-ಇನ್ಸ್ಪೆಕ್ಟರ್‌ ಆಗಿ ಬಡ್ತಿ ಪಡೆದಿದ್ದಾರೆ.

3 ತಿಂಗಳಲ್ಲಿ 76 ಮಕ್ಕಳನ್ನು ರಕ್ಷಿಸಿ ವಿಶೇಷ ಬಡ್ತಿ ಪಡೆದ ಹೆಡ್‌ ಕಾನ್ಸ್ಟೇಬಲ್‌ ಸೀಮಾ ಧಾಕಾ

Wednesday November 25, 2020,

1 min Read

ದೆಹಲಿಯ ಸಮಯ ಪುರ್‌ ಬದ್ಲಿಯ ಪೊಲೀಸ್‌ ಠಾಣೆಯ ಹೆಡ್‌ ಕಾನ್ಸ್ಟೇಬಲ್‌ ಆಗಿರುವ ಸೀಮಾ ಧಾಕಾ 76 ಮಕ್ಕಳನ್ನು ರಕ್ಷಿಸಿದ್ದಕ್ಕಾಗಿ ಅವಧಿಗೂ ಮೊದಲೆ ವಿಶೇಷ ಬಡ್ತಿ ಪಡೆದಿದ್ದಾರೆ. ಈ 76 ಮಕ್ಕಳಲ್ಲಿ 56 ಮಕ್ಕಳು 14 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಇದರಲ್ಲಿ ಪಂಜಾಬ್‌ ಮತ್ತು ಪಶ್ಚಿಮ ಬಂಗಾಳದ ಮಕ್ಕಳು ಸೇರಿದ್ದಾರೆ.


ಇಷ್ಟು ಮಕ್ಕಳನ್ನು ಸೀಮಾ ಕೇವಲ ಎರಡೂವರೆ ತಿಂಗಳಲ್ಲಿ ಹುಡುಕಿ ಅಗಸ್ಟ್‌ 5 2020 ರಂದು ಪ್ರಾರಂಭವಾದ ಔಟ್‌-ಆಪ್‌-ಟರ್ನ್‌ ಪ್ರಮೋಷನ್‌(ಒಟಿಪಿ) ಪಡೆದ ಮೊದಲ ಪೊಲೀಸ್‌ ಅಧಿಕಾರಿ ಎಂಬ ಹೆಮ್ಮೆಗೆ ಪಾತ್ರರಾಗಿದ್ದಾರೆ.


“ನನ್ನ ಕೆಲಸಕ್ಕೆ ಸಿಕ್ಕಿರುವ ಪುರಸ್ಕಾರ ಮತ್ತು ಗೌರವದಿಂದ ನನಗೆ ಖುಷಿಯಾಗುತ್ತದೆ. ಇಂತಹ ಒಟಿಪಿಗಳು ಇನ್ನೂ ಹೆಚ್ಚಿನ ಶ್ರಮ ಹಾಕಿ ಕೆಲಸ ಮಾಡುವಂತೆ ನಮ್ಮನ್ನು ಹುರಿದುಂಬಿಸುತ್ತವೆ,” ಎಂದು ಸೀಮಾ ಮಾಧ್ಯಮಕ್ಕೆ ತಿಳಿಸಿದರು.


ಉತ್ತರ ಪ್ರದೇಶದ ಬಾಘ್‌ಪಟ್‌ ಜಿಲ್ಲೆಯವರಾದ ಸೀಮಾ ದೆಹಲಿ ಪೊಲೀಸ್‌ ಇಲಾಖೆಗೆ 2006ರಲ್ಲಿ ಸೇರ್ಪಡೆಗೊಂಡಾಗ ತಮ್ಮ ಕನಸುಗಳನ್ನು ಮನಗಂಡರು. ಅವರ ಹೊಸ ಸಾಧನೆ ಅಸ್ಸಿಸ್ಟಂಟ್‌ ಸಬ್‌-ಇನ್ಸ್ಪೆಕ್ಟರ್‌ ಸ್ಥಾನ ಸಿಗುವಂತೆ ಮಾಡಿ ಅವರ ವೃತ್ತಿಜೀವನಕ್ಕೆ ಹೊಸ ತಿರುವನ್ನು ನೀಡಿದೆ. ಸೀಮಾ ಅವರನ್ನು ಕೊನೆಯ ಬಾರಿಗೆ ಪೂರ್ವ ದೆಹಲಿಯಲ್ಲಿ ನಿಯೋಜಿಸಲಾಗಿತ್ತು, ಅವರು ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ನಿಭಾಯಿಸಿದ್ದಾರೆ.

ಕಾಣೆಯಾಗಿರುವ ಮಕ್ಕಳನ್ನು ಹುಡುಕಿ ರಕ್ಷಿಸುವಂತೆ ಪೊಲೀಸರಿಗೆ ಹುರಿದುಂಬಿಸಲು ದೆಹಲಿಯ ಪೊಲೀಸ್‌ ಇಲಾಖೆ, “ಯಾವುದೇ ಕಾನ್ಸ್ಟೇಬಲ್‌ ಅಥವಾ ಹೆಡ್‌ ಕಾನ್ಸ್ಟೇಬಲ್‌ 12 ತಿಂಗಳ ಒಳಗೆ 50 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ 14 ವರ್ಷದ ಕೆಳಗಿನ(ಅದರಲ್ಲಿ 15 ಮಕ್ಕಳು 8 ಕ್ಕಿಂತ ಕಡಿಮೆ ವಯಸ್ಸಿನವರು) ಕಾಣೆಯಾದ ಮಕ್ಕಳನ್ನು ಹುಡುಕಿಕೊಟ್ಟರೆ ಅವರಿಗೆ ಒಟಿಪಿ ಬಡ್ತಿ ನೀಡಲಾಗುವುದು,” ಎಂಬ ಯೋಜನೆಯನ್ನು ಪ್ರಾರಂಭಿಸಿದೆ.


ಇದರ ಜತೆಗೆ ಒಂದು ವರ್ಷದ ಅವಧಿಯಲ್ಲಿ 15 ಮಕ್ಕಳನ್ನು ಹುಡುಕುವವರಿಗೆ ‘ಅಸಾಧರಣ ಕಾರ್ಯ ಪುರಸ್ಕಾರʼ ನೀಡಿ ಗೌರವಿಸಲಾಗುತ್ತದೆ.

ಅಗಸ್ಟ್‌ನಲ್ಲಿ ಯೋಜನೆಯನ್ನು ಘೋಷಿಸಿದಾಗಿನಿಂದಲೂ “ಕಾಣೆಯಾದ ಮಕ್ಕಳು ಸಿಗುವ ಸಂಖ್ಯೆಯಲ್ಲಿ ಭಾರೀ ದೊಡ್ಡ ಪ್ರಮಾಣದ ಬದಲಾವಣೆಯಾಗಿದೆ” ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.