6,000 ಜೀತದಾಳುಗಳನ್ನು ರಕ್ಷಿಸಿದ 19 ರ ಯುವತಿ
ತಮಿಳುನಾಡಿನ ಇಟ್ಟಿಗೆ ಗೂಡಿನಲ್ಲಿ ಸಿಲುಕಿದ್ದ 6,000 ಕಾರ್ಮಿಕರನ್ನು ಒಡಿಷಾದ ಮಾನಸಿ ಬರಿಹಾ ರಕ್ಷಿಸಿದ್ದಾರೆ.
ಜೀತಪದ್ಧತಿ ಭಾರತದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. 6 ತಿಂಗಳಿಂದ ಅನಿರ್ದಿಷ್ಟ ಅವಧಿಯವರೆಗೆ ಒಂದಷ್ಟು ಕಾರ್ಮಿಕರನ್ನು ನಿಗದಿಪಡಿಸಿದ ಹಣಕ್ಕಾಗಿ ದುಡಿಸಿಕೊಳ್ಳುವುದನ್ನು ಈ ಪದ್ಧತಿಯಲ್ಲಿ ಕಾಣಬಹುದು.
ಈ ಪಿಡುಗನ್ನು ಕೊನೆಗಾಣಿಸಿ, ಅದರಲ್ಲಿ ಸಿಲುಕಿರುವವರನ್ನು ಮುಕ್ತಗೊಳಿಸಲು ಹಲವು ಸರ್ಕಾರೇತರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ತಮಿಳುನಾಡಿನ ಇಟ್ಟಿಗೆ ಗೂಡಿನಲ್ಲಿ ಸಿಲುಕಿದ್ದ 6,000 ಕಾರ್ಮಿಕರನ್ನು ಯುವತಿಯೊಬ್ಬಳು ಬಿಡಿಸಿದ ಘಟನೆಯೊಂದು ನಡೆದಿದೆ.
ಒಡಿಷಾದ ಬಲಂಗಿರ ಜಿಲ್ಲೆಯವರಾದ ಮಾನಸಿ ಬರಿಹಾ ತಮ್ಮ ತಂದೆ ಮತ್ತು 10 ವರ್ಷದ ಸಹೋದರಿಯೊಂದಿಗೆ ವಾಸವಾಗಿದ್ದಾರೆ. ತಮ್ಮ ದಿವಂಗತ ತಾಯಿಯ ವೈದ್ಯಕೀಯ ಖರ್ಚಿಗಾಗಿ 28,000 ರೂ. ಮುಂಗಡ ಹಣವನ್ನು ಪಡೆದಿದ್ದರು. ಅದನ್ನು ತಿರೀಸಲಾಗದೆ ಇದ್ದಾಗ ಏಜೆಂಟ್ ಇವರನ್ನು ಜತೆಗೆ 355 ಇತರ ಕಾರ್ಮಿಕರನ್ನು ಕೊರೆದುಕೊಂಡು ಹೋಗಿ ತಿರುವಲ್ಲೂರ್‌ನ ಪುಧುಕುಪ್ಪಂನಲ್ಲಿರುವ ಜಿಡಿಎಮ್ ಇಟ್ಟಿಗೆ ಗೂಡಿನಲ್ಲಿ ಕೆಲಸಕ್ಕಿರಿಸಿಕೊಂಡ.
“ನಸುಕು ಮುಂಜಾನೆ 4:30 ಕ್ಕೆ ನಾವು ಕೆಲಸ ಪ್ರಾರಂಭಿಸಿ, ಮಧ್ಯಾಹ್ನದವರೆಗೂ ಕೆಲಸ ಮಾಡಬೇಕಿತ್ತು. ನಂತರ ಎರಡು ಗಂಟೆಗಳ ವಿರಾಮ, ಆಮೇಲೆ ಮತ್ತೆ ಇಳಿಸಂಜೆಯವರೆಗೂ ಕೆಲಸ ಮಾಡಬೇಕಿತ್ತು,” ಎಂದು ಮಾನಸಿ ದಿ ಬೆಟರ್ ಇಂಡಿಯಾಗೆ ಹೇಳಿದರು.
ಪ್ರತಿವಾರಕ್ಕೆ ಕಾರ್ಮಿಕರಿಗೆ ರೂ. 250 ರಿಂದ 300 ನೀಡಲಾಗುತ್ತಿತ್ತು ಮತ್ತು ತಮ್ಮ ಆರ್ಥಿಕ ಸ್ಥಿತಿ ಸರಿಯಿಲ್ಲದರಿಂದ ಅವರೆಲ್ಲರೂ 6 ತಿಂಗಳವರೆಗೆ ಕೆಲಸ ಮಾಡಬೇಕಾಯಿತು. ಆದರೆ ಕೊರೊನಾವೈರಸ್ ಭಾರತದಲ್ಲಿ ಹರಡಲು ಪ್ರಾರಂಭಿಸಿದ ತಕ್ಷಣ, ಲಾಕ್‌ಡೌನ್ ಜಾರಿಯಾಗಿದ್ದರಿಂದ ಕಾರ್ಮಿಕರೆಲ್ಲರೂ ತಮ್ಮ ಮನೆಗೆ ಮರಳಲು ಬಯಸಿದರು.
“ಆದಷ್ಟು ಬೇಗ ಕೆಲಸ ಮುಗಿಸಿ, ಮನೆಗೆ ಹೋಗಬೇಕೆಂದುಕೊಂಡು ನಾವೆಲ್ಲರೂ ಹಗಲು ರಾತ್ರಿ ಶ್ರಮಿಸಿದ್ದೇವೆ. ನಮ್ಮ ಸಂಬಂಧಿಕರು ಬೇಗನೆ ಮರಳಿ ಎಂದು ಹೇಳುತ್ತಿದ್ದರು ಮತ್ತು ಕೊರೊನಾ ಬಗ್ಗೆ ನಮಗೂ ಒಂದು ರೀತಿಯ ಭಯವಾಗಿತ್ತು,” ಎಂದು ಹೇಳುತ್ತಾರೆ ಮಾನಸಿ.
ಕೆಲಸ ಮುಗಿಸಿಕೊಟ್ಟರು, ಮಾಲೀಕರು ಅವರಿಗೆ ಮನೆಗೆ ಹೋಗಲು ಬಿಡಲಿಲ್ಲ. ಮೇ ತಿಂಗಳಲ್ಲಿ ಅದಕ್ಕೆ ವಿರೋಧ ಮಾಡಿದಾಗ, ಮಾಲೀಕ ಅವರನ್ನು ಹೊಡೆಯಲು ಲಾಠಿ ಕೊಟ್ಟು ಜನರನ್ನು ಕಳುಹಿಸಿ, ರಕ್ತಬರುವಂತೆ ಹೊಡೆಸಿದ್ದಾರೆ, ಅದರಲ್ಲಿ ಮಾನಸಿಯವರ ತಂಗಿಗೂ ತುಂಬಾ ಗಾಯವಾಗಿತ್ತು.
ಆ ಸಮಯದಲ್ಲಿ ಮಾನಸಿ ಅವರಿಗೆ ಇದಕ್ಕೆ ಹೇಗಾದರೂ ಮಾಡಿ ಅಂತ್ಯಹಾಡಬೇಕು ಅನಿಸಿದ್ದು.
“ನನ್ನ ಮೊಬೈಲ್‌ನಲ್ಲಿರುವ ಎಲ್ಲ ನಂಬರ್‌ಗಳಿಗೂ ಫೋನ್ ಮಾಡಿ, ಗಾಯಗೊಂಡವರ ಫೋಟೊ, ಆಡಿಯೊ ಮತ್ತು ವಿಡಿಯೋಗಳನ್ನು ವಾಟ್ಸ್ಯಾಪ್‌ನಲ್ಲಿ ಕಳಿಸಿ ತುರ್ತು ಸಹಾಯ ಕೇಳಿದೆ. ಮಾಲೀಕ ನಮ್ಮನ್ನು ಆಸ್ಪತ್ರಗೆ ಕರೆದುಕೊಂಡು ಹೋಗುವುದಿಲ್ಲವೆಂದು ನನಗೆ ಮೊದಲೆ ತಿಳಿದಿತ್ತು ಮತ್ತು ಅಪಾರ ರಕ್ತಸ್ರಾವದಿಂದ ನಮ್ಮಲ್ಲಿ ಕೆಲವು ಜನ ಸಾಯಬಹುದಿತ್ತು,” ಎಂದರು ಅವರು.
ಈ ವಿಕೃತಿಯನ್ನು ಬೆಳಕಿಗೆ ತರಲು ಮಾಧ್ಯಮದ ಸಂಪರ್ಕವಿರುವ ತಮ್ಮ ಗೆಳೆಯರಿಗೂ ಅವರು ಈ ವಿಷಯವನ್ನು ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ತಕ್ಷಣಕ್ಕೆ ಧಾವಿಸಿ ಕಾರ್ಮಿಕರನ್ನು ರಕ್ಷಿಸಿ, ಇಟ್ಟಿಗೆ ಗೂಡಿನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಮಾಲೀಕ ಈಗ ತಲೆಮರೆಸಿಕೊಂಡಿದ್ದಾನೆ.
ಹೆಚ್ಚಿನ ತನಿಖೆ ಮಾಡಿದಾಗ ಪೊಲೀಸರಿಗೆ ಇತರ 30 ಇಟ್ಟಿಗೆ ಗೂಡುಗಳು ಹೀಗೆಯೆ ಜೀತಪದ್ಧತಿಯನ್ನು ಅನುಸರಿಸುತ್ತಿರುವುದು ತಿಳಿದುಬಂದಿದೆ. ಎಲ್ಲ ಕಾರ್ಮಿಕರನ್ನು ಪೊಲೀಸ್ ಭದ್ರತೆಯೊಂದಿಗೆ ಅವರವರ ರಾಜ್ಯಕ್ಕೆ ಕಳುಹಿಸಲಾಗಿದೆ.