ವಿಶ್ವಾದ್ಯಂತ ಇರುವ ಕನ್ನಡಿಗರಿಗೆ ಇಂಟರ್ನೆಟ್ನಲ್ಲಿ ರೇಡಿಯೋ ಕೇಳಿಸಲಿದೆ ನಮ್ ರೇಡಿಯೋ ತಂಡ; ಯಾಕಂದ್ರೆ ಕನ್ನಡ ಕೇಳೋ ಮಜಾನೇ ಬೇರೆ!!
ವಿಶ್ವಾಸ್ ಭಾರಾಧ್ವಾಜ್
ಕನ್ನಡದ ಸವಿನುಡಿಯ ಕೇಳುತ, ಕನ್ನಡದ ವರನುಡಿಯನಾಸ್ವಾದಿಸುತ ಕನ್ನಡತನವೇ ಮೈವೆತ್ತಂತಿದೆ ನಮ್ ರೆಡಿಯೋ. ಇದುವೇ ಜಗತ್ತಿನ ಸಮಸ್ತ ಕನ್ನಡಿಗರ ಅಚ್ಚುಮೆಚ್ಚಿನ ನೆಚ್ಚಿನ ಒಡನಾಡಿ ಬಾನುಲಿ. ಜಾಗತಿಕವಾಗಿ ಕನ್ನಡದ್ದೇ ಪ್ರತ್ಯೇಕ ಆನ್ಲೈನ್ ರೇಡಿಯೋ ಸ್ಟಾರ್ಟ್ ಮಾಡಿದರೇ ಹೇಗೆ? ಹೀಗೊಂದು ಆಲೋಚನೆ ಬಂದಿದ್ದು ಸೃಜನಾತ್ಮಕ ಮನಸುಗಳು ಸಮ್ಮಿಲನವಾದ ಈ ತಂಡಕ್ಕೆ. ಕೂಡಲೆ ಕಾರ್ಯಪ್ರವೃತ್ತರಾದ ಇವರು ನಮ್ ರೇಡಿಯೋ ಅನ್ನುವ ವಿನೂತನ ಪ್ರಯತ್ನಕ್ಕೆ ಚಾಲನೆ ನೀಡಿಬಿಟ್ಟಿದ್ರು. ಪರಿಣಾಮವಾಗಿ ಕೆಲವೇ ತಿಂಗಳ ಅವಿರತ ಪರಿಶ್ರಮಕ್ಕೆ ಫಲ ಸಿಕ್ಕಿದೆ. ಕರುನಾಡಿನ ಆಗುಹೋಗುಗಳು, ಸುಮಧುರ ಸಿನಿಮಾ ಗೀತೆಗಳು, ಇವೆಂಟ್ಸ್, ಸಮಾಚಾರ ವರ್ತಮಾನಗಳನ್ನು ಹೊತ್ತು ಆನ್ಲೈನ್ ಮುಖಾಂತರ ಸೇವೆ ಸಲ್ಲಿಸಲು ಸಿದ್ಧವಾಗಿದೆ ನಮ್ ರೇಡಿಯೋ ಅಂತರ್ಜಾಲ ಕೇಂದ್ರಿತ ಬಾನುಲಿ ಸೇವೆ. ಕನ್ನಡ ಕೇಳುವ ಮಜಾನೇ ಬೇರೆ ಅನ್ನುವ ಟ್ಯಾಗ್ಲೈನ್ ಹೊತ್ತಿರುವ ನಮ್ ರೇಡಿಯೋ ಮೊನ್ನೆ ಫೆಬ್ರವರಿ 28ರ ಸುಂದರ ಭಾನುವಾರ ಲೋಕಾರ್ಪಣೆಗೊಂಡಿದೆ.
ಇದನ್ನು ಓದಿ: ಬದುಕನ್ನೇ ಸಿಹಿ ಮಾಡಿದ ಕೇಕ್ ಬ್ಯುಸಿನೆಸ್...
ಕುಮಾರಕೃಪಾ ರಸ್ತೆಯ ಹೋಟೆಲ್ ಸಾಲಿಟೇರ್ನಲ್ಲಿ ಸೊಗಸಾಗಿ ನಡೆದ ನಮ್ ರೇಡಿಯೋ ಲೋಕಾರ್ಪಣೆ ಕಾರ್ಯಕ್ರಮವನ್ನು ವಾರ್ತಾ ಇಲಾಖೆ ನಿರ್ದೇಶಕ ಎನ್ ಆರ್ ವಿಶುಕುಮಾರ್ ಉದ್ಘಾಟಿಸಿದ್ರು. ಸ್ಯಾಂಡಲ್ವುಡ್ ಚಿತ್ರ ನಟ ಚೇತನ್ ಕುಮಾರ್, ಕರ್ನಲ್ ಗೋಪಾಲ್ ಡಿ ಕೌಶಿಕ್, ಪಂಡಿತ್ ನಾಗರಾಜ್ ಹವಾಲ್ದಾರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಮ್ ರೇಡಿಯೋದ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಓ ಆಗಿರುವ ಅವನೀಧರ್ ಹವಾಲ್ದಾರ್, ಕ್ರಿಯೇಟಿವ್ ಡೈರೆಕ್ಟರ್ ಆಶಾ ವಿಶ್ವನಾಥ್, ತಾಂತ್ರಿಕ ನಿರ್ದೇಶಕರಾಗಿರುವ ಮುರುಳೀಧರ್ ಪ್ರಸಾದ್, ಮತ್ತೊಬ್ಬ ನಿರ್ದೇಶಕ ಸಂದೀಪ್ ಎಸ್ ನಾಯಕ್ ಈ ವಿನೂತನ ಆನ್ಲೈನ್ ಬಾನುಲಿ ಸೇವಾ ಕೈಂಕರ್ಯದ ಸೂತ್ರದಾರರು. ಸದ್ಯ ನಮ್ ರೇಡಿಯೋದ ಕಾರ್ಪೋರೇಟ್ ಕಚೇರಿ ಬೆಂಗಳೂರಿನ ಕಲ್ಯಾಣ ನಗರದಲ್ಲಿದೆ.
ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ನಿರ್ವಹಿಸುತ್ತಿರುವ ಈ ಸೃಜನಾತ್ಮಕ ಮನಸುಗಳು ಯಾವುದೇ ಲಾಭಾಕಾಂಕ್ಷೆ ಇಲ್ಲದೆ ಒಂದಾಗಿದ್ದು ಕೇವಲ ರೇಡಿಯೋ ಮೂಲಕ ಕನ್ನಡದ ವಿಶೇಷ ಸೇವೆ ಸಲ್ಲಿಸಲು. ಹಾಗಾಗಿ ಇಲ್ಲಿ ಯಾವುದೇ ಬಗೆಯ ಪ್ರತ್ಯೇಕ ಆರ್ಥಿಕ ಆಯಾಮವಿಲ್ಲ. ವಿಶ್ವದಾದ್ಯಂತ ಹರಡಿರುವ ಕನ್ನಡಿಗರಿಗೆ ಕನ್ನಡ ನುಡಿಯ ಸುಮಧುರ ಅನುಭವ ಒದಗಿಸುವುದು ಈ ಯೋಜನೆಯ ಅತಿ ಮುಖ್ಯ ಉದ್ದೇಶ. ಅದರಲ್ಲೂ ಮುಖ್ಯವಾಗಿ ಯುರೋಪಿಯನ್ ರಾಷ್ಟ್ರಗಳು, ಯುನೈಟೆಡ್ ಸ್ಟೇಟ್ಸ್, ಆಂಗ್ಲರ ನಾಡು, ಆಸ್ಟ್ರೇಲಿಯಾದಲ್ಲಿ ವೃತ್ತಿಕಾರಣ ವಾಸವಾಗಿರುವ ಕನ್ನಡಿಗರಿಗೆ ಕನ್ನಡದ ವರ್ತಮಾನ ಕೇಳಿಸುವುದು ಈ ತಂಡದ ಕನಸು ಹಾಗೂ ಉದ್ದೇಶ.
ಕನ್ನಡತನದ ಸೊಭಗನ್ನು, ಸೊಗಡನ್ನು ಮಿಸ್ ಮಾಡಿಕೊಂಡು ಪರದೇಶಿಗಳಾಗಿದ್ದ ವಿದೇಶವಾಸಿ ಕನ್ನಡಿಗರು ಹಾಗೂ ಹೊರರಾಜ್ಯಗಳಲ್ಲಿರುವ ಲಕ್ಷಾಂತರ ಕನ್ನಡಿಗರಿಗರು ಇನ್ನುಮುಂದೆ ನಿಶ್ಚಿಂತೆಯಿಂದ ಕನ್ನಡದ ಅಮೃತ ಸದೃಶ್ಯ ನುಡಿಗಳನ್ನು ಸವಿಯಬಹುದು. ಇಂಟರ್‌ನೆಟ್ ಆಧಾರಿತ ಆನ್‌ಲೈನ್ ಎಫ್‌ಎಂ ಕನ್ನಡ ವಾಹಿನಿ ನಮ್ ರೇಡಿಯೋಗೆ ದೇಶ ವಿದೇಶಗಳ ಕನ್ನಡಿಗರು ಬಹುಪರಾಕ್ ಹೇಳಲು ಕಾಯ್ತಿದ್ದಾರೆ.
ನಮ್ ರೇಡಿಯೋ ಕನ್ನಡವನ್ನೇ ಪ್ರಧಾನವಾಗಿ ಕೇಂದ್ರೀಕರಿಸಿ ಆರಂಭಿಸಲಾಗಿರುವ ಆನ್‌ಲೈನ್ ಎಫ್‌ಎಂ ಚಾನಲ್. ನಮ್ ರೇಡಿಯೋ ವಾಹಿನಿಯ ಮೊಬೈಲ್ ಆ್ಯಪ್ ಸಹ ಬಿಡುಗಡೆಯಾಗುತ್ತಿದೆ. ಇದರಿಂದ ಎಫ್‌ಎಂ ಹೊಂದಿರದ ಹಲವು ನಗರ, ಪಟ್ಟಣ ಹಾಗೂ ಕುಗ್ರಾಮಗಳಲ್ಲಿಯೂ ಕನ್ನಡದ ಕಂಪು ಪಸರಿಸಲು ಸಾಧ್ಯ. ಕೇವಲ ಅಂತರ್ಜಾಲದ ಸಹಾಯವಿದ್ದರೇ ನಮ್ ರೇಡಿಯೋದಲ್ಲಿ ಕನ್ನಡದ ಪದವಾಣಿಗಳು ಪುಂಖಾನುಪುಂಖವಾಗಿ ನಿಮ್ಮ ಶ್ರವಣಗಳಿಗೆ ಮುದ ನೀಡಲಿದೆ. ಇದು ಸಂಪೂರ್ಣ ಉಚಿತ ಅನ್ನುವುದು ಇದರ ಇನ್ನೊಂದು ವಿಶೇಷತೆ. ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್ ಮೂಲಕ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡರೆ ನಿರಂತರವಾಗಿ ನಮ್ ರೇಡಿಯೋ ಪಿಸುಮಾತುಗಳನ್ನು ಆಲಿಸಬಹುದು. ಮುಂಬರುವ ದಿನಗಳಲ್ಲಿ ಬೇರೆ ದೇಶಗಳಿಗಾಗಿ ಮೊಬೈಲ್ ಆ್ಯಪ್‌ಗಳು ಸಿದ್ಧಪಡಿಸುವ ಗುರಿಯಿದೆ ಅನ್ನುವುದು ಈ ತಂಡದ ವಿವರಣೆ.
ನಮ್ ರೇಡಿಯೋ ತಂಡದಲ್ಲಿ ಚಟಪಟನೆ ಮಾತಾಡುವ ರೇಡಿಯೋ ಜಾಕಿಗಳ ದೊಡ್ಡ ಬಳಗವೇ ಇದೆ. ಬಾನುಲೀ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಪ್ರತಿಭಾನ್ವಿತರು ತರಬೇತಿ ಪಡೆದು ನಮ್ ರೇಡಿಯೋದಲ್ಲಿ ರೇಡಿಯೋ ಜಾಕಿಗಳಾಗಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಮಿಂಚಿದ್ದ ತಾರೆ ಸುಮನ್ ನಗರ್ಕರ್ ಇಲ್ಲಿ ರೇಡಿಯೋ ಜಾಕಿಯಾಗಿದ್ದಾರೆ ಅನ್ನೋದು ವಿಶೇಷ. ಸಂತೋಷ್, ರೂಪಾ ಗುರುರಾಜ್, ಸೀನು ಅಲಿಯಾಸ್ ಶ್ರೀನಿವಾಸ್, ಅಂಕಿತಾ, ಭರತ್, ಗಗನ್, ಇಮ್ರಾನ್, ಮಧು, ಪ್ರದ್ಯುಮ್ನ್, ರಂಜಿನಿ ಕೀರ್ತಿ, ಸುಧೀಂದ್ರ, ವರ್ಷಿಣಿ, ಸಿಂಧೂ, ವಿದ್ಯಾ ಮುಂತಾದ ಮಾತಿನ ಮಲ್ಲ ಮಲ್ಲಿಯರು ನಮ್ ರೇಡಿಯೋದಲ್ಲಿ ಕನ್ನಡ ನುಡಿಗಳ ವರ್ಷಧಾರೆ ಹರಿಸಲಿದ್ದಾರೆ. ವಾಯ್ಸ್ ವರ್ಲ್ಡ್ ಅನ್ನುವ ವಿಶಿಷ್ಟ ಕಾನ್ಸೆಪ್ಟ್ ಮೂಲಕ ಜಗತ್ತಿನಾದ್ಯಂತ ಕನ್ನಡದ ಡಿಂಡಿಮ ಬಾರಿಸಲು ನಮ್ ರೇಡಿಯೋದ ರೇಡಿಯೋ ಜಾಕಿಗಳ ತಂಡ ತುದಿಗಾಲಿನಲ್ಲಿ ನಿಂತಿದೆ.
ನಮ್ ರೇಡಿಯೋ ವಾಹಿನಿಯಲ್ಲಿ ಸಂವಾದ-ಸಂದರ್ಶನಗಳಿರುತ್ತವೆ. ಹಾಡು-ಹಸೆ, ಬಗೆಬಗೆಯ ನಾಟಕ, ಚಲನಚಿತ್ರಗೀತೆ, ರಂಗಗೀತೆ, ಭಾವಗೀತೆಗಳು, ಜನಪದ ಗೀತೆ, ಅನುದಿನದ ಪ್ರತಿಕ್ಷಣದ ಮಾಹಿತಿಗಳ ಅಪ್‌ಡೇಟ್, ಸಂಸ್ಕೃತಿ-ಸಂಸ್ಕಾರದ ಕಾರ್ಯಕ್ರಮಗಳು ಬಿತ್ತರವಾಗುತ್ತದೆ. ಸದ್ಯಕ್ಕೆ ಕೇವಲ ರೆಕಾರ್ಡ್ ಮಾಡಲ್ಪಟ್ಟ ಕಾರ್ಯಕ್ರಮವನ್ನು ಪ್ರಸಾರ ಮಾಡುವುದು ಬಳಿಕ ಶ್ರೋಣಿಗಳ ಡಿಮ್ಯಾಂಡ್ ಮೇರೆಗೆ ಲೈವ್ ಕಾರ್ಯಕ್ರಮ ಪ್ರಾರಂಭಿಸುವ ಯೋಜನೆ ನಮ್ ರೇಡಿಯೋ ತಂಡದ್ದು. ಒಟ್ನಲ್ಲಿ ಕನ್ನಡಕ್ಕೊಂದು ಗ್ಲೋಬಲ್ ಟಚ್ ಕೊಡುವತ್ತ ನಮ್ ರೇಡಿಯೋ ಬಾನುಲಿ ಸೇವೆ ಆರಂಭಿಸಿರುವ ಈ ತಂಡದ ಕಾರ್ಯ ಶ್ಲಾಘನೀಯ ಸಂಗತಿ.
1. 24 ಪುಸ್ತಕಗಳ ಲೇಖಕ ದೆಹಲಿ ಬೀದಿಯಲ್ಲಿ ಟೀ ಮಾರುವ ಲಕ್ಷ್ಮಣ್ ರಾವ್